*ನೀನೊಲೆದೆಮ್ಮ ಕೃಪಾವಲೋಕನದಿ ಪಾವನ ಮಾಡುವ ಶ್ರೀಗುರುವರೇಣ್ಯ - ಬಾ ಮನ್ಮನಕೆ*


 *ನೀನೊಲೆದೆಮ್ಮ ಕೃಪಾವಲೋಕನದಿ ಪಾವನ ಮಾಡುವ ಶ್ರೀಗುರುವರೇಣ್ಯ - ಬಾ ಮನ್ಮನಕೆ*


ಕೃಪಾಪೂರ್ಣ ನೋಟದಿಂದಲೇ ನಮ್ಮನ್ನು ಪಾವನಗೊಳಿಸುವ ಹೇ ಗುರುವರೇಣ್ಯ ಬಾ ನಮ್ಮ ಮನೆಗೆ ಹಾಗೂ ಮನಕ್ಕೆ. 


*ಮನೆಗೆ ಬರಲೇಬೇಕು - ಮನಸ್ಸಿಗೆ ಬಾರದೇ ಇರಬಾರದು*


ಅನಾದಿ ಸತ್ಸಂಪ್ರದಾಯ ಪರಂಪರಾಪ್ರಾಪ್ತ ಮಧ್ವಸಿದ್ಧಾಂತದ ತತ್ವನ್ನಸುಧೆಎಂಬ ಶಾಸ್ತ್ರಾರ್ಥಗಳನ್ನು ಪಾಠಹೇಳಿ, ಸಂಸಿದ್ಧಸಪ್ತಕೋಟಿ ಮಂತ್ರಗಳ ಸಿದ್ಧಿಯನ್ನು ಪಡೆದ ಶ್ರೀಮದಾಚಾರ್ಯರ ಉದ್ಧರಿಸಿದ ಅನೂಚಾನ ಪರಂಪರೆಯಿಂದ ಬಂದ ಅನೇಕ ಮಂತ್ರಗಳನ್ನು ಉಪದೇಶಿಸಿ ಕರುಣೆ ಮಾಡಿದ ಹೇ ಗುರುವರೇಣ್ಯ !! ಮನೆಗೆ ಬರಲೇಬೇಕು ಸತ್ಯ. ಮನೆಗೆ ಬಾರದಿದ್ದರೂ ಮನಸ್ಸಿನಲ್ಲಿ ತಪ್ಪದೇ ನಿತ್ಯವೂ ಬರಬೇಕು. 


ಮನೆಗೆ ಕರೆಯುವದು ನನ್ನ ಶಕ್ತಿ ಸಾಮರ್ಥ್ಯಗಳನ್ನು ಅವಲಂಬಿಸಿದೆ, ಮನಸ್ಸಿಗೆ ಬರುವದು ಕೇವಲ ನಿಮ್ಮ ಕೃಪೆಯನ್ನೇ ಅವಲಂಬಿಸಿದೆ. ಮನೆಗೆ ಬಂದು ಮನಸ್ಸಿಗೆ ಬಾರದಿದ್ದರೆ ಮಹಾ ಹಾನಿ ಅನರ್ಥವೂ, ಮನಸ್ಸಿಗೆ ಬಂದಮೇಲೆ ಮನೆಗೆ ಬಾರದಿದ್ದರೂ ಹಾನಿಯಂತೂ ಇಲ್ಲವೇ ಇಲ್ಲ. ಮನಸ್ಸಿಗೆ ದೇವರೂ ಬರುತ್ತಾನೆ ಇದರಲ್ಲಿ ಸಂಶಯವೂ ಇಲ್ಲ. 


*ಗುರುಪೂರ್ಣಿಮಾ* 


ಗುರುಗಳನ್ನು ಆರಾಧಿಸುವದು ದೈನಿಂದನ ಕರ್ತವ್ಯಗಳಲ್ಲಿ ಪ್ರಧಾನವಾದದ್ದು. ಆದರೂ ಈ ಗುರು ಪೌರ್ಣಿಮಾ ದಿನದಂದು ಇನ್ನೂ ಹೆಚ್ಚಿನ ವಿಶೇಷವಾದ ಆರಾಧೆನೆಗೆ ಮಹಾಫಲವಿದೆ. 


*ಗುರುರೇಕಃ ಸದಾ ಸೇವ್ಯಃ ಸಂಸಾರೋದ್ಧರಣಕ್ಷಮಃ* 


ಅನುದಿನ ಅನುಕ್ಷಣ ಗುರು ಸ್ಮರಣೆ ಅನಿವಾರ್ಯ. ಸಂಸಾರ ನಾಶಕ್ಕೆ ಬೇಕಾದ ತತ್ವಜ್ಙಾನ ದಯಪಾಲಿಸುವವರೆ ಗುರುಗಳು. ಇನ್ನಾರೂ ಇಲ್ಲ. ಜ್ಙಾನ ಬಂದಮೇಲೆ ಎಲ್ಲರೂ ಉಂಟು. ಜ್ಙಾನಕ್ಕಾಗಿ ಗುರುಗಳು ಮಾತ್ರ. 


*ಗುರುಸ್ಮರಣೆಯಿಂದ ಸಕಲ ಆಪತ್ತು ಪರಿಹಾರ*


ಆಪತ್ತುಗಳ ಸುಳಿಯಲ್ಲಿ ನಾವು. ನಮ್ಮನ್ನು ಅಪ್ಪಿಕೊಂಡಿವೆ ಆಪತ್ತುಗಳು. ಯಾವ ಕ್ಷಣದಲ್ಲಿ ಹೇಗೆ ನಮ್ಮನ್ನು ಕೊಚ್ಚಿಕೊಂಡು ಹೋಗುತ್ತವೆಯೋ ತಿಳಿಯದು. ಆ ಎಲ್ಲ ತರಹದ ಆಪತ್ತುಗಳು ಪರಿಹಾರವಾಗುವದು ಕೇವಲ ಗುರು ಸ್ಮರಣೆಯಿಂದ. 


*ಗುರುಸ್ಮರಣೆಯಿಂದ ಸಕಲ ಸಂಪದವು* 


ನೈಜ ಸಂಪತ್ತುಗಳಿಂದ ವಂಚಿತರಾಗಿ, ಅನುಪಯುಕ್ತ ಸಂಪದ್ಭರಿತರು ನಾವು‌. ಅನುಪಯುಕ್ತ ಸಂಪತ್ತುಗಳು ಕೇವಲ ಈ ಜನ್ಮಕ್ಕೆ ಮಾತ್ರ ಸೀಮಿತ. ನೈಜ ಸಂಪತ್ತು ಅನಂತ ಕಾಲೀನ. ಹಾಗಾಗಿ ನೈಜ ಸಂಪತ್ತಾದ ಸದ್ಗುಣಗಳು ದೊರೆಯುವದೂ ಗುರು ಸ್ಮರಣೆಯಿಂದಲೇ. 


*ಗುರು ಸ್ಮರಣೆಯಿಂದ ಹರಿಯೂ ಒಲೆದು ಪೊರೆವ* 


ಜಗತ್ತಿನಲ್ಲಿ ಧರ್ಮ ದೇವರು ಬಿಟ್ಟು ಉಳಿದ ಎಲ್ಲವೂ ನಮಗೆ ಬೇಕಾಗಿರುವದೇ, ಅಲ್ಪ ಪರಿಶ್ರಮಕ್ಕೆ ಒಲಿಯುವಂತಹದ್ದೇ. ಆದರೆ ದೇವರು ಧರ್ಮ ಮಾತ್ರ ದೂರ ದೂರ. ಈ ಸ್ಥಿತಿಯಲ್ಲಿ ಧರ್ಮವನ್ನು ತನ್ಮುಖಾಂತರ ದೇವರನ್ನೂ ಒಲಿಸಿಕೊಡುವವರು ಕೇವಲ ಗುರುಗಳು ಮಾತ್ರ. ಹಾಗಾಗಿ ಗುರು ಸ್ಮರಣೆ ಗುರುಗಳ ಅರಾಧನೆ ಅತ್ಯಂತ ಅನಿವಾರ್ಯ. 


*ಗುರುಗಳಂತರ್ಯಾಮಿ ಕರಮುಗಿದು ಬಿನ್ನೈಪೆ*


ಹೇ ವೇದವ್ಯಾಸ !! ಗುರುಷುಸ್ಥಿತ್ವಾ ತದ್ವಾರಾ ಮೋಕ್ಷಪ್ರದ ಹೇ ದೇವ ಗುರುಗಳಂತರ್ಯಾಮಿಯಾದ ನಿನಗೆ ಕೈ ಮುಗಿದು ಬೇಡುವೆ *ನಿನ್ನ ಕರುಣಾಪೂರ್ಣ ಕರಾವಲಂಬನ ಸದಾ ಇರಲಿ* ನಿನಗಿದೋ ಅನಂತ ಅನಂತ ವಂದನೆಗಳು....


✍🏽ನ್ಯಾಸ

ಗೋಪಾಲದಾಸ

ವಿಜಯಾಶ್ರಮ, ಸಿರಿವಾರ

Comments

Popular posts from this blog

ಇಂದು ಚಂದ್ರಗ್ರಹಣ - ಪರ್ವಕಾಲ*

ನಾಗ ಸ್ತೋತ್ರಮ್

ಶ್ರೀಶ್ರೀಆತ್ಮೇಂದ್ರತೀರ್ಥರಿಗೇ ಜಯವಾಗಲಿ