*ತುಳಸೀ - ಒಂದು ಚಿಂತನೆ*


 *ತುಳಸೀ - ಒಂದು ಚಿಂತನೆ*
(ಒದಲೇಬೇಕಾದ ಒಂದು ಲೇಖನ)


ಇಂದು ತುಳಸೀಪೂಜೆ. ನಾಳೆ ತುಳಸೀದೇವಿ ಹಾಗೂ ದಾಮೋದರ ರೂಪಿ ಕೃಷ್ಣನ ವಿವಾಹ. ಸೌಭಾಗ್ಯ ಸಮೃದ್ಧಿ ಸತ್ಸಂತತಿ ಸೌಮಾಂಗಲ್ಯಕ್ಕಾಗಿ ಮಾಡುವ ಒಂದು ಉತ್ತಮ ಉತ್ಸವ. 


*ತುಳಸಿಯಲ್ಲಿ ಅಧಿಷ್ಠಿತ ದೇವತೆಗಳು*


ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವ ದೇವತಾ: |

ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಂ ||


ಯಾವ ವೃಕ್ಷದ ಮೂಲದಲ್ಲಿ ಗಂಗಾದಿ ಸಕಲ ತೀರ್ಥಗಳ ಸನ್ನಿಧಿ ಇದೆಯೋ, ಯಾವ ವೃಕ್ಷದ  ಮಧ್ಯಭಾಗದಿ ಎಲ್ಲ ದೆವತೆಗಳು ನೆಲೆಸಿದ್ದಾರೆಯೋ, ಯಾವ ವೃಕ್ಷದ ಅಗ್ರಭಾಗದ ದಲಗಳಲ್ಲಿ ಸರ್ವ ವೇದಗಳು ಇವೆಯೋ ಅಂತಹ ಅಂತಹ ಉತ್ತಮ ವೃಕ್ಷ ಎಂದರೆ  *ತುಲಸೀ ವೃಕ್ಷ*  ಅದಕ್ಕೇನೇ ತುಲಸೀ ಶ್ರೀಕೃಷ್ಣನಿಗೆ ಅತಿಪ್ರಿಯಳು. 


*ಪುರಾಣದ ದೃಷ್ಟಿಯಲ್ಲಿ ತುಳಸೀ...*


ಪಾಪಾನಿ ಯಾನಿ ರವಿಸೂನುಪದಸ್ಥಿತಾನಿಗೋ ಬ್ರಹ್ಮ ಪಿತೃ ಮಾತೃ ವಧಾದಿಕಾನಿ | ನಶ್ಯಂತಿ ತಾನಿ ತುಲಸೀವಮ ದರ್ಶನೇನ ಗೋಕೋಟಿದಾನ ಸದೃಶಂ ಫಲಮಾಪ್ನುವಂತಿ ||


ಗೋ ವಧ, ಪಿತೃಮಾತೃ ಗುರುವಧ, ಬ್ರಾಹ್ಮಣವಧ, ಇವೆ ಮೊದಲಾದ ಕೋಟಿ ಕೋಟಿ  ಪಾಪಗಳು ನರಕದಲ್ಲಿ ಇವೆಯೋ ಆ ಎಲ್ಲ ಪಾಪಗಳು, ಪಾಪಕ್ಕೆ ಕಾರಣವಾದ ದುಃಖ ಕಷ್ಟಗಳೂ ತುಳಸಿಯ ದರ್ಶನದಿಂದ ಪರಿಹಾರವಾಗುತ್ತವೆ. ಅಷ್ಟೇ ಅಲ್ಲದೇ ನೂರುಕೋಟಿ ಗೋಗಳನ್ನು ಆಕಳನ್ನು ದಾನಮಾಡಿದರೇನು ಫಲವಿದೆ ಆ ಫಲ ತುಳಸಿಯ ದರ್ಶನದಿಂದ ಬರುತ್ತದೆ. 

*ಶ್ರೀವಾದಿರಾಜರ ಒಂದು ಕೃತಿ*

"ಒಂದು ಪ್ರದಕ್ಷಿಣವನು ಮಾಡಿದವರ ಪೊಂದುಪುದು ಭೂಪ್ರದಕ್ಷಿಣ ಪುಣ್ಯ ಎಂದೆಂದಿವಳ ಸೇವಿಪ ನರರಿಗೆ ಇಂದಿರೆಯರಸ ಕೈವಲ್ಯವೀವ ||" 

ತುಳಸೀಗೆ ಮಾಡಿ ಒಂದು ಪ್ರದಕ್ಷಿಣೆ ಸಮಗ್ರ ಭೂಮಿಗೇ ಪ್ರದಕ್ಷಿಣಿ ಹಾಗಿದ ಪುಣ್ಯ ಬರತ್ತೆ ಎಂದು ವಾದಿರಾಜರು ಕೊಂಡಾಡುತ್ತಾರೆ. 

*ಪುರಂದರ ದಾಸರ ಒಂದು ಕೃತಿ*

"ಎಲ್ಲಿ ತುಳಸಿಯ ವನವು ಅಲ್ಲೊಪ್ಪುವರು ಸಿರಿನಾರಾಯಣನು ||ಪ ||

ಗಂಗೆ ಯಮುನೆ ಗೋದಾವರಿ ಕಾವೇರಿ ಕಂಗೊಳಿಸುವ ಮಣಿಕರ್ಣಿಕೆಯು |  ತುಂಗಭದ್ರೆ ಕೃಷ್ಣವೇಣಿತೀರ್ಥಗಳೆಲ್ಲ ಸಂಗಡಿಸುತ ವೃಕ್ಷಮೂಲದಲ್ಲಿರುವುವು | ೧ ||

ಸರಸಿಜಭವ ಸುರಪ ಪಾವಕ ಚಂದಿರ ಸೂರ್ಯ ಮೊದಲಾದವರು |ಸಿರಿರಮಣನ ಆಜ್ಞೆಯಲಿ ಅಗಲದಂತೆ ತರುಮದ್ಯದೊಳು ನಿತ್ಯನೆಲೆಸಿಪ್ಪರು | ೨ ||

ಋಗ್ವೇದ ಯಜುರ್ವೇದ ಸಾಮ ಅಥರ್ವಣ ಅಗ್ಗಳಿಸಿ ವೇದ ಘೋಷಗಳು | ಅಗ್ರಭಾಗದಲಿದೆ ಬೆಟ್ಟದೊಡೆಯನು ಅಲ್ಲಿ ಶೀಘ್ರದಿ ಒಲಿದ ಶ್ರೀಪುರಂದರವಿಠಲ | ೩ ||


*ಪುರಂದರ ದಾಸರ ದೃಷ್ಟಿಯಲ್ಲಿ ಮತ್ತೊಂದು ಮಹಿಮೆ*

ವೃಂದಾವನವೆ ಮಂದಿರವಾಗಿಹ ಇಂದಿರೆ ಶ್ರೀ ತುಳಸಿ || ಪ ||ನಂದನಂದನ ಮುಕುಂದಗೆ ಪ್ರಿಯಳಾದ ಚಂದದ ಶ್ರೀ ತುಳಸೀ || ಅ.ಪ ||

ತುಳಸಿಯ ವನದಲಿ ಹರಿ ಇಹನೆಂಬುದ ಶ್ರುತಿ ಸಾರುತಿದೆ ಕೇಳಿ    ತುಳಸಿ ದರ್ಶನದಿಂದ ದುರಿತಗಳೆಲ್ಲವೂ ದೂರವಾಗುವುವು ಕೇಳಿ |ತುಳಸಿ ಸ್ಪರ್ಶವ ಮಾಡೆ ದೇಹ ಪಾವನವೆಂದು ತಿಳಿದುದಿಲ್ಲವೆ ಪೇಳಿ ತುಳಸಿ ಸ್ಮರಣೆ ಮಾಡಿ ಸಕಲೇಷ್ಟವ ಪಡೆದು ಸುಖದಲಿ ಬಾಳಿ ನೀವು || ೧ ||

ಮೂಲ ಮೃತ್ತಿಕೆಯನು ಮುಖದಲಿ ಧರಿಸಲು ಮೂರ್ಲೋಕ ವಶವಹುದು  ಮಾಲೆ ಕೊರಳಲ್ಲಿಟ್ಟ ಮನುಜಗೆ ಮುಕ್ತಿಯ ಮಾರ್ಗವ ತೋರುವುದು | ಕಾಲಕಾಲಗಳಲ್ಲಿ ಮಾಡುವ ದುಷ್ಕರ್ಮ ಕಳೆದು ಬಿಸಾಡುವುದು  ಕಾಲನ ದೂತರ ಕಳಚಿ ಕೈವಲ್ಯದ ಲೀಲೆಯ ತೋರುವುದು || ೨ ||

ಧರೆಯೊಳು ಸುಜನರ ಮರೆಯದೆ ಸಲಹುವ ವರಲಕ್ಷ್ಮೀ ಶ್ರೀ ತುಳಸಿ ಪರಮಭಕ್ತರ ಘೋರಪಾಪಗಳನು ತರಿದು ಪಾವನ ಮಾಡುವ ಶ್ರೀ ತುಳಸಿ | ಸಿರಿ ಆಯು ಪುತ್ರಾದಿ ಸಂಪದಗಳನಿತ್ತು ಹರುಷಗೊಳಿಪ ತುಳಸಿಪುರಂದರವಿಠಲನ ಚರಣ ಕಮಲವ ಸ್ಮರಣೆ ಕೊಡುವಳು ತುಳಸಿ ||

ತುಳಸಿಯ ದರ್ಶನ, ಸ್ಪರ್ಶನ, ಸ್ಮರಣೆ, ಧಾರಣ, ವಂದನ, ಉಪಾಸನೆ, ಮುಂತಾದವುಗಳಿಂದ ಶ್ರೀಹರಿಯು ಒಲಿವನೆಂದು ಹೇಳುತ್ತಾರೆ. ಈ ಹಾಡಿನ ಅರ್ಥ ವನ್ನು ತಿಳಿದಾಗ ತುಳಸಿಯಲ್ಲಿ ಭಕ್ತಿ ಮೂರ್ಮಡಿಯಾಗಿ ಅಭಿವೃದ್ಧಿಸುತ್ತದೆ. 

*ವಿಜಯದಾಸರ ದೃಷ್ಟಿಯಲ್ಲಿ ತುಳಸೀ...*

ಉದಯಕಾಲದೊಳೆದ್ದು ಆವನಾದರೂ ತನ್ನ ಹೃದಯ ನಿರ್ಮಲನಾಗಿ ಭಕುತಿ ಪೂರ್ವಕದಿಂದ, ಸದಮಲಾ ತುಳಸಿಯನು ಸ್ತೋತ್ರ ಮಾಡಿದ ಕ್ಷಣಕೆ ಮದ- ಗರ್ವ ಪರಿಹಾರವೂ,ಇದೆ ತುಳಸಿ ಸೇವಿಸಲು ಪೂರ್ವದಲಿ ಕಾವೇರಿನದಿಯ ತೀರದಲ್ಲೊಬ್ಬ ಭೂಸುರ ಪದಕೆ ಪೋದ, ಪದಪದೆಗೆ ಸಿರಿ ವಿಜಯವಿಠಲಗೆ

ಪ್ರಿಯಳಾದ ಮದನತೇಜಳ ಭಜಿಸಿರಯ್ಯಾ ||

*ತುಳಸಿಯಾ ಸೇವಿಸೀ* ಎಂಬ ಪದದಲ್ಲಿ ಮನೋ ಶುದ್ಧಿಯಿಂದ ತುಲಸಿಯನ್ನು ಸೇವಿಸಿದವರಿಗೆ ಅಹಂಕಾರ ಮಮಕಾರ ಮೊದಲಾದ ಎಲ್ಲ ದುರ್ಗುಣಗಳ ಪರಿಹಾರವಿದೆ.  ಎಂದು ವಿಜಯದಾಸರು ಸ್ಪಷ್ಟವಾಗಿ ತಿಳಿಸಿಕೊಡುತ್ತಾರೆ.

*ಜಗನ್ನಾಥದಾಸರ ದೃಷ್ಟಿಯಲ್ಲಿ...*

*ಮೂರೆರಡು ಸಾವಿರದ ಮೇಲ ಮುನ್ನೂರು ಹದಿನೇಳು ಎನಿಪ ಶ್ರೀತುಳಸೀದಳದಿ*

32317 ರೂಪಗಳಿಂದ ಸ್ವಯಂ ಶ್ರೀಕೃಷ್ಣ ತುಳಸಿಯಲ್ಲಿ ನೆಲೆನಿಂತಿದ್ದಾನೆ ಎಂದು ತಿಳಿಸಿಕೊಡುತ್ತಾರೆ. 

*ತುಳಸಿಯಿಲ್ಲದ ಪೂಜೆ ಒಲ್ಲನೋ ತಾ ಕೊಳ್ಲನೋ..*

ಇಷ್ಟೆಲ್ಲ ಮಹಿಮೆ ಇರುವದರಿಂದಲೇ ದೇವರು ತುಳಸೀ ಇಲ್ಲದ ಪೂಜೆ ನಾನೊಲ್ಲೆ, ನಾ ಸ್ವೀಕರಿಸುವದಿಲ್ಲ ಎಂದು ಸ್ಷ್ಟವಾಗಿ ಹೇಳಿಬಿಟ್ಟ. ಆದ್ದರಿಂದಲೇ ಏನೆಲ್ಲ ಸಾಧನ ಸಲಕರಣೆಗಳಿದ್ದರೂ ತುಳಸಿ ಇಲ್ಲದೆ ಪೂಜೆ ಯಾರೂ ಮಾಡುವದಿಲ್ಲ. 

*ಶುದ್ಧಿಪ್ರದಾ - ಆರೋಗ್ಯ ಪ್ರದಾ*

ನೈವೇದ್ಯ ದಾನದ ವಸ್ತು ನೀರು ಮೊದಲುಮಾಡಿ ಯಾವುದೇ ವಸ್ತು ಶುದ್ಧಿ ಆಗಬೇಕಾದರೆ ತುಳಸೀ ಇರಬೇಕು. ಸೇವಿಸುವ ಪದಾರ್ಥಗಳಿಂದ ರೋಗ ಬರಬಾರದಾಗಿದ್ದರೆ ಆ ಪದಾರ್ಥಗಳಲ್ಲಿ ತುಳಸೀ ಇರಲೇಬೇಕು. 

ಹೀಗೆ ತುಳಸೀದೇವಿಯ ಮಹಿಮೆ ಹೇಳಲು ಬರೆಯಲು ಕುಳಿತರೆ ಮುಗಿಯುವದೇ ಇಲ್ಲ. *ಓದುವ ತಮಗೆ ಖಂಡಿತ ಬೇಸರ ಬರತ್ತೆ* ಎಂದೇ ತಿಳಿದು ಇಲ್ಲಿಗೆ ಮುಗಿಸುವೆ.

ಪುರುಷರು ಎದ್ದಕೂಡಲೆ ನಿತ್ಯ ತುಳಸೀ ದರ್ಶನಮಾಡಿಕೊಳ್ಳಲಿ. ಮೃತ್ತಿಕೆ ಧರಿಸಲಿ. ದೇವರಿಗೆ ನಾಲ್ಕು ದಳವಾದರೂ ಎರಿಸುವಂತಾಗಲಿ. ಸ್ತ್ರೀಯರೆಲ್ಲರೂ ನಿತ್ಯವೂ ತುಳಸಿಯ ವೃಂದಾವನವನ್ನು ಸಿಂಗರಿಸಲಿ. ತುಳಸಿಗೆ ನೀರುಹಾಕಿ ಪೂಜಿಸಲಿ. ಇಬ್ಬರೂ ತುಳಸಿಯ ಅನುಗ್ರಹಕ್ಕೆ ಪಾತ್ರರಾಗಲಿ..

*✍🏽✍🏽ನ್ಯಾಸ....*

ಗೋಪಾಲದಾಸ.

ವಿಜಯಾಶ್ರಮ, ಸಿರವಾರ.

Comments

ಲೇಖನ ನೋಡಿ ಬಹಳಷ್ಟು ಸಂತೋಷವಾಯ್ತು.
Anonymous said…
Exlent goorooo

Atyuttama sangraha
Shesh Mokhashi said…
ಲೇಖವು ತುಂಬಾ ಮಹತ್ವದ ಆಂಶ ಗಳಿಂಡ್ ಕೂಡಿದದು... ಸಂತೋಷ್..ತುಳಸಿ ಯಾವ ದೇವತಾ kaxe ಬರುತ್ತಾಳೆ.. ತಿಳಿಸಿ
Anonymous said…
ಓ೦ಶ್ರೀ ತುಳಸಿ ದೇವಿ
ನಮೋನಮಃ. 🙏🎍
ತುಳಸಿ ಬಗ್ಗೆ ಮಹತ್ವ
ವಿಶೇಷ ವಿಚಾರಧಾರೆಗೆ ಧನ್ಯವಾದಗಳು ನಿಮಗೆ. 👌
Unknown said…
Your consistent efforts to make us aware of significance of every festival, event or Pooja , is a contribution in its own way . Keep giving us insights . We are truly indebted . Thanks a lot.
NYASADAS said…
ಸಮಯ ಮಾಡಿಕೊಂಡು ಓದಿ ಪ್ರೋತ್ಸಾಹ ಕೊಡ್ತೀರಿ ... ಅದೇ ತುಂಬ ಸಂತೋಷದ ವಿಷಯ.
NYASADAS said…
ಸಮಯ ಮಾಡಿಕೊಂಡು ಓದಿ ಪ್ರೋತ್ಸಾಹ ಕೊಡ್ತೀರಿ ... ಅದೇ ತುಂಬ ಸಂತೋಷದ ವಿಷಯ.

Popular posts from this blog

*ಕೃಷ್ಣಾಷ್ಟಮೀ ಸಂಕಲ್ಪ ಸ್ನಾನ ಪೂಜೆ ಅರ್ಘ್ಯ ಸಮರ್ಪಣ - ಮಂತ್ರಗಳು*

ಗೆಳೆತನ ತುಂಬ ಸೂಕ್ಷ್ಮ* ಗೆಳೆತನ ಇದೊಂದು ಮಧುರ ಬಾಂಧವ್ಯ.

* ಅನಿಷ್ಟ ಪರಿಹರಿಸಿಕೊಳ್ಳಲು, ಪುಣ್ಯಘಳಿಸಲು ಒಂದು ಸದವಕಾಶ*