ಇರುವದೆಲ್ಲವನ್ನೂಅಭಿವ್ಯಕ್ತಗೊಳಿಸುವದು ಮನಸ್ಸು*
ಮನಸ್ಸು ಇದೊಂದು ಅಮೂಲ್ಯವಾದ ಪದಾರ್ಥ. ಒಂದು ಬಾರಿ ಮನಸ್ಸಿನಲ್ಲಿ ಏನೋ ಒಂದು ವಿಷಯ, ಯಾವುದೋ ರೀತಿಯಲ್ಲಿ ಒಳ ಸೇರಿತೋ ಅದು ಮನಸ್ಸಿನಲ್ಲಿ ಸಂಸ್ಕಾರ ರೂಪದಿಂದ ಶಾಶ್ವತವಾಗಿ ಉಳಿದು ಬಿಡುತ್ತದೆ.
ಮನಸ್ಸಿನಲ್ಲಿ ಒಮ್ಮೆ ಒಂದು ವಿಷಯ ಸೇರಿತು ಎಂದಾದರೆ ಆ ವಿಷಯವೆಂಬ ಹುಳ ಒಳಗೆ ಕೊರೆಯಲು ಆರಂಭಿಸುತ್ತದೆ. ಆ ವಿಷಯವನ್ನು ಒಳಗೇ ಇಟ್ಟು ಕೊಳ್ಳುತ್ತೇನೇ ಎಂಬುವದೂ ಅಸಾಧ್ಯದ ಮಾತೆ. ಒಂದಿಲ್ಲ ಒಂದು ರೂಪದಿಂದ ಅಭಿವ್ಯಕ್ತವಾಗಲೇ ಬೇಕು. ಆಗಿಯೇ ಆಗುತ್ತದೆ.
ಸಕಾರಾತ್ಮಕ ವಿಷಯಗಳು ಮನಸ್ಸಿನಲ್ಲಿ ಸೇರಿದ್ದರೆ, ಸಾಕಾರಾತ್ಮಕ ವಿಚಾರಗಳೇ ಹೊರಬರುತ್ತವೆ. ನಕಾರಾತ್ಮಕ ವಿಷಯಗಳು ಸೇರಿದ್ದರೆ ನಕಾರಾತ್ಮಕ ವಿಚಾರಗಳೇ ಅಭಿವ್ಯಕ್ತವಾಗುವದು.
ಗುರು ದೇವತಾ ದೇವರುಗಳ, ಧರ್ಮ ಶಾಸ್ತ್ರ, ತಂದೆ ತಾಯಿ ಅತ್ತೆ ಮಾವ, ಅಕ್ಕ ತಂಗಿ, ಅಣ್ಣ ತಮ್ಮ, ಆತ್ಮೀಯರು ಹಿತೈಷಿಗಳು ಇತ್ಯಾದಿ ಅಂತರಂಗದ ಅಥವಾ ಬಹಿರಂಗದ ವ್ಯಕ್ತಿಗಳ ವಿಷಯಕ ಸಕಾರಾತ್ಮಕ positive ವಿಷಯಗಳು ಸೇರಿದ್ದರೆ ಸಕಾರಾತ್ಮಕವಾಗಿಯೇ ಮಾತಾಡುವ. ತನ್ನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ. ನಕಾರಾತ್ಮಕ negative ಆಗಿದ್ದರೆ ನಕಾರಾತ್ಮಕವಾಗಿಯೇ. ಒಂದಂತೂ ನಿಶ್ಚಿತ ಅಭಿವ್ಯಕ್ತಗೊಳಿಸದೇ ಇರಲಾರ.
ಒಂದು ಸುಂದರ ಉದಾಹರಣೆ.
ಒಂದು ಹಣ್ಣು ಚಿಕ್ಕು ತೆಗೆದುಕೊಂಡು ಅದನ್ನು ಹಿಂಡೋಣ , ಹಿಂಡಿದಾಗ ಬರುವ ರಸವೇನು ?? ಸಿಹಿಯಾದ ಚಿಕ್ಕು ರಸವೇ ಹೊರತು ಇನ್ಯಾವ ರಸವೂ ಬರಲಾರದು. ಸಿಟ್ಟಿಗೆ ಬಂದರೂ, ಬಿಸಾಡಿದರೂ ಕಿವುಚಿದರೂ ಏನು ಮಾಡಿದರೂ ಅಲ್ಲಿ ಬರುವ ರಸ ಮಾತ್ರ ಚಿಕ್ಕು ರಸವೇ. ಒಳಗೆ ಏನಿದೆಯೋ ಅದುವೇ ಅಭಿವ್ಯಕ್ತವಾಗುವದು.
ಮನಸ್ಸಿನಲ್ಲಿಯೂ ಹಾಗೆಯೆ.. ಸಕಾರಾತ್ಮಕ ವಿಷಯಗಳು ತುಂಬಿದಾಗ ಅವುಗಳೇ ಅಭಿವ್ಯಕ್ತ ಆಗುವದು. ಇನ್ಯಾವ ರಸವೂ ಅಭಿವ್ಯಕ್ತ ಆಗಲಾರದು.
ಆದರೆ ಗುಣಗಳ ತಿಳುವಳಿಕೆ ಕಡಿಮೆಯಾಗಿ, ದೋಷಗಳ ವಿಷಯವೇ ಹೆಚ್ಚು ಆದರೆ ಅಥವಾ ಸಂಶಯ, ಭ್ರಾಂತಿ, ವಿಪರೀತಜ್ಙಾನ ಇವುಗಳೆ ಸೇರಿ ಹೋದರೆ ಅವುಗಳೆ ಅಭಿವ್ಯಕ್ತವಾಗುವದು.
*ವ್ಯಕ್ತಿಯ ಗುಣಗಳನ್ನೇ ತಿಳಿದಿದ್ದರೆ, ನಮ್ಮ ಮನಸ್ಸು ಎಷ್ಟು ವ್ಯಗ್ರ ಆದರೂ, ಸಿಟ್ಟು ಸಿಡಕು ಹತಾಶೆ ಇವಗಳಿಂದ ಕದಡಿ ಹೋದರೂ ವ್ಯಕ್ತಿಯ ಗುಣಗಳೆ ಕಣ್ಣು ಮುಂದೆ ಬರುತ್ತದೆ. ದೋಷಗಳನ್ನೂ ತಿಳಿದಿದ್ದರೆ ಎಷ್ಟೇ ಪ್ರೀತಿ ತ್ಯಾಗ ಮಾಡಿದರೂ ದೋಷಗಳೂ ಅಭಿವ್ಯಕ್ತವಾಗುತ್ತವೆ*
ಎದುರಿನವರು ಸಾಮಾನ್ಯ ಮನುಷ್ಯನಿಂದ ಆರಂಭಿಸಿ ದೇವರ ವರೆಗೆ ಯಾರೇ ಆಗಿರಲಿ ಅವನ ಗುಣಗಳೇ ಕಣ್ಣಿಗೆ ಕಾಣಲಿ, ಪರರ ಗುಣಗಳೆ ಮನಸ್ಸಿನಲ್ಲಿ ಸೇರಲಿ, ದೋಷಗಳು ಒಟ್ಟ ಕಾಣುವದೇ ಬೇಡ, ಮನಸ್ಸನಲ್ಲಿ ಸೇರುವದಂತೂ ಬೇಡವೇ ಬೇಡ. ಆಗ ಗುಣಗಳ ಅಭಿವ್ಯಕ್ತಿಯೇ ಆಗುವದು. *ಪರರ ಗುಣದ ಅಭಿವ್ಯಕ್ತಿಯಲ್ಲಿಯೇ ನನ್ನ ಗುಣವಂತಿಕೆಯ* ನಿಶ್ಚಯ ವಾಗುವದು. ಇಲ್ಲವೋ ನಾ ಹುಳಿಯ ಹಣ್ಣು ಆಗಿ ತಿಪ್ಪೆ ಸೇರಬೇಕಾಗುತ್ತದೆ.
*ಗುಣವಂತನಾಗುವದು ಎಂದರೆ ತನ್ನಲ್ಲಿ ಎಷ್ಟುಗುಣಗಳು ಇವೆ ಎಂದಲ್ಲ, ತನ್ನವರಲ್ಲಿ ಎಷ್ಟು ಗುಣಗಳನ್ನು ತಿಳಿದಿದ್ದೇನೆ ಎನ್ನುವದರ ಮೇಲೆ ಗುಣವಂತಿಕೆ ನಿಶ್ಚಯವಾಗುವದು. ಗುಣವಂತನಾದರೆ ದೇವರಿಂದ ಆರಂಭಿಸಿ ಎಲ್ಲರ ಮನಸ್ಸಿನಲ್ಲಿಯೂ ರಾರಾಜಮಾನನಾಗಿ ಇರುತ್ತಾನೆ* ಒಂದು ಬಾರಿ ದೇವರಿಂದ ಆರಂಭಿಸಿ ಎಲ್ಲರ ಮನಸ್ಸಿನಲ್ಲಿ ಸೇರಿದ ಎಂದಾದರೆ ಅವರೆಲ್ಲರ ಮನಸ್ಸನಿಂದ ನನ್ನ ಗುಣವಂತಿಕೆಯೇ ಅಭಿವ್ಯಕ್ತ ಆಗುವದು. ಇದಕ್ಕೂ ಹೆಚ್ಚಿನ ಲಾಭ ಇನ್ನೊಂದಿಲ್ಲ ಅಲ್ವೆ....
*✍🏼✍🏼✍🏼ನ್ಯಾಸ*
Comments