ಚೈತ್ರದಲ್ಲಿ ಧೀರರ ಮೂರನೇಯ ಜೈತ್ರಯಾತ್ರೆ....*


 *ಚೈತ್ರದಲ್ಲಿ ಧೀರರ ಮೂರನೇಯ ಜೈತ್ರಯಾತ್ರೆ....* 


ಚೈತ್ರಮಾಸದ ಕೊನೆಯ ದಿನವಾದ ಅಮಾವಾಸಯೆಯ ಶುಭ ಅವಸರದಿ ಇಹ ಲೋಕದ ಭವ್ಯ ದಿವ್ಯ ಯಾತ್ರೆಯನ್ನು ಮುಗಿಸಿ ಪರಲೋಕದ ಯಾತ್ರೆಯನ್ನು ಆರಂಭಿಸಿದ ಮಹಾ ಚೇತನ ಸಿರಿವಾರದ ಜಯಣ್ಣ ಅವರು. ಪರಲೋಕದ ಯಾತ್ರೆ ಆರಂಭಿಸಿ ಇಂದಿಗೆ ಮೂರು ವರ್ಷಗಳಾಯ್ತು. ಪರಲೋಕದ ಯಾತ್ರೆ ಹೇಗೆ ನಡೆದಿದೆ ನಮಗೆ ತಿಳಿಯದು, ಈ ಲೋಕದಯಾತ್ರೆಯಲ್ಲಿ ಕೆಲ ವಿಷಯಗಳನ್ನು ತಿಳಿಯುವದು ನನ್ನ ಆದ್ಯ ಕರ್ತವ್ಯಗಳಲ್ಲಿ ಇದೂ ಒಂದಾಗಿದೆ.  

ಸಮಕಾಲಿನ ಹಿರಿಯರು ತಿಳಿಸಿದ ಒಂದೆರಡು ಹೊಸ ವಿಷಯಗಳನ್ನು ತಿಳಿಯುವ ಪ್ರಯತ್ನ. 


*ನಗು ಮೊಗದ ಸರದಾರ....*


"ಸಮೃದ್ಧಿ ಇರುವಾಗಿನ ನಗು, ದಾರಿದ್ರ್ಯದಲ್ಲಿ ಮಾಸಿರುತ್ತದೆ" ಇದು ಇಂದಿನ ಸತ್ಯ. ಆದರೆ ಸಮೃದ್ಧಿಯ ಉತ್ತುಂಗದಲ್ಲಿ ಇರುವಾಗಲೂ, ದಾರಿದ್ರ್ಯದ ಪರಾಕಾಷ್ಠೆಯಲ್ಲಿ ಇರುವಾಗಲೂ ಏಕ ಪ್ರಕಾರದ ನಗುಮೊಗವೇನಿದೆ ಅದು *ವಿಷ್ಣುಪ್ರಿಯ* ನ ಸ್ವತ್ತು. ಅದುವೇ ಭಗವದಾರಾಧಕನ ವೈಭವ. ಈಭವದ ಸರದಾರ ಸಿರಿವಾರ ಜಯಣ್ಣ ಅವರು  ಎಂದರೆ ತಪ್ಪಾಗದು. 


ದರಿದ್ರ ಸಿರಿವಂತನಾಗುವದು ಕಂಡಿದೆ, ಆದರೆ ಸಿರಿವಂತ ದರಿದ್ರನಾಗುವದು ತುಂಬ ವಿರಳ. ಆಗರ್ಭ ಶ್ರೀಮಂತಿಕಯಲ್ಲಿಯೇ ಹುಟ್ಟಿ ಬಂದ, ಕಡು ದಾರಿದ್ರ್ಯದಲ್ಲಿ ಕಾಲವಾದ ತುಂಬ ಅಪರೂಪದ ವ್ಯಕ್ತಿತ್ವದ ಸಾಧಕರು ಇವರು. 


"ಅವರ ಆ ತೃಪ್ತಭಾದಿಂದ ಕೂಡಿದ, ಕೃತಜ್ಙತಾಭಾವವನ್ನೊಳಗೊಂಡ, ಉಪಕಾರ ಹಾಗೂ ದಯೆ ಇವುಗಳನ್ನು ಅನುಭವಿಸುವ ಮುಖಾಂತರ ಪ್ರಫುಲ್ಲವಾದ, ಸೃಷ್ಟ್ಯಾದಿ ಮಹಿಮೆಗಳನ್ನು ಗುಣಗಳ ಮಹಿಯನ್ನು ತಿಳಿದಾದಾಗ - ಸುಳಾದಿಗಳಲ್ಲಿ ಬಂದ ಹೊಸವಿಷಯವನ್ನು ಅರೆತಾಗ ಬಂದ ಆ ಸುಂದರ ನಗು *ದೇವರನ್ನೇ ಕಂಡಾಗ   ಇರುವ ಸಂತೃಪ್ತ ನಗು*  ಹೀಗೇ ಇರಬಹುದು ಎಂದು ಅಜ್ಙರಾದ ನಾವು ಭಾವಿಸಬಹುದು" ಎಂದು ಅನೇಕರು ನನಗೆ ತಿಳಿಸುವ ಮಾತು. 


*ಸಾಧನೆಯ ಖಗ....*


ಸಾಧನೆ ಎಂದರೆ ಏನು ಎಂದೇ ತಿಳಿಯದ ಅವಸ್ಥೆ ಸಿರಿವಂತನಾದಾಗ, ದರಿದ್ರನಾದಾಗ ಸಾಧನೆಯ ಉತ್ತುಂಗದ ಅಕಾಶದಲ್ಲಿ ವಿಹರಿಸುವ ಖಗ ಗರುಡ ಎಂದಾದರೆ ತಪ್ಪಾಗದಂಥ  ಆದರ್ಶ ವ್ಯಕ್ತಿತ್ವ ಇವರದು. 


ಸಿರಿವಂತಿಕೆ ತುಂಬಿದಾಗ *ಕಾಂಗ್ರೆಸ್ ಲೀಡರ್* ಆಗಿ  ಹೋರಾಡುವ ವ್ಯಕ್ತಿ, ದಾರಿದ್ರ್ಯ ಅಪ್ಪಳಿಸುವ ಹೊತ್ತಿನಲ್ಲಿಯೆ *ಕಮಲಾಕ್ಷನ ಪಕ್ಷದಿ ಮೈ ಮನೋವೃತ್ತಿಗಳನ್ನು* ಸಮರ್ಪಿಸಿಕೊಂಡು ತನ್ನ ಪರಿಸರ ಮೀರದೆ ಭಗವದ್ಭಕ್ತರ ಪುಟ್ಟ ಗುಂಪಿನ ಲೀಡ್ ಮಾಡುವ ವ್ಯಕ್ತಿಯಾಗಿ ಅರಳಿದ *ಕಮಲ - ಕಮಲಾಕ್ಷನ ಪಕ್ಷದಿ ಭಕ್ತಿಯ ಬಾವುಟ ಹಾರಿಸಿದ*   ನಮ್ಮ ಸಿರಿವಾರದ ಜಯಣ್ಣ ಅವರು. 


*ಪದ್ಮ (ಕಮಲ) ಸಾಧಕ*


ಕಮಲಾಕ್ಷನಾದ, ಪದ್ಮದಂಥ ಮುಖವಿರುವ, ಪದ್ಮಾವತಿಯ ಪತಿಯಾದ *ಪದ್ಮನಾಭನ ದರ್ಶನಕ್ಕಾಗಿ* ತಮ್ಮ ಎಂಭತ್ತರ ಇಳಿ ವಯಸ್ಸಿನಲ್ಲೂ *ಪದ್ಮಾಸನದಲ್ಲಿ  ಕನಿಷ್ಠ ಮೂರುಗಂಟೆ ಗಾಯತ್ರೀ ಜಪವನ್ನು ಮಾಡುವದನ್ನು*  ಇಂದಿಗೂ ಕಂಡವರನೇಕರು ಇದ್ದಾರೆ.  ಪದ್ಮಾಸನಗೆದ್ದವನಾಗಿ ಪದ್ಮನಾಭನ ಪಕ್ಷದ ಒಂದು ಪುಟ್ಟ ಗುಂಪಿಗೆ ಲೀಡರ್ ಆಗಿದ್ದರು. 


*ಗಲಗಲಿಯಲ್ಲಿ ಛಲವಾದಿ*


ನೂರಾರು ಎಕರೆಯ ಭೂಮಿ, ಭಂಗಾರ, ಬೆಳ್ಳಿ, ಉಳಿದ ವೈಭವ ಮೊದಲಾದ ಸಿರಿವಂತಿಕೆಯ ಉತ್ತುಂಗದ ಮಧ್ಯದಿ ಇರುವಾಗಲೂ ಎಲ್ಲವನ್ನೂ ಕೃಷ್ಣಾರ್ಪಣವೆಂದು  ಊರೂರು, ಕ್ಷೇತ್ರವಾರು, ದೇಶವಾರು ಅಲೆದಾಡಿ ಬಂದದ್ದು ಗಲಗಲಿ ಕ್ಷೇತ್ರಕ್ಕೆ. 


ಬದರಿ ಮೊದಲು ಮಾಡಿ ಉತ್ತರದ ಕ್ಷೇತ್ರ ಸಂಚರಿಸಿ ಬಂದ ಕಾರಣ ಅಲ್ಲಿಯ ಸಾಧಕರ ಪ್ರಭಾವ ತುಂಬ. ಹಾಗಾಗಿ ಗಲಗಲಿಯ ಲಕ್ಷ್ಮೀನರಸಿಂಹನ ಸನ್ನಿಧಿ, ರಾಯರ ಅಂಗಳ, ಪಾಪಹಾರಿ ಕೃಷ್ಣಾನದಿಯ ವಿಶಾಲವಾದ ಹ್ರದದಲ್ಲಿ ನಿಮಿಷ, ಎರಡು ನಿಮಿಷ, ಐದು ನಿಮಿಷ ಹೀಗೆ ಮುಳುಗಿ ಗಾಯತ್ರೀ ಪಠಿಸುತ್ತಾ ಶ್ವಾಸವನ್ನು ಗೆಲ್ಲುವ ಛಲ. 


ನದಿಯಿಂದ ಮೇಲೆ ಬಂದು ಸಂಧ್ಯಾವಂನೆ ಮುಗಿಸಿ, ಗಾಯತ್ರೀಜಪ ಪ್ರಾರಂಭಿಸುವಾಗ  ಮೂಗಿನಲ್ಲಿ ಹುಲ್ಲು ಇಟ್ಟುಕೊಂಡು, ಬಾಯಿ ತೆಗೆಯದೇ ನಿರಂತರ ಗಾಯತ್ರೀ ಜಪಿಸುತ್ತಾ  ಶ್ವಾಸಗೆಲ್ಲುವ ಪ್ರಯತ್ನ. ಈ ತರಹದ್ದೆಲ್ಲ ಈಗಿನವರಾದ ನಮಗೆ ಹುಚ್ಚು ಹುಚ್ಚು ಅನಿಸುತ್ತದೆ. ಆದರೆ ತುಂಬ ವಿಚಿತ್ರ ಆಶ್ಚರ್ಯ ಇದು ಮಾತ್ರ ಸತ್ಯ.  ಹೀಗೆ ಅನೇಕ ವರ್ಷಗಳಕಾಲ ಕಠಿಣ ಸಾಧನೆಯಲ್ಲಿ ಮುಳುಗಿದ ವಿಷಯವನ್ನು ಗಲಗಲಿ ಊರಿನ ಹಿರಿಯ ವೃದ್ಧರು ಇಂದಿಗೂ ನೆನೆಸಿಕೊಳ್ಳುತ್ತಾರೆ. ಆ ಮಟ್ಟದ ಸಾಧಕರು ಇವರು.  


*ಮಾತುಮಾತಿಗೆ ದೇವರ ಉಪಕಾರವನ್ನು ಸ್ಮರಿಸುವ ಮಹಯೋಗಿ....*


ದಿನದಲ್ಲಿ ಕನಿಷ್ಠ ನೂರಾರು ಸಲ ದೇವರ ದೇವತೆಗಳ ಗುರುಗಳ ಉಪಕಾರವನ್ನು ನಿರಂತರ ಸ್ಮರಿಸುವ ಮುಖಾಂತರ ಕಾಯಕ ಯೋಗಿಯಾದ ಮಹಾಯೋಗಿ ಇವರು. ತಮ್ಮ ಸಂಪರ್ಕದ ಪ್ರಭವಳಿಯಲ್ಲಿ ಬಂದ ಎಲ್ಲರಿಗುಹ ಅವರು ಹೇಳುವ ಮೊದಲ ಮಾತುಗಳು ಎಂದರೆ ದೇವರ ಉಒಕಾರ ಎಂಥದ್ದಾಗಿದೆ ಎನ್ನುವದನ್ನೇ.... 


ಈ ದೇಹ ಎಷ್ಟು ಅಪರೂಪ, ಇಂದ್ರಿಯಗಳು ಹಾಗೂ ಮನಸ್ಸಿನ ಕಾರ್ಯ, ವಲ್ಲೇ ಅಂದರೂ ಸಜ್ಜನ ಸಹವಾಸ, ದೋಷದೃಷ್ಟಿಯಾಗಿದ್ದರೂ ಗುಣಗಳನ್ನು ದಯಪಾಲಿಸಿದ ಕಾರುಣ್ಯ,  ಸಾಧನೆಯಿಂದ ವಿಮುಖನಾಗಿ ಓಡಿದಾಗಲೂ ಯೋಗ್ಯತಾನುಸಾರ ದಯಪಾಲಿಸಿದ ಭಕ್ತಿ,  ದೇವರ ಮಾತುಗಳ ವಿರುದ್ಧವಾಗಿಯೇ ನಡೆದರೂ ಜಗದಲ್ಲಿ ನಮಗೆ ದಯಪಾಲಿಸಿದ ಮಾನ ಜೀವನ ಇತ್ಯಾದಿಗಳನ್ನು ಅಖಂಡವಾಗಿ ಸ್ಮರಿಸಬೇಕು, ಸ್ಮರಿಸಿ ಎಂದು ಆದೇಶವನ್ನೂ ನಿರ್ಭಿಡೆ ಇಂದ ಮಾಡುವ ವಿಶಿಷ್ಟ ಕಾಯಕಯೋಗಿ ಆಗಿದ್ದರು ನಮ್ಮ ಸಿರಿವಾರ ಜಯಣ್ಣ ಅವರು.


ಅನೇಕ ಯತಿಗಳು, ಹಿರಿಯ ವಿದ್ವಾಂಸರುಗಳು, ಗಣ್ಯಗೃಹಸ್ಥರು, ಈಗಿನ ಅನೇಕ ಯುವಕರು, ಬಾಲಕರೂ ಏಕಪ್ರಕಾರವಾಗಿ ಹೇಳುವ ಮಾತೆಂದರೆ "ಮಳಖೇಡ, ಮಂತ್ರಾಲಯ, ಚೀಕಲಪರ್ವಿ, ಮುಂತಾದ ಕ್ಷೇತ್ರಗಳಲ್ಲಿ ಸಹಸ್ರ ಸಹಸ್ರ ಜನರ ಗುಂಪಿನ ಮಧ್ಯದಲ್ಲೂ  ಯಾವ ಸಂಕೋಚವೂ ಇರದೇ ಕೌಪೀನದಮೇಲೆಯೇ ಸ್ನಾನವನ್ನು ಮಾಡಿ ನಿರ್ಭಿಡೆಯಿಂದ ಸುಳಾದಿ ಪದಗಳನ್ನು ಜೋರಾಗಿ ಮೈಮರೆತು ತನ್ಮಯರಾಗಿ  ಹೇಳುವ ಧೇನಿಸುವ ಕಲೆ ಏನಿದೆಯಲ್ಲವೆ ಅದೊಂದು ಅದ್ಭುತವೇ ಸರಿ ಎಂದು ಎಲ್ಲರೂ ಒಕ್ಕೋರಳಿಂದ ಸ್ಮರಿಸುವವರೇ. "ಹಿರಿಯರೆಲ್ಲರ ಕರುಣಾಪೂರ್ಣ ಅನುಗ್ರಹ. ಕಿರಿಯರಲ್ಲೂ ಯುವಕರಲ್ಕೂ ತಮ್ಮ ಛಾಪು ಮೂಡಿಸುವ ಅವರ ಕಾರ್ಯ" ಇವುಗಳೇ  ಅವರ ಜೀವಮಾನದ ಶ್ರೇಷ್ಠ ಸಾಧನೆ. 


*ಹಿರಿಯರ ಮಾತಲ್ಲಿ ಇವರು*


ಸಣ್ಣ ವಯಸ್ಸಿಗೆ, ಸರಿಯಾದ ಕಾಲಕ್ಕೆ ಉತ್ತಮ ಮಾರ್ಗದರ್ಶಿ ಗುರು ಸಿಕ್ಕಿದ್ದರೆ ಈ ಜಯ್ಯ ಎಲ್ಲಿ ಇರುತ್ತಿದ್ದನೋ ಎಂದು ಉದ್ಗಾರ ತಗೆದು ಹರಿಸುತ್ತಿದ್ದರಂತೆ ಹಿರಿಯರಾದ ವಿದ್ವನ್ಮಣಿಗಳಾದ ಪರಮಪೂಜ್ಯ ಜಾಲಿಹಾಳ ಕೇಶವಾಚಾರ್ಯರು. 


ವ್ಯಾಸಸಾಹಿತ್ಯದಲ್ಲಿ ಪ್ರಚಂಡ ವಿದ್ವಾಂಸರಾದ, ನ್ಯಾಯವ್ಯಾಕರಣಾದಿ ಶಾಸ್ತ್ರಗಳಲ್ಲಿ ನಿಪುಣರಾದ, ಸದಾಚಾರ ಸದ್ವಿಚಾರಗಳ ಆಗರರಾದ, ದಾಸ ಸಾಹಿತ್ಯದ ಸುಳಾದಿಗಳ ವಿಮರ್ಷಕರಾದ ಪೂಜ್ಯ ಆಚಾರ್ಯರಿಂದ ಅನೇಕ ತತ್ವಗಳನ್ನು ಚರ್ಚೆಮಾಡಿ ತಿಳಿದುಕೊಳ್ಳುವ, ತಿಳಿದದ್ದನ್ನು ಒಪ್ಪಿಸುವ, ಪಂಡಿತರ ಜೊತೆಗೆ ಮಾಡಿದ ಚರ್ಚೆಯನ್ನು ಹೀಗೆಲ್ಲ ಹೇಳಿ ಬಂದೀನಿ ಎಂದು  ಒಪ್ಪಿಸುವ ರೂಢಿಯನ್ನು ಪೂಜ್ಯರ ಕೊನೆಕಾಲದವರೆಗೂ ಇಟ್ಟಿಕೊಂಡಿದ್ದರು. ಮೇಲಿಂದಮೇಲೆ ಗದಗಿಗೆ ಹೋಗಲೇಬೇಕು. ಪೂಜ್ಯರೂ ಸಹ ಪ್ರತಿವರ್ಷವೂ ಸಿರಿವಾರಕ್ಕೆ ಒಂದು ಬಾರಿಯಾದರೂ ಬರಲೇಬೇಕು. ಆರಾರು ಗಂಟೆ ಚರ್ಚೆ ಮಾಡಬೇಕು. ಆ ಚರ್ಚೆಯ ವಿಷಯವನ್ನು ಬರೆದು ಇಟ್ಟುಕೊಳ್ಳಬೇಕು. *"ನನ್ನನ್ನು ಸರಿ ದಾರಿಗೆ ತರಬೇಕು, ನನಗೆ ಸರಿಯಾದ ತತ್ವಗಳನ್ನು ತಿಳಿಸಬೇಕು*  ಎಂಬ ಕಳಕಳಿಯಿಂದ ಅನುಗ್ರಹೋನ್ಮುಖಾರಾಗಿ ನನ್ನಂತಹ ಅತ್ಯಲ್ಪನ ಜೊತೆಗೂ ಮಾತಾಡುತ್ತಿದ್ದರು. ಈವರೀರ್ವರ ಕಾರುಣ್ಯಕೇನೆಂಬೆ" ಎಂದು ಸದಾಕಾಲ ಸ್ಮರಿಸುತ್ತಿದ್ದರು, ಗದ್ಗದಿತರಾಗುತ್ತಿದ್ದರು. 


ಇನ್ನೊಬರು ಯಾರು... ?   ಪೂಜ್ಯ ಮಾಹುಲೀ ಆಚಾರ್ಯರು.


ಆ ಮಟ್ಟದ ಗುರುಭಾವವನ್ನು  ಪರಮಪೂಜ್ಯರಾದ ಜಾಲಿಹಾಳಾಚಾರ್ಯರಲ್ಲಿ ನೆರೆಯೂರಿತ್ತು. ಇದೇ ಭಕ್ತಿ ಹಾಗೂ ಭಾವಗಳನ್ನು ಮಾಹುಲೀ ಆಚಾರ್ಯರಲ್ಲೂ ದೃಢವಾಗಿ ತಳವೂರಿಸಿಕೊಂಡಿದ್ದರು. ಈ ಈರ್ವರು ಇರುವದೇ  ಸಿರಿವಂತಿಕೆಯ ಸಂಕೇತವಾಗಿತ್ತು ಪೂಜ್ಯರಿಗೆ. 


 "ಸಾಧಕನಾದರೆ ಪರಮಪೂಜ್ಯರುಗಳಾದ ಜಾಲಿಹಾಳಾಚಾರ್ಯರಂತೆ ಮಾಹುಲೀ ಆಚಾರ್ಯರಂತೆ ಆಗಬೇಕು" ಹಾಗಾದಾಗ ಈ ಜನಮುದ ಈಕಾಲದ ದಿವ್ಯ ಸಾಧನೆ ನಿಜವಾಗಿ ಸಾಧಕ ಎಂದು ಭಾವಿಸಿದ್ದರು,  ಪೂಜ್ಯರ ದೃಢವಾದ ನಿಲವೂ ಆಗಿತ್ತು...


ಪೂಜ್ಯರಾದ, ನಮ್ಮ ತಂದೆ ಗುರು ಉಪದೇಶಕರೂ ಆದ, ಪೂಜ್ಯರ ಸ್ಮರಣೆ ನಮ್ಮ ಅನಿಷ್ಟಪರಿಹಾರಕ್ಕೆ, ಅಡೆತಡಗಳ‌ನಿವಾರಣೆಗೆ, ಇಷ್ಟಾರ್ಥಗಳ ಈಡೇರಿಕೆಗೆ, ಗುರು ದೇವತಾ ದೇವರುಗಳಲ್ಲಿ ಭಕ್ತಿಗೆ ಕಾರಣವಾಗಿದೆ ಎಂದು ದೃಢವಾಗಿ ನಂಬಿ ಕೆಲವಿಷಯಗಳನ್ನು ತಿಳಿಯುವ ಪ್ರಯತ್ನ ಮಾತ್ರ...


ಜನ್ಮಕೊಟ್ಟ ಜನ್ಮದಾತನಿಗೆ ಅನಂತಾನಂತ ವಂದನೆಗಳು ಮಾತ್ರ ನನ್ನದು..... 


*✍🏽ನ್ಯಾಸ...*

ಗೋಪಾಲದಾಸ

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*