*ವೈಭವದ ಆ ನಾಲ್ಕು ದಿನಗಳು*
*ವೈಭವದ ಆ ನಾಲ್ಕು ದಿನಗಳು* ದೈವ ತುಂಬ ವಿಚಿತ್ರ. ಬಲು ಚಂಚಲ. ಜಿಂಕೆಯಂತೆ ಕ್ಷಣ ಒಂದೆಡೆ ನಿಲ್ಲದು. ಆದರೆ ಆ ಕ್ಷಣದ ಕಾಲದಲ್ಲಿಯೇ ಜೀವನದ ಮಹಾಫಲಕ್ಕೆ ಕಾರಣವಾದ ಅಥವಾ ಮಹಾ ಅನರ್ಥಕ್ಕೆ ಕಾರಣವಾದ ದಾರಿ ತೋರಿಸಿಟ್ಟು, ಆ ದಾರಿಯಲ್ಲಿ ಓಡಿಸಿಬಿಟ್ಟಿರುತ್ತದೆ. ಅಂತಹ ಬಲಶಾಲಿ ದೈವ. ಅದನ್ನು ಒಪ್ಪಿಕೊಳ್ಲುವದು ಅನಿವಾರ್ಯವೂ ಆಗುತ್ತದೆ. *ಗುರುಸ್ಮೃತಿಃ ಸರ್ವವಿಪದ್ವಿಮೋಕ್ಷಿಣೀ* ಗುರುಗಳ ಸ್ಮರಣೆ ಸಕಲವಿಧ ಆಪತ್ತುಗಳಿಗೆ ಪರಿಹಾರ. ಅಂತಹ ಗುರು ಸ್ಮರಣೆ ನಿತ್ಯ ಕ್ಷಣಕಾಲವಾದರೂ ಮಾಡಿ ಆ ದಿನವನ್ನು ಸಾರ್ಥಕವನ್ನಾಗಿ ಮಾಡಿಕೊಂಡವರು ಹಲವರು. ಅದನ್ನು ಅನುಭವಿಸಿಯೇ ನಿತ್ಯದಲ್ಲೂ ಗುರುಸ್ಮರಣೆ ಮಾಡುವವರು ಅನೇಕರು. ಅಂತೆಯೇ *ಗುರು ಸ್ಮರಣೆಯಿಂದ ಆರಂಭವಾದ ಕಾರ್ಯ ಗುರು ಸಮರ್ಪಣಾಂತವಾದರೆ, ಆ ಕಾರ್ಯ ಅತ್ಯಂತ ಯಶಸ್ವೀ ಕಾರ್ಯ* ಎಂದೇ ನಂಬಿದವರು ಅವರೆಲ್ಲರು. *ಬಯಸದೇ ಬಂದ ಭಾಗ್ಯ* ಈ ವಿಕಾರಿ ನಾಮ ಸಂವತ್ಸರದ ಪಕ್ಷಮಾಸದ ಕೊನೆಯ ನಾಲ್ಕು ದಿನಗಳ ಈ ಭಾಗ್ಯ ಅಹೋಭಾಗ್ಯ. ನಿತ್ಯ ಏದ್ದಾಕ್ಷಣದಿಂದ ಆರಂಭಿಸಿ ನಿತ್ಯವೂ ಹದಿನೆಂಟು ಗಂಟೆಗಳ ಕಾಲ ಅನೇಕ ಹಿರಿಯರ ಸಂಗವದಲ್ಲಿ, ನಮ್ಮ ಸ್ವರೂಪೋದ್ದಾರಕ ಗುರುಗಳ ಸನ್ಮುಖದಲ್ಲಿ *ಗುರು ಸ್ಮರಣೆ, ಗುರುಗಳ ನಾನಾವಿಧ ಗುಣಗಳು, ಉದ್ದೇಶ್ಯಗಳು, ಆದರ್ಶಗಳು, ನೀತಿಗಳು, ಗುರುಗಳ ವ್ಯಾಪಕ ಹಾಗೂ ಅಳ ಜ್ಙಾನ, ದೃಢಭಕ್ತಿ, ವ್ಯಾಪಕ ಸೂಕ್ಷ್ಮ ಧರ್ಮಾಚರಣೆ, ದೇವ ಗುರು ದೇವತಾ ಶಾಸ್ತ್ರಗಳಲ್ಲಿಯ ನಿ...