*ಹನುಮಜ್ಜಯಂತೀ ಮಹೋತ್ಸವ*


 *ಹನುಮಜ್ಜಯಂತೀ ಮಹೋತ್ಸವ*

ಚೈತ್ರ ಶುಕ್ಲ ಪೂರ್ಣಿಮೆಯ ದಿನದಂದು ಪರಿಪೂರ್ಣ ಜ್ಙಾನ ಭಕ್ತಿ ವಿರಕ್ತಿ ಧರ್ಮ ಧೈರ್ಯ ಸ್ಥೈರ್ಯ ಪರಮೈಶ್ವರ್ಯ ಇತ್ಯಾದಿ ಅನಂತ ಗುಣಗಳ ಗಣಿಯಾದ ಹನುಮಂತದೇವರ ಅವತಾರದ ಮಹಾ  ಸುದಿನ. ಈ ಗುಣವಂತ ಜ್ಙಾನವಂತ ಭಕ್ತಿವಂತನಾದ ಹನುಮಂತ ನಮ್ಮಲ್ಲಿ ಹಾಗೂ ನಮ್ಮೆಲ್ಲರ ಮನದಲ್ಲಿ ಜನಿಸಲೇಬೇಕು. 

*ಜನನ*

ಸಂತಾನ ಸಹಜ. ಅತ್ಯಂತ ಯೋಗ್ಯ ಸಂತನಕ್ಕೆ ತಪಸ್ಸೇ ಮೂಲ. ಅಂತೆಯೇ ಸಾವಿರಾರು ವರ್ಷಗಳ ತಪಸ್ಸಿನ ಪ್ರಭಾವದಿಂದ ಕೇಸರಿ ಮತ್ತು ಅಂಜನಾದೆವಿಯಲ್ಲಿ ಜನಿಸಿದ ಧೀರ ಹನುಮಂತ. ಅಂಜನೆಯಂತೆ ತಪಸ್ಸು ಮಾಡೋಣ. ಆಂಜನೇಯನನ್ನೇ ಪಡೆಯೋಣ.

*ಜ್ಙಾನಿ*

ಹುಟ್ಟಿದ ವ್ಯಕ್ತಿಗೆ ಜ್ಙಾನ ಮೂಲ. ಜ್ಙಾನವಿದ್ದರೆ ಅವನು ಅವನಾಗಿ ಉಳಿಯುವ. ಜ್ಙಾನವಿಲ್ಲ ಎಂದಾದರೆ ಅವ ಜಡಕ್ಕೆ ಸಮ. ಹಾಗಾಗಿ ಹುಟ್ಟಿದ ವ್ಯಕ್ತಿಯ ಹಪಹಪಿ ಜ್ಙಾನಕ್ಕಾಗಿಯೇ ಇರಬೇಕು. ಇನ್ಯಾವದಕ್ಕೂ ಇರುವದು ತರವಲ್ಲ. ಜ್ಙಾನದ ನಂತರವೇ ಉಳಿದದ್ದೆಲ್ಲ ಎಂದು ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಹನುಮಂತ. ಹುಟ್ಟಿದೊಡನೆಯೇ ಸೂರ್ಯನ ಸನಿಹಕ್ಕೇ ನೆಗೆದು, ಸೂರ್ಯಾಂತರ್ಯಾಮಿ ನಾರಾಯಣನಿಂದ ಸಮಗ್ರ ವ್ಯಾಕರಣವನ್ನು ಅಧ್ಯಯನ ಮಾಡಿದ ಮಹಾಜ್ಙಾನಿ ಹನೂಮಾನ್. ತನ್ನ ಹೆಸರಲ್ಲೇ "ಪೂರ್ಣಜ್ಙಾನೀ" ಎಂದು ಪ್ರಸಿದ್ಧಿ ಪಡೆದ ಹನೂಮಾನ್.

*ಸೇವೆ*

ನಾನು ಎಂದಿಗೂ ಸ್ವಾಮಿಯಲ್ಲ. ನಾ ಏನಿದ್ದರೂ ದಾಸನೇ. ದಾಸನ ಸೌಭಾಗ್ಯ ಸ್ವಾಮಿಯ ಸೇವೆಯೇ. ನಿರಂತರ ಸೇವೆಯೇ ನನ್ನ ಉಸಿರು ಎಂದೇ ಭಾವಿಸಿ ನಿರಂತರ ಸೇವಾಧುರಂಧರನಾದವನು ನಮ್ಮ ಹನುಮಂತ.

ತಾನು ಮಾಡುವ ಸ್ವಾಮಿಯ ಯಾವುದೇ ಸೇವೆ ಇರಲಿ ಲಂಕಾಗಮನ, ಪುಷ್ಪನಿಚಯ, ಗಂಧಮಾದನ ಪರ್ವತ ನಯನ, ರಾವಣಾದಿಗಳ ಮರ್ದನ, ಇವುಗಳಿಂದಾರಂಭಿಸಿ ಯಾವುದೇ ಸೇವೆಯಿರಲಿ, ಅದರಲ್ಲಿ ತನ್ಮಯತೆ, ಭಕ್ತಿ, ನಿಷ್ಠೆ, ವಿಷ್ಣುಪ್ರೀತಿಯ ಉದ್ಯೇಶ್ಯ ಇತ್ಯಾದಿ ಎಲ್ಲವೂ ಅತ್ಯಂತ ಅಮೋಘವಾಗಿ ಕಾಣುತ್ತದೆ. ಶ್ರೀರಾಮ ಸಂತೃಪ್ತಿಯಿಂದ ತನ್ನ ಆಲಿಂಗನವನ್ನೇ ಕೊಡುವಂತೆ ಸೇವೆಯಾಗಿದೆ. ಸೇವಾ ಧುರಂಧರ ಹನೂಮಾನ್.

*ಮೆಚ್ಚುಗೆ*

ಸ್ವಾಮಿಯ ಸೇವೆ ಒಂದೆಡೆಯಾದರೆ, ಸ್ವಾಮಿಯ ಮೆಚ್ಚುಗೆಯೂ ಒಂದು ಮಹತ್ವದ್ದೆ. ಸ್ವಾಮಿ ಮೆಚ್ಚುವಿಕೆ ಕೆಲವರಿಗೆ ಮಾತ್ರ ಈ ಲೋಕದಲ್ಲಿ ಮೀಸಲು ಆಗಿರುತ್ತದೆ. ನಮ್ಮ ಶ್ರೀರಾಮಚಂದ್ರ ಹನುಮಂತದೇವರನ್ನು ನೋಡಿ ಮೆಚ್ಚಿದ ತರೀಕೆಯೇ ಪರಮಾದ್ಭುತ. *ಜ್ಙಾನ, ವಿರಾಗ, ಹರಿಭಕ್ತಿಭಾವ, ಧೃತಿ, ಸ್ಥಿತಿ, ಪ್ರಾಣಬಲ, ಬುದ್ಧಿ, ಇತ್ಯಾದಿ ಯಾವಗುಣಗಳಲ್ಲಿಯೂ ಹನುಮಂತನನ್ನು ಮೀರಿಸಿದವರು ಇಲ್ಲವೇ ಇಲ್ಕ. ಗರುಡ ಶೇಷ ರುದ್ರ ಇಂದ್ರ ಮೊದಲಾದ ದೇವತೆಗಳೂ ಸಹ ಈ ಎಲ್ಲ ಗುಣಗಳ ಕೊಟ್ಯಂಶಕ್ಕೂ ಸಮರಲ್ಲ ಎಂದು ರಾಮಚಂದ್ರ ಉದ್ಗರಿಸಿದ. ಈ  ಭಾವಪೂರ್ಣ ಮೆಚ್ಚುಗೆಯ  ಪೂರ್ಣ ಅಭಿವ್ಯಕ್ತಿ ಪಾತ್ರ ನಮ್ಮ ಹನುಮಂತ.

*ಬೇಡುವಿಕೆ*

ಜ್ಙಾನ ಭಕ್ತಿಲಿ ಪೂರ್ಣ. ಸೇವಾಧುರಂಧರ, ದೇವರಿಗೆ ಪರಮಪ್ರಿಯ ಇಷ್ಟೆಲ್ಲ ಇದ್ದರೂ *ಏನನ್ನಾದರೂ ಬೇಡೋ ಮಹರಾಯ* ಎಂದು ಕೊಡುವ ಶ್ರೀರಾಮನೇ ಹೇಳಿದರೆ *ನಿನ್ನಲ್ಲಿಯ ಭಕ್ತಿ ಕ್ಷಣ ಕ್ಷಣಕ್ಕೂ ಬೆಳಿಯುತ್ತಾ ಸಾಗಲಿ* ಇದು ಬಿಟ್ಟು ಇನ್ನೇನು ಬೇಡ ಎಂದು *ಬೇಡುವದನ್ನೂ ಅರುಹಿಸಿದ ಹರಿ ಕಪೀಶ್ವರ ಹನುಮಂತ. 

ಇಂತಹ ಕೋಟಿ ಕೋಟಿ ಅನಂತಾನಂತ ಗುಣಪೂರ್ಣ ಹನುಮಂತದೇವರು ಅವತರಿಸಿದ ದೊಡ್ಡ ದಿನ ಇಂದೇ ಇದೆ. 

ನಮಗೆ ಉಸಿರು ಕೊಟ್ಟ ದೇವನ ಹುಟ್ಟುಹಬ್ಬ. ಎಷ್ಟು ವೈಭವದಿಂದ ಆಚರಿಸಬೇಕು ಎನ್ನುವದನ್ನು ನಾವೇ ನಿರ್ಧರಿಸೋಣ. ಆಚರಿಸೋಣ. ಆ ಗುಣಗಳ ಪ್ರತಿಬಿಂಬ ಗುಣಗಳನ್ನು ಪಡೆಯೋಣ.


ಜೈ ಹನೂಮಾನ್ ... ✌🏼✌🏼✌🏼✌🏼


*✍🏻✍🏻✍🏻ನ್ಯಾಸ*

ಗೋಪಾಲ ದಾಸ.

ವಿಜಯಾಶ್ರಮ ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*