*ನಗುವೇ ಒಂದು ಸಂಪತ್ತು...*
ಮನಸ್ಸು ಹಾಗೂ ದೇಹ ಅರೋಗ್ಯಪೂರ್ಣವಾಗಿರಲು ಮೂಲ ಕಾರಣ *ಮನಸ್ಸು ಬಿಚ್ಚಿ ನಗುವದು.* ನಗು ಇದು ಒಂದು ದೊಡ್ಡ ಸಂಪತ್ತು. ಯಾರು ನಗುನಗುತ್ತಾ ನಕ್ಕು ನಗಿಸುತ್ತಾರೆಯೂ, ಅವರು ನಿಜವಾಗಿಯೂ ಸಂಪದ್ಭರಿತರೆ.
ಒಂದು ದೊಡ್ಡ ಸಮಸ್ಯೆ....
ಜಗತ್ತಿನಲ್ಲಿ ಅತ್ಯಂತ ಉಚಿತವಾದದ್ದು ನಗು. ಆ ನಗಲಿಕ್ಕೂ ಆಗದಷ್ಟು ಬ್ಯುಸಿ ನಾವಾಗಿದ್ದೇವೆ. ಒಬ್ಬನೇ ನಕ್ಕರೆ ಅವ ಹುಚ್ಚ. ನಾಲ್ಕು ಜನರ ಮಧ್ಯದಲ್ಲಿ ಸೇರಿ ನಗಲು ಹೇಸಿಗೆ. ನನ್ನ ನಗು ಹೇಳಿಕೊಂಡರೆ ಎಲ್ಲಿ ಕಣ್ಣು ಬಿಡುತ್ತಾರೆಯೋ ಎಂಬ ಹೆದರಿಕೆ. ಅನೇಕರಿಗೆ ನಗುನೇ ಬರುವದಿಲ್ಲ. ನಗುವದು ಎಂದರೆ ನಾಲ್ಕು ಜನ ಸೇರಿದಾಗಲೇ ಎಂದಾಗಿದೆ. ಹಾಗಾಗಿ ನಗುವೇ ಕನಸಾಗಿದೆ........
ಅಪರೂಪದ್ದು ಯಾವದೋ ಅದರ ನೆನೆಪಿಗಾಗಿ ಚಿತ್ರ (photo) ತೆಗೆಯುವದು ರೂಢಿ ಹೌದು ತಾನೆ.... *ಇಂದು ನಗು ನಗುತ್ತಾ ಸೆಲ್ಫಿ ಕ್ಲಿಕ್ಕಿಸಿಗೊಳ್ತೀವಿ ಎಂದರೆ, ಇದರಿಂದಲೇ ಗೊತ್ತಾಗುತ್ತದೆ ನಗು ಎಷ್ಟು ಅಪರೂಪದ್ದು ಆಗಿರಬಹುದು ಎಂದು..... 🤔🤔* ನಗುವಿನಿಂದ ತುಂಬ ದೂರ ಹೋಗುವದು ಬೇಡ.
ದೊಡ್ಡ ಕುಟುಂಬ. ಹಾಸ್ಯಮಯ ಪ್ರವೃತ್ತಿ. ಕೂತು ಹರಟೆ ಹೊಡೆಯಲು, ನಕ್ಕು ನಗಿಸಲು ತುಂಬ ಸಮಯವಿರುತ್ತಿತ್ತು. ಜನ ಎಂಥದ್ದೇ ಕಷ್ಟ ದಾರಿದ್ರ್ಯ ಇದ್ದರೂ ನಗುತ್ತಾ ಸಂಪದ್ಭರಿತರೇ ಆಗಿರುತ್ತಿದ್ದರು. *ಹಣವಿರುತ್ತಿರಲಿಲ್ಲ, ನಗು ಕಡಿಮೆ ಆಗುತ್ತಿರಲಿಲ್ಲ.* ಈಗಿನ ಕಾಲ ತುಂಬ ವಿಚಿತ್ರ *ತುಂಬಿ ತುಳುಕುವಷ್ಟು, ಹೇಗೆ ಖರ್ಚು ಮಾಡಲಿ ಎಂದೇ ಯೋಚಿಸುವಷ್ಟು ಹಣವಿದೆ, ಆದರೆ ನಗು ಸರ್ವಥಾ ಇಲ್ಲವಾಗಿದೆ.* ಅಂದಿನ ದೃಷ್ಟಿ ನಗುವಿನೆಡೆ ಇತ್ತು. ಇಂದಿನ ದೃಷ್ಟಿ ಹಣದೆಡೆಗೆ ಇದೆ..... ನಮ್ಮ ದೃಷ್ಟಿಕೋನ ಖಂಡಿತವಾಗಿಯೂ ಬದಲಾಗಬೇಕಿದೆ.
ನಗುವನ್ನು ಕಸಿದುಕೊಂಡಿದ್ದು ಮೊಟ್ಟ ಮೊದಲಪದಾರ್ಥ ಅದು ಮೊಬೈಲ್. ನಗಲು ಬೇಕಾದ ಕುಟುಂಬವನ್ನು ದೂರ ಮಾಡಿದ್ದು ಎರಡನೇಯದ್ದು. ನಂತರ ಧರ್ಮ ಮಾಡದಿರುವದು ಮೂರನೇಯದ್ದು. ಕೊನೆಯದು ನಗು ಕೊಡುವ ದೇವರನ್ನು ಸರ್ವಥಾ ಮರೆತಿದ್ದು. ಹೀಗಿರುವಾಗ ನಗು ಬರುವದೆಂದು.... *ಹಿಂದೆ ನಾ ಎಂದು ನಕ್ಕಿದ್ದೇನೆ ಎಂದು ಯೋಚಿಸುವಷ್ಟು, ಇಂದಿನ ದಿನಕ್ಕೆ ಬಂದಿದ್ದೇವೆ.*
ಮನಸ್ಸು ಹಗುರಾಗಲು ಕಷ್ಟ ಕಾರ್ಪಣ್ಯ ತೋಡಿಕೊಳ್ಳಬೇಕು. ಕೇವಲ ಕಷ್ಟಗಳನ್ನೇ ತೋಡಿಕೊಳ್ತಾ ಕೂತರೆ ಕೇಳುವವನಿಗೂ ಹುಚ್ಚು ಹಿಡಿದು ಹೋಗುತ್ತದೆ. ಸುಖವನ್ನೂ ಹೇಳೋಣ. ಅವನಿಗೂ ಸುಖ ಹೀಗೆ ಅನುಭವಿಸಬಹುದು ಎಂದು ಅರುಹಿಸೋಣ. ಆಗ ನಮ್ಮ ಮನಸ್ಸು ಹಗುರ, ಎದುರಿನ ವ್ಯಕ್ತಿಯ ಮುಖದಂಚಿನ ಮೇಲೆ ನಗು ನೋಡಿದಾಗ ನಮ್ಮ ತುಟಿಯಂಚಿನ ನಗು, ಆ ನಗುವಿನ ಅನುಭವ, ಆ ಅನುಭವದ ತೃಪ್ತಿಯೇ ಅಮೋಘ.
ಕಷ್ಟಗಳು ಇವೆ. ನಗಲು ಬೇಕಾದ ಸುಖ ಕ್ಷಣಗಳೂ ಇವೆ. ಎಷ್ಟೇ ಸಮಯವಿಲ್ಲದ ದಿನಗಳು ಇರಲಿ ನಿತ್ಯ ಮನಸ್ಸು ಬಿಚ್ಚಿ ಹತ್ತೇ ನಿಮಿಷ ದೇವರ ಮುಂದೆಯೋ, ಕುಟುಂಬದ ಮಧ್ಯದಲ್ಲಿಯೋ, ಗೆಳೆಯರ ಗುಂಪಿನಲ್ಲೋ ಮನಸ್ಸು ಬಿಚ್ಚಿ ಹುಚ್ಚೆದ್ದು ನಗೋಣ, ನಗಿಸೋಣ.
ನಗಲು ಏನಕ್ಕೇ ಖಂಜೂಸುತನ... ನಮ್ಮ ನಗುವೇ ನಮ್ಮನ್ನು ಶ್ರೀಮಂತನನ್ನಾಗಿ ಮಾಡುತ್ತದೆ. ನಮ್ಮವರಿಗೂ ನಗು ಹಂಚಿದಾಗ ಅಷ್ಟೇ ಅವರನ್ನೂ ಶ್ರೀಮಂತರನ್ನಾಗಿಸುತ್ತದೆ. ಕೆಲವರ ಸಮಸ್ಯೆಯೋ, ಅಭಿಮಾನವೋ ನಾ ಬಲ್ಲೆ ನಗಿಸಿದರೆ ನಗುವದೇ ಇಲ್ಲ. ನಕ್ಕರೆ ಮುತ್ತೆಲ್ಲಿ ಉದುರುತ್ತವೆ ಎಂಬ ಚಿಂತೆಯೋ ಏನೋ.... ಹಾಗೆನಾದರೂ ಮುತ್ತುಗಳು ಉದುರಿದರೂ ನಾಮಗೆ ಬೇಕೂ ಆಗಿಲ್ಲ, ತೆಗೆದುಕೊಳ್ಳೋದು ಬೇಡ ಅಲ್ಲವೇ....
ನಗು ಕೊಡುವವ ಶ್ರೀಹರಿ. ಅವನ ಮುಖದಲ್ಲಿಯ ನಗುವಿನ ಪ್ರತಿಬಿಂಬ ನಗು ಎಮಗೂ ಬರಲಿ ಎಂದು ನಗುನಗುತ್ತಾ ನಿತ್ಯ ಶ್ರೀಹರಿಗೆ ಮೊರೆ ಇಡೋಣ. ನಗುವನ್ನೇ ಸಂಪತ್ತಾಗಿ ಪಡೆಯೋಣ....
*✍🏽✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.
Comments