*ಅಧಿಕಮಾಸ "ಅಧಿಕಸ್ಯ ಅಧಿಕಂ ಫಲಮ್"*
ಅಧಿಕಮಾಸ ಇದು ಮಲಮಾಸ ಎಂದು ಪ್ರಸಿದ್ಧ. ಮಲಮಾಸದಲ್ಲಿ ಮಲ ಪಾಪಗಳನ್ನು, ಕಷ್ಟ ದಾರಿದ್ರ್ಯ ಕಾರ್ಪಣ್ಯ ಮುಂತಾದವುಗಳನ್ನು ಪರಿಹರಿಸಿಕೊಳ್ಳುವ ಮುಖಾಂತರ ಎಲ್ಲ ವಿಧ ಸೌಖ್ಯ ಸೌಭಾಗ್ಯಗಳನ್ನು ಪಡೆಯಲುಭೆಕಾದ ಸಾಧನೆಗಳನ್ನು ಮಾಡಿಸುವದಲ್ಲದೇ ವಿಷ್ಣುಭಕ್ತಿ ದ್ವಾರಾ ಮೊಕ್ಷಾದಿ ಪುರುಷಾರ್ಥಗಳನ್ನು ಕೊಡಿಸುವದರಲ್ಲೂ ಸಮರ್ಥವಾಗಿದೆ.
ಈ ಮಲ ಮಾಸದಲ್ಲಿ ವಿಹಿತವಾದವುಗಳು ಎಂದರೆ "ಯಜ್ಙ ದಾನ ತಪಸ್ಸು" ಇವುಗಳೇ.
ಯಜ್ಙ
ವೈಶ್ವಾನರ ಯಜ್ಙ ಹಾಗೂ ಪವಮಾನ ಹೋಮ ಮೊದಲಾದ ಯಜ್ಙಗಳು ಹೀಗೆ ಎರಡು ವಿಧ. ಅನ್ನದಾನ ರೂಪವಾದ ವೈಶ್ವಾನರ ಯಜ್ಙವನ್ನು ಮಾಡುವದರಿಂದ ನನ್ನ (ದಾನಿಯ) ನೂರನೇಯ ತಲೆಮಾರಿನವರೆಗೂ ನೈವೇದ್ಯ ವೈಶ್ವದೇವದ ಅನ್ನವೇ ಹೊಟ್ಟೆಗೆ ಬೀಳುವಂತೆ ಮಾಡುತ್ತದೆ.
ಪವಮಾನ ಮೊದಲಾದ ಎಲ್ಲಯಾಗಗಳೂ ಬ್ರಹ್ಮಹತ್ಯೆ ಸುರಾಪಾನ ಸ್ವರ್ಣಸ್ತೇಯ ಅಭಕ್ಷ್ಯಭಕ್ಷಣ ಬಾಲಹತ್ಯೆ ಶಿಷುಹತ್ಯೆ ಬ್ರೂಣಹತ್ಯೆ ಸ್ತ್ರೀಹತ್ಯೆ ಮೊದಲಾದ ಎಲ್ಲ ಪಾಪಗಳನ್ನೂ ಪರಿಹರಿಸಲು ಸಮರ್ಥವಾಗಿದೆ.
ದಾನ
ಈ ದಾನವೂ ಎರಡು ವಿಧವಾಗಿದೆ. ಒಂದು ಅಪೂಪದಿಂದ ಆರಂಭಿಸಿ ಸ್ವರ್ಣ ರಜತ ಭೂ ತಿಲ ದೀಪ ಮೊದಲಾದ ನಾನಾತರಹದ ದಾನಗಳು. ಈ ಎಲ್ಲ ತರಹದ ದಾನಗಳಿಂದ ಒಂದು ದ್ರವ್ಯಶುದ್ಧಿ. ಶತ್ರುಪರಿಹಾರ. ತತ್ವಜ್ಙಾನ ಪ್ರಾಪ್ತಿ ಒಬ್ಬ ಬ್ರಾಹ್ಮಣನಿಗಾದರೂ ಉಪಯೋಗ ಹೀಗೆ ನಾನಾತರಹದ ಫಲಗಳು ಒಳಗೊಂಡಿವೆ.
ತಪಸ್ಸು
ಈ ತಪವೂ ಮೂರುವಿಧ. ಒಂದು ದೇಹದಂಡನೆ ರೂಪವಾದ ಉಪವಾಸ. ಅದರಲ್ಲಿ ಏಕಾದಶೀ ಏಕಭುಕ್ ವಿಷ್ಣುಪಂಚಕ ಧಾರಣಿಪಾರಣಿ ಮೊದಲಾದ ವ್ರತಗಳು, ನಾನಾತರಹದ ನಿಯಮಗಳು, ಪ್ರದಕ್ಷಿಣೆ ನಮಸ್ಕಾರಗಳು, ತೀರ್ಥಯಾತ್ರಾ ಇತ್ಯಾದಿರೂಪ ತಪಸ್ಸು.
ಎರಡನೆಯದ್ದು ಜಪರೂಪವಾದ ತಪಸ್ಸು. ಗಾಯತ್ರೀಜಪ, ನಾರಾಯಣ ಮಂತ್ರ ಜಪ, ಅಷ್ಟಮಹಾಮಂತ್ರಗಳ ಜಪ, ಲಕ್ಷ್ಮೀಹೃದಯನಾರಾಯಣ ಹೃದಯ ಜಪ. ವಿಷ್ಣುಸಹಸ್ರನಾಮ ಗೀತಾ ಜಿತಂತೇಸ್ತೋತ್ರ ಶ್ರೀಸೂಕ್ತ ಸುಂದರಕಾಂಡ ಜಯತೀರ್ಥ ರಾಘವೇಂದ್ರಸ್ತೋತ್ರ ಮಂಗಳಾಷ್ಟಕ ಇತ್ಯಾದಿಗಳ ಪಾರಾಯಣ ಜಪರೂಪದ ತಪ್ಪಸ್ಸು.
ತಪಸ್ಸುಗಳಲ್ಲೇ ಸರ್ವೋತ್ತಮವಾದ ಜ್ಙಾನತಪಸ್ಸು ಮೂರನೇಯದ್ದು. ಶ್ರೀಮದ್ಭಾಗವತ ಮೂಲ ಪಾರಾಯಣ ಶ್ರವಣ ಕಥನ. ಅರ್ಥಾನುಸಂದಾನ, ಭಾಗವತಕಥಾಶ್ರವಣ ಕಥನ, ಮಹಾಭಾರತ ಹರಿವಂಶ ಸರ್ವಮೂಲ ಇತ್ಯಾದಿಗಳ ಜ್ಙಾನಾಭಿವೃದ್ಧಿಪಡಿಸಿಕೊಳ್ಳುವ ಸರ್ವೋತ್ಕೃಷ್ಟ ತಪಸ್ಸು ಮೂರನೇಯದ್ದು ಕೊನೆಯದು ವಿಷ್ಣುಪ್ರಸಾದ ಹಾಗೂ ಅಪರೋಕ್ಷ ಸಾಧಕವಾದದ್ದು.
ಈ ನಿಟ್ಟಿನಲ್ಲಿ ನಮಗೆ ಯೋಗ್ಯವಾದ ಸೂಕ್ತವಾದ "ಯಜ್ಙವೋ ದಾನವೋ ತಪಸ್ಸೋ" ಈ ಮೂರರಲ್ಲಿ ಒಂದಾರಿಸಿಕೊಂಡಿದ್ದೇವೆ. ಆಚರಿಸುತ್ತಾ ಬಂದಿದ್ದೇವೆ. ಇಪ್ಪತ್ತುದಿನಗಳು ಈಗಾಗಲೆ ಉರುಳಿ ಹೋಗಿವೆ. ಇನ್ನು ಕೆಲವೇ ದಿನಗಳು ಉಳಿದಿವೆ. ಇನ್ನೂ ಹೆಚ್ಚಿನ ಉತ್ಕೃಷ್ಟ ಸಾಧನೆ ಮಾಡಿಕೊಂಡು ಅಧಿಕಾಧಿಕವಾದ ಭಗವತ್ಪ್ರಸಾದಕ್ಕೆ ಪಾತ್ರರಾಗೋಣ..
*✍🏽ನ್ಯಾಸ...*
ಗೋಪಾಲದಾಸ
ವಿಜಯಾಶ್ರಮ, ಸಿರಿವಾರ
Comments