*ಶಿವನೇ ನಾ ನಿನ್ನ ಸೇವಕನಯ್ಯ....*
ಇಂದು ಮಹಾ ಶಿವರಾತ್ರಿ, ಮನೋಭಿಮಾನಿ ರುದ್ರದೇವರ ಆರಾಧನೆ, ಚಿಂತನೆ, ಸ್ಮರಣೆ, ಅನಿವಾರ್ಯ. ಸಂಸಾರ ಕೊಟ್ಟವರು ರುದ್ರದೇವರು, ಸಂಸಾರದಿಂದ ಹೊರಹಾಕುವ ಮನಸ್ಸು ಕೊಡುವವರೂ ರುದ್ರದೇವರೇ.
*ಭವ ಮೋಚಕ....*
"ಭವ" ರುದ್ರದೇವರ ನಾಮ. "ಭವ" ಎಂದರೆ ಸಂಸಾರ. ಈ ಸಂಸಾರ ಸಾಗರದಿಂದ ಪಾರು ಮಾಡಿಕೊಳ್ಳಲು ಉತ್ಕೃಷ್ಟ ಮನಸ್ಸು ಬೇಕು. ಆ ಮನಸ್ಸಿಗೇ ನಿಯಾಮಕರು ಅನಂತ ಜೀವರಾಶಿಗಳ ಮನೋಭಿಮಾನಿಗಳು ರುದ್ರದೇವರು.
ಅಹಂಕಾರ ತತ್ವಕ್ಕೆ ಅಭಿಮಾನಿಗಳು ರುದ್ರದೇವರು. ಅಹಂಕಾರ ತತ್ವದಿಂದಲೇ *ಅಹಂ, ಮಮತಾ* ನಾನು ನನ್ನದು ಹುಟ್ಟಿಕೊಳ್ಳುವವು. ಈ ಭಾವ ಇರುವದೇ ಸಂಸಾರ. ಎಂದು ಭಾವದಿಂದ ಅಭಿಮಾನಗಳಿಂದ ಹೊರಬರುತ್ತೆವೆಯೋ ಅಂದೆ ಮೋಕ್ಷ.
*ಅಹಂ ಮಮತಾ* ಅಭಿಮಾನಿಗಳನ್ನು ಕಳೆದು *ಹರಿರೇವ ಜಗತ್ಕರ್ತಾ, ಹರ್ಯಧೀನಮಿದಂ ಜಗತ್* ಸರ್ವಪ್ರೇರಕ ಶ್ರೀಹರಿ, ಅವನೇ ಎಲ್ಲವನ್ನೂ ಮಾಡುವವ, ಶ್ರೀಹರ್ಯಧೀನವಾಗಿದೆ ಈ ಜಗತ್ತು ಎಂಬ ಭಾವನೇ ಬರುವದೇ *ಅಹಂಕಾರ ತತ್ವಾಭಿಮಾನಿ ರುದ್ರದೇವರಿಂದ. ಆದ್ದರಿಂದ ರುದ್ರದೇವರ ಆರಾಧನೆ ಅನಿವಾರ್ಯ.
*ಭಗವತ ಶಾಸ್ತ್ರವ ಅವನೀಶನಿಗೆ ಪೇಳ್ದವ....*
ಪರೊಕ್ಷಿತ್ ಮಹಾರಾಜರಿಗೆ, ಭಾಗವತ ಉಪದೇಶ ಮಾಡಿದ ಮಹಾತ್ಮ ಶುಕಾಚಾರ್ಯರು. ಆ ಶುಕಾಚಾರ್ಯರ ಮೂಲಸ್ವರೂಪವೇ ಶಿವ ರುದ್ರದೇವರು. ನಮ್ಮ ನಮ್ಮ ಜೀವನದಲ್ಲಿ ನಾವೂ ಪರೀಕ್ಷಿತರೇ. ಆದರೆ ಶುಕರು ಮಾತ್ರ ನೀವಾಗಿ ಬರಲೇಬೇಕು. *ನನಗೆ ಎಲ್ಲದಕ್ಕೂ ಮನಸ್ಸಿದೆ, ಆದರೆ ಭಾಗವತ ಮಹಾಭಾರತ ಎಂದರೆ ಅಲರ್ಜಿ, ಉಪನ್ಯಾಸಕ್ಕೆ ಹೋಗಬೇಕು ಎಂದರೆ ಕಿರಿ ಕಿರಿ, ಉಪನ್ಯಾಸಕ್ಕೆ ಹೊದರೆ ಎಲ್ಲಿ ಜ್ಙಾನ ಬಂದೀತೋ, ನಾ ಧರ್ಮ ಮಾಡಲು ಆರಂಭಿಸಿ ಬಿಟ್ಟೆನೆಯೋ ಎಂಬ ಹೆದರಿಕಿ* ಹಾಗಾಗಿ ಭಾಗವತ ಎಂದರೆ ಫರ್ಲಾಂಗು ದೂರ ಜಿಗಿತೇನೆ... *ಮಗಳು ಜಾನಕಿ* ಎಂದೂ ತಪ್ಪಸೋಲ್ಲ.....
ನೀವೇ ಮನಃ ಪ್ರೇರಕರು ಸರಿಯಾದ ಸನ್ಮಾರ್ಗದಲ್ಲಿ ಪ್ರೇರಿಸಿ, ಭಾಗವತ ಆಲಿಸಿ, ಅಭಿರುಚಿ ಕೊಟ್ಟು, ಉದ್ಧಾರ ಮಾಡಿ ಎಂದು ಬೇಡಲೂ ನಿಮ್ಮ ಆರಾಧನೆ ಮಾಡುವೆ....
*ಹೇ ಶಿವ !! ರುದ್ರ !! ಭವ !!*
ಮನಸ್ಸ ಒಂದು ಅಪರೂಪದ ವಸ್ತು. ಮನಸ್ಸಿನ ದಿವ್ಯತೆ, ಭವ್ಯತೆ, ಮನಸ್ಸಿನ ಆದ್ಯತೆ, ಮನಸ್ಸಿನ ಅನಿವಾರ್ಯತೆ ಒಂದೊಂದೂ ತುಂಬ ಇದೆ. ಮನಸ್ಸು ಇದ್ದರೆ ಮಾನವ. ಮನಸ್ಸೇ ಇಲ್ಲದರೆ ಹುಚ್ಚ, ಕಲ್ಲಿಗೆ ಸಮ.
ಇಂದು ನಮ್ಮ ಜೀವನದ ಪ್ರತಿ ಕ್ಷಣ ಪ್ರತಿ ಹಂತಗಳಲ್ಲಿ "ಏನು ಮಾಡಲಿಕ್ಕೂ ಮನಸದಸು ಇರಬೇಕು. ಏನು ಬೇಡ ಮನಸ್ಸೇ ನಿರ್ಧರಿಸಬೇಕು" ಸಂಪೂರ್ಣ ಮನಸ್ಸಿನ ಅಧೀನ ನಾನು. ಅಂದರೆ ಮನೋನಿಯಾಮಕರಾದ ನಿಮ್ಮ ಅಧೀನ ನಾನು. ಸಂಶಯವೇ ಇಲ್ಲ.
ಮನಸ್ಸಿನ ಅಧೀನನಾದ ನಾನು, ಮನೋ ನಿಯಾಮಕರು ನೀವು. ಹೀಗಿರುವಾಗ ನೀವು ಕರುಣೆ ಮಾಡಿ *ಧರ್ಮ ಮಾರ್ಗದಲ್ಲಿ, ಜ್ಙಾನ ಮಾರ್ಗದಲ್ಲಿ, ಭಕ್ತಿ ಮಾರ್ಗದಲ್ಲಿ* ಪ್ರೇರಿಸದೇ, ಬೇರೆಲ್ಲೆಯೋ ಯಾಕೆ ಪ್ರೇರಿಸುತ್ತಿದ್ದೀರಾ... ???
*ತೈಲಧಾರೆಯಂತೆ ಮನಸ್ಸು ಕೊಡೋ ಹರಿಯಲ್ಲಿ ಶಂಭೋ....*
ಹೇ ಶಭೋ ಶಂಕರ ಹರ ಹರ ಮಹಾ ದೇವ !! ಮನಸ್ಸು ಏಕಾಗ್ರ. ಆದರೆ ಆ ಏಕಾಗ್ರತೆ ಕ್ರಿಕೆಟ್ಟಿನಲ್ಲಿ ಇದೆ, ಆ ಏಕಾಗ್ರತೆ ಧಾರಾವಾಹಿಗಳಲ್ಲಿ ಇದೆ, ಆ ಏಕಾಗ್ರತೆ ಮನೆಯಮೇಲೆ ಇದೆ, ಆ ಏಕಾಗ್ರತೆ ಗುರು ಹಿರಿಯರನ್ನು ನಿಂದಿಸುವದರಲ್ಲಿ ಇದೆ, ಏಕಾಗ್ರತೆ ಆಫೀಸಿನಲ್ಲಿ ಇದೆ, ಎಲ್ಲದರ ಮೇಲೆ *ಮೋಬೈಲಿನಲ್ಲಿ ತುಂಬ ಏಕಾಗ್ರತೆ ಇದೆ... ಜಗತ್ತು ಮರೆತಿರುತ್ತೇನೆ*
ಈ ಏಕಾಗ್ರತೆಯ ಹತ್ತಂಶದಷ್ಟಾದರೂ ಹರಿಯಲ್ಲಿ, ಧರ್ಮದಲ್ಲಿ, ಭಾಗವತಾದಿ ಶಾಸ್ತ್ರಗಳಲ್ಲಿ, ಪೂಜೆ ಸಂಧ್ಯಾವಂದನ, ಜಪ, ಪಾರಾಯಣಗಳಲ್ಲಿ, ಸ್ನೇಹ, ಪ್ರೇಮ ಸಹನೆ ದಯಾ ಕ್ಷಮಾ ಮೊದಲಾದ ಸಜ್ಜನಿಕೆಗಳಲ್ಲಿ, ಗುರು ದೇವತಾ ದೇವರುಗಳ ಆರಾಧನೆಯಲ್ಲಿ ದಯಪಾಲಿಸಿದೀ ಎಂದಾದರೆ ಮತ್ತೆಂದೂ ಸಂಸಾರಕ್ಕೇ ನಾ ಬರುವದಿಲ್ಲ. ಕರುಣಿಸೋ ಅನುಗ್ರಹಿಸೋ....
*ದುರ್ಮನ ಬಿಡಿಸಯ್ಯ....*
ದುಷ್ಟ ವಿಷಯಗಳು ಇಷ್ಟವಾಗತ್ತೆ, ದುರ್ಜನರ ಮೇಲೆ ಮಮತೆ ಹುಟ್ಟತ್ತೆ, ನನಗೆ ನಾನು ದುಷ್ಟನಾಗಿದ್ದೇನೆ ಅಂತೆಯೇ ನನಗೆ ಅನರ್ಥವಾಗುವ ಕೆಲಸಗಳನ್ನೇ ಮಾಡುತ್ತಿರುತ್ತೇನೆ. ನನಗೆ ಅಂತೆ ಹಿತವಾದ ಒಂದು ಕಾರ್ಯವನ್ನೂ ನಾನು ನಿತ್ಯ ಮಾಡಿದೆನೆ ಎಂದು ಆಗಿಯೇ ಇಲ್ಲ. ಈ ದುರ್ಮನ ಬಿಡಿಸು, ಸನ್ಮನ ಪ್ರೇರಿಸು....
ರುದ್ರ, ಶಿವ, ಶಂಭು, ಹರ, ಶಂಕರ, ನೀಲಲೋಹಿತ, ಶುಕ, ದೂರ್ವಾಸ, ಜೈಗೀಶವ್ಯ ಇತ್ಯಾದಿ ನಾಮ ರೂಪಗಳನ್ನು ಪಡೆದ *ವೈಷ್ಣವೋತ್ತಮನಾದ* ನಿನಗೆ ಕೋಟಿ ಕೋಟಿ ವಂದನೆಗಳು. ನಿನ್ನ ಸ್ಮರಣೆಯೊಂದಿಗೆ ಇಂದಿನ ದಿನ ಆರಂಭಿಸಿದ್ದೇನೆ, ನಿತ್ಯವೂ ನಿನ್ನ ಸ್ಮರಣೆಯೊಂದಿಗೇ ದಿನವು ಆರಂಭವಾಗಲಿ.... 🙏🏽🙏🏽
*✍🏽✍🏽ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments
ವಿಷ್ಣು ಸಹಸ್ರನಾಮಗಳ ಸಮ ರಾಮರಾಮೆಂದು ಭಕ್ತಿ ಭರದಲಿ |
ವಿಷ್ಣು ಪುರಂದರವಿಠಲ ರಾಯನ
ಅತ್ಯಧಿಕ ಪ್ರಿಯನು ಉಮೇಶನು🙏🙏
ವಿಷ್ಣು ಸಹಸ್ರನಾಮಗಳ ಸಮ ರಾಮರಾಮೆಂದು ಭಕ್ತಿ ಭರದಲಿ |
ವಿಷ್ಣು ಪುರಂದರವಿಠಲ ರಾಯನ
ಅತ್ಯಧಿಕ ಪ್ರಿಯನು ಉಮೇಶನು🙏🙏