*ಓ ಅನಂತ ರೂಪಃ - ಅನಂತ ಶ್ರೀಃ ನಿನಗೆ ನಮೋ ನಮಃ*
*ಓ ಅನಂತ ರೂಪಃ - ಅನಂತ ಶ್ರೀಃ ನಿನಗೆ ನಮೋ ನಮಃ*
ಅನಂತ ಫಲಪ್ರಾಪ್ತಿಗೆ, ಅನಂತ ಗುಣಪೂರ್ಣನ ಅನುಗ್ರಹವೊಂದೇ ಬೇಕು. ಅದಕ್ಕಾಗಿಯೇ ಇಂದು ಅನಂತನ ಪೂಜೆ. ಆ ಚಿಂತನೆಯೊಂದಿಗೇ ಪೂಜಿಸೋಣ
ಅನಂತನ ನಾಮಗಳು ಅನಂತ. ವಿಷ್ಣು ಸಹಸ್ರನಾಮದಲ್ಲಿ ಬರುವ ನಾಮಗಳು *ಅನಂತರೂಪಃ - ಅನಂತಶ್ರೀಃ* ಎಂದು ಎರೆಡು ರೂಪ ನಾಮಗಳು.
*ಅನಂತ ರೂಪಃ*
ದೇವರ ರೂಪಗಳೂ ಅನಂತ. ವಿಶ್ವಾದಿ ಎಂಟು, ಅನಿರುದ್ಧಾದಿ ಐದು, ಕೇಶವಾದಿ ಹನ್ನೆರಡು, ಇಪ್ಪತ್ತುನಾಲ್ಕು. ಮತ್ಸ್ಯಾದಿ ಹತ್ತು, ನಾರಾಯಣಾದಿ ನೂರು, ವಿಶ್ವಾದಿ ಸಾವಿರ, ಪರಾದಿ ಬಹುರೂಪ, ಅಜಿತಾದಿ ಅನಂತ ರೂಪಗಳು ಹೀಗೇ ಭಗವದ್ರೂಪಗಳು ಅನಂತ. ಅನಂತ ಜಿವರಲ್ಲಿ ಪ್ರತಿಯೊಬ್ಬರ ಅಂತರ್ಯಾಮಿರೂಪ. ಒಬ್ಬಬ್ಬರಲ್ಲಿ ಎಪ್ಪತ್ತೆರಡು ಸಾವಿರ ನಾಡಿಗಳಲ್ಲಿಯ ಭಗವದ್ರೂಪ. ಕಣ ಕಣದಲ್ಲಿ ನಿಯಾಮಕ ಭಗವದ್ರೂಪ ಹೀಗೆ ಅನಂತಾನಂತ ರೂಪಗಳು ದೇವರಿಗೆ ಉಂಟು. ಅಂತೆಯೇ ವಿಷ್ಣು ಸಹಸ್ರನಾಮ *ಅನಂತ ರೂಪಃ* ಎಂದು ಹೇಳಿತು.
ಈ ಎಲ್ಲ ಅನಂತ ರೂಪಗಳುಳ್ಳ ದೇವರನ್ನು ಅನಂತ ಜನರು ಎವೆಯಿಕ್ಕದೇ ನೋಡಿದರೂ ಕುಂದುವದಿಲ್ಲ. ದೃಷ್ಟಿ ತಾಗುವದಿಲ್ಲ. ಮುಪ್ಪರಡಿತು ಎಂದಾಗುವದಿಲ್ಲ. ಸುಕ್ಕು ಬಿದ್ದವೂ ಕಾಂತಿವಿಹೀನ ಆಯ್ತು ಎಂದಾಗುವದೇ ಇಲ್ಲ. ಅಂತೆಯೇ ದೇವರ ರೂಪಕ್ಕೆ ಅಂತವಿಲ್ಲ. ಹಾಗಾಗಿ ದೇವರ ರೂಪವೂ *ಅನಂತ ರೂಪ.*
ದೇವರ ರೂಪವನ್ನು ನಿತ್ಯ ಕಾಣುವ ಲಕ್ಷ್ಮೀ ಬ್ರಹ್ಮಾದಿ ಅಪರೋಕ್ಷಿಗಳಿಗೂ ನಿತ್ಯವೂ ಹೊಸ ರೂಪವೆಂಬಂತೆ ಕಾಣುತ್ತದೆ. ನಿನ್ನೆ ನೋಡಿದ ರೂಪವೇ ಅಲಾ, ಮತ್ತೆ ನೋಡಿದರಾಯ್ತು ಎಂದೆನಿಸುವದೇ ಇಲ್ಲ. ಹಾಗಾಗಿ *ಅನಂತ ರೂಪಃ* ಎಂದು ಕರಿಯಿತು ಶಾಸ್ತ್ರ.
*ಅನಂತ ಶ್ರೀಃ...*
ಅನಂತಾನಂತ ಜೀವರಾಶಿಗಳು ಯಾರನ್ನು ಆಶ್ರಯಿಸಿಕೊಂಡು ಇದ್ದಾರೆಯೋ ಅವರು ಅನಂತಶ್ರೀಃ. ಅನಂತ ಗುಣಗಳು ಯಾರನ್ನು ಆಶ್ರಯಿಸಿಕೊಂಡಿವೆಯೋ ಅವರು ಅನಂತಶ್ರೀಃ.
ಶ್ರೀ ಅಂದರೆ ಐಶ್ವರ್ಯ, ಐಶ್ವರ್ಯ ಅಂದರೆ ಒಡೆತನ. ಅನಂತ ದೇವ ಜೀವ ಮಾನವ ತೃಣಪರ್ಯಂತ ಎಲ್ಲರಮೇಲೆ ನಿಸ್ಸೀಮ ಒಡೆತನ ಯಾರಿಗೆದೆಯೋ ಅವ ಅನಂತಶ್ರೀಃ.
ಅನಂತಾನಂತ ಜೀವರಾಶಿಗಳು ಅನಾದಿ ಕಾಲದಿಂದ ದೇವರಿಂದಲೇ ಬೇಡಿ ಪಡೆಯುತ್ತಿದ್ದರೂ, ಶ್ರೀ ಐಶ್ವರ್ಯ ಕಡಿಮೆ ಯಾರಿಗೆ ಆಗಿಲ್ಲವೋ ಅವನು ಅನಂತಶ್ರೀಃ.
ಅನಂತಾನಂದ ಅನುಭವರೂಪ ಮೋಕ್ಷವನ್ನು ಯಾರು ಕೊಡುತ್ತಾರೆಯೋ ಅವನು ಅನಂತಶ್ರೀಃ.
ಆ ಅನಂತ ಶ್ರೀ ಮತ್ಯಾರೂ ಅಲ್ಲ ನಮ್ಮ ನಿಮ್ಮಾದಿ ಅನಂತ ಜೀವರಿಗೆ ಬೇಡಿದ್ದು, ಬೇಡದೇ ಇದ್ದದ್ದು ಕಾಲಕಾಲಕ್ಕೆ ಒದಗಿಸುವ ದೇವರೆ *ಅನಂತ ಶ್ರೀಃ* ಎಂದು ಕರೆಸಿಕೊಳ್ಳುತ್ತಾನೆ.
ಅನಂತರೂಪ - ಅನಂತ ಶ್ರೀ ಹೆಸರಿನ ಭಗವಂತನನ್ನು ನಿತ್ಯ ಸ್ಮರಿಸಿ ಚಿಂತಿಸಿ ನಾವೂ ನಮ್ಮ ಯೋಗ್ಯತಾನುಸಾರ ನಾಶರಹಿತ ರೂಪ ಕ್ಷೀಣವಾಗದ ಐಶ್ವರ್ಯ ಪಡೆಯೋಣ.
*✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments