ಕೆಡಿಸುವವನು ನೀನೆ, ಇಡಿಸುವವನು ನೀನೆ, ಕೊಡಿಸುವವನು ನೀನೆ, ಹಿಡಿಸುವವನು ನೀನೇ"*
"ಕೆಡಿಸುವವನು ನೀನೆ, ಇಡಿಸುವವನು ನೀನೆ, ಕೊಡಿಸುವವನು ನೀನೆ, ಹಿಡಿಸುವವನು ನೀನೇ"*
ಕೊಡಿಸುವದು, ಕೆಡಿಸುವದು, ಇಡಿಸುವದು, ಹೀಡಿಸುವದು ಈ ನಾಲಕು ಬಿಟ್ಟು ಮತ್ತೊಂದಿಲ್ಲ. ಎಲ್ಲವೂ ಈ ನಾಲಕರಲ್ಲೇ.
ಯಾವುದೇ ಪದಾರ್ಥಗಳಾಗಿದ್ದರೂ ಈ ನಾಲಕರಲ್ಲೇ ಇರಬೇಕು. ಈ ನಾಲಕನ್ನೂ ನನ್ನಿಂದ ಪಡೆಯಲಾಗುವದಿಲ್ಲ. ಅದು ನನಗೆ ಅನುಭವ ಸಿದ್ಧ. "ನೀನೇ ಕೊಡಬೇಕು ನಿನ್ನಿಂದಲೇ ಆಗುವದು ನಿನ್ನಿಂದಲೇ ಸಿಗುವದು" ಎಂದು ಗೋಪಾಲದಾಸರ ಮಾತು.
ಹಣ ಹೊನ್ನು ಜ್ಙಾನ ಪ್ರೀತಿ ಸ್ನೇಹ ಹೊಲ ಮನೆ ಜನ್ಮ ಗುರು ದೇವರು ಏನೇ ಇದ್ದರೂ ಇನ್ನೊಬ್ಬರು ಕೊಟ್ಟರೇ ಉಂಟು. ಅದು ನನ್ನಲ್ಲಿ ಇಲ್ಲ. ನಾನು ಪಡೆಯಬೇಕು ಎಂದರೂ ಇನ್ನೊಬ್ಬರೇ ಕೊಡಬೇಕು. ನಾನು ಪಡೆದಿದ್ದೇನೇ ಎಂದರೆ ಇನ್ನೊಬ್ಬರಿಂದಲೇ ಇದು ಸತ್ಯ.
ಯೋಗ್ಯವಾದ ಪದಾರ್ಥಗಳನ್ನು ಕೊಡಬೇಕು. ಅದೂ ಇನ್ನೊಬ್ಬರಿಂದಲೇ ಕೊಡಿಸಬೇಕು. ಹಿತವಾದದ್ದನ್ನು ಇಡಬೇಕು. ಪಡೆದವುಗಳನ್ನು ಶಾಶ್ವತವಾಗಿ ಎನ್ನಿಂದ ಹಿಡಿಸಿಕೊಳ್ಳಬೇಕು. ಇಷ್ಟೆಲ್ಲ ನಾನು ಮಾಡಿಕೊಂಡು ಪಡೆಯಲಾರೆ. ಎನಗೆ ಯಾವದು ಯೋಗ್ಯ ತಿಳಿದಿಲ್ಲ. ಹಿತ ಯಾವದು ಗೊತ್ತಿಲ್ಲ. ಯಾವದನ್ನು ಇಟ್ಟುಕೊಳ್ಳಬೇಕು ಯಾವದನ್ನು ಕೆಡಿಸಿಕೊಳ್ಳಬೇಕೂ ಅದೂ ಗೊತ್ತಿಲ್ಲ. ಈ ಅವಸ್ಥೆ ಎನ್ನದು.
ಹೇ ದಯಾನಿಧೆ !!!
ಯಾವದು ಯೋಗ್ಯವಾಗಿದೆ, ನನಗೆ ಯಾವದು ಹಿತ ಅದನ್ನು ನೆಲೆ ಊರುವಂತೆ ಮಾಡಿ ಎನ್ನಲ್ಲಿ ಇಡಿಸು. ಆ ಪದಾರ್ಥಗಳನ್ನೇ ಎನ್ನವರಲ್ಲಿ ಪ್ರೇರಿಸಿ ಅವರ ಮುಖಾಂತರ ಎನಗೆ ಕರುಣಿಸು ಕೊಡಿಸು. ಯಾವದು ಹಿತವೋ ಅದನ್ನು ಉಳಿಸುಲಿಕೊಳ್ಳುವಂತೆ ಮಾಡು. ಯಾವದು ಅಹಿತವೋ ಅದನ್ನು ಕೆಡಿಸಿ ಹಾಕು.
*ನಿನ್ನನ್ನು ಪ್ರೀತಿಸಿದರೆ ಎನಗೆ ಎಲ್ಲವೂ ಇದೆ. ನಿನ್ನ ಬಿಟ್ಟು ಬೇರೆಯದನ್ನು ಪ್ರೀತಿಸಿದರೆ ನೀನೂ ಇಲ್ಲ, ಅದುವೂ ಇಲ್ಲ.*
ಎನಗೆ ಸಿಗುವದು. ಎನ್ನಲ್ಲಿ ಉಳಿಯುವದು. ಉಳಿದಿರೋದು ಕೆಡುವದು, ಉಳಿಸುವದು. ಉಳಿದಿರೋದು ಹಿಡಿಸುವದು ಎಲ್ಲವೂ ನಿನ್ನಿಂದಲೇ. ನೀನೇ ದಯಪಾಲಿಸು.
ಎನಗೆ ಯಾವದು ಹಿತ ನಿನಗೆ ಗೊತ್ತು. ನಿನಗೆ ಯಾವದು ಪ್ರಿಯ ಎನಗೆ ಗೊತ್ತು. ನಿನಗೆ ಪ್ರಿಯವಾದದ್ದು ನಾನು ಮಾಡಲಾರೆ ಅಪೇಕ್ಷಿಸಲಾರೆ ಎಂದು ನೀನು ಎನ್ನನು ಉಪೇಕ್ಷಿಸಬೇಡ. ಕರುಣಿಸು ಎಂದು ಗೋಪಾಲದಾಸರು ದೇವರ ಸನಿಹ ಮೊರೆ ಇಡುತ್ತಾರೆ.
*✍🏼✍🏼✍🏼ನ್ಯಾಸ*
(ಗೋಪಾಲದಾಸ.
ವಿಜಯಾಶ್ರಮ, ಸಿರವಾರ)
Comments