ಮೆಚ್ಚಿದವರ ಆರೈಕೆಯಲ್ಲಿಯೇ ಅರಳು.....*


 *ಮೆಚ್ಚಿದವರ ಆರೈಕೆಯಲ್ಲಿಯೇ ಅರಳು.....*


ಆರೈಕೆ ಮನುಷ್ಯನ ಸಹಜವಾದ ಒಂದು ಸ್ವಭಾವ. "ಮೆಚ್ಚಿದವರ ಪ್ರೀತಿಸಿದವರ ಆರೈಕೆಯಲ್ಲಿ ಮನುಷ್ಯ ತಾನು ಅರಳುತ್ತಾನೆ. ಎಂದಿಗೂ ಬಾಡುವದಿಲ್ಲ. ಸದಾ ಹಸನ್ಮುಖಿ. ಅವನ ಉತ್ಕರ್ಷಕ್ಕೆ ಮಿತಿ ಇರದು. ಅಂತೆಯೇ ಅವನೂ ನಮ್ಮ ಆರೈಕೆ ಮಾಡುತ್ತಾ ಇರುತ್ತಾನೆ. 


ಆರೈಸುವ ವ್ಯಕ್ತಿ ಪಕ್ಕದಲ್ಲಿ ಇದ್ದರೆ ಸಹಾಯಕ್ಕೆ ನಿಲ್ಲುತ್ತಾನೆ. ದೂರದಲ್ಲಿ‌ ಇದ್ರೆ ಮನೋಬಲವನ್ನು ಹೆಚ್ಚಿಸುತ್ತಾನೆ. ದೇವಸ್ಥಾನಗಳಲ್ಲಿ  ಇದ್ದರೆ ದೈವೀಬಲವನ್ನು ಬೆಳೆಯುವಂತೆ ಬೇಡಿಕೊಳ್ಳುತ್ತಾನೆ. ತೀರ್ಥಯಾತ್ರೆಯಲ್ಲಿ ಇದ್ದರೆ ಪುಣ್ಯ ಅಭಿವೃದ್ಧಿಸುವಂತೆ ಮಾಡುತ್ತಾನೆ. ಒಟ್ಟಾರೆಯಾಗಿ ತನ್ನ ನಿತ್ಯದ ಕೆಲಸಗಳಲ್ಲಿ ನಮ್ಮದೂ ಒಂದು ಪಾಲು ಇಟ್ಟಿರುತ್ತಾನೆ. ಈ ಎಲ್ಲ ತರಹದ ಆರೈಕೆಯಲ್ಲಿಯೇ ತಾನೂ ಅರಳುತ್ತಾ ಸಾಗುತ್ತಾನೆ. ಸಂತೃಪ್ತಿಯನ್ನೇ ಅನುಭವಿಸುತ್ತಾನೆ. ಆ ಆನಂದ ಅನುಭವಿಸಿದವನಿಗೇ ಗೊತ್ತು. ನಮ್ಮನ್ನೂ ಅರಳಿಸುತ್ತಾನೆ.


*ಈ ತರಹದ ಅರಳುವಿಕೆ ಸಿಗುವದೆಲ್ಲಿ....??*


ಬಹಳ ವಿಚಿತ್ರ ಕೆಲವೊಮ್ಮೆ ಯಾರ ಆರೈಕೆ ಮಾಡಬೇಕು ಎಂಬುವದೇ ಜೀವನ ಕಳೆದರೂ ಗೊತ್ತಾಗುವದೇ ಇಲ್ಲ.  ಯಾರು ನಮ್ಮ ಹಿತೈಷಿಗಳು.... ನಮಗಾಗಿ ನಮ್ಮ ಹಿತಕ್ಕಾಗಿ ತಡಬಡಿಸುವವರು ಯಾರು ಎಂಬುವದೇ ಕೊನೆವೆರೆಗೂ ತಿಳಯಲಾಗುವದಿಲ್ಲ. ಹಲವುಬಾರಿ ಅವರನ್ನು ದ್ವೇಶಿಸುವದೇ ಆಗಿರುತ್ತದೆ. ಆರೈಕೆ ನನ್ನ ಸ್ವಭಾವ. ಪ್ರೀತಿ ಬತ್ತಿದ ಸ್ವಾರ್ಥಿಗಳ ಆರೈಕೆಯಲ್ಲಿ ತೊಡಗಿ ಸೊರಗುವದಂತೂ ನಿಶ್ಚಿತ. ಅಲ್ಲಿ ಅರಳಲು ಏನಿರುವದಿಲ್ಲ. ಒಂದು ಒಳ್ಳೆಯ ಹಿತ ಮಾತೂ ಸಿಗುವದಿಲ್ಲ. ಮೆಚ್ಚುಗೆಯ ಮಾತಂತೂ ದೂರದ ಕನಸೇ. ಹೀಗಿರುವಾಗ ಅರಳುವ ಮಾತೆಲ್ಲಿ.....


*ಆರೈಕೆ ಎಲ್ಲಿ ಸೂಕ್ತ.....*


ನಮ್ಮ ಹಿತೈಷಿ, ನಿಸ್ವಾರ್ಥ, ಪ್ರೀತಿಯ ಮಹಾಕುಂಭದಲ್ಲಿ ಮಿಂದವನಿಗೆ ಅರಳುವದು ಬಿಟ್ಟು ಇನ್ನೇನೂ ಇರುವದಿಲ್ಲ. ಅಂತಹವರ ನಿರಂತರ ಆರೈಕೆ ಸೂಕ್ತ. *ಪ್ರೀತಿ ಇದೊಂದು ನಿಧಿ. ಪ್ರತಿಯೊಬ್ಬರ ಆಂತರ್ಯದಲ್ಲಿಯೂ ಅಡಗಿದೆ. ನೀಡುವವರು, ಪಡೆಯುವವರೂ ಇಬ್ಬರೂ ಧನ್ಯರೇ.*  ಆದರೆ ಉಚಿತವಾದ ಪ್ರೀತಿಯನ್ನು ನೀಡುವವರು, ಅಲ್ಪ ಸಂಖ್ಯಾತರಾಗಲು ಕಾರಣವೇನೆಂದರೆ, "ಪ್ರೀತಿಯ ಅಮೃತ ಕುಂಭಕ್ಕಿಂತಲೂ, ದ್ವೇಶದ ವಿಷಕುಂಭ ತುಂಬ ಆಕರ್ಷಿತವಾಗಿದೆ."  ಕಾರಣವಿಷ್ಟೆ *ಅಜ್ಙಾನ ವಿಪರೀತಜ್ಙಾನ ಸಂಶಯ ಇವುಗಳ ಪ್ರಭಾವ, ಜೊತೆಗೆ  ತರಬೇತಿಯ ಅಭಾವ*  ಸಾಮಾನ್ಯ ಪ್ರೀತಿಯನ್ನೋ, ನಿಜ ನಿಃಸ್ವಾರ್ಥ ದೈವೀಪ್ರೀತಿಯನ್ನೋ ಅನುಭವಿಸದ ವ್ಯಕ್ತಿ, ಅದರ ಮಹತ್ವವನ್ನು ಸರ್ವಥಾ ತಿಳಿಯಲಾರ. ಅಳತೆ ಮೀರಿದ ಆಳವನ್ನೂ ಅನುಭವಿಸಲಾರ.  ಆ ಪ್ರೀತಿಯನ್ನು ಇತರರಿಗಾದರೂ ನೀಡುವದು ಹೇಗೆ....???  ಒಂದಂತೂ ನಿಜ.... *ಪ್ರೀತಿಯ ಮಹಾಪೂರಕ್ಕೆ ಹೃದಯದ ದೋಷ ದುರಿತಗಳೆಲ್ಲ ಕೊಚ್ಚಿ ಹೋಗಿ, ಬಾಂಧವ್ಯದ ಬೆಸುಗೆ ಬಲವಾಗುತ್ತದೆ.* ಇಂತಹವರ ಆರೈಕೆಯಲ್ಲಿ  ನಿರಂತರ ತೊಡಗು. ಸೊರಗುವದಿಲ್ಲ. ಅರಳುವಿ. 


*ಪ್ರೀತಿಯ ಮಹಾಕುಂಭಗಳು ಇವೆಯೆ...????*


ಪ್ರತೀವರ್ಷವೂ ಒಂದೊಂದರಂತೆ, ಹನ್ನೆರಡು ನದಿಗಳಲ್ಲಿ ಮಹಾಕುಂಭಗಳು ಬರುತ್ತವೆ. ಅಲ್ಲಿ ಮಿಂದರೆ ನಮ್ಮನ್ನು ಸೊರಗಿಸುವ ಪಾಪಗಳು ಭಸ್ಮವಾಗಿ, ಅರಳಿಸುವ ಮಹಾಪುಣ್ಯ ರಾಶಿ ಪಡೆಯುತ್ತಾನೆ. ಹಾಗೆಯೇ..... *೧) ತಂದೆ,  ೨)ತಾಯಿ, ೩)ಗುರು, ೪)ಮಿತ್ರ, ೫)ಹಿತೈಷಿ ಸ್ನೇಹಿತ, ೬) ದೇವತೆಗಳು, ೭) ಯೋಗ್ಯವಾದ ಧರ್ಮ, ೮) ವಿಹಿತವಾದ ಕರ್ಮ, ೯) ಪರಿಶುದ್ಧ ಜ್ಙಾನ,  ೧೦) ವಾಯುದೇವರು, ೧೧) ಲಕ್ಷ್ಮೀದೇವಿ,  ೧೨ ಸ್ವಯಂ ದೇವರು* ಹೀಗೆ ಹನ್ನೆರಡು ಜನ ನಮಗೋಸ್ಕರ ಪ್ರೀತಿಯ ಮಹಾಕುಂಭದಂತೆ ಇದ್ದಾರೆ. ಇವರ ಆರೈಕೆ ಅಮೃತ ಪಡೆದಂತೆಯೇ. ಅಮೃತ ಪಡೆದವನಿಗೆ ಮುಪ್ಪು ಇರದು. ಮುಪ್ಪಿಲ್ಲದ ಹೂ ಎಂದರೆ ಅದು ಅರಳಿದ್ದೇ ಆಗಿರುತ್ತದೆ. 


 ನನ್ನ ಮೆಚ್ಚದ ಒಪ್ಪದ ಪ್ರೀತಿಕೊಡದ ಎಲ್ಲರ ಆರೈಕೆಯಲ್ಲಿ ನಾನು ಸೊರಗುವದಕ್ಕಿಂತಲೂ, ಮೆಚ್ಚಿದ, ಪ್ರೀತಿಸುವ, ಪುಣ್ಯದ ಪಾಲುಕೊಡುವ, ಆಪತ್ತಿಗೆ ಒದಗುವ, ನನ್ನ ಪರಮಹಿತೈಷಿಯಾದ,  ನನಗಾಗಿ ಪರಿತಪಿಸುವ ಇವರುಗಳ ಆರೈಕೆಯೇ ನಮ್ಮ ಅರಳುವಿಕೆಗೆ ಮೂಲ. ಇವರುಗಳು ಎಲ್ಲಿ ಹೋದರೂ ಎಲ್ಲಿದ್ದರೂ ನಮಗೋಸ್ಕರವೇ ಇರುತ್ತಾರೆ. ಮಾಡುತ್ತಾರೆ. ತಾವು ಮಾಡುವ ತಮ್ಮದರಲ್ಲಿ ನಮ್ಮ ಪಾಲೂ ಇರುತ್ತದೆ. ಇವರುಗಳ ಆರೈಕೆ ಮಾಡುವದೇ ಅತ್ಯಂತ ಸೂಕ್ತ ಮತ್ತು ಶ್ರೇಷ್ಠ....


*✍🏽✍🏽✍ನ್ಯಾಸ....*

ಗೋಪಾಲದಾಸ

ವಿಜಯಾಶ್ರಮ, ಸಿರವಾರ.

Comments

Anonymous said…
ಅತ್ಯದ್ಭುತ ವಿಚಾರ
Unknown said…
Sariyagi vyaktha padesiddira. Thumba chennagide nimma I Lekhana. Worth contemplating. Thank you. 🙏🏻🙏🏻🙏🏻
Gouri said…
Marvalous writting.....

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*