ಗೋವತ್ಸ ದ್ವಾದಶಿ – ಒಂದು ಸುಂದರ ಉಪಾಸನಾ ಚಿಂತನೆ


 ಗೋವತ್ಸ ದ್ವಾದಶಿ – ಒಂದು ಸುಂದರ ಉಪಾಸನಾ ಚಿಂತನೆ


ಗೋವತ್ಸ ಯಾರು?


ಗೋವತ್ಸ ಎಂದರೆ ಆಕಳ ಕರು. ಉಪಾಸನಾ ದೃಷ್ಟಿಯಿಂದ ಗೋವತ್ಸ ರೂಪದಲ್ಲಿ ಎಲ್ಲ ಜೀವಿಗಳ ಶರೀರದಲ್ಲಿ ನೆಲೆಸಿರುವವರು ಸಾಕ್ಷಾತ್ ವಾಯುದೇವರು.


ವಾಯುದೇವರು ಶರೀರದಲ್ಲಿ ಎಲ್ಲಿ ನೆಲೆಸಿದ್ದಾರೆ?


ಆಕಳ ಕರುವನ್ನು ಕಟ್ಟುವ ವಿಶಾಲವಾದ ಮನೆಯೊಳಗೆ ಒಂದು ಸಣ್ಣ ಮನೆಯಿರುವಂತೆ, ನಮ್ಮ ಸ್ಥೂಲಶರೀರವೆಂಬ ವಿಶಾಲವಾದ ಮನೆಯೊಳಗೆ ಬಲಗಣ್ಣೆಂಬ ಸೂಕ್ಷ್ಮವಾದ ಮನೆಯಿದೆ. ಆ ಬಲಗಣ್ಣಿನಲ್ಲಿ ಗೋವತ್ಸರೂಪದಿಂದ, ಅಂದರೆ ಆಕಳ ಕರುವಿನ ರೂಪದಿಂದ ವಾಯುದೇವರು ನೆಲೆಸಿದ್ದಾರೆ.


ಈ ಉಪಾಸನೆಯ ವಿಶೇಷತೆಯೇನು?


ಈ ಉಪಾಸನೆಯಲ್ಲಿ ಅತ್ಯಂತ ವಿಶೇಷವಾದ ತತ್ತ್ವಚಿಂತನೆಯಿದೆ.


ಸಾಕ್ಷಾತ್ ಶ್ರೀಮನ್ನಾರಾಯಣನೇ ಕರುವನ್ನು ಕಟ್ಟುವ ಸ್ಥಂಭವಾಗಿದ್ದಾನೆ. ಕರುವನ್ನು ಕಟ್ಟುವ ಹಗ್ಗವು ಅನ್ನಾಭಿಮಾನಿನಿಯಾದ ಶ್ರೀಲಕ್ಷ್ಮೀದೇವಿಯೇ ಆಗಿದ್ದಾಳೆ. ಆ ಕರುವಿನ ರೂಪದಲ್ಲಿರುವವರು ಸಾಕ್ಷಾತ್ ವಾಯುದೇವರು.


ಅಂದರೆ, ಬಲಗಣ್ಣೆಂಬ ಸೂಕ್ಷ್ಮಗೃಹದಲ್ಲಿ ಶ್ರೀನಾರಾಯಣನೆಂಬ ಸ್ಥಂಭಕ್ಕೆ, ಶ್ರೀಲಕ್ಷ್ಮೀದೇವಿಯೆಂಬ ಹಗ್ಗದಿಂದ ವಾಯುದೇವರೆಂಬ ಗೋವತ್ಸವು ಬಂಧಿತವಾಗಿರುವ ದಿವ್ಯರೂಪವನ್ನು ಚಿಂತಿಸಬೇಕು.


ಈ ದಿವ್ಯರೂಪವನ್ನು ಚಿಂತಿಸುವವರು ಯಾರು?


ಸಪ್ತರೂಪಗಳಿಂದ ಸಪ್ತ ಋಷಿಗಳ ನಾಮದಲ್ಲು ಏಳು ದೇವತೆಗಳು ಕಣ್ಣಿನ ಏಳು ಸ್ಥಾನಗಳಲ್ಲಿ ನೆಲೆಸಿ, ನಿರಂತರವಾಗಿ ಈ ದಿವ್ಯರೂಪದ ಉಪಾಸನೆಯನ್ನು ಮಾಡುತ್ತಿರುತ್ತಾರೆ.


ಗೌತಮ ಎಂಬ ನಾಮದ ರುದ್ರದೇವರು, ಭರದ್ವಾಜನಾಮಕ ಪರ್ಜನ್ಯ, ವಿಶ್ವಾಮಿತ್ರನಾಮ ಆದಿತ್ಯ, ಜಮದಗ್ನಿನಾಮಕ ಅಗ್ನಿ, ವಸಿಷ್ಠ ನಾಮಕ ಇಂದ್ರ, ಕಶ್ಯಪನಾಮಿಕಾ ಪೃಥ್ವೀ, ಅತ್ರಿನಾಮಕ ದ್ಯೌ, ಈ ದೇವತೆಗಳು ಉಪಾಸನೆ ಮಾಡುತ್ತಿರುತ್ತಾರೆ.


ಈ ಉಪಾಸನೆಯ ಫಲವೇನು?


ವಾಯುವೇಗವೆಂದೇ ಪ್ರಸಿದ್ಧರಾದ, ಅನಂತ ಜೀವರಾಶಿಗಳ ನಿಯಾಮಕರಾದ, ಸಮಸ್ತ ಇಂದ್ರಿಯಗಳಿಗೂ ನಿಯಾಮಕರಾದ ವಾಯುದೇವರನ್ನೇ ಸ್ವಯಂ ಶ್ರೀಲಕ್ಷ್ಮೀದೇವಿಯು ನಿಯಂತ್ರಿಸುತ್ತಾಳೆ ಎಂಬ ಈ ವಿಶಿಷ್ಟವಾದ ತತ್ತ್ವಚಿಂತನೆಯ ಮಹಾಫಲವೇ ಇಂದ್ರಿಯಜಯ.


ಇಂದಿನ ಜೀವನಕ್ಕೆ ಇದರ ಉಪಯೋಗವೇನು?


ಇಂದ್ರಿಯಗಳನ್ನು ಸ್ವೇಚ್ಛೆಯಂತೆ ಹರಿಬಿಟ್ಟು, ಅವುಗಳ ದಾಸರಾಗಿ ಬದುಕುತ್ತಿರುವ ನಮಗೆ ಇಂದು ಇಂದ್ರಿಯನಿಗ್ರಹ ಅತ್ಯಂತ ಅನಿವಾರ್ಯವಾಗಿದೆ.


ನಮ್ಮ ಶತೃಗಳು ಹೊರಗಿಲ್ಲ. ನಮ್ಮಲ್ಲೇ ಇದ್ದಾರೆ. ಬುದ್ಧಿಯಿಂದ ಸಹಿತವಾದ ಮನಸ್ಸು ಮತ್ತು ಐದು ಜ್ಙಾನೇಂದ್ರಿರೂಪ ಏಳುಸ್ಥಾನಗಳಲ್ಲಿ ಏಳು ಶತೃಗಳು ಇರುತ್ತಾರೆ. ಆ ಏಳೂ ಶತೃಗಳನ್ನೂ ನಿಗ್ರಹಿಸಲು ಈ ಉಪಾಸನೆ ತುಂಬ ಪ್ರಬಲವಾಗಿದೆ.


ಇಂದ್ರಿಯಗಳನ್ನು ನಿಯಂತ್ರಿಸುವ ಶಕ್ತಿಯನ್ನು ಸಂಪಾದಿಸುವುದೇ ಆಧ್ಯಾತ್ಮಿಕ ಜೀವನದ ಮಹತ್ವದ ಸಾಧನೆಯಾಗಿದೆ.


ಇಂದಿನಿಂದ ನಾವು ಏನು ಮಾಡಬೇಕು?


ಗೋವತ್ಸ ದ್ವಾದಶಿಯಿಂದಲೇ ಗೋವತ್ಸರೂಪದ ವಾಯುದೇವರ ಈ ದಿವ್ಯಸ್ವರೂಪವನ್ನು ನಿರಂತರವಾಗಿ ಚಿಂತಿಸೋಣ.


ಆ ಉಪಾಸನೆಯ ಮೂಲಕ ಇಂದ್ರಿಯಜಯವನ್ನು ಸಾಧಿಸುವ ಸಂಕಲ್ಪವನ್ನು ನಮ್ಮ ಜೀವನದ ಉಸಿರಾಗಿಸಿಕೊಳ್ಳೋಣ.


ಶ್ರೀನಾರಾಯಣನ ಸಾನ್ನಿಧ್ಯದಲ್ಲಿ, ಶ್ರೀಲಕ್ಷ್ಮೀದೇವಿಯ ನಿಯಂತ್ರಣಕ್ಕೆ ಒಳಪಟ್ಟು ಗೋವತ್ಸರೂಪದಿಂದ ನೆಲೆಸಿರುವ ವಾಯುದೇವರ ದಿವ್ಯಾನುಗ್ರಹದಿಂದ ನಮ್ಮೆಲ್ಲರಿಗೂ ಇಂದ್ರಿಯಜಯ ಹಾಗೂ ಭಗವದ್ಭಕ್ತಿ ಪ್ರಾಪ್ತವಾಗಲಿ.


ಗೋವತ್ಸ ದ್ವಾದಶಿಯ ಈ ಪಾವನ ಸಂದರ್ಭದಲ್ಲಿ ಗೋವತ್ಸರೂಪದ ವಾಯುದೇವರ ಅನುಗ್ರಹ ಎಲ್ಲರ ಮೇಲೂ ನಿರಂತರವಾಗಿರಲೆಂದು ಹೃತ್ಪೂರ್ವಕ ಶುಭಾಶಯಗಳು.


✍🏽 ನ್ಯಾಸ

ಗೋಪಾಲದಾಸ

ವಿಜಯಾಶ್ರಮ, ಸಿರಿವಾರ

Comments

Popular posts from this blog

*ಕೃಷ್ಣಾಷ್ಟಮೀ ಸಂಕಲ್ಪ ಸ್ನಾನ ಪೂಜೆ ಅರ್ಘ್ಯ ಸಮರ್ಪಣ - ಮಂತ್ರಗಳು*

ನಾಗ ಸ್ತೋತ್ರಮ್

ಶ್ರೀಶ್ರೀಆತ್ಮೇಂದ್ರತೀರ್ಥರಿಗೇ ಜಯವಾಗಲಿ