ಗೋಪಾಲದಾಸರ ಚರಿತ್ರೆ ಪದ
ಶ್ರೀಗೋಪಾಲದಾಸರ ಅನುಜರೂ, ಶಿಷ್ಯರೂ, ಅಪರೋಕ್ಷಜ್ಞಾನಿಗಳೂ ಆದ *ಶ್ರೀ ತಂದೆಗೋಪಾಲವಿಠಲದಾಸಾರ್ಯ (ರಂಗಪ್ಪ ದಾಸರು) ವಿರಚಿತ* *ಶ್ರೀ ಗೋಪಾಲದಾಸರ ಚರಿತ್ರೆ ಪದ* *ರಾಗ ಆನಂದಭೈರವಿ ಆದಿತಾಳ* ಭಜಿಸಿ ಬದುಕಿರೊ ಅಜನಪಿತ ಶ್ರೀವಿಜಯವಿಟ್ಠಲರಾಯನಾ । ಭಜನಿ ಮಾಡುವ ವಿಜಯರಾಯರೆ ನಿಜಗುರುಗಳೆಂದೆನಿಪನಾ॥ಪ॥ ಮೂಲ ಪೇಳ್ವೆ ವಿಶಾಲ ಮಹಿಮ ಸುಶೀಲ ವಿಜಯರಾಯರ । ಕಾಲಕಾಲಕೆ ಸ್ಮರಿಪ ಶ್ರೀಗೋಪಾಲದಾಸರಾಯರಾ ॥ 1 ॥ ದಧಿಪಾಷಾಣದಧಿಪನೆನಿಸುವ ಮುದಗಲಾಖ್ಯ ಪುತ್ರನಾ । ಉದರದಲಿ ಉದುಭವಿಸಿದರು ನಾಲ್ವರದರೊಳಗೆ ಬುಧವರ್ಯನಾ॥ 2 ॥ ಪುಟ್ಟಿದಾಗಲೆ ಪಿತ ಮುರಾರಿಯ ಶಿಷ್ಟ ಶಿಶುವೆಂದೆನುತಲಿ । ಇಟ್ಟ ಈ ವಸುಧಿಯೊಳು ಪೆಸರನು ಧಿಟ್ಟ ಭಾಗಣ್ಣನೆನುತಲಿ ॥ 3 ॥ ಪಂಚವತ್ಸರ ಬರಲು ಮನೆಯೊಳು ಸಂಚಿತದ ಸಂಪತ್ತನು । ಪಂಚಬಾಣನ ಪಿತನ ಆಜ್ಞದಿ ಕೊಂಚವಾಗೆ ವೆಂಕಮ್ಮನು ॥ 4 ॥ ವೇಂಕಟರಮಣನ್ನ ಸ್ಮರಿಸುತ ಮಂಕುಮಗುಗಳ ಸಹಿತದಿ । ಸಂಕಟಾಬಡುತಲ್ಲೇ ನಿಂತರಾ ಸುಂಕಪುರದಾ ಸ್ಥಳದಲಿ ॥ 5 ॥ ಉದರಗೋಸುವಾಗಿ ಮತ್ತೆ ಸದನಗಳು ಬಲು ತಿರುಗುತಾ । ವಿಧಿಲಿಖಿತ ತಪ್ಪದುಯೆನುತಾ ಕೃಷಿ ಅದರ ವ್ಯಾಪಾರ ನಡಿಸುತಾ ॥ 6 ॥ ಏಳು ವರ್ಷವು ಸಾಗಿಸಿ ಶ್ರಮ ತಾಳದಲೆ ವಟ ವೃಕ್ಷದಾ । ಮೂಲದಲಿ ಮಲಗಿರಲು ದೇಹದ ಮ್ಯಾಲೆ ಸರ್ಪನಂದದಿ ॥ 7 ॥ ...