*ತುಳಸೀ - ಒಂದು ಚಿಂತನೆ*
ಇಂದು ತುಳಸೀಪೂಜೆ. ನಾಳೆ ತುಳಸೀದೇವಿ ಹಾಗೂ ದಾಮೋದರ ರೂಪಿ ಕೃಷ್ಣನ ವಿವಾಹ. ಸೌಭಾಗ್ಯ ಸಮೃದ್ಧಿ ಸತ್ಸಂತತಿ ಸೌಮಾಂಗಲ್ಯಕ್ಕಾಗಿ ಮಾಡುವ ಒಂದು ಉತ್ತಮ ಉತ್ಸವ.
*ತುಳಸಿಯಲ್ಲಿ ಅಧಿಷ್ಠಿತ ದೇವತೆಗಳು*
ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವ ದೇವತಾ: |
ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಂ ||
ಯಾವ ವೃಕ್ಷದ ಮೂಲದಲ್ಲಿ ಗಂಗಾದಿ ಸಕಲ ತೀರ್ಥಗಳ ಸನ್ನಿಧಿ ಇದೆಯೋ, ಯಾವ ವೃಕ್ಷದ ಮಧ್ಯಭಾಗದಿ ಎಲ್ಲ ದೆವತೆಗಳು ನೆಲೆಸಿದ್ದಾರೆಯೋ, ಯಾವ ವೃಕ್ಷದ ಅಗ್ರಭಾಗದ ದಲಗಳಲ್ಲಿ ಸರ್ವ ವೇದಗಳು ಇವೆಯೋ ಅಂತಹ ಅಂತಹ ಉತ್ತಮ ವೃಕ್ಷ ಎಂದರೆ *ತುಲಸೀ ವೃಕ್ಷ* ಅದಕ್ಕೇನೇ ತುಲಸೀ ಶ್ರೀಕೃಷ್ಣನಿಗೆ ಅತಿಪ್ರಿಯಳು.
*ಪುರಾಣದ ದೃಷ್ಟಿಯಲ್ಲಿ ತುಳಸೀ...*
ಪಾಪಾನಿ ಯಾನಿ ರವಿಸೂನುಪದಸ್ಥಿತಾನಿಗೋ ಬ್ರಹ್ಮ ಪಿತೃ ಮಾತೃ ವಧಾದಿಕಾನಿ | ನಶ್ಯಂತಿ ತಾನಿ ತುಲಸೀವಮ ದರ್ಶನೇನ ಗೋಕೋಟಿದಾನ ಸದೃಶಂ ಫಲಮಾಪ್ನುವಂತಿ ||
ಗೋ ವಧ, ಪಿತೃಮಾತೃ ಗುರುವಧ, ಬ್ರಾಹ್ಮಣವಧ, ಇವೆ ಮೊದಲಾದ ಕೋಟಿ ಕೋಟಿ ಪಾಪಗಳು ನರಕದಲ್ಲಿ ಇವೆಯೋ ಆ ಎಲ್ಲ ಪಾಪಗಳು, ಪಾಪಕ್ಕೆ ಕಾರಣವಾದ ದುಃಖ ಕಷ್ಟಗಳೂ ತುಳಸಿಯ ದರ್ಶನದಿಂದ ಪರಿಹಾರವಾಗುತ್ತವೆ. ಅಷ್ಟೇ ಅಲ್ಲದೇ ನೂರುಕೋಟಿ ಗೋಗಳನ್ನು ಆಕಳನ್ನು ದಾನಮಾಡಿದರೇನು ಫಲವಿದೆ ಆ ಫಲ ತುಳಸಿಯ ದರ್ಶನದಿಂದ ಬರುತ್ತದೆ.
*ಶ್ರೀವಾದಿರಾಜರ ಒಂದು ಕೃತಿ*
"ಒಂದು ಪ್ರದಕ್ಷಿಣವನು ಮಾಡಿದವರ ಪೊಂದುಪುದು ಭೂಪ್ರದಕ್ಷಿಣ ಪುಣ್ಯ ಎಂದೆಂದಿವಳ ಸೇವಿಪ ನರರಿಗೆ ಇಂದಿರೆಯರಸ ಕೈವಲ್ಯವೀವ ||"
ತುಳಸೀಗೆ ಮಾಡಿ ಒಂದು ಪ್ರದಕ್ಷಿಣೆ ಸಮಗ್ರ ಭೂಮಿಗೇ ಪ್ರದಕ್ಷಿಣಿ ಹಾಗಿದ ಪುಣ್ಯ ಬರತ್ತೆ ಎಂದು ವಾದಿರಾಜರು ಕೊಂಡಾಡುತ್ತಾರೆ.
*ಪುರಂದರ ದಾಸರ ಒಂದು ಕೃತಿ*
"ಎಲ್ಲಿ ತುಳಸಿಯ ವನವು ಅಲ್ಲೊಪ್ಪುವರು ಸಿರಿನಾರಾಯಣನು ||ಪ ||
ಗಂಗೆ ಯಮುನೆ ಗೋದಾವರಿ ಕಾವೇರಿ ಕಂಗೊಳಿಸುವ ಮಣಿಕರ್ಣಿಕೆಯು | ತುಂಗಭದ್ರೆ ಕೃಷ್ಣವೇಣಿತೀರ್ಥಗಳೆಲ್ಲ ಸಂಗಡಿಸುತ ವೃಕ್ಷಮೂಲದಲ್ಲಿರುವುವು | ೧ ||
ಸರಸಿಜಭವ ಸುರಪ ಪಾವಕ ಚಂದಿರ ಸೂರ್ಯ ಮೊದಲಾದವರು |ಸಿರಿರಮಣನ ಆಜ್ಞೆಯಲಿ ಅಗಲದಂತೆ ತರುಮದ್ಯದೊಳು ನಿತ್ಯನೆಲೆಸಿಪ್ಪರು | ೨ ||
ಋಗ್ವೇದ ಯಜುರ್ವೇದ ಸಾಮ ಅಥರ್ವಣ ಅಗ್ಗಳಿಸಿ ವೇದ ಘೋಷಗಳು | ಅಗ್ರಭಾಗದಲಿದೆ ಬೆಟ್ಟದೊಡೆಯನು ಅಲ್ಲಿ ಶೀಘ್ರದಿ ಒಲಿದ ಶ್ರೀಪುರಂದರವಿಠಲ | ೩ ||
*ಪುರಂದರ ದಾಸರ ದೃಷ್ಟಿಯಲ್ಲಿ ಮತ್ತೊಂದು ಮಹಿಮೆ*
ವೃಂದಾವನವೆ ಮಂದಿರವಾಗಿಹ ಇಂದಿರೆ ಶ್ರೀ ತುಳಸಿ || ಪ ||ನಂದನಂದನ ಮುಕುಂದಗೆ ಪ್ರಿಯಳಾದ ಚಂದದ ಶ್ರೀ ತುಳಸೀ || ಅ.ಪ ||
ತುಳಸಿಯ ವನದಲಿ ಹರಿ ಇಹನೆಂಬುದ ಶ್ರುತಿ ಸಾರುತಿದೆ ಕೇಳಿ ತುಳಸಿ ದರ್ಶನದಿಂದ ದುರಿತಗಳೆಲ್ಲವೂ ದೂರವಾಗುವುವು ಕೇಳಿ |ತುಳಸಿ ಸ್ಪರ್ಶವ ಮಾಡೆ ದೇಹ ಪಾವನವೆಂದು ತಿಳಿದುದಿಲ್ಲವೆ ಪೇಳಿ ತುಳಸಿ ಸ್ಮರಣೆ ಮಾಡಿ ಸಕಲೇಷ್ಟವ ಪಡೆದು ಸುಖದಲಿ ಬಾಳಿ ನೀವು || ೧ ||
ಮೂಲ ಮೃತ್ತಿಕೆಯನು ಮುಖದಲಿ ಧರಿಸಲು ಮೂರ್ಲೋಕ ವಶವಹುದು ಮಾಲೆ ಕೊರಳಲ್ಲಿಟ್ಟ ಮನುಜಗೆ ಮುಕ್ತಿಯ ಮಾರ್ಗವ ತೋರುವುದು | ಕಾಲಕಾಲಗಳಲ್ಲಿ ಮಾಡುವ ದುಷ್ಕರ್ಮ ಕಳೆದು ಬಿಸಾಡುವುದು ಕಾಲನ ದೂತರ ಕಳಚಿ ಕೈವಲ್ಯದ ಲೀಲೆಯ ತೋರುವುದು || ೨ ||
ಧರೆಯೊಳು ಸುಜನರ ಮರೆಯದೆ ಸಲಹುವ ವರಲಕ್ಷ್ಮೀ ಶ್ರೀ ತುಳಸಿ ಪರಮಭಕ್ತರ ಘೋರಪಾಪಗಳನು ತರಿದು ಪಾವನ ಮಾಡುವ ಶ್ರೀ ತುಳಸಿ | ಸಿರಿ ಆಯು ಪುತ್ರಾದಿ ಸಂಪದಗಳನಿತ್ತು ಹರುಷಗೊಳಿಪ ತುಳಸಿಪುರಂದರವಿಠಲನ ಚರಣ ಕಮಲವ ಸ್ಮರಣೆ ಕೊಡುವಳು ತುಳಸಿ ||
ತುಳಸಿಯ ದರ್ಶನ, ಸ್ಪರ್ಶನ, ಸ್ಮರಣೆ, ಧಾರಣ, ವಂದನ, ಉಪಾಸನೆ, ಮುಂತಾದವುಗಳಿಂದ ಶ್ರೀಹರಿಯು ಒಲಿವನೆಂದು ಹೇಳುತ್ತಾರೆ. ಈ ಹಾಡಿನ ಅರ್ಥ ವನ್ನು ತಿಳಿದಾಗ ತುಳಸಿಯಲ್ಲಿ ಭಕ್ತಿ ಮೂರ್ಮಡಿಯಾಗಿ ಅಭಿವೃದ್ಧಿಸುತ್ತದೆ.
*ವಿಜಯದಾಸರ ದೃಷ್ಟಿಯಲ್ಲಿ ತುಳಸೀ...*
ಉದಯಕಾಲದೊಳೆದ್ದು ಆವನಾದರೂ ತನ್ನ ಹೃದಯ ನಿರ್ಮಲನಾಗಿ ಭಕುತಿ ಪೂರ್ವಕದಿಂದ, ಸದಮಲಾ ತುಳಸಿಯನು ಸ್ತೋತ್ರ ಮಾಡಿದ ಕ್ಷಣಕೆ ಮದ- ಗರ್ವ ಪರಿಹಾರವೂ,ಇದೆ ತುಳಸಿ ಸೇವಿಸಲು ಪೂರ್ವದಲಿ ಕಾವೇರಿನದಿಯ ತೀರದಲ್ಲೊಬ್ಬ ಭೂಸುರ ಪದಕೆ ಪೋದ, ಪದಪದೆಗೆ ಸಿರಿ ವಿಜಯವಿಠಲಗೆ
ಪ್ರಿಯಳಾದ ಮದನತೇಜಳ ಭಜಿಸಿರಯ್ಯಾ ||
*ತುಳಸಿಯಾ ಸೇವಿಸೀ* ಎಂಬ ಪದದಲ್ಲಿ ಮನೋ ಶುದ್ಧಿಯಿಂದ ತುಲಸಿಯನ್ನು ಸೇವಿಸಿದವರಿಗೆ ಅಹಂಕಾರ ಮಮಕಾರ ಮೊದಲಾದ ಎಲ್ಲ ದುರ್ಗುಣಗಳ ಪರಿಹಾರವಿದೆ. ಎಂದು ವಿಜಯದಾಸರು ಸ್ಪಷ್ಟವಾಗಿ ತಿಳಿಸಿಕೊಡುತ್ತಾರೆ.
*ಜಗನ್ನಾಥದಾಸರ ದೃಷ್ಟಿಯಲ್ಲಿ...*
*ಮೂರೆರಡು ಸಾವಿರದ ಮೇಲ ಮುನ್ನೂರು ಹದಿನೇಳು ಎನಿಪ ಶ್ರೀತುಳಸೀದಳದಿ*
32317 ರೂಪಗಳಿಂದ ಸ್ವಯಂ ಶ್ರೀಕೃಷ್ಣ ತುಳಸಿಯಲ್ಲಿ ನೆಲೆನಿಂತಿದ್ದಾನೆ ಎಂದು ತಿಳಿಸಿಕೊಡುತ್ತಾರೆ.
*ತುಳಸಿಯಿಲ್ಲದ ಪೂಜೆ ಒಲ್ಲನೋ ತಾ ಕೊಳ್ಲನೋ..*
ಇಷ್ಟೆಲ್ಲ ಮಹಿಮೆ ಇರುವದರಿಂದಲೇ ದೇವರು ತುಳಸೀ ಇಲ್ಲದ ಪೂಜೆ ನಾನೊಲ್ಲೆ, ನಾ ಸ್ವೀಕರಿಸುವದಿಲ್ಲ ಎಂದು ಸ್ಷ್ಟವಾಗಿ ಹೇಳಿಬಿಟ್ಟ. ಆದ್ದರಿಂದಲೇ ಏನೆಲ್ಲ ಸಾಧನ ಸಲಕರಣೆಗಳಿದ್ದರೂ ತುಳಸಿ ಇಲ್ಲದೆ ಪೂಜೆ ಯಾರೂ ಮಾಡುವದಿಲ್ಲ.
*ಶುದ್ಧಿಪ್ರದಾ - ಆರೋಗ್ಯ ಪ್ರದಾ*
ನೈವೇದ್ಯ ದಾನದ ವಸ್ತು ನೀರು ಮೊದಲುಮಾಡಿ ಯಾವುದೇ ವಸ್ತು ಶುದ್ಧಿ ಆಗಬೇಕಾದರೆ ತುಳಸೀ ಇರಬೇಕು. ಸೇವಿಸುವ ಪದಾರ್ಥಗಳಿಂದ ರೋಗ ಬರಬಾರದಾಗಿದ್ದರೆ ಆ ಪದಾರ್ಥಗಳಲ್ಲಿ ತುಳಸೀ ಇರಲೇಬೇಕು.
ಹೀಗೆ ತುಳಸೀದೇವಿಯ ಮಹಿಮೆ ಹೇಳಲು ಬರೆಯಲು ಕುಳಿತರೆ ಮುಗಿಯುವದೇ ಇಲ್ಲ. *ಓದುವ ತಮಗೆ ಖಂಡಿತ ಬೇಸರ ಬರತ್ತೆ* ಎಂದೇ ತಿಳಿದು ಇಲ್ಲಿಗೆ ಮುಗಿಸುವೆ.
ಪುರುಷರು ಎದ್ದಕೂಡಲೆ ನಿತ್ಯ ತುಳಸೀ ದರ್ಶನಮಾಡಿಕೊಳ್ಳಲಿ. ಮೃತ್ತಿಕೆ ಧರಿಸಲಿ. ದೇವರಿಗೆ ನಾಲ್ಕು ದಳವಾದರೂ ಎರಿಸುವಂತಾಗಲಿ. ಸ್ತ್ರೀಯರೆಲ್ಲರೂ ನಿತ್ಯವೂ ತುಳಸಿಯ ವೃಂದಾವನವನ್ನು ಸಿಂಗರಿಸಲಿ. ತುಳಸಿಗೆ ನೀರುಹಾಕಿ ಪೂಜಿಸಲಿ. ಇಬ್ಬರೂ ತುಳಸಿಯ ಅನುಗ್ರಹಕ್ಕೆ ಪಾತ್ರರಾಗಲಿ..
*✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments
Atyuttama sangraha
ನಮೋನಮಃ. 🙏🎍
ತುಳಸಿ ಬಗ್ಗೆ ಮಹತ್ವ
ವಿಶೇಷ ವಿಚಾರಧಾರೆಗೆ ಧನ್ಯವಾದಗಳು ನಿಮಗೆ. 👌