*ಹೇ ಅದೃಷ್ಟ ಹೀನ ಮನಸ್ಸೇ..... ಇನ್ನಾದರೂ ಬಲಿಷ್ಠನಾಗು*
*ಹೇ ಅದೃಷ್ಟ ಹೀನ ಮನಸ್ಸೇ..... ಇನ್ನಾದರೂ ಬಲಿಷ್ಠನಾಗು* "ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ" ಮನುಷ್ಯರ ಸಂಸಾರ ಬಂಧಕ್ಕೂ ಹಾಗೂ ಬಂಧದಿಂದ ಮುಕ್ತಿಗೂ ಮನಸ್ಸೇ ಕಾರಣ" ಇದು ಸುಪ್ರಸಿದ್ಧ. ಸಂಸಾರದಲ್ಲಿ ಸುಖ ದುಃಖ, ಸೋಲು ಗೆಲವು, ಯಶಸ್ಸು ಅಪಯಶಸ್ಸು, ಏಳು ಬೀಳು, ಇತ್ಯಾದಿ ಎಲ್ಲವನ್ನು ಅನುಭವಿಸಲೂ ಮನಸ್ಸೇ ಮೂಲ ಕಾರಣ. ಇದುವೂ ಸಿದ್ಧ. ಮನಸ್ಸು ಮಹಾಕೋತಿ. ಇಂದಿನ ಈ ಕ್ಷಣದ ವೈಭವ ಮಾತ್ರ ಮನಸ್ಸಿಗೆ ಬೇಕು. ಅಂತೆಯೇ ಪುಣ್ಯಸಂಪಾದೆನೆಗೆ ಹಿದೇಟು. ಪುಣ್ಯ ಮಾಡುವಾಗ ದುಃಖ, ಆ ದುಃಖ ಮನಸ್ಸಿಗೆ ಸರ್ವಥಾ ಬೇಡ. ಪಾಪ ಮಾಡುವಾಗ ಸುಖ, ಆ ಸುಖವನ್ನು ಪರಿಪೂರ್ಣವಾಗಿ ಸ್ವಾಗತಿಸುತ್ತದೆ ಮನಸ್ಸು. ಪುಣ್ಯವೇ ರುಚಿಸದ, ಸ್ವಾಗತಿಸದ, ಆಸ್ವಾದಿಸದ ಒಂದು ವಸ್ತು ಎಂದರೆ ಅದು ಮನಸ್ಸೇ. *ಆ ಕಾರಣದಿಂದಲೇ ಅದೃಷ್ಟ ಹೀನವಾಗಿದೆ ಮನಸ್ಸು.* ಅದೃಷ್ಟವಿರದಿರೆ ಮನಸ್ಸು ಮಹಾ ದುರ್ಬಲ. ಹಿತವಾದ ಯಾವ ಮಾತನ್ನೂ ಕೇಳದು. ಹಿತವಾದದ್ದನ್ನು ಮಾಡದು. *ಅದೃಷ್ಟ ಹೀನ ಮನಸ್ಸಿಗೆ ದೂರದೃಷ್ಟಿ ಕಡಿಮೆ* ಅದೃಷ್ಟ ಹೀನವಾದ ಮನಸ್ಸು ಎಂದಿಗೂ ದೂರಾಲೋಚನೆ ಕಡಿಮೆ ಇರುತ್ತದೆ. *ದೂರಾಲೋಚನೆಗಿಂತಲೂ ದುರಾಲೋಚನೆಯೇ ಹೆಚ್ಚು ಆಗಿರುತ್ತದೆ.* ದುರಾಲೋಚೆನೆಗಳು ಹೆಚ್ಚಾದಷ್ಟು ಮನಸ್ಸು ದುರ್ಬಲ ಆಗುತ್ತಾ ಸಾಗುತ್ತದೆ. ದುರ್ಬಲ ಮನಸ್ಸು ಎಲ್ಲ ವಿಷಯದಲ್ಲಿಯೂ ತನ್ನ ಸ್ವಾಸ್ಥತೆಯನ್ನು ಕಳೆದುಕೊಂಡಿರುತ್ತದೆ. ಎಲ್ಲ ಕಡೆ ಕದಡಿಸಿಕೊಂಡಿರುತ್ತದೆ. ಎಲ್...