ಕೋಟಿ ಕೋಟಿ ಭಕ್ತ-ಶಿಷ್ಯರ ಆತ್ಮರು — ಶ್ರೀಸತ್ಯಾತ್ಮರು
ಕೋಟಿ ಕೋಟಿ ಭಕ್ತ-ಶಿಷ್ಯರ ಆತ್ಮರು — ಶ್ರೀಸತ್ಯಾತ್ಮರು ಪರಮಪೂಜ್ಯ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ಕೋಟಿ ಕೋಟಿ ಭಕ್ತ-ಶಿಷ್ಯರ ಹೃದಯದಲ್ಲಿ ನೆಲೆಸಿರುವ ಗುರುಸ್ವರೂಪಿಗಳು. ಕರುಣಾಮಯಿಗಳು, ತಪಸ್ವಿಗಳು, ಸಿದ್ಧಪುರುಷರು, ಅಖಂಡ ಭಗವದಾರಾಧಕರು, ಧರ್ಮಸಂರಕ್ಷಕರು, ಧಾರ್ಮಿಕೋತ್ತಮರು, ಧರ್ಮಬೋಧಕರು, ತತ್ತ್ವಜ್ಞಾನಿಗಳು, ಜ್ಞಾನಪ್ರದೀಪಗಳು, ಜ್ಞಾನನಿಧಿಗಳು — ಹೀಗೆ ಅವರ ವ್ಯಕ್ತಿತ್ವವನ್ನು ಎಷ್ಟೇ ವಿಧದಲ್ಲಿ ವರ್ಣಿಸಿದರೂ ಅದು ಅಪೂರ್ಣವೇ ಸರಿ. ತಮ್ಮ ತಪೋಬಲದಿಂದ ಭಕ್ತ-ಶಿಷ್ಯರ ಆಪತ್ತುಗಳನ್ನು ಪರಿಹರಿಸುವವರು, ಇಷ್ಟಾರ್ಥಗಳನ್ನು ನೆರವೇರಿಸುವವರು, ಭಕ್ತರ ಸಂರಕ್ಷಕರು, ಶಿಷ್ಯರ ದಾರಿದೀಪಗಳು, ಶಿಷ್ಯರ ಹಿತಕ್ಕಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿಕೊಂಡವರು — ಇಂತಹ ಮಹಾತ್ಮರ ಬಗ್ಗೆ ಶಿಷ್ಯರ ಹೃದಯದಲ್ಲಿ ಉಂಟಾಗುವ ಅಭಿಮಾನವು ಸಾಮಾನ್ಯವಾದದ್ದಲ್ಲ. ಈ ಹಿನ್ನೆಲೆಯಲ್ಲಿ “ಶ್ರೀಸತ್ಯಾತ್ಮತೀರ್ಥರು ನಮ್ಮೆಲ್ಲರ ಆತ್ಮರು” ಎಂಬ ಭಾವವನ್ನು ಒಮ್ಮೆ ಆಳವಾಗಿ ವಿಚಾರಿಸಬೇಕಾಗಿದೆ. ಅಭಿಮಾನದ ಸ್ವರೂಪ ಮನುಷ್ಯನಿಗೆ ತನ್ನ ಸುತ್ತಲಿನ ವಸ್ತುಗಳ ಮೇಲೆ ಅಭಿಮಾನವಿರುತ್ತದೆ. ಆದರೆ ಆ ಅಭಿಮಾನದಲ್ಲಿಯೂ ಒಂದು ಕ್ರಮಬದ್ಧವಾದ ತಾರತಮ್ಯವಿದೆ. ಭಾರತ ಮತ್ತು ಪಾಕಿಸ್ತಾನ ಎಂಬ ಪ್ರಶ್ನೆ ಬಂದಾಗ ಭಾರತೀಯನಿಗೆ ತನ್ನ ಭಾರತದ ಮೇಲೆ ಅಭಿಮಾನ. ರಾಜ್ಯಗಳ ವಿಚಾರ ಬಂದಾಗ ತನ್ನ ರಾಜ್ಯದ ಮೇಲೆ ಅಭಿಮಾನ. ಜಿಲ್ಲೆಗಳ ವಿಚಾರ ಬಂದಾಗ ತನ್ನ ಜಿಲ್ಲೆಯ ಮೇಲೆ ಅಭಿಮಾನ. ಊರುಗ...