*ಶ್ರೀಧನ್ವಂತರಿ ಜಯಂತಿ ನಿಮಿತ್ತ ಅನಂತ ನಮಸ್ಕಾರಗಳು*
"ಧನ್ವಂತರಿರ್ಭಗವಾನ್ ಪಾತ್ವಪಥ್ಯಾತ್" ಅಪಥ್ಯವಾದ ಏನೆಲ್ಲ ಗೀಳುಗಳಿವೆಯೋ ಅವೆಲ್ಲವನ್ನು, ಅಪಥ್ಯ ಸಂಸಾರವೆಂಬ ಮಹರೋಗವನ್ನು, ಅಷ್ಟೇ ಅಲ್ಲದೇ ಅಪಥ್ಯ ಸಂಸಾರದಲ್ಲಿಯ ದೈಹಿಕ ಮಾನಸಿಕ ಎಲ್ಲ ರೋಗಗಳನ್ನೂ ಅಪಹಿರಿಸಿ ಸಮೂಲವಾಗಿ ಸಂಹರಿಸಿ, ಮೋಕ್ಷಾನಂದವೆಂಬ ಅಮೃತ ಆರೋಗ್ಯವೆಂಬ ಅಮೃತವನ್ನು ಉಣಿಸುವ ಕರುಣಿಸುವ ಮುಖಾಂತರ ನಮ್ಮನ್ನು ರಕ್ಷಿಸುವ ಕೃಪಾಳು ಹೆದ್ದೊರೆ ನಮ್ಮ ಧನ್ವಂತ್ರಿ ಭಗವಾನ್.
*ತುಂಬ ವಿಚಿತ್ರ ಆಶ್ಚರ್ಯ*
ಎಲ್ಲ ಕಡೆಗೂ ಅಂತರ್ನಿಯಾಮಕನಾದ ಭಗವಾನ್ ಕ್ರಮವಾಗಿ ೧)ರೋಗದಲ್ಲಿ. ೨)ರೋಗಿಯಲ್ಲಿ. ೩)ಔಷಧಿಯಲ್ಲಿ. ೪)ವೈದ್ಯನಲ್ಲಿ ಹೀಗೆ ಕ್ರಮವಾಗಿ ಅಂತರ್ಯಾಮಿಯಾಗಿ ಇದ್ದಾನೆ.
*ನಮ್ಮ ದೇವ ಅಪರಾಜಿತ*
ನಮ್ಮ ನಾರಾಯಣ ಹರಿ ಭಗವಾನ್ ಸರ್ವಸ್ವಾಮಿ ದೇವ ಎಂದಿಗೂ ಯಾರಿಂದಲೂ ಸೋಲಿಲ್ಲದ ಸರದಾರ ಎಂಬುವದು ಜಗತ್ಪ್ರಸಿದ್ಧ, ಶಾಸ್ತ್ರಸಿದ್ಧ.
ರೋಗದ ನಿಯಾಮಕನಾಗಿ ಇರುವ ಭಗವಂತ ಸೋಲದೇ ಘಟ್ಟಿಯಾಗಿ ನಿಂತರೆ ರೋಗವೂ ದೃಢವಾಯಿತು.ಆರೋಗ್ಯಬರುವದೆಂದು ? ಔಷಧದ ಅಂತರ್ಯಾಮಿಯೂ ಸರ್ವಶಕ್ತ. ವೈದ್ಯನ ಅಂತರ್ಯಾಮಿ "ವೈದ್ಯೋನಾರಾಯಣೋ ಹರಿಃ" ವೈದ್ಯರೇ ದೇವ ಎಂದಿರುವಾಗ ವೈದ್ಯರ ಅಂತರ್ಯಾಮಿ ಮಹಾದೇವನೇ. ಹೀಗೆ ಮೂರೂ ಭಗವದ್ರುಪಗಳು ಸೋಲಿಲ್ಲದೇ ಇದ್ದರೆ, ವೈದ್ಯರ ಔಷಧಿಗಳ ಅಂತರ್ಯಾಮಿ ಸೋತರೆ ಜಗತ್ತು ಎಷ್ಟು ಅಸ್ತವ್ಯಸ್ತ ಎಂದು ಊಹಿಸಲು ಯಾರಿಂದಲಾದರೂ ಸಾಧ್ಯವೇ.. ?
ಕರುಣಾಮಯಿಯಾದ ದೇವ *ರೋಗದ ಅಂತರ್ಯಾಮಿಯಾಗಿದ್ದು ರೋಗದ ಜೊತೆಗೆ ತಾನೂ ಸೋಲ್ತಾನೆ* ಅಂತೆಯೇ ಆರೋಗ್ಯ ಒದಗಿ ಬರುತ್ತದೆ. ನಾ ಯಾಕೆ ಸೋಲಬೇಕು ಅಂತ ಶಟಕೊಂಡು ಕೂತರೆ ರೋಗಿಯ ಅವಸ್ಥೆ ಏನು... ?
ಸರ್ವಸರ್ವದಾ ವಿಜಯಿಯಾಗಿದ್ದರೂ ದೇವ ಕರುಣೆಮಾಡಿ ಸೋಲುವನಲ್ಲವೆ ಇದುವೆ ಚಿತ್ರ ವಿಚಿತ್ರ ಆಶ್ಚರ್ಯ ಪರಮಾಶ್ಚರ್ಯ.
*ಅಹೋ....!*
ರೋಗದಲ್ಲಿ ಇದ್ದು ಸೋಲಬೇಕು. ಔಷಧಿಯಲ್ಲಿ ಇದ್ದು ಕೆಲಸಮಾಡಬೇಕು. ರೋಗಿಯಲ್ಲಿ ಇದ್ದು ಔಷಧಿಗಳಿಗೆ ಪ್ರತಿಸ್ಪಂದಿಸಬೇಕು. ವೈದ್ಯರಲ್ಲಿ ಇದ್ದು ಅತ್ಯಂತ ಸರಿಯಾಗಿ ನಿಖರವಾಗಿ ಇದೇ ರೋಗ ಇಷ್ಟು ಮಾತ್ರದಲ್ಲಿ ಇದೆ ಎಂಬ ನಿರ್ಣಯ, ಔಷಧಿಗಳಜ್ಙಾನ ಹಾಗೂ ಪ್ರಯೋಗ ಇತ್ಯಾದಿಗಳನ್ನು ಪ್ರೆರಿಸುವದು ಇತ್ಯಾದಿ ಇತ್ಯಾದಿ. ಈ ಕ್ರಮದಲ್ಲಿ ಒಂದು ರೋಗಕ್ಕೆ ದೇವರ ವ್ಯಾಪಾರ ಇಷ್ಟು ಇದ್ದರೆ, ಇಂತಹ ಕೋಟಿ ಕೋಟಿ ರೋಗಗಳು, ಕೋಟಿಕೋಟಿ ಜೀವರು, ಕೋಟಿಕೋಟಿ ವೈದ್ಯರು, ನಾನಾತರಹ ಔಷಧಿಗಳು ಎಲ್ಲವನ್ನೂ ಏಕಕಾಲಕ್ಕೆ ವಿಚಾರ ಮಾಡಿದರೆ ದೇವರ ವ್ಯಾಪಾರ ಎಷ್ಟು ಅದ್ಭುತ ಎಂಥ ಆಶ್ಚರ್ಯತಮ ಎಂದನಿಸದೇ ಇರದು. ದಿಗ್ಭ್ರಮೆಯಾಗಿಬಿಡುತ್ತದೆ.
ಈ ನಿಟ್ಟಿನಲ್ಲಿಅನಂತವ್ಯಾಪಾರ ಮಾಡುತ್ತಿದ್ದರೂ ಕರುಣೆ ಮಾಡಿ ಎನ್ನಕಡೆ ಮೊರೆಮಾಡುತ್ತಾನೆಲಾ ಈ ಕಾರುಣ್ಯಕ್ಕೆ ಏನೆಂಬುವದು ?
ಇಂತಹ ಧನ್ವಂತರಿರೂಪಿ ಹರಿಗೆ ರೋಗಿಯಾಗಿ, ವೈದ್ಯನಾಗಿ, ಔಷಧಿಯಾಗಿ ನಾವೇನು ಕೊಡಲು ಸಾಧ್ಯವಿದೆ ?. *ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ - ನಿನ್ನ ಅಡೆದಾವರೆಗಳಿಗೆ ಅನಂತ ಪ್ರಣಾಮಗಳು* ಮಾತ್ರ.
*✍🏽ನ್ಯಾಸ..*
ಗೋಪಾಲದಾಸ
ವಿಜಯಾಶ್ರಮ, ಸಿರಿವಾರ.
Comments