*ವರಾಹ ಜಯಂತಿ - ತಿಳಿಯುವ ಪುಟ್ಟ ಪ್ರಯತ್ನ*
ಭಗವಂತನ ಅನೇಕ ವ್ಯೂಹಗಳಲ್ಲಿ ಒಂದು ವ್ಯೂಹ ದಶಾವತಾರಗಳ ವ್ಯೂಹ. ಆ ದಶಾವತಾರಗಳಲ್ಲಿ ಒಂದಾದ "ವರಾಹ ದೇವರ" ಜಯಂತಿ ಇಂದು.
ವರಾಹದೇವರ ಪ್ರಸಾದದಿಂದ ಕೋಟಿ ವಿಘ್ನಗಳ ಪರಿಹಾರ ಒಂದೆಡೆಯಾದರೆ, ವರಾಹದೇವರ ನಿಗ್ರಹದಿಂದ ನರಕಾಸುರನಂಥವರೂ ನಮ್ಮನ್ನು ಆಳಬಹುದು. ಭೂವರಾಹ ದೇವರ ಪ್ರಸಾದವೊ ನಿಗ್ರಹವೋ ನಮ್ಮ ಪಾಲಿಗೆ ಇರುವದು.
ಅವತಾರ
ವರಾಹದೇವರು ಎರಡುಬಾರಿ ಅವತಾರವನ್ನು ಮಾಡಿದ್ದಾರೆ.
ಬ್ರಹ್ಮದೇವರ ಮೂಗಿನಿಂದ ಅವತರಿಸಿ, ಭೂಮಿಯನ್ನು ರಸಾತಲಕ್ಕೇ ಸಾಗಿಸಿದ ಆದಿ ಹಿರಣ್ಯಾಕ್ಷನನ್ನು ಸಂಹರಿಸಿ ಭೂಮಿಯನ್ನು ಉದ್ಧರಿಸಿದ ಮಹಾನ್ ಕಾರ್ಯ ಇದು ಒಂದು ಅವತಾರದ ಮಹಿಯಾದರೆ.
ಹಿರಣ್ಯಕಶಿಪು ಹಿರಣ್ಯಕ್ಷರಲ್ಲಿ ಹಿರಣ್ಯಾಕ್ಷನನ್ನು ಸಂಹರಿಸಲು ಅವತಾರ ಮಾಡಿರುವದು ಮತ್ತೊಂದು ಅವತಾರ.
ಅಖಿಲ ಮಂತ್ರ ದೇವತಾ
ಅನಂತ ವೇದಗಳಿಗೆ ಪ್ರತಿಪಾದ್ಯ ಸ್ವಾಮಿ ಶ್ರೀವರಾಹದೇವರು. ಭೂವರಾಹ ಮಂತ್ರದ ಸಾಕ್ಷಾತ್ ಪ್ರತಿಪಾದ್ಯ ಸ್ವಾಮಿ. ಭೂಮಿ ಒಲೆಯಬೇಕು, ಭೂಮಿಯಲ್ಲಿ ಸುಖವೂ ಬೇಕು, ಭೂಮಿಯಲ್ಕಿ ಸಾಧನೆಯೂ ಆಗಬೇಕು, ಭೂಮಿಯಲ್ಲಿ ಬಂದಿದ್ದಕ್ಕೆ ಸಂಪೂರ್ಣ ಸಾಧನೆಯೂ ಆಗಬೇಕು ಎಂಬ ಬಯಕೆ ಏನಾದರೂ ಇದ್ದರೆ "ಭೂವರಾಹ ಮಂತ್ರವನ್ನು ಜಪಿಸಿ ಅನುಗ್ರಹ ಪಡೆಯಲೇಬೇಕು" ಎಂದು ಶಾಸ್ತ್ರ ತಿಳಿಸುತ್ತದೆ.
ಅಜಿತ !! ಯಜ್ಙಭಾವನ !! ಜಿತಂ ಜಿತಂ ತೇ
ನಮ್ಮ ಸಾಧನೆಗೆ ಇರುವಂತಹವುಗಳು ಯಜ್ಙಗಳು. ಆ ಯಜ್ಙಕ್ಕೆ ಬಳಿಸುವ ಸರ್ವ ಪದಾರ್ಥಗಳೂ ಭೂವರಾಹದೇವರ ಅಂಗಾಂಗಗಳಿಂದ ಹುಟ್ಟಿಬಂದವುಗಳೇ. ಅಂತೆಯೇ ದರ್ಭ ಎಳ್ಳು ಮೊದಲಾದ ವಸ್ತುಗಳಿಗೆ ಅಷ್ಟು ಪಾವಿತ್ರ್ಯ. ಈ ಪದಾರ್ಥಗಳನ್ನು ಬಳಿಸಿದಾಗಲೇ ಯಜ್ಙ ಪರಿಪೂರ್ಣ.
ಯಜ್ಙಕ್ಕೆ ಬೇಕಾದ ಮಂತ್ರಗಳಿಗೆ ಸ್ಚಾಮಿ ವರಾಹದೇವರು. ಯಜ್ಙಕ್ಕೆ ಬಳಿಸುವ ಪದಾರ್ಥಗಳಿಗೆ ಸ್ವಾಮಿ ವರಾಹ ದೇವರು. ಯಜ್ಙಮಾಡುವ ಸ್ಥಳವನ್ನು ಉದ್ಧರಿಸಿಕೊಟ್ಟವರು ವರಾಹದೇವರು. ಯಜ್ಙಪತಿಯಾದ ನಾರಾಯಣನ ಸ್ಥಾನವಾದ ಮುಕ್ತಿಪಡೆಯಲು ಬೇಕಾದ ಭೂಮಿಯನ್ನು ಕೊಟ್ಟು ಸಾಧನೆ ಮಾಡಿಕೊ ಎಂದು ಹೇಳಿದವರೂ ವರಾಹದೇವರೆ.
ಈ ಭೂಮಿಯಲ್ಲಿ ದೇವರ ಪೂಜೆಗೆ ಭೂಮಿ ಕೊಟ್ಟಿದ್ದು ವರಾಹ ದೇವರು.
ದೇವರ ಅಭಿಷೇಕಕ್ಕೆ ಭಾವಿ ಕೆರೆ ನದಿ ಇತ್ಯಾದಿಗಳಿಗೆ ನೀರು ತುಂಬಲು, ತನ್ನ ಹೆಂಡತಿಯಾದ ಭೂದೇವಿಗೆ ತನ್ನ ಒಡಲಲ್ಲೇ ನೀರು ಇಟ್ಟು ಕೊಳ್ಳಲು ಆಜ್ಙಾಪಿಸಿದವರು ವರಾಹದೇವರು. "ಭೂಮಿ ಬೇಕು, ಭೂಮಿಯಲ್ಲಿಯ ನೀರೂ ಬೇಕು ಆದರೆ ಭೂಮಿಯಲ್ಲಿ ದೇವರ ಪೂಜೆ ಮಾತ್ರ ಬೇಡ" ಎಂಬ ಧೋರಣೆ ನಮ್ಮದು. ಈ ಧೋರಣೆ ಹಿರಣ್ಯಾಕ್ಷನದೇ.
ವರಾಹ ದೇವರ ಕಾರುಣ್ಯ
ಸ್ಮರಿಸಿದವರ ಪಾಪಕಳೆದು ಇಷ್ಟಾರ್ಥ ಈಡೇರಿಸುವ ದೊರೆ ವರಾಹ. ಈ ಕರುಣೆ ಈ ಜಗತ್ತಿನ ಯಾವ ದೊರೆಯೂ ಮಾಡಲಾರ. (ಮಾಡುವವರು ಇದ್ದರೆ ತಿಳಿಸಿ ಅವನ ಸ್ನರಣೆಗೆ ನಾನೇ ಮೊದಲು ಇರುವೆ....)
ಭೂಮಿ ಗೆ ಆಜ್ಙೆ ಮಾಡಿದ "ಒಂದು ಧಾನ್ಯಕ್ಕೆ ಒಂದೇ ಕೊಡಬೇಡ, ಸಾವಿರಾರು ಕಾಳುಗಳನ್ನು ಕೊಡು" ಎಂದು. ನಮ್ಮ ಮೇಲೆ ಕರುಣೆ ಮಾಡಿ ಈ ಆಜ್ಙೆ ಅಂದು ವರಾಹ ದೇವರು ಮಾಡದೇ ಹೋಗಿದ್ದರೆ, ಭೂ ದೇವಿ ಒಂದು ಬೀಜಕ್ಕೆ ಒಂದೇ ಕಾಳು ಕೊಟ್ಟಿದ್ದರೆ, ತಿನ್ನುವದಕ್ಕೆ ಯಾವದು..?? ಬೀಜಕ್ಕೆ ಯಾವದು..??? ಮಾರುವದಕ್ಕೆ ಯಾವದು..?? ಎಂಥ ದುರವಸ್ಥೆ ಬರಬಹುದಾಗಿತ್ತು ಎಂದು ಒಂದು ಬಾರಿ ಯೋಚಿಸಿದರೂ ಸಾಕು ವರಾಹ ದೇವರ ಕಾರುಣ್ಯ ಯಾವ ಮಟ್ಟದಲ್ಲಿ ಇದೆ ಎನ್ನುವದು ಮನವರಿಕೆಯಾಗುತ್ತದೆ.
ಕಾಣುವದು ಹೇಗೆ..??
ಈ ಮಹಾನ್ ಕಾರುಣಿಕನಾದ ಭೂವರಾಹದೇವರನ್ನು ಕಾಣುವ ಬಗೆ ಹೇಗೆ ಎಂಬ ಪ್ರಶ್ನೆ ನಮಗೆ ಬಾರದಿದ್ದರೂ ಭಾಗವಕ್ಕೆ ಬಂದಿದೆ. ಬಹಳ ಸುಂದರವಾದ ಉತ್ತರ ಕೊಡುತ್ತದೆ "ವೈರಾಗ್ಯಭಕ್ತ್ಯಾತ್ಮಜಯಾನುಭಾವಿತಜ್ಙಾನಾಯ" ಎಂದು.
ವೈರಾಗ್ಯ ಹಾಗೂ ಭಕ್ತಿ ಇವುಗಳ ಸಂಯೋಗದ ಸಂಗಮದ ಅನುಭವದಲ್ಲಿ ಪ್ರಕಾಶಿಸುವವರೇ ವರಾಹದೇವರು ಎಂಬ ಸುಲಭ ಮಾರ್ಗವನ್ನು ತಿಳಿಸುತ್ತಾರೆ. "ಹಣದಿಂದ ವರಾಹ ದೇವರ ದರ್ಶನವಾಗ್ತಿದ್ದರೆ ಹೇಳಿ, ಈ ಸುಲಭ ಮಾರ್ಗ ನಮಗೆ suit ಆಗಲ್ಲ" ಎಂಬ ಧೋರಣೆ ನಮ್ಮದು.
ಏಕಾಂತದಲ್ಲಿ.......
ಸೂರು ಇಲ್ಲದವರು ಕೋಟಿ ಕೋಟಿ ಜನರು. ಬಾಡಿಗೆಯ ಸೂರಿನಲ್ಲಿ ಲಕ್ಷಾವಧಿ ಜನರು. ಶೀಥಿಲವಾದ ಸೂರಿನಲ್ಲಿ ಹಲವರು ಈ ತರಹದ ಅನೇಕರನ್ನು ನೋಡುತ್ತೇವೆ. ಮನೆ ಇರುತ್ತದೆ ಹೊರದಬ್ಬಿರುತ್ತಾರೆ ಅವರನ್ನೂ ನೋಡುತ್ತೇವೆ. ಅತೀ ಆಸೆಯಿಂದ ಸಾಲಮಾಡಿ ಮನೆ ಕಳೆದುಕೊಂಡುವರನ್ನೂ ಕಾಣುತ್ತೇವೆ, ದೇಶವನ್ನೇ ಬಿಟ್ಟು ಬಂದವರನ್ನೂ ನೋಡುತ್ತೇವೆ... ಹೀಗಿರುವಾಗ
ಇನ್ನು ಹಲವರಿಗೆ ಎರಡು ರೂಮಿನ, ನಾಲ್ಕುರೂಮಿನ ಐದು ಐದು ರೂಮುಗಳ duplex ಮನೆಗಳನ್ನು ಕೋಟಿ ಕೋಟಿ ಬೆಲೆಬಾಳುವ ಮನೆಗಳನ್ನು ವರಾಹ ದೇವರು ಕೊಟ್ಟಿದ್ದಾರೆ ಈ ಕರುಣೆ ನೆನೆಯದೇ ಇದ್ದರೆ ನಮ್ಮ ಪರಿಸ್ಥಿ ಇನ್ನೇನಾಗಬಹುದು ಎಂದು ಊಹಿಸಲೂ ಸಾಧ್ಯವಿಲ್ಲ...
ಏನೂ ಇಲ್ಲದೇ ಇದ್ದವರಿಗೂ ವರಾಹದೇವರ ಅನುಗ್ರಹ ಅನಿವಾರ್ಯ, ಎಲ್ಲ ಪಡೆದವರಿಗೂ ವರಾಹದೇವರ ಉಪಕಾರ ಸ್ಮರಣೆ ಅನಿವಾರ್ಯ ಎಂಬ ಮನವರಿಕೆ ಆದರೆ ಸಾಕು...
ನಮೋ ನಮಸ್ತೇ...
ವರಾಹದೇವರ ಅನಿವಾರ್ಯತೆ ಮನವರಿಕೆಯಾಗಿದ್ದರೆ "ಭೂವರಾಹಮಂತ್ರ ಜಪ, ವರಾಹಸ್ತೋತ್ರ, ಭಾಗವತ ತಾತ್ಪರ್ಯನಿರ್ಣಯ ದ್ವಾದಶಸ್ತೋತ್ರ ದಶಾವತಾರ ಸ್ತುತಿ ಮುಂತಾದವುಗಳಲ್ಲಿ ಬಂದ ವರಾಹಶ್ಲೋಕ" ಇತ್ಯಾದಿಗಳನ್ನು ಪಠಿಸೋಣ ಜಪಿಸೋಣ ಅನಂತಾನಂತ ನಮಸ್ಕಾರಗಳನ್ನು ಸಲ್ಲಿಸೋಣ, ಭೂವರಾಹದೇವರಿಗೆ ಪ್ರೀತಿಪಾತ್ರರಾಗಿ ಜೀವಿಸೋಣ....
ಜೈ ವರಾಹ
✍🏽✍🏽✍🏽ನ್ಯಾಸ..
ಗೋಪಾಲ ದಾಸ
ವಿಜಯಾಶ್ರಮ, ಸಿರಿವಾರ.
Comments
ಜೈ ವರಾಹ ಸ್ವಾಮಿ