*ಆತ್ಮೀಯತೆಯ ಆಶ್ರುಗಳು ದುರ್ಭಾಗ್ಯನ ದುಃಖಾಗ್ನಿಯನ್ನು ಆರಿಸಬಲ್ಲುವು..*

*ಆತ್ಮೀಯತೆಯ ಆಶ್ರುಗಳು ದುರ್ಭಾಗ್ಯನ ದುಃಖಾಗ್ನಿಯನ್ನು ಆರಿಸಬಲ್ಲುವು..*

ದುಃಖ ಎಲ್ಲರಿಗೂ ಇರುವದೆ. ಸಾಮಾನ್ಯವಾಗಿ ಎಲ್ಲ ದುಃಖಗಳನ್ನೂ ನಾವೇ ತಂದುಕೊಂಡತಹದ್ದು.  ದುಃಖ ಒಳಗೆ ಉಳಿದರೆ ನಿರಂತರ ಕಾಡುತ್ತದೆ. ಮನಸ್ಸು ಕದಡುತ್ತದೆ, ತುಂಬ ಭಾರವಾಗುತ್ತದೆ. ದುಃಖವನ್ನು ಹೊರ ಹಾಕಿದರೆ ಮನಸ್ಸಂತೂ ತುಂಬ ಹಗುರಾಗುತ್ತದೆ. 

"ತನಗಾದ ಗಾಯವನ್ನು ತೆರೆದು ತೋರಿಸಿದರೆ ಮನುಷ್ಯನ ದುಃಖ ಒಂದಿಷ್ಟು ಕಡಿಮೆಯಾಗುತ್ತದೆ." "ಹತ್ತಿರ ಕುಳಿತು ಹೇಗಿದ್ದೀಯಾ ಎಂದು ಕೇಳಿದರೆ ರೋಗಿಗೆ ಆ ಮಾತುಗಳೇ ಹಿತವೆನಿಸುತ್ತವೆ." ಹೀಗಿರುವಾಗ ನಮಗೊಬ್ಬ ಆತ್ಮೀಯನು ಇರಬೇಕು ಎಂದೆನಿಸುತ್ತದೆ.  

ಉದರ ಸೇರಿದ ಆಹಾರ ಎಷ್ಟು ಆಘಾತಕಾರಿಯೋ, ಅದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಘಾತಮಾಡುವದು ಒಳಗಿರುವ ದುಃಖ. ಅಂತೆಯೆ ದುಃಖವನ್ನು ಹೊರಹಾಕಬೇಕು. ಕಂಡಲ್ಲಿ ಹೊರಹಾಕಿದರೆ ಹುಚ್ಚನೆನ್ನುತ್ತದೆ ಸಮಾಜ. ಹಾಗಾದರೆ...

*ದುಃಖಾಗ್ನಿಯನ್ನು  ಹೊರ ಹಾಕುವ ಸ್ಥಳ ಯಾವದು... ??*

"ಆತ್ಮೀಯತೆಯ ಆಶ್ರುಗಳು ದುರ್ಭಾಗ್ಯನ ದುಃಖಾಗ್ನಿಯನ್ನು ಆರಿಸಬಲ್ಲುವು" ದುಃಖ ಬರುವದೇ ದೌರ್ಭಾಗ್ಯನಿಗೆ. ದೌರ್ಭಾಗ್ಯನಿಗೆ ಆತ್ಮೀಯನೆಂಬುವರು ಇರುವದೇ ಇಲ್ಲ. ಆತ್ಮೀಯನು ಇದ್ದಾನೆ ಎಂದರೆ ದೇವರೊಬ್ಬನೇ. ಮನೋ ಭಾರ  ಇಳಿಸಲು ಅತ್ಯಂತ ಯೋಗ್ಯಸ್ಥಾನ ಅದು ದೇವರ ಮನೆ. ದೇವನ ಸನ್ನಿಧಾನ. ಜಪ ಮಾಡುವ ಪ್ರಸಂಗ. ದುರ್ಭಾಗ್ಯವಂತರ ಗೆಳೆಯ ದೇವನೊಬ್ಬನೇ.

*ದೇವರೊಟ್ಟಿಗೆ ಆತ್ಮೀಯರು ಅನೇಕರು ಇದ್ದಾರೆ ಅಲ್ಲವೆ...??*

ನಿಜ ಆತ್ಮೀಯ ದೇವನೊಬ್ಬ. ನಿಃಸ್ವಾರ್ಥ ಆತ್ಮೀಯ ದೇವನೊಬ್ಬನೇ. ದುಃಖ ಶಮನವಾಗುವದು ದೇವರ ಸನಿಹವೇ. ಉಳಿದವರು ಆತ್ಮೀಯರು ಎಂದರೆ ಆತ್ಮೀಯರು. "ಆತ್ಮೀಯರ ಎದುರಿಗೆ ನಮ್ಮ ದುಃಖ ತೋಡಿಕೊಂಡಾಗ,  ಅವರ ಸಮಾಧಾನದ  ಅಶ್ರುವೇ ನಮ್ಮ ದುಃಖಾಗ್ನಿಯನ್ನು ನಂದಿಸುತ್ತದೆ" ಇದು ಪ್ರತಿಶತಹ ನೂರರಷ್ಟು ಎಲ್ಲರ ಅನುಭವ ಸಿದ್ಧ. ಅಂತೆಯೇ ಆತ್ಮೀಯರು ಇರಬೇಕು. ಇದ್ದವರನ್ನು ಕಳೆದುಕೊಳ್ಳಬಾರದು. 

*ಯಾರು ಆತ್ಮೀಯರು...??*

ನಮ್ಮನ್ನು ನಮ್ಮ ಬೆನ್ನ ಹಿಂದೆಯೆ, ನಮ್ಮವರ ಮುಂದೆ ತೆಗಳ್ತಾನೆ ಎಂದರೆ ಅಂದೆ ಅವ ಆತ್ಮೀಯತೆಯನ್ನು ಕಳೆದುಕೊಂಡ ಎಂದರ್ಥ. ಅವನ ಮುಂದೆ ದುಃಖ ತೋಡಿಕೊಳ್ಳುವದು ವ್ಯರ್ಥ. ಕೆಲವೊಂದು ಸಲ ಆ ಆತ್ಮೀಯರೆಂಬಂತೆ ಸೋಗು ಹಾಕಿದವರಿಂದ  ಇಂದು ಸಮಾಧಾನ ಅನಿಸಿದರೂ ಮುಂದು ದುಃಖವೇ ಅಪ್ಪಳಿಸಿರುತ್ತದೆ. ಸಣ್ಣ ದುಃಖಾಗ್ನಿ ಶಮನವಾದರೂ ದೊಡ್ಡ ಕಾಡ್ಗಿಚ್ಚು ಬೆಳೆದೇಳುತ್ತದೆ. 

ನಿಜವಾಗಿಯೂ ನಮ್ಮ ಅತ್ಯಂತ ಆತ್ಮೀಯ ದೇವ. ದೇವನೆದರು ದುಃಖ ತೋಡಿಕೊಂಡರೆ, ನಮ್ಮ ದುಃಖಕ್ಕೆ ಪ್ರತಿಸ್ಪಂದಿಸುವವು ದೇವರ ಅಶ್ರುಗಳು. ಅತ್ಯಂತ ಆತ್ಮೀಯ ದೇವರ ಆನಂದಪೂರ್ಣ  ಅಶ್ರುಗಳಿಂದಲೇ ನಮ್ಮ ದುಃಖಾಗ್ನಿ ಶಮನವಾಗುವದು. ಆ ಆನಂದಾಶ್ರು ನಮ್ಮ ದುಃಖಾಶ್ರುವನ್ನು ಮೀರಿಸಿ ತಾನು ವ್ಯಾಪಿಸಿಬಿಡುತ್ತದೆ. 

"ನಮ್ಮವರ ಮುಂದೆ ನಮ್ಮ ಅವಮಾನವನ್ನು ಮಾಡಲಾರ. ನಮ್ಮ ದುಃಖವನ್ನು ನೆನೆದು ಅಟ್ಟಹಾಸ ಮಾಡಲಾರ. ಎಷ್ಟು ದುಃಖ ತೋಡಿಕೊಂಡರೂ ದುಃಖ ನಂದಿಸುವವ" ಇವನೇ ನಿಜ ಆತ್ಮೀಯ. ಅವನೇ ನಮ್ಮ ಆತ್ಮ. ಆ ಆತ್ಮನ ಆತ್ಮೀಯ ದಾಸನಾಗುವದೇ ಎಮ್ಮ ಗುರಿ. ಅವನಲ್ಲಿಯೇ ನಮ್ಮ ದುಃಖಶಮನ.

*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*