*ಆತ್ಮೀಯತೆ ಇರುವಲ್ಲಿಯ ಬಲ, ಕಳೆದುಕೊಂಡಾಗ ಇರುವದಿಲ್ಲ*
ಆತ್ಮೀಯತೆ ಇರುವಲ್ಲಿ ಹೇಗೆಯೆ ಇದ್ದರೂ ಎಲ್ಲವೂ ಸರಿಯಾಗಿಯೇ ಕಾಣುತ್ತದೆ. ಉತ್ಕೃಷ್ಟವಾಗಿಯೇ ಕಾಣುತ್ತದೆ. ಆತ್ಮೀಯತೆ ಮಾಯವಾಯಿತೋ ಎಷ್ಟೇ ಉತ್ಕೃಷ್ಟವಾಗಿದ್ದರೂ ಅದು ಅಸಡ್ಢೆಯಾಗೆ ಕಾಣುತ್ತದೆ. ಆತ್ಮೀಯರ ಪರಸ್ಪರ ಕ್ಷುದ್ರಮಾತುಗಳೂ ಉತ್ತಮ ವಿಚಾರಗಳಾಗಿ ಗೋಚರಿಸಬಹುದು, ಅನಾತ್ಮೀಯರ ಅತ್ಯುತ್ಕೃಷ್ಟ ವಿಚಾರಗಳೂ ಅತೀಕ್ಷುದ್ರವಾಗಿ ಕಣಬಹುದು. ಇದುವೇ ಆತ್ಮೀಯತೆಯ ಬಲ ಸಾಮರ್ಥ್ಯಗಳು.
ಆತ್ಮೀಯತೆ ಇರುವಲ್ಲಿ ಭರವಸೆ ವಿಶ್ವಾಸಗಳು ಇರುತ್ತವೆ. ಆತ್ಮೀಯತೆ ಕಡಿಮೆ ಆಯಿತೋ ಭರವಸೆ ವಿಶ್ವಾಸಗಳು ಹೋಗಿಬಿಡುತ್ತವೆ. ಭರವಸೆ ವಿಶ್ವಾಸಗಳೇ ಎತ್ತರಕ್ಕೆ ಒಯ್ಯಬಹುದಾದ, ಗೆಲ್ಲಿಸಬಹುದಾದ ಒಂದುತ್ತಮ ಸಾಮಗ್ರಗಳು. ದೇವರು ಇಂದಿಗೂ ನಮಗೆ ಕಂಡಿಲ್ಲ, ಮಾತಾಡಿಲ್ಲ, ಮೀಟಿಂಗ್ ಮಾಡಿಯೇ ಇಲ್ಲ ಆದರೂ ದೇವರಲ್ಲಿ ಒಂದು ಆತ್ಮೀಯತೆ ಅದರ ಮುಖಾಂತರ ಉಂಟಾದ ವಿಶ್ವಾಸ ಹಾಗೂ ಭರವಸೆ ಇವುಗಳಿಂದಲೇ ನಮ್ಮ ನೂರಾರು ತರಹದ ಸಾವಿರಾರು ಕಷ್ಟಗಳನ್ನೂ ಗೆದ್ದು ಸುಖವಾಗಿ ಇದ್ದೆವೆ. ಅದೇರೀತಿ ಅನೇಕ ಮಿತ್ರರು, ಗುರುಗಳು, ಸಂಬಂಧಿಗಳು ಇತ್ಯಾದಿಗಳಲ್ಲಿ ಇರುವ ಆತ್ಮೀಯತೆ ಹಾಗೂ ವಿಶ್ವಾಸ ಭರವಸೆ ಇವುಗಳಿಂದಲೇ ಇಂದಿನ ಜೀವನದಲ್ಲಿ ಮೇಲುಗೈಯನ್ನು ಪಡೆದಿದ್ದೇವೆ.
ಒಂದು ಪುಟ್ಟ ಕಥೆ.....
ರಾಜಸ್ಥಾನದ ಮರಳುಗಾಡಿನಲ್ಲಿ ಒಬ್ಬ ಕುರುಡ ಭಿಕ್ಷುಕ ಸಂಚಾರ ಮಾಡುತ್ತಿರುತ್ತಾನೆ. ದೈವಾನುಗ್ರಹ ಅವನಿಗೆ ಕಣ್ಣಿದ್ದ ಭಿಕ್ಷುಕ ಜೊತೆಗೂಡುತ್ತಾನೆ. ಕಣ್ಣಿದ್ದವನಮೇಲೆ ಕಣ್ಣು ಇದೆ ಎಂದು ತುಂಬ ಭರವಸೆ, ವಿಶ್ವಾಸ. ಅವನು ಹೇಳಿದ್ದು ಕೇಳುತ್ತಾ ಸಾಗುತ್ತಿರುತ್ತಾನೆ.
ಕಣ್ಣಿದ್ದವ ಒಂದು ದಿನ ಕೇಳುತ್ತಾನೆ ಈ ಮರಳಿನಲ್ಲಿ ಹೇಗೆ ಇಷ್ಟು ದಿನಾ ಕಾಲ ಕಳೆದೆಯೊ ಮಾರಾಯ..??? ಆಗ ಕುರುಡ ಉತ್ತರಿಸಿದ "ನನ್ನ ಸನಿಹ ಇದೊಂದು ಅದ್ಭುತ ಅಂಕುಡೊಂಕಾದ ಸುಂದರ ಕೋಲು ಇದೆ ಅದರ ಸಹಾಯ, ಆ ಕೋಲಿನಮೇಲಿನ ವಿಶ್ವಾಸ, ಅದು ನನ್ನ ಬೀಳಿಸದು ಎಂಬ ಭರವಸೆ ಇವುಗಳಿಂದ ಸರಾಗವಾಗಿ ಓಡಾಡಿದೆ" ಎಂದು.
ಕಣ್ಣಿದ್ದವ ಆ ಕೋಲನ್ನು ನೋಡಿದ ಎಷ್ಟು ಅದ್ಭುತವಾಗಿದೆ ಎಂದು ಕೊಂಡಾಡಿದ. ಮುಟ್ಟಿ ಸವರಿದ. ಕಣ್ಣಿದ್ದವನ ಕೋಲಿನಮೇಲಿರುವ ಆ ಪ್ರೀತಿಯನ್ನು ಗಮನಿಸಿ, ಕಣ್ಣಿಲ್ಲದವ ಹೊಟ್ಟೆ (jalousie) ಉರುಕೊಂಡ.
ಕುರುಡನಿಗೆ ಸಂಶಯ ಮೊಳಕೆಯೊಡೆಯಿತು. ಸಂಶಯ ಒಂದುಬಾರಿ ಸೇರಿತೋ ಆ ಕ್ಷಣಕ್ಕಿ ವಿಶ್ವಾಸ ಕರಗಿತು. ಭರವಸೇ ಹೋಯಿತು. ಆತ್ಮೀಯತೆ ಛಿದ್ರ ಛಿದ್ರವಾಗಿ ಹೋಯಿತು...
ಒಂದು ದಿನ ಕುರುಡ ಆ ಕೋಲು ಕಳೆದುಕೊಂಡ. ಕುರುಡನಿಗೆ ಸಂಶಯ ದೃಢವಾಯಿತು. ಇವನಮೇಲಿನ ಭರವಸೆ ವಿಶ್ವಾಸಗಳು ಮೂಲೆ ಗುಂಪಾಯಿತು. ಕಣ್ಣಿದ್ದವ ಏನು ಹೇಳಿದರೂ ಮೆಚ್ಚನಾದ. ಮಾನಸಿಕವಾಗಿ ತುಂಬಾ ದೂರಾಗಿ ಹೋದರು. ಎಷ್ಟು ಘನತೆ ಇತ್ತೋ ಅಷ್ಟೇ ಯಾಕೆ ಅದರ ದುಪ್ಪಟ್ಟು ಹೆಚ್ಚು ಅಂತರ ಬೆಳೆಯಿತು.
ಒಂದು ದಿನ ಮರಳಿನಲ್ಲಿ ಮಲಗಿದಾರೆ, ಕುರುಡ ಬೆಳಗಿನ ಝಾವ ೩ ಕ್ಕೆ ಎದ್ದಿದಾನೆ. ಇವನಸುತ್ತಾ ಕೈ ಆಡಿಸುತ್ತಾನೆ. ಕೋಲು ಹುಡುಕ್ತಾ ಇದ್ದಾನೆ. ಅಷ್ಟರಲ್ಲೇ ಕಣ್ಣಿದ್ದವನ ಪಕ್ಕದಲ್ಲೇ ಕೋಲು ಸಿಕ್ಕೇಬಿಡ್ತು. ಸಂತೊಷಪಟ್ಟ. ಈಗಲೆ ಹೊರಟರಾಯಿತು ಎಂದು ಸಿದ್ಧನಾದ. ಅಷ್ಟರಲ್ಲಿ ಕಣ್ಣಿದ್ದವನಿಗೆ ಎಚ್ಚರವಾಯಿತು. ಏ ಕುರುಡಣ್ಣ ಯಾಕೆ ಅಷ್ಟು ಗಡಿಬಿಡಿಯಿಂದ ಹೊರಟಿಯೋ ಅದೂ ನನ್ನ ಬಿಟ್ಟು...?? ಎಂದು ಅರಚಿದ.
ಕುರುಡ "ನನ್ನ ಕೋಲು ನಿನ್ನ ಹತ್ತಿರ ಇಟ್ಟುಕೊಂಡು, ಇಷ್ಟು ದಿನ ನನಗೆ ಮೋಸ ಮಾಡಿದ್ದೀಯಾ" ಸಾಕು ನಿನ್ನ ಆತ್ಮೀಯತೆ ಎಂದು ಚೆನ್ನಾಗಿ ಬಯ್ತಾ ದೂರ ಓಡಿ ರಭಸದಿಂದ ಹೋಗುತ್ತಿದ್ದ.
ಕಣ್ಣಿದ್ದವ ಕುರುಡನ ಬೆನ್ನು ಹತ್ತಿ ಓಡಿ ಹೇಳಿದ *ಅದು ನಿನ್ನ ಕೋಲು ಅಲ್ಲೋ ಮಾರಾಯ.. ಅದು ಹಾವು ಇದೆ. "ಈ ತಂಪಿಗೆ ಶೆಟೆದು ಮರಗಟ್ಟಿ ಹೋಗಿದೆ. ಅದನ್ನು ಬಿಸಾಡು" ಎಂದು...*
ಸಂಶಯದ ಮುಖಾಂತರ ಭರವಸೆ ವಿಶ್ವಾಸಗಳು ಇಲ್ಲ. ಆತ್ಮೀಯತೆ ಹೋಗಿತ್ತು. ಕಣ್ಣಿದ್ದವನು ಹೇಳಿದ ಮಾತು ರುಚಿಸಲಿಲ್ಲ. ಕೇಳಲು ಸಿದ್ಧನಿಲ್ಲ. ಜೊತೆಗೆ "ನಾ ಬಿಸಾಡಿದಮೇಲೆ ಇದನ್ನು ನೀನೇ ತೋಗೊತೀಯಾ" ಎಂಬ ಅಪನಂಬಿಕೆ. ಅದನ್ನು ತೊಗೊಂಡವನೆ ಓಡಿದ.
ಈಚೆ ಕಣ್ಣಿದ್ದವ ವಿಚಾರಿಸುತ್ತಾ ಕುಳಿತ.. ಪಾಪಾ ಮೊದಲೇ ಕಣ್ಣಿಲ್ಲದವ, ಕಣ್ಣುಳ್ಳ ನನ್ನ ಮೇಲಿನ ವಿಶ್ವಾಸ ಅತಿ ಕ್ಷುದ್ರಕಾರಣಕ್ಕೆ ಕಳೆದುಕೊಂಡ. ಆತ್ಮೀಯತೆ ಛಿದ್ರವಾಗಿ ಹೋಯಿತು. ಈಗೋ ಸೂರ್ಯೋದಯವಾಗುತ್ತಿದೆ. ಸೂರ್ಯನ ಬಿಸಲಿಗೆ ಮರಗಟ್ಟಿದ ಹಾವು ಸಡಿಲವಾಗುತ್ತದೆ. ಅದು ಎಚ್ಚೆತ್ತುಗೊಂಡರೆ ನನ್ನ ಈ ಗೆಳೆಯನ ಸ್ಥಿತಿ ಏನಾಗಬಹುದು ಎಂದು....."
ಆತ್ಮೀಯರು ಏನಿದ್ದರೂ ನಮಗೆ ಹಿತವನ್ನೇ ಬಯಸುವರು. ದಾರಿತಪ್ಪದ ಹಾಗೆ ಕಾಯುವ ಪರಮ ಆತ್ಮೀಯರಾದ ಸಖ ಮಿತ್ರ ಗುರು ದೇವತಾ ದೇವರಲ್ಲಿ ಸಣ್ಣ ಪುಟ್ಟ ಕಾರಣಕ್ಕೆ , ಕ್ಷುದ್ರವಿಷಯಕ್ಕೆ ಸಂಶಯಪಟ್ಟು, ಬಹುದಿನದಿಂದ ಸಂಪಾದಿಸಿದ ಆತ್ಮೀಯತೆಯನ್ನು ಒಂದೇ ಕ್ಷಣದಲ್ಲಿ ನಾಶಮಾಡಿಕೊಳ್ಳುವ ನಾವು, ಎಂಥೆಂಥ ಅನರ್ಥಗಳಿಗೆ ಗುರಿಯಾಗಬಹುದೋ ಏನೋ....
*✍🏽ನ್ಯಾಸ......*
ಗೋಪಾಲದಾಸ
ವಿಜಯಾಶ್ರಮ, ಸಿರಿವಾರ
Comments