*ಓ ಪ್ರೀತಿವರ್ಧನ !!! ಆಲಿಸು ಎನ್ನ ಮಾತನ್ನ*


 *ಓ ಪ್ರೀತಿವರ್ಧನ !!! ಆಲಿಸು ಎನ್ನ ಮಾತನ್ನ*


ವಿಷ್ಣು ಸಹಸ್ರನಾಮ ದಲ್ಲಿ ಬರುವ ಒಂದು ನಾಮ *ಪ್ರೀತಿ ವರ್ಧನಃ* ಎಂದು. ಪ್ರೀತಿಯನ್ನು ನಿರಂತರ ಬೆಳಿಸುವ, ಉಳಿಸುವ ಭಗವಂತನ ಒಂದು ನಾಮ. 


ದೇವರು ಕೊಟ್ಟ ಅಮೂಲ್ಯವಸ್ತುಗಳಲ್ಲಿ ಪ್ರೀತಿಯೂ ಒಂದು. ಮರೆಯುವಂತಹದ್ದು ಅಲ್ಲವೇ ಅಲ್ಲ. ಪ್ರೀತಿ ಯೊಂದು ಇರಲಿಲ್ಲ ಎಂದಾಗಿದ್ದರೆ ಜಗತ್ತೇ ಇರುತ್ತಿರಲಿಲ್ಲ. ಎಂದೋ ನಾಶವಾಗಿ ಹೋಗುತ್ತಿತ್ತು. ಜಗತ್ತಿನ ನಾಶವಾಗಿಲ್ಲ, ನಾನುಬದುಕಿ ಇದ್ದೇನೆ ಎಂದರೆ ಅದಕ್ಕೆ ಮೂಲ *ಪ್ರೀತಿ.*


*ಪ್ರೀತಿ ಎಂಬ ವಸ್ತುವನ್ನೇ ದೇವರು ಸೃಷ್ಟಿಸಿರಲಿಲ್ಲ ಎಂದಿದ್ದರೆ ಏನಾಗ್ತಿತ್ತು.....???*


ಇವತ್ತು ಭಾನುವಾರ ಅಲ್ವೇ ಮಾರ್ಕೇಟಿಗೋ ಮಾಲ್ ಗಳಿಗೋ ಹೋಗ್ತೆವೆ. ಸಾವಿರ ಸಾವಿ ವಸ್ತುಗಳನ್ನು ಕಾಣುತ್ತೇವೆ ಕೆಲವೇ ವಸ್ತಗಳನ್ನು ಖರೀದಿ ಮಾಡುತ್ತೇವೆ ಸರಿ ನಾ. ಹೀಗಿರುವಾಗ ಎಲ್ಲ ವಸ್ತುಗಳನ್ನು ನಾನೇಕೆ ತೆಗೆದು ಕೊಳ್ಳಲಿಲ್ಲ.. ?? ಎಂದರೆ ಆ ಎಲ್ಲ ವಸ್ತುಗಳ ಮೇಲೆ ನನಗೆ ಪ್ರೀತಿ ಹುಟ್ಟಲಿಲ್ಲ. ಯಾವ ವಸ್ತುವಿನ ಮೇಲೆ ಪ್ರೀತಿ ಹುಟ್ಟಿತೋ ಆ ವಸ್ತುವನ್ನು ನಾನು ಖರೀದಿಸಿದೆ. ಎಲ್ಲ ವಸ್ತುಗಳ ಮೇಲೆಯೂ ಪ್ರೀತಿ ಹುಟ್ಟಿದ್ದರೆ.... ಅಥವಾ ನೋಡಿದ ಯಾವೆಲ್ಲ ವಸ್ತುಗಳಿವೆ ಅದೆಲ್ಲದರ ಮೇಲೆ "ದ್ವೇಶವೇ" ಹುಟ್ಟಿದ್ದರೆ ಏನಾಗ್ತಿತ್ತೋ...... ನಾವೇ ಏಕಾಂತದಲ್ಲಿರುವಾಗ ವಿಚಾರಿಸಬೇಕು.


ಉಡುವ ಬಟ್ಟೆ, ಉಣ್ಣುವ ಆಹಾರ, ಸಂಬಂಧ ಬೆಳಿಸಿಕೊಳ್ಳವ ಜನರು, ಘಳಿಸುವ ಹಣ, ಇರುವ ಮನೆ, ಗುರುಗಳು,  ಈ ದೇಹ, ಇಂದ್ರಿಯ, ಮನಸ್ಸು, ದೇವತೆಗಳು, ಸ್ವಯಂ ದೇವರು ಹೀಗೆಲ್ಲ ಏನಿವೆ ಅದೆಲ್ಲದರಲ್ಲಿಯೂ ನಮಗೆ *ಪ್ರೀತಿ* ಹುಟ್ಟಿಸಿದ್ದಾನೆ ಹಾಗಾಗಿ ನಾನು ಇಷ್ಟಪಡುತ್ತೇನೆ, ನಮ್ಮ ಬಳಿ ಆ ಎಲ್ಲ ಪದಾರ್ಥಗಳು ಇವೆ. ನನ್ನಲ್ಲಿ ಏನಿಲ್ಲ ಅ ಪಾದರ್ಥಗಳನ್ನು ನಾನು ಇಷ್ಟಪಟ್ಟಿಲ್ಲ ಯಾಕೆಂದರೆ ಅದರ ಮೇಲೆ ನನಗೆ ಪ್ರೀತಿ ಹುಟ್ಟಿಸಿಲ್ಲ. ಅಂತೆಯೇ ಇಂದು ನಾನು ಕೊಲೆಗಡುಕನೋ, ಕುಡುಕನೋ ಆಗಿಲ್ಲ. ಆದ್ದರಿಂದ *ಪ್ರೀತಿವರ್ಧನಃ* ಪ್ರೀತಿ ಹುಟ್ಟಿಸಿದ ದೆವರಿಗೆ ಎನ್ನ ನಮನಗಳು. 


"ಪ್ರೀತಿ ವರ್ಧನಃ"  ಪ್ರೀತಿ ಹುಟ್ಟಿಸಿ, ಬೆಳೆಸುವ ದೇವರ ಈ ಉಪಕಾರ ಸರ್ವ ಸಾಮಾನ್ಯ. ಇದು ಮಾಡಲೇ ಬೇಕಾದ ಕರ್ತವ್ಯ. "ನಮ್ಮನ್ನು ಹುಟ್ಟಿಸಿದ ಸ್ವಾಮಿ ನಮ್ಮ ಬದುಕಿಗೆ, ರಕ್ಷಣೆಗೆ ಅವಷ್ಯವಾಗಿ ಪ್ರೀತಿಯನ್ನೂ ಹುಟ್ಟಿಸಲೇಬೇಕು" ಹುಟ್ಟಿಸಿದ್ದಾನೆ. ಬದುಕಲು ಬೇಕಾದ ಉಪಾಯದ  ಉಪಕಾರವೇ,  ಆದರೆ ದೊಡ್ಡ ಉಪಕಾರವೇನಲ್ಲ. ಹಾಗಾದರೆ......


"ಪ್ರೀತಿ ವರ್ಧನ"ನ  ಅತೀ ದೊಡ್ಡ ಉಪಕಾರ ಯಾವದು... ?? 


ಎಂದು *ನನ್ನದಲ್ಲದ ವಸ್ತುಗಳ ಮೇಲೆ ಪ್ರೀತಿ ಹುಟ್ಟಿಸದೇ, ನನ್ನದೆ ಆದ, ನನ್ನ ಮೇಲೆ ಪ್ರೀತಿ ಹುಟ್ಟಿಸಿ ಬೆಳೆಸುತ್ತಾನೆಯೋ* ಅಂದು ಆ ದೇವರು ಮಾಡಿದ ಉಪಕಾರ ತುಂಬ ತುಂಬ ತುಂಬ ದೊಡ್ಡದು ಎನಿಸುತ್ತದೆ. ನನ್ನ ಮೇಲಿನ ನನ್ನ ಪ್ರೀತಿಯೇ ಮೋಕ್ಷಕ್ಕೆ ಕರೆದೊಯ್ಯುತ್ತದೆ, ನನ್ನದಲ್ಲದರ ಮೇಲಿನ ಪ್ರೀತಿಯೇ ಸಂಸಾರಕ್ಕೊಯ್ಯುತ್ತದೆ. 


ನನ್ನ ಮೇಲೆ ನನಗೆ ಪ್ರೀತಿ ಹುಟ್ಟಿಸದೇ, ಇನ್ಯಾವ ಪದಾರ್ಥಗಳ ಮೇಲೆ ಪ್ರೀತಿ ಹುಟ್ಟಿದರೂ, ಆ ಪ್ರೀತಿ ನನ್ನನ್ನು ಏಕಾಂಗಿಯಾಗಿ ನಿಲ್ಲಿಸುವದು ನಿಶ್ಚಿತ. ಇನ್ನೂ ಮೇಲೆ ಹೋದರೆ ದುಃಖದ ಮಡುವಿಗೆ ಸೆಲೆಯಾಗಿ ಬರುವದು ನೂರರಷ್ಟು ನಿಶ್ಚಿತ. 


ಹೇ ಪ್ರೀತಿ ವರ್ಧನ !!! ನನ್ನನ್ನು ಏಕಾಂಗಿಯಾಗಿಸದ, ನನ್ನ ಪರಮ ಹಿತೈಷಿಯಾದ, ನನ್ನೊಟ್ಟಿಗೆ ನಿರಂತರ ಇರುವ *ಧರ್ಮ, ಭಕ್ತಿ, ತತ್ವಜ್ಙಾನ, ಸ್ವಯಂ ನೀನು* ಈ ನಾಲಕರಲ್ಲಿ ಪ್ರೀತಿ ಹುಟ್ಟಿಸು, ಇರುವ ಪ್ರೀತಿಯನ್ನು ಅತೀ ಹೆಚ್ಚಿನ ಮಟ್ಟದಲ್ಲಿ, ಅತ್ಯಂತ ವೇಗದಲ್ಲಿ ಬೆಳಿಸು. ಆಗ ನೀ ಮಾಡಿದ ಉಪಕಾರ ಅತೀ ಅತೀ ದೊಡ್ಡದು ಎನಿಸುತ್ತದೆ. 


ಎಂದು ನನಗೆ ನನ್ನ ಮೇಲೆಯೇ ಹಾಗೂ ನನ್ನ ಕ್ಷಣ ಬಿಟ್ಟಿರದ *ಭಕ್ತಿ, ತತ್ವಜ್ಙಾನ, ಹಾಗೂ ದೇವರು* ಇವುರುಗಳ ಪ್ರೀತಿ ಹುಟ್ಟಿಸುವೆಯೋ ಅಂದಿನಿಂದ *ನಾ ಎಂದಿಗೂ ಮರೆಯೆ ನೀ ಮಾಡಿದ ಉಪಕಾರ* 


ಓ  ಪ್ರೀತಿ ವರ್ಧನ !!!! ನಿನಗೆ ಅನಂತ ವಂದನೆಗಳು. 


*✍🏽✍🏽ನ್ಯಾಸ....*

ಗೋಪಾಲ ದಾಸ.

ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*