*ಹನುಮಜ್ಜಯಂತೀ ಮಹೋತ್ಸವ*
*ಹನುಮಜ್ಜಯಂತೀ ಮಹೋತ್ಸವ* ಚೈತ್ರ ಶುಕ್ಲ ಪೂರ್ಣಿಮೆಯ ದಿನದಂದು ಪರಿಪೂರ್ಣ ಜ್ಙಾನ ಭಕ್ತಿ ವಿರಕ್ತಿ ಧರ್ಮ ಧೈರ್ಯ ಸ್ಥೈರ್ಯ ಪರಮೈಶ್ವರ್ಯ ಇತ್ಯಾದಿ ಅನಂತ ಗುಣಗಳ ಗಣಿಯಾದ ಹನುಮಂತದೇವರ ಅವತಾರದ ಮಹಾ ಸುದಿನ. ಈ ಗುಣವಂತ ಜ್ಙಾನವಂತ ಭಕ್ತಿವಂತನಾದ ಹನುಮಂತ ನಮ್ಮಲ್ಲಿ ಹಾಗೂ ನಮ್ಮೆಲ್ಲರ ಮನದಲ್ಲಿ ಜನಿಸಲೇಬೇಕು. *ಜನನ* ಸಂತಾನ ಸಹಜ. ಅತ್ಯಂತ ಯೋಗ್ಯ ಸಂತನಕ್ಕೆ ತಪಸ್ಸೇ ಮೂಲ. ಅಂತೆಯೇ ಸಾವಿರಾರು ವರ್ಷಗಳ ತಪಸ್ಸಿನ ಪ್ರಭಾವದಿಂದ ಕೇಸರಿ ಮತ್ತು ಅಂಜನಾದೆವಿಯಲ್ಲಿ ಜನಿಸಿದ ಧೀರ ಹನುಮಂತ. ಅಂಜನೆಯಂತೆ ತಪಸ್ಸು ಮಾಡೋಣ. ಆಂಜನೇಯನನ್ನೇ ಪಡೆಯೋಣ. *ಜ್ಙಾನಿ* ಹುಟ್ಟಿದ ವ್ಯಕ್ತಿಗೆ ಜ್ಙಾನ ಮೂಲ. ಜ್ಙಾನವಿದ್ದರೆ ಅವನು ಅವನಾಗಿ ಉಳಿಯುವ. ಜ್ಙಾನವಿಲ್ಲ ಎಂದಾದರೆ ಅವ ಜಡಕ್ಕೆ ಸಮ. ಹಾಗಾಗಿ ಹುಟ್ಟಿದ ವ್ಯಕ್ತಿಯ ಹಪಹಪಿ ಜ್ಙಾನಕ್ಕಾಗಿಯೇ ಇರಬೇಕು. ಇನ್ಯಾವದಕ್ಕೂ ಇರುವದು ತರವಲ್ಲ. ಜ್ಙಾನದ ನಂತರವೇ ಉಳಿದದ್ದೆಲ್ಲ ಎಂದು ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಹನುಮಂತ. ಹುಟ್ಟಿದೊಡನೆಯೇ ಸೂರ್ಯನ ಸನಿಹಕ್ಕೇ ನೆಗೆದು, ಸೂರ್ಯಾಂತರ್ಯಾಮಿ ನಾರಾಯಣನಿಂದ ಸಮಗ್ರ ವ್ಯಾಕರಣವನ್ನು ಅಧ್ಯಯನ ಮಾಡಿದ ಮಹಾಜ್ಙಾನಿ ಹನೂಮಾನ್. ತನ್ನ ಹೆಸರಲ್ಲೇ "ಪೂರ್ಣಜ್ಙಾನೀ" ಎಂದು ಪ್ರಸಿದ್ಧಿ ಪಡೆದ ಹನೂಮಾನ್. *ಸೇವೆ* ನಾನು ಎಂದಿಗೂ ಸ್ವಾಮಿಯಲ್ಲ. ನಾ ಏನಿದ್ದರೂ ದಾಸನೇ. ದಾಸನ ಸೌಭಾಗ್ಯ ಸ್ವಾಮಿಯ ಸೇವೆಯೇ. ನಿರಂತರ ಸೇವೆಯೇ ನನ್ನ ಉಸಿರು ಎಂದೇ ಭಾವಿಸಿ ನಿರಂತರ ಸೇವಾಧುರಂಧರ...