*ಭೂವರಾಹ - ಧನ್ವಂತರೀ - ಗಣಪತೀ ಉತ್ಸವ*



*ಭೂವರಾಹ - ಧನ್ವಂತರೀ - ಗಣಪತೀ ಉತ್ಸವ*

ಇಂದು ಧನ್ವಂತರೀ ಉತ್ಸವವಾದರೆ ನಾಳೆ ವರಾಹದೇವರ ಹಾಗೂ ಗಣಪತಿಯ ಉತ್ಸವವಗಳು ಇವೆ. ಈ ಮೂರ್ವರೂ ನಮ್ಮ ಜೀವನಕ್ಕೆ ಅತ್ಯುಪಯುಕ್ತರು ಹಾಗಾಗಿ ಒಂದೆರಡು ಮಹತ್ವಗಳನ್ನು ಮಹಿಮೆಗಳನ್ನು ತಿಳಿಯುವ ಪ್ರಯತ್ನ ಮಾಡೋಣ. 

*ಭೂ ವರಾಹದೇವರು*

ಶ್ರೀಮನ್ನಾರಾಯಣನ ಅನಂತರೂಪಗಳಲ್ಲಿ  ಬ್ರಹ್ಮದೇವರ ಮೂಗಿನಿಂದ ಪ್ರಾದುರ್ಭವಿಸಿದ  ಮಹಾವೈಭವದ ರೂಪ ಆದಿ ವರಾಹದೇವ. ಎರೆಡೆರಡು ಬಾರಿ ಅವತರಿಸಿದ ಮಹಾಮಹಿಮ. ಮೊದಲು ಅವತರಿಸಿದಾಗ ಆದಿ ಹಿರಣ್ಯಾಕ್ಷನನ್ನು ಕೋರೆಹಲ್ಲಿನಿಂದ ಸಂಹರಿಸಿ  ಸಮುದ್ರದಲ್ಲಿ ಮುಳುಗಿದ ಭೂಮಿಯನ್ನು ಉದ್ಧರಿಸಿದ. ಎರಡನೇಯ ಬಾರಿ ಅವತಾರ ಮಾಡಿದಾಗ ಹಿರಾಣ್ಯಾಕ್ಷನನ್ನು ಕಪಾಳಿಗೆ ಹೊಡೆದು ಸಂಹರಿಸಿ ಭೂಮಿಯನ್ನು ಪುನಃ ಉದ್ಧರಿಸಿ ಅನುಗ್ರಹಿಸಿದ ಮಹೋಪಕಾರಿ ಶ್ರೀವರಾಹದೇವರು. 

ಶ್ರೀಮದ್ಭಾಗವತದಲ್ಲಿ ತಿಳಿಸಿದಂತೆ *ರಕ್ಷತ್ವಸೌ ಮಾಧ್ವನಿ ಯಜ್ಙಕಲ್ಪಃ* ಭೂ ಒಡೆಯರಾದ ವರಾಹದೇವರೇ  ಹಾದಿಯಲ್ಲಿ ಮಾರ್ಗಮಧ್ಯದಲ್ಲಿ ನಾನಾತರಹದ ಅವಘಡಗಳು ಸಂಭವಿಸಬಹುದಾದ ಪ್ರಸಂಗದಲ್ಕಿ ನನ್ನನ್ನು ರಕ್ಷಿಸು.

ಯಜ್ಙಸ್ವಾಮಿಯಾದ ವರಾಹದೇವರೇ ಯಜ್ಙದಾನ ಧರ್ಮಗಳಲ್ಲಿ ತೊಡಗಿಸಿ ಸರಿಯಾದ ಮಾರ್ಗದಲ್ಲಿ ಇರಿಸಿ ರಕ್ಷಿಸಿ. *ಮಾಧ್ವನಿ* ಕೆಟ್ಟ ಮಾರ್ಗದಲ್ಲಿ ಹೋಗವದೇ ನನ್ನ ಹವ್ಯಾಸ. ಆ ದುರ್ಮಾರ್ಗದಿಂದಲೂ ಎನ್ನನ್ನು ರಕ್ಷಿಸಿ ಎಂದು ವರಾಹದೇವರಲ್ಲಿ ಪ್ರಾರ್ಥಿಸಬೇಕು ಎಂದು ಭಾಗವತ ತಿಳಿಸುತ್ತದೆ.

*ಧನ್ವಂತರೀ ಶ್ರೀಹರಿ*

ಅಮೃತ ಮಥನಕಾಲದಲ್ಲಿ ಹಾಗೂ ಧನ್ವ ಎಂಬ ಋಷಿಯಲ್ಲಿ ಹೀಗೆ ಎರಡುಬಾರಿ ಅವತಾರ ಮಾಡಿದ ಮತ್ತೊಂದು ರೂಪ ಧನ್ವಂತರೀ ರೂಪ. ತನ್ನ ಭಕ್ತರಿಗೆ ಅಮೃತವುಣಿಸಿ ಜ್ಙಾನಕೊಟ್ಟು ರಕ್ಷಿಸಿದ ಹೆದ್ದೊರೆ. ತನ್ನ ಭಕ್ತರಲ್ಲದ ಛಲಗಾರಿಗೆ, ಮೋಸ ಮಾಡಿದ ರೂಪವೂ ಧನ್ವಂತರೀ ರೂಪವೇ. 

*ಧನ್ವಂತರಿರ್ಭಗವಾನ್ ಪಾತ್ವಪಥ್ಯಾತ್*

ಶ್ರೀಮದ್ಭಾಗವತ ಶ್ರೀಧನ್ಬಂತರೀ ರೂಪದಿಂದಿರುವ ಶ್ರೀಹರಿ ಅಪಥ್ಯಾತ್ ರೋಗರುಜಿಗಳು ಬರದಂತೆ ಮಾಡಿ ರಕ್ಷಿಸುತ್ತಾನೆ ಎಂದು ತಿಳಿಸುತ್ತದೆ. 

ರೋಗಗಳು ದೈಹಿಕ ಐಂದ್ರಿಯಕ ಹಾಗೂ ಮಾನಸಿಕ ಎಂದು ಮೂರುವಿಧ. ಕಂಡದ್ದು ಕಂಡ ಹಾಗೆ ತಿಂದರೆ ದೈಹಿಕ ರೋಗಗಳು ಬರುತ್ತವೆ. ಕಂಡದ್ದು ಕಂಡಹಾಗೇ ಭೋಗಿಸಿದರೆ ಐಂದ್ರಿಯಕ ರೋಗಗಳು ಉಲ್ಬಣಿಸುತ್ತವೆ. ಕಂಡದ್ದು ಕಂಡ ಹಾಗೆ ಯೋಚಿಸಿದರೆ ಮಾನಸಿಕ ರೋಗಗಳು ತಾಂಡವ ಆಡುತ್ತವೆ. ಈ ಯಾವ ತಪ್ಪುಗಳನ್ನೂ ಮಾಡದೆ ರೋಗಗಳನ್ನೂ ತಾರದೆ ರಕ್ಷಿಸು ಎಂದು ಆ ಧನ್ವಂತರೀ ರೂಪಿ ಶ್ರೀಹರಿಯಲ್ಲಿ ಪ್ರಾರ್ಥನೆ. 

*ಗಣಪತಿ...*

ವಿಘ್ನೇಶ್ವರ ಲೌಕಿಕ ಯಾವ ವಿಷಯಕವೂ ವಿಘ್ನಗಳನ್ನು ಕೊಡದೆ, ಅಲೌಕಿಕ ಸಾಧನೆಯ ವಿಷಯಕವೇ ವಿಘ್ನಗಳನ್ನು ಕೊಡುತ್ತೀಯಲ್ಲ ಯಾಕೆ.. ?? ನಾನು ನಿನ್ಮವನು ಅಲ್ಲವೇ. ಹೀಗಿರುವಾಗ ಸಾಧನೆಗೆ ಧರ್ಮಾಚರಣೆಗೆ ಜ್ಙಾನಸಂಪಾದನೆಗೆ ಭಕ್ತಿಭಿವೃದ್ಧಿಗೆ ಇರುವ ಎಲ್ಲ ತರಹದ ವಿಘ್ನಗಳನ್ನೂ ಪರಿಹರಿಸು. 

ಅಪಮೃತ್ಯು ರೋಗ ರುಜಿನ ಆಲಸ್ಯ ವಿಷಯಾಸಕ್ತಿ ಇವುಗಳನ್ನು ಪರಿಹರಿಸು. ಪರಾಜಯ ಅಪಜಯ ಅಪಕೀರ್ತಿ ಬರದಿರುವಂತೆ ನೋಡಿಕೊ. ಜಯ ಕೀರ್ತಿ ಜ್ಙಾನ ಭಕ್ತಿ ಯಶಸ್ಸು ಸಮೃದ್ದವಾಗಿ ಬೆಳಿಯುವಂತೆ ಕರುಣಿಸು. ಭಾಗವತ ಭಾರತ ಪುರಾಣಗಳಲ್ಲಿ ಆಸಕ್ತಿ ಬೆಳಿಸು. 

ಆಕಾಶಕ್ಕೆ ಅಭಿಮಾನಿಯಾಗಿ ಆಕಾಶದ ಗುಣವಾದ ಶಬ್ದಗಳನ್ನು ನಿರಂತರ ವಿಷ್ಣುಪರವಾಗಿಯೇ ಎನ್ನ ನಾಲಿಗೆಯಮೇಲೆ ಬರುವಂತೆ ಮಾಡು. ಹೃದಯಾಕಶದಲ್ಲಿ ನಿನ್ನೊಡೆಯ ವಿಶ್ವಂಬರನ ದರ್ಶನದ ಮಾರ್ಗದಲ್ಲಿ ನಾಲ್ಕಾರು ಹೆಜ್ಜೆಗಳನ್ನಾದರು ಮುಂದಿರಿಸು. ಹೀಗೆ ವಿಘ್ನೇಶ್ವರನಲ್ಲಿಯೂ ಪ್ರಾರ್ಥಿಸೋಣ.

ಗಣಪತ್ಯಂತರ್ಗತ ಮುಖ್ಯಪ್ರಾಣಾಂತರ್ಗತ ಭೂವರಾಹ  ಧನ್ವಂತರಿ ಮೊದಲಾದ ಅನಂತರೂಪಾತ್ಮಕ ವಿಶ್ವಂಭರನ ಅಡೆದಾವರೆಗಳಲ್ಲಿ ಕೋಟಿ ಕೋಟಿ ನಮಸ್ಕಾರಗಳನ್ನಂತೂ ಸಲ್ಲಿಸೋಣ.

*✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*