ಸದ್ಗುಣಗಳಿಗೆ ಬೆಲೆ ಇಲ್ಲ, ಹಣಕ್ಕಾಗಿ ಧಾವತಿ ಹೆಚ್ಚಿದೆ.*
ಗುಣವಂತಿಕೆ ಬೆಲೆ ಕಳೆದುಕೊಳ್ಳುತ್ತಿದೆ. ಗುಣವಂತ ಸನ್ಮಾರ್ಗ ಬಯಸುವ. ಸನ್ಮಾರ್ಗ ಇಂದಿನ ಜಗತ್ತಿಗೆ ಬೇಡವಾಗಿದೆ. ಸನ್ಮಾರ್ಗವೇ ಬೇಡವಾದಾಗ ಸನ್ಮಸರ್ಗವನ್ನೇ ಬಯಸುವ ಗುಣವಂತನೂ ಜಗತ್ತಿಗೆ ಬೇಡವಾಗಿದ್ದಾನೆ.
ಸಂಧ್ಯಾವಂದನ ಪೂಜೆ ಜಪ ಮಾಡುವವನಿಗೆ ದೊರೆಯದ ಪ್ರಾಶಸ್ತ್ಯ ಹಣವಂತನಿಗೆ ಇದೆ. ಹಣವಂತನಿಗೆ ಇರುವ ಮಾನ ಸೌಕರ್ಯ ಗುಣವಂತನಿಗೆ ಇಲ್ಲವಾಗಿದೆ. ಗುಣವಂತ ಮನೆಯಲ್ಲಿಯೂ ಮಾನ್ಯನಲ್ಲ, ಸಮಾಜದಲ್ಲಿಯೂ ಅಲ್ಲ. ಹಣವಂತ ಜಗದೆಡೆಯಲ್ಲ ಮಾನ್ಯವಂತ.
ಹಣವಂತ ನೂರು ತಪ್ಪು ಎಸಗಿದರೂ ನಡೆಯುತ್ತದೆ. ಗುಣವಂತನ ಒಂದು ತಪ್ಪೂ ದುಬಾರಿಯಾಗುತ್ತದೆ. ಎಲ್ಲ ಸಂಬಂಧಗಳೂ ಹಣದವನ್ನೇ ಅವಲಂಬಿಸಿವೆ. ಈ ನಿಯಮಕ್ಕೇ ದೇವರನ್ನೂ ಎಳೆ ತಂದಾಗಿದೆ. ತಿಮ್ಮಪ್ಪನ ಹಣವಂತನಿಗೆ ಸಿಕ್ಕಷ್ಟು ಸುಲಭ ನಿಸ್ಪೃಹನಿಗೆ ಸಿಗುವದಿಲ್ಲ.
ಏನು ಕೆಲಸ ಮಾಡಿದರೂ ಅದರ ಹಿಂದೆ ಹಣದ, ಕೀರ್ತಿಯ ಆಕಾಂಕ್ಷೆ ತುಂಬಿದೆ.ನಿಃಸ್ಪೃಹತೆ ಎನ್ನುವದು ಮಾತಿನಲ್ಲಿ ಇಲ್ಲ. ಒಂದು ಸಣ್ಣ ನಗು smile ಗೂ ಹಣದ ತಾಳಮೇಳ ಇದೆ.
ಹಣ ಮನೆ ಕೀರ್ತಿ ತನ್ನ ವರ್ಚಸ್ಸುಗಳನ್ನು ಬಳಿಸಿ ಜನರ ಪ್ರೀತಿಯನ್ನು ಪಡೆಯಬೇಕು. ಆದರೆ ಇದಕ್ಕೆ ವಿಪರೀತವಾಗಿ ಇಂದಿನ ಮಾನವ ಬಳಗದವರನ್ನು, ನೆರೆಹೊರೆಯ ಜನರನ್ನು ಬಳಿಸಿ ಹಣ, ಕೀರ್ತಿ,ಸಂಪತ್ತು ಪ್ರತಿಷ್ಠೆಗಳನ್ನು ಸಂಪಾದಿಸುತ್ತಿದ್ದಾನೆ.
ತಂದೆ ತಾಯಿ ಮಕ್ಕಳು, ಅಣ್ಣ ತಮ್ಮ, ಗಂಡ ಹೆಂಡತಿ, ಶಿಕ್ಷಕ ವಿದ್ಯಾರ್ಥಿಗಳು, ಯಜಮಾನ ಮನೆಯ ಆಳು, ಇವರೆಲ್ಲರ ಸಂಬಂಧ ಕೇವಲ ಹಣವನ್ನು ಅವಲಂಬಿಸಿವೆ. ಯಾವ ವ್ಯಕ್ತಿಯಿಂದ ತನಗೆ ಲಾಭವೋ ಅವನನ್ನೇ ಗೌರವಿಸಿ, ಪ್ರೀತಿಸಿ, ಮಾತನಾಡಿಸುತ್ತಾನೆ.
ತನ್ನೆದುರಿನವ ಗುಣವಂತನೇ ಆಗಿರಬೇಕು. ತಾನು ಗುಣವಂತನೇ ಆಗಬೇಕು ಎಂಬ ನಿಯಮ ಸರ್ವಥಾ ಇರುವದಿಲ್ಲ. ಕುಡುಕ ಕೊಲೆಗಾರ ಮೋಸಗಾರ ತಾನು ಅಪೇಕ್ಷೆ ಪಡುವದು ಸತ್ಯವನ್ನು, ವಿಧೆಯತೆಯನ್ನು, ವಿಯವನ್ನು, ಆದರೆ ತಾನ್ನಲ್ಲಿ ಆ ಸತ್ಯ ವಿಧೇಯತೆ ವಿಯ ಇರಲೇಬೇಕು ಎಂಬ ನಿಯಮವೇನಿಟ್ಟುಕೊಂಡಿರುವದಿಲ್ಲ. ಇದು ಹಣದ ಆಟ ಅಥವಾ ದೊಂಬರಾಟ.
ಪರಸ್ಪರ ದೋಷಗಳ ಎರಚಾಟ ಎಷ್ಟಿರತ್ತೊ ಅಷ್ಟು ಬೇಡ ಅದರ ಶತಾಂಶದಷ್ಟೂ ಗುಣಾನ್ವೇಷಣೆಗೆ ಆಸ್ಪದವೇ ಇರಲ್ಲ. "ವಿದ್ವಾನ್ ಸರ್ವತ್ರ ಪೂಜ್ಯತೆ ಮಾಸಿದೆ, ಧನವಾನ್ ಸರ್ವತ್ರ ವಿರಾಜತೆ" ಅಧಿಕೃತವಾಗಿದೆ.
ಹಣಕ್ಕಾಗಿ ಏನು ಮಾಡಲೂ ಸಿದ್ಧ. ಗುಣಕ್ಕಾಗಿ ಬಿಡಿಕಾಸಿನ ಶ್ರಮಕ್ಕೂ ಸಿದ್ಧನಿಲ್ಲ. ಹಣ ಬೇಡ ಎಂದೇನಿಲ್ಲ, ಗುಣ ಅನಿವಾರ್ಯ. ಸ್ವರೂಪತಃ ಗುಣವಂತರು ಸಾತ್ವಿಕ ಜೀವರು. ಹಣವಂತಿಗೆ ಮೇಲಿನ ಪದರು ಮಾತ್ರ. ಗುಣವಂತಿಕೆ ಜೀವನ ಸಾರ. ಹಣವಂತಿಕೆ ಪರಟೆ. ಸಾರದ ರಕ್ಷಣೆಗೆ ಪರಟೆ ಸಿಪ್ಪಿ ಅನಿವಾರ್ಯ. ಗುಣಗಳ ರಕ್ಷಣೆಗೆ ಹಣ ಬೇಕು. ಸಾರವಿಲ್ಲದ ಪರಟೆ ಹೇಗೋ ಹಾಗೆ ಗುಣವಿಲ್ಲದ ಹಣ.
ಇಂದಿನ ಮಕ್ಕಳಿಗೆ ಯುವಕರಿಗೆ ಗುಣವೆಂದರೆ ಏನು, ಗುಣವಂತಿಕೆಯ ಲಾಭವೇಕು. ಹಣದ ಸ್ಥಾನವೇನು, ಹಣವಂತನ ಸ್ಥಾಯಿ ಎಂತಹದ್ದು ತಿಳಿಸಿ ಅರುಹಿಸುವದು ಹಿರಿಯರ ಕರ್ತವ್ಯವಾಗಿದೆ.
*✍🏽ನ್ಯಾಸ..*
ಗೋಪಾಲ ದಾಸ.
ವಿಜಯಾಶ್ರಮ, ಸಿರಿವಾರ.
Comments