*ಹತ್ತಿರ ಬಂದವರಿಗೆ ಎಲ್ಲವನ್ನೂ ಸುರಿಸು, ದೂರ ಹೋದವರಿಗೆ ಎಲ್ಲವನ್ನೂ ಹರಿಸು*
"ಪರೋಪಕಾರಾರ್ಥಮಿದಂ ಶರೀರಮ್" ಈ ನಮ್ಮ ಶರೀರ ಪರೋಪಕಾರಕ್ಕಾಗಿ. ಪರೋಪಕಾರ ಜೀವನದ ಅನೇಕ ಧ್ಯೇಯಗಳಲ್ಲಿ ಒಂದು.
"ಪರೋಪಕಾರಃ ಪುಣ್ಯಾಯ" *ಪರೋಪಕಾರ ಇರುವದೇ ಮಹಾ ಪುಣ್ಯಕ್ಕಾಗಿ. ಪರೋಪಕಾರ ಅತೀಶ್ರೇಷ್ಠ ಸಾಧನೆ.
ಪುಣ್ಯ ಪಾಪಗಳ ಬಂಧ ಇಲ್ಲ. ಸ್ವಾರ್ಥ ಶೂನ್ಯ. ಯಾವ ಕೊರತೆಗಳೂ ಇಲ್ಲ. ಹಾಗಿದ್ದರೂ ನಿರಂತರ ಅನಂತಾನಂತ ಉಪಕಾರದಲ್ಲಿ ತೊಡಗುವ ನಮ್ಮ ಸ್ವಾಮಿ ಶ್ರೀಹರಿ. ಇದು ಅವನ ಕಾರುಣ್ಯ.
ಹಾಗೆಯೇ ದೆವತೆಗಳು, ಋಷಿಗಳು, ಮುನಿಗಳು, ಎಲ್ಲರೂ ತಮ್ಮ ನಂಬಿದ ಜನರಿಗೆ ಸಾಧ್ಯವಿರುವಷ್ಟು ಉಪಕಾರವನ್ನೇ ಮಾಡುತ್ತಾರೆ. ಉಪಕಾರ ಮಾಡುವದೇ ಅವರ ಉಸಿರು.
ಇಂದು ನಮ್ಮ ಪರಮ ಗುರುಗಳ ಜೀವನದಲ್ಲೂ ಅನೇಕ ನಿದರ್ಶನಗಳನ್ನು ಕೇಳುತ್ತೇವೆ. "ಜ್ಙಾನಕಾಗಿ ಅವರ ಶಿರವು, ದಾನಕಾಗಿ ಅವರ ಕರವು, ದಯೆಗಾಗಿ ಅವರ ದೃಷ್ಟಿಯು" ಎಂದು. ಹೀಗೆ ಸಜ್ಜನರ ಸಾತ್ವಿಕರ ಒಂದು ಧ್ಯೇಯ ಸಾಧ್ಯವಿರುವಷ್ಟು ಉಪಕಾರ ಮಾಡುವದೇ.
ನಮ್ಮವರಾಗಿ ನಮ್ಮ ಹತ್ತಿರ ಇದ್ದರಂತೂ ಉಪಕಾರ ಮಾಡುವದೇ. ಮಾತಿನಿಂದ , ಹಣದಿಂದ, ಜ್ಙಾನದಿಂದ, ಧರ್ಮದಿಂದ, ಧೈರ್ಯ ಹೇಳಿ, ಇತ್ಯಾದಿ ಇತ್ಯಾದಿ..
ನಮ್ಮವನಾದ ವ್ಯಕ್ತಿ ಕಾರಣಾಂತರಗಳಿಂದ ದೂರಾದರೂ ಅವನಿಗೆ *ಎಲ್ಲ ರೀತಿಯಿಂದ ಒಳ್ಳೆಯದಾಗಲಿ* ಎಂದಾದರೂ ಹರಿಸುವದೇ. ಹಾಗಾದಾಗ ಮಾತ್ರ ಅವನು ಸಜ್ಜನ.
ಗುರು- ಶಿಷ್ಯ. ಶಿಷ್ಯ ಮಹಾ ಗುರು ಭಕ್ತ. ನಿರಂತರ ಅಧ್ಯಯನ ಶೀಲ. ಆ ಗುರುವಿನ ಅನುಗ್ರಹದಿಂದ ಕೊನೆಗೆ ಮಹಾ ಪ್ರಚಂಡ ವಿದ್ವಾಂಸನಾದ.
ದೈವ ವಶಾತ್ ಶಿಷ್ಯ ಸಣ್ಣದಾದ ವೈಮನಸ್ಯದಿಂದ ಗುರುಗಳಿಂದ ದೂರಾದ. ಗುರುಗಳನ್ನು ನಿಂದಿಸಿದ. ಗುರುಗಳನ್ನು ದ್ವೇಶಿಸಲು ಆರಂಭಿಸಿದ. ಗುರುದ್ವೇಶಕ್ಕೆ ಫಲವಾಗಿ ಮಹಾರೋಗಗ್ರಸ್ತನಾದ.
ಉಪಕಾರವನ್ನೇ ಉಸಿರಾಗಿಸಿಕೊಂಡು ಗುರುಗಳು ಮಾತ್ರ. ಮಾಸಾಶನ ಕಳಿಸುತ್ತಾ ಇದ್ದರು, ದವಸ ಧಾನ್ಯ ಕಳಿಸುವದು ಎಂದಿಗೂ ತಪ್ಪಿಸಲೇ ಇಲ್ಲ. *ನನ್ನನ್ನು ದ್ವೇಶಿಸಿ ನನ್ನಿಂದ ದೂರಾಗಿದ್ದರೂ ಆ ಶಿಶ್ಯನಿಗೆ ನಿರಂತರ ಒಳಿತಾಗಲಿ* ಎಂದೇ ಹರಿಸಬೇಕು.
ಗುರುಗಳ ನಿರ್ಮಲ ಮನಸ್ಸಿನಲ್ಲ ಉಪಕಾರದ ಹಾರೈಕೆಗೆ , ಮಲಿನ ಶಿಷ್ಯ ತನ್ನ ಮಲಿನವನ್ನು ನಶಿಸಿಕೊಂಡ, ರೋಗ ದೂರಾಯ್ತು. ಸದ್ಬುದ್ಧಿ ಬಂತು, ಗುರುಗಳ ಹತ್ತಿರ ಓಡಿ ಬಂದ. ಗುರುಗಳಲ್ಲಿ ಮತ್ತೆಹಾ ಭಕ್ತಿ ಮಾಡಿದ. ಎಲ್ಲವನ್ನೂ ಪಡೆದುಕೊಂಡ. ಕೊನೆಗೆ ಉದ್ದಾರನೂ ಆದ.
ಹೀಗೆ ಸನಿಹದ ವ್ಯಕ್ತಿಗಳಿಗೂ ನೇರವಾಗಿ ಉಪಕಾರ ಮಾಡುವ, ದೂರದ ವ್ಯಕ್ತಿಗೂ ಹರಿಸುವವರೇ ನಿಜವಾದ ಹಿತೈಷಿಗಳು. ಇದುವೇ ಹಿತೈಷಿಯಾಗುವ ಸಜ್ಜನನ ಒಂದು ಮಹಾ ಧರ್ಮ.
ಅವರುಗಳೆ ತಂದೆ ತಾಯಿ, ಆತ್ಮೀಯ ಮಿತ್ರ, ಉದ್ಧಾರಕ ಗುರು, ಪ್ರೇರಕ ದೇವತಾ, ದೇವರುಗಳು. ಅವರೆಲ್ಲರ ನಿರ್ನಿಮಿತ್ತ ಉಪಕಾರಕ್ಜೆ ನಾನು ನಿರಂತರ ಚಿರರುಣಿ.
*✍🏼✍🏼✍🏼ನ್ಯಾಸ*
ಗೋಪಾಲದಾಸ
ವಿಜಯಾಶ್ರಮ, ಸಿರವಾರ)
Comments