ಹೇ ರಾಮ !! ಸದ್ಗುಣಧಾಮ !! ನಿನ್ನ ನಾಮದ ಭಿಕ್ಷೆಯನೀಯೋ...*
* ಹೇ ರಾಮ !! ಸದ್ಗುಣಧಾಮ !! ನಿನ್ನ ನಾಮದ ಭಿಕ್ಷೆಯನೀಯೋ...* ಆದರ್ಶ ಪುರುಷ ಶ್ರೀರಾಮ ಚಂದ್ರ. ಗುಣಗಳ ಗಣಿ ಶ್ರೀರಾಮ ಚಂದ್ರ. ರಾಮಾಯಣ ಆರಂಭವಾಗಿರುವದೇ "ಗುಣವಂತರಾರು ??? ಎಂಬ ಪ್ರಶ್ನೆಗೆ ಉತ್ತರ ರೂಪವಾಗಿ". ರಾಮಾಯಣ ಶ್ರೀರಾಮನ ಗುಣಗಳನ್ನು ಕೊಂಡಾಡುವಾಗ, ಶ್ರೀರಾಮನಲ್ಲಿ ಅತಿಮಾನುಷ ಗುಣಗಳು ಸಾವಿರಾರು ಅಲ್ಲ ಅನಂತ ಅನಂತ ಇವೆ ಎಂಬುವದನ್ನು ಮನಗಂಡು, ಆ ಎಲ್ಲ ಗುಣಗಳ ಕಡೆ ಬೆಳಕು ಹಾಯಿಸುತ್ತಾ, ಸಾಮಾನ್ಯ ಮಾನವನಿಗೆ ಯಾವೆಲ್ಲ ಗುಣಗಳು ಮಾರ್ಗದರ್ಶನ ವಾಗಬಹುದೋ, ಉಪಕಾರಿಯಾಗಬಹುದೋ, ಈ ಗುಣಗಳನ್ನು ನಾನೂ ರೂಢಿಸಿಕೊಳ್ಳಬಹುದು ಎಂದೆನಿಸುವದೋ ಆ ತರಹದ ಗುಣಗಳನ್ನೇ ನೂರಾರು ಸಾವಿರಾರು ಗುಣಗಳನ್ನು ಬಿಚ್ಚಿಡುತ್ತದೆ. ಕೆಲಗುಣಗಳ ಕಡೆ ಗಮನ ಹರಿಸೋಣ. *ಮೃದು \ ಸ್ಮಿತ ಪೂರ್ವಾಭಿಭಾಷೀ* ಎಂದಿಗೂ ರಾಮ ಆಡುವ ಮಾತು ಮೊದಲನೆಯ ಮಾತಾಗುತ್ತಿತ್ತು. ಅವರು ಮಾತಾಡಲಿ ಎಂಬ ಭಾವ ಇರುತ್ತಿರಲಿಲ್ಲ. ಆ ಮಾತು ಮೃದುವೇ ಆಗಿರುತ್ತಿತ್ತು. ಮಾತಾಡುವಾಗ ಮಂದಹಾಸ ತುಂಬಿ ತುಳುಕಿರುತ್ತಿತ್ತು. ಎಂದಿಗೂ ಕಠೋರ ಮಾತು ಅಥವಾ ಕೊಂಕು ಮಾತು ಆಗಿರುತ್ತಿರಲಿಲ್ಲ. *ಉಚ್ಯಮಾನೋಪಿ ಪರುಷಂ ನೋತ್ತರಂ ಪ್ರತಿಪದ್ಯತೇ* ಎಷ್ಟೇ ಪರುಷವಾಗಿ ಕ್ರೂರವಾಗಿ ಅಂದರೂ ಆಡಿದರೂ ತಿರುಗಿ ಉತ್ತರವನ್ನು ಎಂದಿಗೂ ಕೊಡುತ್ತಿರಲಿಲ್ಲ ಶ್ರೀರಾಮ. ಈ ಗುಣ ಮನವನ ವೈಭವದ ಜೀವನಕ್ಕೆ ಅತ್ಯುಪಯುಕ್ತ, ರೂಢಿಸಿಕೊಳ್ಳಲೂ ಬಹುದು. ಆ ಗುಣವನ್ನೇ ಬಿಚ್ಚಿಡುತ್ತದೆ. ...