*ಓ ಸುಲಭನೇ !!!! ನಿನ್ನಷ್ಟು ಸುಲಭರು ಯಾರು ಇರಲಿಕ್ಕಿಲ್ಲ ಅಲ್ವೇ....*
ಹಿತವಾದದ್ದು ಒಳಿತಾದದ್ದು ಅಂತ ಏನಿದೆ ಅದು ಎಂದಿಗೂ ದುರ್ಲಭವೇ. ಅಹಿತವಾದದ್ದು ಕೆಟ್ಟದ್ದು ಅಂತ ಏನೇನಿದೆ ಅದೆಲ್ಲವೂ ಅತ್ಯಂತ ಸುಲಭವೇ.
ಅಂತೆಯೇ ಧರ್ಮ ಅತ್ಯಂತ ದುರ್ಲಭ. ಸತ್ಯ ದುರ್ಲಭ. ದಯೆ ಕ್ಷಮೆ ದುರ್ಲಭವೇ. ಸಹನೆ ಅತೀ ದುರ್ಲಭ. ಜ್ಙಾನ ಇದುವೂ ದುರ್ಲಭವೇ. ಅಧರ್ಮ, ಅಜ್ಙಾನ, ದ್ವೇಶ, ಮಾತ್ಸರ್ಯ, ಮೊದಲಾದ ಎಲ್ಲವೂ ಅತ್ಯಂತ ಸುಲಭವೇ ಆಗಿದೆ ಇಂದಿನ ಕಾಲದಲ್ಲಿ.....
ಇಂದಿನ ಕಾಲದಲ್ಲಿ ನಮ್ಮ ಬ್ರಾಹ್ಮಣ ಯುವಕರಿಗೆ ಓದು ದುರ್ಲಭ, ಕೆಲಸ ದುರ್ಲಭ, ಧರ್ಮ ದುರ್ಲಭ, ಮದುವೆ ದುರ್ಲಭ, ಸೌಖ್ಯ ದುರ್ಲಭ, ಹಣ ದುರ್ಲಭ, ಪ್ರತಿಷ್ಠೆ ಕೀರ್ತಿಗಳೂ ದುರ್ಲಭ, ಶಾಂತಿ ಸಮಾಧಾನ ದುರ್ಲಭ, ಸಂಧ್ಯಾವಂದನೆ ಪೂಜೆ ಮಹಾದುರ್ಲಭ, ಪಾಠ ಉಪನ್ಯಾಸಗಳಂತೂ ಹೇಳತೀರದಷ್ಟು ದುರ್ಲಭ. ಹೀಗೆ ಇಂದಿನ ಯುವಕರು ಪಡೆಯಬೇಕಾದದ್ದು ಏನೇನಿದೆ ಅದೆಲ್ಲವೂ ದುರ್ಲಭವೇ ಆಗಿದೆ.
ಉತ್ತಮ ಸ್ನೇಹಿತರು ಸಿಗುವದು ದುರ್ಲಭ. ಸ್ನೇಹ ಬೆಳಿಸಿಕೊಳ್ಳುವದು ಇನ್ನೂ ದುರ್ಲಭ. ಸ್ನೇಹ ಉಳಿಸಿಕೊಳ್ಳುವದಂತೂ ಮಹಾ ದುರ್ಲಭ. ಇದೇರೀತಿ ಬಂಧುಗಳು, ಕುಲ, ಸಮಾಜ, ಕುಲ ಗುರುಗಳು, ಆಪ್ತರು, ಹಿತೈಷಿಗಳು, ಮಾರ್ಗದರ್ಶಕರು, ಪ್ರತಿಯೊಂದೂ ದುರ್ಲಭವೇ.....
*ಕೆಟ್ಟದ್ದನ್ನು ಹೇಳುವವರು ನೂರು ಜನರು ಸಿಗಬಹುದು, ಸಿಕ್ಕೇ ಸಿಗುತ್ತಾರೆ. ಒಳಿತನ್ನು ಹೇಳುವವರು ಸಿಗಲ್ಲ. ಸಿಕ್ಕರೂ ಮಾತು ಕೇಳಲು ಮನಸ್ಸೇ ಆಗಲ್ಲ.... ಅನಾಯಾಸೇನ ಅವರನ್ನು ದ್ವೇಶಿಸುವದೂ ಆಗಬಹುದು.*
ಯುವಕರಿಗೆ ಅಹಿತವಾದದ್ದು ಏನಿದೆ ಸುಲಭವಾಗಿ ಕೈಗೆ ಸಿಗುವಂತಾಗಿದೆ... ಹಿತವಾದ್ದು ಏನೇನಿದೆ ಅದೆಲ್ಕವೂ ದುರ್ಲಭವೇ ಆಗಿದೆ... ಈ ಎಲ್ಲ ಮಾತುಗಳೂ ಒಪ್ಪುವಂತಹ ಮಾತೇ....
ಇಷ್ಟೆಲ್ಲದರ ಮೇಲೆ ಪರಮಹಿತವಾದದ್ದು ಒಂದಿದೆ ಅದು.. ?? ಹಿತವಾದದ್ದೇ ದುರ್ಲಭ ಎಂದಾದಾಗ ಪರಮ ಹಿತವಾದದ್ದು ಅತ್ಯಂತ ದುರ್ಭರವೇ ಆಗಿರುತ್ತದೆ... ಎಂದೇನಾದರೂ ಭಾವಿಸಿದ್ದರೆ ಅದು ತಪ್ಪು ಎಂದೆನಿಸಬಹುದೇನೋ...
ಹಾಗಾದರೆ ಪರಮ ಹಿತವಾದದ್ದು ಯಾವದು.. ???
*ಪರಮಾತ್ಮನೇ ಪರಮಹಿತ.*
ಪರಮ ಹಿತನಾದ ಪರಮಾತ್ಮ ಸುಲಭನೋ, ದುರ್ಲಭನೋ, ಅತ್ಯಂತ ದುರ್ಲಭನೋ... ?? ಮೂರೂ ಅಲ್ಲ ಅನ್ನುತ್ತದೆ ಶಾಸ್ತ್ರ. ಹಾಗಾದರೆ ಏನಾಗಿದ್ದಾನೆ... ??? *ಸುಲಭರಲ್ಲಿ ಅತಿಸುಲಭ* ಎಂದೇ ಹೇಳತ್ತೆ "ಶ್ರೀಮದಾಚಾರ್ಯರ ಶಾಸ್ತ್ರ" ಎಂದು ದಾಸರಾಯರು ಉದ್ಗಾರ ತಗೆಯುತ್ತಾರೆ.
"ಸ್ಮರಣಂ ಸರ್ವದಾಯೋಗ್ಯಂ" ಭಗವಂತನ ನಾಮಸ್ಮರಣೆ ನಿಂತಲ್ಲಿ ಕುಳಿತಲ್ಲಿ ಮಲಗಿದಲ್ಲಿ ಓಡಾಡುವಾಗ ಏನು ಮಾಡುವಾಗಲೂ ಅತ್ಯಂತ ಸುಲಭವಾಗಿ ಮಾಡುವಂತಹದ್ದು.
ಪ್ರತಿಯೊಂದಕ್ಕೂ ದುಡ್ಡುಬೇಕು. ಪ್ರತ್ಯೇಕ ಸಮಯಬೇಕು. ಮಡಿ ಮೈಲಿಗೆ ಎಂಬುವದು ಬೇಕು. ಈ ಭಗವನ್ನಾಮ ಸ್ಮರಣೆಗೆ ಮಾತ್ರ ಪ್ರತ್ಯೇಕ ದುಡ್ಡು ಖರ್ಚಿಲ್ಲ. ಪ್ರತ್ಯೇಕ ಸಮಯ ಮೀಸಲು ಇಡುವ ಅಗತ್ಯತೆ ಇಲ್ಲ. ಮಡಿ ಮೈಲಿಗೆ ಆಗಲ್ಲ ಹೋಗಲ್ಲ ಎಂದು ಹೇಳಿ ತಪ್ಪಿಸಿಕೊಳ್ಳಲು ಆಸ್ಪದವಿಲ್ಲ. ಈ ಸಮಯದಲ್ಲೇ ಆಗಬೇಕು, ಆ ಸಮಯದಲ್ಲಿ ಆಗುವದಿಲ್ಲ ಎಂಬ ನಿಯಮಾಳಿಗಳು ಇಲ್ಲ. ಇವರೇ ಮಾಡಬೇಕು ಅವರೇ ಮಾಡಬೇಕು ಎಂಬುವದೂ ಇಲ್ಲ. ಇಷ್ಟು *ಸುಲಭವಾದದ್ದರಲ್ಲಿ ಸುಲಭವಾಗಿದೆ ಪರಮ ಹಿತವಾದ ಭಗವನ್ನಾಮಸ್ಮರಣೆ.* ಆದರೂ ನಾವು ಮಾಡಲ್ಲ,ನಮಗೆ ಬರಲ್ಲ ಅದು ನಮ್ಮ ಹಣೇ ಬರಹ.
ಈ ಪರಮ ಸುಲಭವಾದ ನಾಮಸ್ಮರಣೆ ಬರಲೋ ಅಥವಾ ದುರಗಲಭವಾದ ಎಲ್ಲವನ್ನೂ ಪಡೆಯಲೋ ಒಂದು ಉಪಾಯವನ್ನಂತೂ ಮಾಡಬಹುದು. ಅದು ಯಾವದು ಉಪಾಯ ಎಂದರೆ.. ??
ವಿಷ್ಣು ಸಹಸ್ರ ನಾಮದಲ್ಲಿ ಬಂದ ಒಂದು ನಾಮ *ಸುಲಭ* ಎಂದು. ಆ ಸುಲಭ ಎಂಬ ನಾಮದಿಂದ ನಿರಂತರ ಶ್ರೀಹರಿಯನ್ನು ಚಿಂತಿಸುವದು ಏನಿದೆ ದುರ್ಲಭ ಎಂದೇನೇನಿದೆ ಅದೆಲ್ಲವನ್ನೂ ಸುಲಭಗೊಳಿಸಲು ಸಾಧ್ಯ.
ಪರಮ ಹಿತವಾದ ಸುಲಭದಲ್ಲಿ ಅತ್ಯಂತ ಸುಲಭವಾದ ನಾಮಸ್ಮರಣೆಯಿಂದಾರಂಭಿಸಿ, ಅತ್ಯಂತ ದುರ್ಲಭವಾದ ಧರ್ಮ, ಸತ್ಯ, ಸಹನೆ, ದಯೆ, ಕ್ಷಮಾ, ಪರೋಪಕಾರ..
ಐಶ್ವರ್ಯ, ಮದುವೆ, ಹಣ, ಸತ್ಸಂತಾನ, ಶಾಂತಿ, ಸಮಾಧಾನ, ಸಮೃದ್ಧಿ, ತೃಪ್ತಿ...
ಪೂಜೆ, ಜಪ, ಯಜ್ಙ, ಅನ್ನದಾನ, ದ್ರವಿಣದಾನ, ಜಲದಾನ, ಸಮಯದಾನ...
ಪಾಠ ಪ್ರವಚನ, ಯಥಾರ್ಥಜ್ಙಾನ, ದೃಢವಾದ ಭಕ್ತಿ, ಸ್ಥಿರವಾದ ಮೋಕ್ಷ ಮೊದಲು ಮಾಡಿ ಎಲ್ಲವೂ ಸುಲಭವಾಗುವದು ಶ್ರೀಹರಿಯನ್ನು *ಸುಲಭ* ಎಂದು ಚಿಂತಿಸುವದರಿಂದ...
ಇಂದಿನಿಂದ ನಿತ್ಯ ಶ್ರೀಹರಿಯನ್ನು ನಮಸ್ಕಾರ ಮಾಡುವಾಗ "ಈಗಾಗಲೇ ನ್ಯಾಸಗಳ ಮುಖಾಂತರ ರೂಢಿಸಿಕೊಂಡ ಅನೇಕ ನಾಮಗಳ ಜೊತೆಗೆ *ಸುಲಭ* ಎಂಬ ನಾಮವನ್ನೂ ಜೋಡಿಸಿಕೊಳ್ಳೋಣ" ಅಲ್ಲವೇ..
*ಓ ಸುಲಭನೇ...!! ಜಗತ್ತಿನ ಸೃಷ್ಟ್ಯಾದಿಗಳನ್ನೇ ಅತ್ಯಂತ ಸುಲಭವಾಗಿ ಮಾಡುವ ಹೆದ್ದೊರೆಯೇ ನಿನಗೆ ಕೋಟಿ ಕೋಟಿ ನಮಸ್ಕಾರಗಳು, ಅನಂತಾನಂತ ವಂದನೆಗಳು 🙏🏽🙏🏽* ಎಂದು ನಮಸ್ಕಾರಗಳನ್ನು ಸಲ್ಲಿಸೋಣ.
*✍🏽✍🏽✍🏽ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ. ಸಿರವಾರ.
Comments