*ಓ ಭಗವನ್ !! ಇವನು ತನ್ನ ಶಕ್ತಿ ತೋರಿದ, ನೀನು ಯಾಕೆ ನಿನ್ನ ಶಕ್ತಿ ತೋರಿಸಬಾರದು..??*
*ಓ ಭಗವನ್ !! ಇವನು ತನ್ನ ಶಕ್ತಿ ತೋರಿದ, ನೀನು ಯಾಕೆ ನಿನ್ನ ಶಕ್ತಿ ತೋರಿಸಬಾರದು..??*
ಪ್ರಾರ್ಥನೆ ನಾವೂ ಮಾಡ್ತೇವೆ. ಋಷಿಗಳೂ ಮಾಡ್ತಾರೆ. ಬ್ರಹ್ಮದೇವರೂ ಮಾಡ್ತಾರೆ. ಋಷಿಗಳ ಪ್ರಾರ್ಥನೆಗೆ ದೇವ ಒದಗಿಬರುತ್ತಾನೆ. ಬ್ರಹ್ಮದೇವರ ಪ್ರಾರ್ಥನೆಗೆ ದೇವರೆ ನಿಂತು ನಡಿಸಿಕೊಳ್ಳುತ್ತಾನೆ. ನಮ್ಮ ಪ್ರಾರ್ಥನೆ ಮಾತ್ರ ಠುಳ್ಳು ಠುಸ್ಸಾಗತ್ತೆ. ಹಾಗಾಗದೇ ನಮ್ಮ ಪ್ರಾರ್ಥನೆಗೂ ದೇವ ಓಡಿ ಬರುವಂತಾಗಿರಬೇಕು. ದೇವರಿಗೂ ಅನಿವಾರ್ಯವಾಗಿರಬೇಕು ಹಾಗೆ ನಮ್ಮ ಪ್ರಾರ್ಥನೆ ಇರಬೇಕು.
ಪ್ರಬಲ ವ್ಯಕ್ತಿ ದುರ್ಬಲನ ಮೇಲೆ ದಬ್ಬಾಳಿಕೆ ಇರುವದೇ. ತನ್ನ ಪ್ರಾಮಾಣಿಕತೆ ಇದ್ದರೂ ದುರ್ಬಲ ಏನೂ ಪಡೆಯಲಾಗುವದಿಲ್ಲ. ಪ್ರಬಲನೇ ಪಡೆಯುತ್ತಾನೆ. ಹೀಗೆ ಸಮಾಜ ನಡಿತಾ ಇದೆ. ದುರ್ಬಲ ಹೇಡಿಗಳಾದ ನಾವು ಎಲ್ಲವನ್ನೂ ಪಡೆಯಬೇಕಾದರೆ ಏನು ಮಾಡಬೇಕು... ?? ಆ ಪ್ರಬಲನಿಗಿಂತಲೂ ಅತಿ ಪ್ರಬಲನ ಸಹಾಯ ಪಡೆಯಬೇಕು. ಆ ಅತೀ ಪ್ರಬಲ ದೇವನೇ. ದೆವರ ಬಳಿ ಸಹಾಯ ಯಾಚನೆಯೇ ಪ್ರಾರ್ಥನೆ ಎಂದಾಗುತ್ತದೆ.
ಒಂದು ಸುಂದರ ಕಥೆ ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ಓದ್ತಾ ಇದ್ದೆ....
ವಿಶಾಲ ಸಮುದ್ರ ದಂಡೆ. ಒಬ್ಬ ಬಡ ದುರ್ಬಲ ಮೀನುಗಾರ. ಅವನಿಗೆ ಒಂದು ಅಪರೂಪದ ಬೆಲೆ ಬಾಳುವ ಮೀನು ಸಿಕ್ಕಿತು. ಆ ಮೀನು ತಂದು ಬೇಯಿಸಿ ಊಟ ಮಾಡುವ ಅಥವಾ ಮಾರಿ ಹಣ ತರು ಯೋಚನೆಯಲ್ಲಿ ಬರುತ್ತಾ ಇದ್ದ.
ಆ ಸಮಯಕ್ಕೆ ಆ ಮೀನುಗಾರರಲ್ಲಿಯೇ ಪ್ರಬಲನಾದ ವ್ಯಕ್ತಿ ಬಂದು ಮೀನು ಕಸೆದುಕೊಂಡ. ದುರ್ಬಲ ಅಂಗಲಾಚಿದ. ಪ್ರಬಲ ಬಿಡಲಿಲ್ಲ. ಕಸೆದುಕೊಂಡು ಬಿಟ್ಟ. ಈ ಈರ್ವರ ಝಗಳದಲ್ಲಿ ಆ ಮೀನು ಪ್ರಬಲನ ಕೈ ಬೆರಳನ್ನು ಕಚ್ಚಿತು. ಆದರೂ ಲೆಕ್ಕಿಸದೆ ಮೀನ ತಂದು ತಿಂದು ತೇಗಿದ.
ಪ್ರಬಲನಿಗೆ ಮೀನು ಕಚ್ಚಿದ ಕಾರಣ ಕೈ ಬೆರಳು ಘಾಯ ಆಯ್ತು. ಘಾಯ ಉಲ್ಬಣಿಸಿತು. ವೈದ್ಯರ ಬಳಿ ತೆರಳಿದ. ವೈದ್ಯರು ಸೂಚಿಸಿದರು ನಂಜಾಗಿದೆ ಬೆರಳು ತಗಿಯಬೇಕು ಎಂದು. ಬೆರಳು ಕತ್ತರಿಸಿದರು. ಮೂರು ದಿನ ಬಿಟ್ಟು ಬಾ ಎಂದರು.
ಪುನಃ ಮೂರು ದಿನಬಿಟ್ಟು ಬಂದ. ನಂಜು ಮಾಸಿರಲಿಲ್ಲ. ಕೈ ವರೆಗೆ ನಂಜು ಹರಡಿತ್ತು. ಅಂಗೈ ಕತ್ತರಿಸಬೇಕು ಎಂದ. ಅಂಗೈ ಕತ್ತರಿಸಿದರು. ಮತ್ತೆ ಮೂರು ದಿನ ಬಿಟ್ಟು ಬಂದ. ವೈದ್ಯರು ಹೇಳಿದರು ಮೊಣಕೈ ವರೆಗೂ ನಂಜು ಹರಡಿದೆ, ಮೊಣಕೈ ವರೆಗೂ ಕತ್ತರಿಸು ಎಂದು. ಅದೂ ಕತ್ತರಿಸಿ ಆಯ್ತು. ಮತ್ತೆ ಬಂದ ಭುಜದವರೆಗೂ ನಂಜು ಹರಡಿತ್ತು, ಸಂಪೂರ್ಣ ಕೈ ಕತ್ತರಿಸಬೇಕು ಎಂದರು ವೈದ್ಯರು. ಪೂರ್ಣ ಕೈಯನ್ನೇ ಕತ್ತರಿಸಿದರು.
ವೈದ್ಯರು ಹೇಳಿದರು ಇಷ್ಟು ನಂಜು ಹರಡಬೇಕು ಎಂದರೆ ನೀನು ಏನು ಮಾಡಿದ್ದೀ ಹೇಳು. ಪ್ರಬಲ ಹೇಳಿದ ಮೀನು ಕಚ್ಚಿತು. ಆ ಮೀನು ಯಾರದು.. ?? ದುರ್ಬಲನೊಬ್ಬನದು. ಅವನೇನಾದರೂ ಮಾಡಿಸಿದಾನೆಯಾ .. ?? ಕೇಳಿನೋಡು.. ಎಂದರು ವೈದ್ದರು.
ಈ ಪ್ರಬಲ ಹುಡುಕ್ತಾ ಹುಡುಕ್ತಾ ದುರ್ಬಲನ ಬಳಿ ಸೇರಿದ. ನಿನ್ನ ಮೀನು ಕಸೆದುಕೊಂಡದ್ದಕ್ಕೆ ಏನು ಮಾಟ ಮಂತ್ರ ಮಾಡಿಸೀದೀಯೇನೋ ?? ಎಂದು ಜೋರು ಮಾಡಿದ.
ಯಾವ ಮಾಟ ಮಂತ್ರನೂ ಮಾಡಿಸಿಲ್ಲ. ಮತ್ತೆ ನನಗೇ ಹೀಗ್ಯಾಕೆ ಆಗ್ತಿದೆ. ಕೈ ವರೆಗೆ ಹೋಯ್ತು. ಇನ್ಬೆರಡು ದಿನದಲ್ಲಿ ದೇಹವೆಲ್ಲ ವ್ಯಾಪಿಸುತ್ತದೆ ನಂಜು. ಹೀಗ್ಯಾಕೆ ಮಾಡಿದೆ ಎಂದು ಜೋರು ಝಗಳ ಮಾಡಿದ. ಆಗ ಆ ದುರ್ಬಲನ ಉತ್ತರ ಇಷ್ಟೇ ಇತ್ತು...
*ಓ ನನ್ನ ಭಗವನ್ !! ಇವನು ತನ್ನ ಶಕ್ತಿ ತೋರಿದ, ನೀನು ಯಾಕೆ ನಿನ್ನ ಶಕ್ತಿ ತೋರಿಸಬಾರದು ಏಕೆ ??* ಎಂದು ದೇವರಿಗೆ ಭಕ್ತಿ ಪೂರ್ವಕ ಅತ್ಯಂತ ಕಳಕಳಿಯಿಂದ ಸ್ವಾತ್ಮಾರ್ಪಣರೂಪದಿಂದ ಪ್ರಾರ್ಥಿಸಿದ್ದೇನೆ. ಇಷ್ಟು ಮಾತ್ರ ಮಾಡಿದ್ದೇನೆ. ದೇವ ತನ್ನ ಶಕ್ತಿ ತೋರಿಸಿರಬಹುದು ಎಂದು. ಆಗ ಪ್ರಬಲನಿಗೆ ಮಾತು ಬರಲಿಲ್ಲ. "ನಾವೆಷ್ಟು ಪ್ರಬಲರಾದರೂ ದೈವದ ಮುಂದೆ ನಾವು ಕೈಗೊಂಬೆಗಳೇ" ಎಂದು ಯೋಚಿಸುತ್ತಾ ಮೌನಕ್ಕೆ ಶರಣಾದ...
"ಈ ಕಥೆ ನಮ್ಮ ಪ್ರಾರ್ಥನೆ ಹೇಗಿರಬೇಕು ಎನ್ನುವದನ್ನು ತೋರಿಸುತ್ತದೆ" ದೇವರಿಗೂ ದೇವತೆಗಳಿಗೂ ಪಿತೃಗಳಿಗೂ ಅನಿವಾರ್ಯವಾಗಿರಬೇಕು ನಮ್ಮನ್ನು ರಕ್ಷಿಸುವದು. ನಮ್ಮ ಇಷ್ಟಾರ್ಥಗಳನ್ನು ಈಡೇರಿಸುವದೋ ಹಾಗೆ ಪ್ರಾರ್ಥನೆ ನಮ್ಮದಾಗಿರಬೇಕು...
*✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments