*ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕೋ.....*
*ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕೋ.....* ಜೀವನದ ದಿನದ ಸಾರ್ಥಕ ಕ್ಷಣಗಳು ಕೆಲವಾದರೂ ಇರಬೇಕು ಎಂದರೆ "ಶ್ರೀಕೃಷ್ಣ ಪರಮಾತ್ಮನ ಕ್ಷಣದ ನೋಟ, ಒಂದೇ ಮಾತಿನ ಉಪದೇಶ, ಕೃಷ್ಣ ಎಂಬೆರಡಕ್ಷರದ ಶ್ರವಣ, ಕೆಲಕ್ಷಣದ ಚಿಂತನ, ಒಂದರೆ ಆಜ್ಙಾಪಾಲನ" ಇವುಗಳು ಇದ್ದರೆ ಸಾಕು. ಯೋಗ್ಯನೇ ಆಗಿದ್ದರೆ ಮಹಾ ಮೋಕ್ಷಾದಿ ಪುರುಷಾರ್ಥರೂಪ ಸಾರ್ಥಕವೇ ಆಗುತ್ತದೆ. ಇಲ್ಲವೋ ಪಾಪಕಳೆದು ಪುಣ್ಯ ಕೊಟ್ಟು ಸುಖವಾಗಿ ಇರಿಸುತ್ತದೆ, ಅಂತೆಯೇ ಶ್ರೀ ವಾದಿರಾಜರು *ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕೋ* ಎಂದರು. ಯೋಗ್ಯನಾಗಿರಬೇಕು, ಯೋಗ್ಯತೆ ಇರಬೇಕು ಇದು ನೂರರಷ್ಟು ನಿಜ. *ದುರ್ಯೋಧನ - ಅರ್ಜುನ* ಭೀಷ್ಮ, ದ್ರೋಣ, ವಿದುರ, ಧೃತರಾಷ್ಟ್ರ, ಮೈತ್ರೇಯರು, ಈ ಎಲ್ಲ ಮಹನೀಯರುಗಳು ದುರ್ಯೋಧನನಿಗೆ ಮಾಡಿದಷ್ಟು ಉಪದೇಶ ಇನ್ಯಾರಿಗೂ ಮಾಡಿರಲಿಕ್ಕಿಲ್ಲ. ಮಹಾಭಾರತದಲ್ಲಿಯೂ ಸಿಗುವದಿಲ್ಲ. ಆದರೆ ಈ ಎಲ್ಲ ಉಪದೇಶ ಬೋರ್ಬಂಡೆಯ ಮೇಲೆ ನೀರು ಚೆಲ್ಲಿದಂತಾಯ್ತು. ಅದೇ ಶ್ರೀಕೃಷ್ಣ ಪರಮಾತ್ಮ ಹದಿನೆಂಟು ಅಧ್ಯಾಯದ ಗೀತೆಯನ್ನು ಹೇಳಿ *....ತಸ್ಮಾದ್ಯುಧ್ಯಸ್ವ ಭಾರತ* ಅರ್ಜುನ..!! ಅರ್ಜುನ ನೀನು ಯುದ್ಧಮಾಡು ಎಂದಿಷ್ಟು ಹೇಳಿದ. ಯುದ್ಧಕ್ಕೆ ಸಿದ್ಧನೇ ಆದ. ಇದು ಕೃಷ್ಣಪರಮಾತ್ಮನ *ಕ್ಷಣದ ಉಪದೇಶದ* ಫಲ. *ನಾವು - ಪರೀಕ್ಷಿತ* ಹುಟ್ಟಿದಾಗಿನಿಂದ ಎಷ್ಟು ಜನ್ಮಗಳಲ್ಲಿ ಭಾಗವತ ಕೇಳಿದ್ದೇವೆಯೋ ಗೊತ್ತಿಲ್ಲ. ಎ...