*ಹೇ ಅದೃಷ್ಟ ಹೀನ ಮನಸ್ಸೇ..... ಇನ್ನಾದರೂ ಬಲಿಷ್ಠನಾಗು*


 *ಹೇ ಅದೃಷ್ಟ ಹೀನ ಮನಸ್ಸೇ..... ಇನ್ನಾದರೂ ಬಲಿಷ್ಠನಾಗು*


"ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ" ಮನುಷ್ಯರ ಸಂಸಾರ ಬಂಧಕ್ಕೂ ಹಾಗೂ ಬಂಧದಿಂದ ಮುಕ್ತಿಗೂ ಮನಸ್ಸೇ ಕಾರಣ" ಇದು ಸುಪ್ರಸಿದ್ಧ.  ಸಂಸಾರದಲ್ಲಿ ಸುಖ ದುಃಖ, ಸೋಲು ಗೆಲವು, ಯಶಸ್ಸು ಅಪಯಶಸ್ಸು, ಏಳು ಬೀಳು, ಇತ್ಯಾದಿ ಎಲ್ಲವನ್ನು  ಅನುಭವಿಸಲೂ ಮನಸ್ಸೇ ಮೂಲ ಕಾರಣ. ಇದುವೂ ಸಿದ್ಧ.


ಮನಸ್ಸು ಮಹಾಕೋತಿ. ಇಂದಿನ ಈ ಕ್ಷಣದ ವೈಭವ ಮಾತ್ರ ಮನಸ್ಸಿಗೆ ಬೇಕು. ಅಂತೆಯೇ ಪುಣ್ಯಸಂಪಾದೆನೆಗೆ ಹಿದೇಟು. ಪುಣ್ಯ ಮಾಡುವಾಗ ದುಃಖ, ಆ ದುಃಖ ಮನಸ್ಸಿಗೆ ಸರ್ವಥಾ ಬೇಡ. ಪಾಪ ಮಾಡುವಾಗ ಸುಖ, ಆ ಸುಖವನ್ನು ಪರಿಪೂರ್ಣವಾಗಿ ಸ್ವಾಗತಿಸುತ್ತದೆ ಮನಸ್ಸು. 


ಪುಣ್ಯವೇ ರುಚಿಸದ, ಸ್ವಾಗತಿಸದ, ಆಸ್ವಾದಿಸದ ಒಂದು ವಸ್ತು ಎಂದರೆ ಅದು ಮನಸ್ಸೇ.   *ಆ ಕಾರಣದಿಂದಲೇ ಅದೃಷ್ಟ ಹೀನವಾಗಿದೆ ಮನಸ್ಸು.* ಅದೃಷ್ಟವಿರದಿರೆ ಮನಸ್ಸು ಮಹಾ ದುರ್ಬಲ. ಹಿತವಾದ ಯಾವ ಮಾತನ್ನೂ ಕೇಳದು. ಹಿತವಾದದ್ದನ್ನು ಮಾಡದು.


*ಅದೃಷ್ಟ ಹೀನ ಮನಸ್ಸಿಗೆ ದೂರದೃಷ್ಟಿ ಕಡಿಮೆ*


ಅದೃಷ್ಟ ಹೀನವಾದ ಮನಸ್ಸು ಎಂದಿಗೂ ದೂರಾಲೋಚನೆ ಕಡಿಮೆ ಇರುತ್ತದೆ. *ದೂರಾಲೋಚನೆಗಿಂತಲೂ ದುರಾಲೋಚನೆಯೇ ಹೆಚ್ಚು ಆಗಿರುತ್ತದೆ.* ದುರಾಲೋಚೆನೆಗಳು ಹೆಚ್ಚಾದಷ್ಟು ಮನಸ್ಸು ದುರ್ಬಲ ಆಗುತ್ತಾ ಸಾಗುತ್ತದೆ. ದುರ್ಬಲ ಮನಸ್ಸು ಎಲ್ಲ ವಿಷಯದಲ್ಲಿಯೂ ತನ್ನ ಸ್ವಾಸ್ಥತೆಯನ್ನು ಕಳೆದುಕೊಂಡಿರುತ್ತದೆ. ಎಲ್ಲ ಕಡೆ ಕದಡಿಸಿಕೊಂಡಿರುತ್ತದೆ. ಎಲ್ಲದರ ನಿರ್ಣಯವೂ ಪ್ರತಿಕೂಲವೇ ಆಗುತ್ತದೆ. ದುರ್ಬಲ ಮನಸ್ಸಿನವನೇ ಪಾಪಾಸಕ್ತ. ಮನಸ್ಸಿನ ದೌರ್ಬಲ್ಯವೇ ಪಾಪಗಳಿಗೆ ಬಹುಮುಖ್ಯ ವೇದಿಕೆ.


*ಮನಸ್ಸಿಗೆ ಬಲ ಬರುವದು ಹೇಗೆ.....*


ಮನಸ್ಸಿಗೆ ಶಕ್ತಿ ಕೊಟ್ಟು ಸದೃಢನನ್ನಾಗಿ ಮಾಡಲು *ಅದೃಷ್ಟ* ದ ಸಾಥ್ ಅತ್ಯಂತ ಅನಿವಾರ್ಯವಾಗಿ ಬೇಕು. ಪುಣ್ಯ ಬೆಳಿಯಿತೋ ಮನಸ್ಸು ಪ್ರಬಲ. ಪುಣ್ಯವಿದೆಯಾ ಸದ್ವಿಚಾರಗಳೇ. ಪುಣ್ಯವಿದ್ದರೆ ಪ್ರಶಾಂತ. ಪುಣ್ಯವಿದ್ದರೆ ತಾತ್ಕಾಲಿಕ ಕಷ್ಟ ಸಹನೆ. ಪುಣ್ಯವಿದ್ದರೆ ದೂರಾಲೋಚನೆ. ಪುಣ್ಯವಿದ್ದರೆ ಹಿತದ ಚಿಂತನೆ.   ಕೊನೆಗೆ ಮಂಗಳವಾಗುವದು ನಿಶ್ಚಿತ, ಅದು ಆಗುವದು ಪುಣ್ಯವಂತನಿಗೆ ಮಾತ್ರ. ಆದ್ದರಿಂದ ಪುಣ್ಯ ಮಾನವನನ್ನು ಬಲಿಷ್ಠನನ್ನಾಗಿಸುತ್ತದೆ. 


 ಜ್ಙಾನ. ಸಮಾಧಾನ, ಶಾಂತಿ, ಆರೋಗ್ಯಭಾಗ್ಯ, ಮನಃಸ್ವಾಸ್ಥ್ಯ, ದೇವರು, ಗುರುಗಳು ಧರ್ಮ ಭಕ್ತಿ, ತೃಪ್ತಿ, ಈ ಎಲ್ಲವೂ ಪುಣ್ಯವಂತರಿಗೆ. *ಪುಣ್ಯವಂತನಿಗೆ ದುರಾಲೋಚೆನೆಗಳು ತುಂಬ ಕಡಿಮೆ, ಅಂತೇ ಹಿತವಾದ ದೂರಾಲೋಚೆನೆಗಳೇ ಹೆಚ್ಚೆಚ್ಚು*  ಅಂತೆಯೆ ನಮ್ಮ ಸಮಾಜದಲ್ಲಿ ಪುಣ್ಯಸಂಪಾದೆನೆಗೆ ಅಷ್ಟಷ್ಟು ಪ್ರಾಶಸ್ತ್ಯ. ಪುಣ್ಯ ಸಂಪಾದೆನೆಯ ಕಡೆ ಗಮನಕೊಡುವದು ನಮನಮಗೆ ಬಿಟ್ಟಿರುವದು. 


ಅಪಘಾತಗಳಿಗೆ ಮನಸ್ಸು ಪ್ರೇರಿಸುವದು ಪಾಪವಿದ್ದಾಗ. ಅಪಮೃತ್ಯುವೆಡೆಗೆ ನಮ್ಮನ್ನು ಕರೆದೊಯ್ಯುವದು ಪಾಪವೇ. ದುಶ್ಚಟಗಳಿಗೆ ಬಲಿಯಾಗಿಸುವದೂ ಪಾಪವೇ.  ಆಗಬೇಕಾದ ಮಂಗಳಗಳು ಆಗದಿರುವದೂ ಪಾಪಗಳಿಂದಲೇ. 


ಗುರು, ದೇವರು, ದೇವಪ್ರೀತಿ, ಅತ್ಯಂತ ಸದ್ವಿಚಾರ, ಅಪಮೃತ್ಯು ಪರಿಹಾರ, ರೋಗಗಳ ಎಚ್ಚರಿಕೆ, ಆಗುವ ಅಪಘಾತಗಳನ್ನು ತಪ್ಪಿಸುವದು, ಆಗುವ ಎಲ್ಲ ಮಂಗಳಗಳು ಸುಸೂತ್ರವಾಗಿ ಆಗುವದು,  ಎಲ್ಲವೂ ಪುಣ್ಯದ ಬಲದಿಂದಲೇ....... 


*ಪುಣ್ಯಕ್ಕಾಗಿ ಏನು ಮಾಡಬೇಕು....*


ಏನೆಲ್ಲ ಮಾಡುವ ಕಾರ್ಯಗಳು ಇವೆ ಅವೆಲ್ಲವನ್ನು ಮಾಡುವಗಲೂ ಈ ಕಾರ್ಯದಿಂದ "ಪುಣ್ಯ ಹೇಗೆ ಬಂದೀತು" ಎಂದು ಯೋಚಿಸುತ್ತಾ ಮಾಡುತ್ತಾ ಸಗಾಬೆಕು. 


ಕನಿಷ್ಟ ೧೦ - ೧೦ ನಿಮಿಷದ ಎರಡೂ ಹೊತ್ತು ಸಂಧ್ಯಾವಂದನೆ, ನಿತ್ಯ ಸಾವಿರ ಗಾಯತ್ರೀ ಜಪ, ಕೇವಲ ಹನ್ನೆರಡು/ ಇಪ್ಪತ್ತುನಾಲಕು ನಮಸ್ಕಾರ, ಕೇವಲ ಇಪ್ಪತ್ತೇ ನಿಮಿಷದ ಪೂಜೆ. ವಾರಕ್ಕೊಂದು ದಿನವಾದರೂ ದೇವಸ್ಥಾನಕ್ಕೆ ಹೋಗಿ ಇಪ್ಪತ್ತು ನಿಮಿಷ ಕಣ್ಣುಮುಚ್ಚಿ ಯಾವ ಕಡೆಯೂ ಗಮನಕೊಡದೇ ಕೂಡುವದು, ಶರಣಾಗತಿ, ನಿತ್ಯ/ ವಾರಕ್ಕೊಂದು ದಿನ ಕೆಲಹೊತ್ತಾದರೂ ಪಾಠ ಇತ್ಯಾದಿಗಳೇ ತಳಹದಿಯ ಪುಣ್ಯಸಂಪಾದನೆಯ ಮಾರ್ಗವಾಗಿದೆ. ಪುಣ್ಯ ಬಂತೋ ಮನಸ್ಸು ಅದೃಷ್ಟ ಸಹಿತವಾಯಿತು. *ಅದೃಷ್ಟ ಸಹಿತವಾದ ಮನಸ್ಸು ಅತ್ಯಂತ ಸದೃಢ ಹಾಗೂ ಸ್ವಸ್ಥ.* ಸ್ವಲ್ಪ ವಿಚಾರ ಮಾಡಿ ನಿರ್ಣಯ ತೆಗೆದುಕೊಳ್ಳೋಣ. ಇಂದಿನ ಯುವಕರಿಗೆ, ಮಕ್ಕಳಿಗ ಮನವರಿಕೆ ಮಾಡಿಸೋಣ....


*ಮನಸ್ಸು - ಸ್ಮಶಾನವೇ ?? ವನವೇ..??*


ಮನಸ್ಸು ಒಂದು ಸ್ಮಶಾನದಂತಾಗಿದೆ. ನಿತ್ಯವೂ ಸಾವಿರ ಸಾವಿರ ವಿಚಾರಗಳು ಬಂದು ಸತ್ತು ಹೋಗುತ್ತಿವೆ. ಸಾಯುವ ವಿಚಾರಗಳೇ ಮನಸ್ಸಿನಲ್ಲಿ ಬರುವದರಿಂದ ಸ್ಮಶಾನದಂತಾಗಿದೆ. ಚಿಗುರುವ ವಿಚಾರಗಳು ಬಂದವೂ ಎಂದಾದರೆ ಅಶೋಕವನವೇ ಆಗುತ್ತದೆ. ವನ ಆರೋಗ್ಯದ ಅಭಿವೃದ್ಧಿಗೆ ಕಾರಣವಾದರೆ, ಸ್ಮಶಾನ ಆರೋಗ್ಯವನ್ನು ಹದೆಗೆಡಿಸಲು ಕಾರಣ ವಾಗಿದೆ. ಹದೆಗೆಡುವದು ದೌರ್ಬಲ್ಯದಿಂದ. ಅಭವೃದ್ಧಿ ಬಲದಿಂದ. ಬಲ - ದೌರ್ಬಲ್ಯಗಳ ಆಯ್ಕೆ ಮಾತ್ರ ನಮ್ಮ ಅಂಗಳದಲ್ಲಿ ಇದೆ. 


*✍🏻✍🏻✍ನ್ಯಾಸ.*

ಗೋಪಾಲ ದಾಸ.

ವಿಜಯಾಶ್ರಮ, ಸಿರವಾರ.

Comments

sowmya said…
Adbuthavada sandesha

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*