*-: ಹರಿದಿನದ (ಏಕಾದಶಿ) ವೈಭವ:-*
ವೈಷ್ಣವರು ಎಂದೆನಿಸಿಕೊಳ್ಳಲು ಹರಿದಿನವನ್ನು ಕಡ್ಡಾಯವಾಗಿ ಪಾಲನೆ ಮಾಡುವದು ಅತ್ಯಂತ ಅನಿವಾರ್ಯ. ಏಕಾದಶೀ ಉಪವಾಸ ಅತ್ಯನಿವಾರ್ಯ ಎಂದು ಶೃತಿ ಸ್ಮೃತಿ ಇತಿಹಾಸ ಹಾಗೂ ವೇದಗಳು ಚೆನ್ನಾಗಿ ಪ್ರತಿಪಾದಿಸಿವೆ. ಆ ತತ್ವವನ್ನು ಶ್ರೀಮಾದಾಚಾರ್ಯರು ಮಾತ್ರ ಬಹಳವಾಗಿ ಪ್ರತಿಪಾದಿಸುತ್ತಾರೆ.
"ನೇದೃಶಂ ಪಾವನಂ ಕಿಂಚಿತ್ ನರಾಣಾಂ ಭುವಿ ವಿದ್ಯತೇ |
ಯಾದೃಶಂ ಪದ್ಮನಾಭಸ್ಯ ದಿನಂ ಪಾತಕನಾಶನಮ್ ||"
ಪಾಪ ಪರಿಹಾರಕವಾದ ಹರಿವಾಸರದಂತಹ (ಏಕಾದಶಿ) ಪರಮಪುಣ್ಯ ದಿನ ಮನುಷ್ಯರಿಗೆ ಇನ್ನೊಂದಿಲ್ಲ. ಪಾಪ ಪರಿಹಾರ ಮಾಡುವ ದಿನವೂ ಮತ್ತೊಂದಿಲ್ಲ ಎಂದು ಪ್ರತಿಪಾದಿಸುತ್ತಾರೆ.
"ನ ಕಾಶೀ ನ ಗಯಾ ಗಂಗಾ ನ ರೇವಾ ನ ಚ ಗೌತಮೀ |
ನ ಚಾಪಿ ಕೌರವಂ ಕ್ಷೇತ್ರಂ ತುಲ್ಯಂ ಭೂಪ ಹರೇರ್ದಿನಾತ್||" (ಶ್ರೀ.ಕೃ.ಮ.)
ಕಾಶಿ, ಗಯೆ, ಗಂಗೆ , ನರ್ಮದೆ, ಗೋದಾವರಿ, ಕುರುಕ್ಷೇತ್ರ ಇವುಗಳು ಪಾಪಗಳನ್ನು ಪರಿಹರಿಸುವ ಅತ್ಯುತ್ತಮ ಕ್ಷೇತ್ರಗಳು. ಆದರೆ ಏಕಾದಶಿ ಸರ್ವಥಾ ಸಮವಲ್ಲ. ಏಕಾದಶೀ ಉಪಾವಾಸದಿಂದ ಏನು ಪಾಪ ಪರಿಹಾರವಾಗತ್ತೆ, ಅಥವಾ ಪುಣ್ಯಬರತ್ತೆ ಬರುವ ಪುಣ್ಯಕ್ಕೆಣೆಯಿಲ್ಲ. ಮೇಲೆ ಹೇಳಿದ ತೀರ್ಥಕ್ಷೆತ್ರ ಸಂಚಾರ ಮಾಡಿದರೂ ಅಷ್ಟು ಬರುವದಿಲ್ಲ.
"ಅಶ್ಬಮೇಧ ದಶಸಹಸ್ರಾಣಿ ವಾಜಪೇಯ ಶತಾನಿ ಚ|
ಏಕಾದಶ್ಯುಪವಾಸಸ್ಯ ಕಲಾಂನಾರ್ಹಂತಿ ಷೋಡಶೀಮ್ ||" (ಶ್ರೀ.ಕೃ..ಮ)
ಸಾವಿರಾರು ಅಶ್ಬಮೇಧ, ನೂರಾರು ವಾಜಪೇಯ ರಾಜಸೂಯ ಮೊದಲಾದ ಯಾಗಗಳೂ ಏಕಾದಶಿಯ ಹದಿನಾರನೆಯ ಒಂದಂಶಕ್ಕೆ ಸಮವಲ್ಲ. ಇದು ಏಕಾದಶಿಯ ವೈಭವ.
"ಏಕಾದಶೀ ಸಮುತ್ಥೇನ ವಹ್ನಿನಾ ಪಾತಕೇಂಧನಮ್ |
ಭಸ್ಮೀಭವತಿ ರಾಜೇಂದ್ರ ಅಪಿ ಜನ್ಮ ಶತೋದ್ಜಬವಮ್ || (ಶ್ರೀ.ಕೃ.ಮ).
"ಏಕಾದಶೀ ಉಪವಾಸ, ಜಪ, ಪಾರಾಯಣ, ಜಾಗರ ಮೊದಲಾದವುಗಳಿಂದ ಜನಿಸಿದ ಅಗ್ನಿಯಿಂದ ಸುಡುವದೇನಿದೆ ಎಂದರೆ ಪಾಪಗಳೆಂಬ ಕಟ್ಟಿಗೆ" ಎಂದು ಆಚಾರ್ಯರು ಹೇಳುತ್ತಾರೆ.
"ಏಕಾದಶೇಂದ್ರಿಯೈಃ ಪಾಪಂ ಯತ್ಕೃತಂ ಭವತಿ ಪ್ರಭೋ |
ಏಕಾದಶ್ಯುಪವಾಸೇನ ತತ್ಸರ್ವಂ ವಿಲಯಂ ನಯೇತ್ ||" (ಶ್ರೀ.ಕೃ.ಮ)
ಏಕಾದಶೇಂದ್ರಿಯಗಳಿಂದ ಮಾಡಿದ ಪಾಪಗಳೆಲ್ಲಾ ಏಕಾದಶಿ ಉಪವಾಸದಿಂದ ತೊಲಗುವವು. ಇದರಲ್ಲಿ ಯಾವ ಸಂಶಯವೂ ಸಲ್ಲ..
"ಏಕಾದಶೀ ಸಮಂ ಕಿಂಚಿತ್ ಪಾಪತ್ರಾಣಂ ನ ವಿದ್ಯತೇ |
ವ್ಯಾಜೇನಾಪಿ ಕೃತಂ ರಾಜನ್ ನ ದರ್ಶಯತಿ ಭಾಸ್ಕರೀಮ್||" (ಶ್ರೀ.ಕೃ.ಮ)
ಏಕಾದಶಿಗೆ ಸಮನಾದ ಪಾಪನಾಶನ ವ್ರತ ಇನ್ನೊಂದಿಲ್ಲ.
ಆ ವ್ರತವನ್ನು ಕಪಟದಿಂದಾಗಿ, ಬಯ್ಕೊಳ್ತಾ, ಗೊಳಾಡ್ತಾ ಆಚರಿಸಿದರೂ ಕೂಡಾ ಸೂರ್ಯನ ಮಗನಾದ ಯಮನ ದರ್ಶನವಾಗುವದೇ ಇಲ್ಲ. ಇದು ಏಕಾದಶಿಯ ವೈಭವ.
"ಜ್ಞಾತ್ವಾ ವಿಪ್ರಾಸ್ತಿಥಿಂ ಸಮ್ಯಗ್ ದೈವಜ್ಞೈಃ ಸಮುದೀರಿತಾಮ್ |
ಕರ್ತವ್ಯಂ ಉಪವಾಸಸ್ತು ಅನ್ಯಥಾ ನರಕಂ ವೃಜೇತ್||" (ಶ್ರೀ.ಕೃ.ಮ)
ಜ್ಯೋತಿಃಶಾಸ್ತ್ರವನ್ನು ಬಲ್ಲವರ ಬಳಿ ತಿಥಿಯನ್ನು ಸರಿಯಾಗಿ ತಿಳಿದುಕೊಂಡು ಏಕಾದಶಿಯಂದು ಉಪವಾಸವನ್ನು ಆಚರಿಸಬೇಕು. ಏಕಾದಶಿಯಂದು ಉಣ್ಣುವವನು ನರಕ ಯಾತನೆ
ಗಳನ್ನೇ ಉಣ್ಣುವವ. ಇದರಲ್ಲಿ ಸರ್ವಥಾ ಸಂಶಯಬೇಡ. "ಹರಿದಿನದಲಿ ಉಂಡ ನನರರಿಗೆ ಘೋರ ನರಕ ತಪ್ಪದು ಎಂದು ಶೃತಿಸಾರುತಿದೆ" ಎಂದರು ದಾಸರು.
*ದ್ವಾದಶೀ ಪಾರಣೇ..*
ಏಕಾದಶಿ ಉಪವಾಸವು ಎಷ್ಟು ಮುಖ್ಯವಾಗಿದೆಯೋ ಅಷ್ಟೇ ಮುಖ್ಯವಾಗಿ ದ್ವಾದಶಿಯಂದು ಪಾರಣೆಮಾಡುವದು. ಅಂತೆಯೇ ಅತ್ಯವಶ್ಯವಾಗಿ ಸಕಾಲದಲ್ಲಿ ಪಾರಣೆಯನ್ನೂ ಕಡ್ಡಾಯವಾಗಿ ಮಾಡಬೇಕು. ಜಾಗರಣೆ ಆಗಬೇಕು. ಮೌನ ಇರಬೇಕು. ಭಗವತ್ಪೂಜೆ ಆಗಲೇಬೇಕು.
*✍🏽✍🏽ನ್ಯಾಸ...*
ಗೋಪಾಲದಾಸ,
ವಿಜಯಾಶ್ರಮ. ಸಿರವಾರ.
Comments