*ಎನ್ನ ಗುರುಗಳ ಅಡೆದಾವರೆಗಳಿಗೆ ಎನ್ನ ಅನಂತ ನಮನಗಳು*

 *ಎನ್ನ ಗುರುಗಳ ಅಡೆದಾವರೆಗಳಿಗೆ ಎನ್ನ ಅನಂತ ನಮನಗಳು*


*ಎನ್ನದು ಅಜ್ಙಾನಾಂಧಕಾರವಾದರೆ, ಜ್ಙಾನ ಪ್ರಕಾಶರು ಎನ್ನ ಗುರುಗಳು.....*

ಬೆಳಕು ಕತ್ತಲನ್ನು ನಾಶಮಾಡುವದರ ಜೊತೆಗೆ ತನ್ನ  ವರ್ತುಲದಲ್ಲಿ  ಬಂದ ಎಲ್ಲ ಪದಾರ್ಥಗಳನ್ನೂ ಬೆಳಗುತ್ತದೆ. ಹಾಗೆಯೇ ಗುರುಗಳೂ ಸಹ. ನಂಬಿದ ಶಿಷ್ಯರನ್ನೂ ತಮ್ಮ ಪ್ರಕಾಶದಿಂದಲೇ, ಒಂದಲ್ಲ ನೂರಾರುತರಹದ ಪ್ರಕಾಶಗಳನ್ನು ಕೊಟ್ಟು ಬೆಳಗಿಸುತ್ತಾರೆ. ಜ್ಙಾನಜ್ಯೋತಿಗಳಾಗಿಸುತ್ತಾರೆ. 

ನಂಬಿದ ತನ್ನ ಶಿಷ್ಯರ ಅಜ್ಙಾನವನ್ನೂ ಕಳೆಯುತ್ತಾರೆ ಜೊತೆಗೆ ನಂಬಿದ ಶಿಷ್ಯನಿಗೆ ಜ್ಙಾನಪ್ರಕಾಶವನ್ನೂ ಒದಗಿಸುತ್ತಾರೆ. ಅವನೂ ಜಗತ್ತಿನಲ್ಲಿ ತಮ್ಮಂತೆಯೇ, ತನ್ನ ಯೋಗ್ಯತಾನುಸಾರ ಬೆಳಗುವಂತೆ ಮಾಡುತ್ತಾರೆ‌. ಇದುವೇ ಗುರುವಿನ ಮಹತಿ. ಅಂತೆಯೇ ದಾಸರಾಯರು "ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ" ಎಂದರು.  


ಇಂದಿನ ಸಮಾಜ  ಬುದ್ಧಿವಂತರಾದ, ಧನವಂತರಾದ,  ಸ್ವಯಂ ಪ್ರಕಾಶವಂತರನ್ನೇ ಹುಡುಕುತ್ತದೆ,  ಅಷ್ಟೇ ಅಲ್ಲದೆ ಪ್ರಕಾಶವಂತರನ್ನೇ ಬೆಳಕಿಗೆ ತರುತ್ತದೆ. ಆದರೆ ಎನ್ನ ಗುರುಗಳು ಹಾಗಲ್ಲ . ಅಜ್ಙ ಬಧಿರ ಧಡ್ಡ ಏನೆ ಆಗಿದ್ದರೂ, ತಮ್ಮ ಛತ್ರಛಾಯಯಲ್ಲಿ ಇಟ್ಟು  ಪ್ರಕಾಶವಂತ, ಬುದ್ಧಿವಂತರ ನಡುವಿನಲ್ಲಿ ಸೇರಿಸಿ (ನಪಾಸ್ ಮಾಡದೆ, ಕೆಳಗಿಳಿಸದೇ) ಅವನಿಗೂ ತಮ್ಮ ಕರುಣೆ ದಯೆಗಳನ್ನೊಳಗೊಂಡ ತಪಸ್ಸಿನಿಂದ ಒಂದು ಅದ್ಭುತಪ್ರಕಾಶವನ್ನು ಕೊಟ್ಟು ಜಗತ್ತಿನಲ್ಲಿ ತನ್ನ ಯೋಗ್ಯತಾನುಸಾರ ಬೆಳುಗುವಂತೆ ಮಾಡುತ್ತಾರೆ. ಇದುವೇ *ಗುರುಗಳ ಕಾರುಣ್ಯ. ಇಂಥ ಮಹಾತ್ಮರೇ ಎನ್ನ ಗುರುಗಳು. *ಪರಮಪೂಜ್ಯ ಮಾಹುಲೀ ಆಚಾರ್ಯರು. ಆಧ್ಯಾತ್ಮಿಕ ಸಮಸ್ತ ಗುರುವಿನ ಸ್ಥಾನವೂ ಅದೇ ಮಾಟ್ಟದಲ್ಲಿ ಇರುತ್ತದೆ. 


ದೀಪ ಒಂದು ಪ್ರಕಾಶ ಕೊಟ್ಟೀತು. ಆದರೆ  ಎನಗೆ ಒಂದು ಪ್ರಕಾಶ  ಕೊಡುವವರು ಗುರುಗಳಲ್ಲ.. ಜ್ಜಾನ, ಭಕ್ತಿ, ವಿರಕ್ತಿ, ಸಂತೃಪ್ತಿ, ದೇವರಲ್ಲಿ ನಿಷ್ಠೆ, ಗುರುಗಳಲ್ಲಿ ಶ್ರದ್ಧೆ, ಧರ್ಮದಲ್ಲಿ ಆಸ್ತಿಕತೆ, ಸಹನೆ ದಯಾ, ಕ್ಷಮಾ, ಪರೋಪಕಾರ, ಮುಂತಾದ ನೂರಾರು ಪ್ರಕಾಶಗಳನ್ನು ನಂಬಿದವರ ಯೋಗ್ಯತಾನುಸಾರವಾಗಿ ದಯಪಾಲಿಸುವ ಹೆದ್ದೈವ  ದಯಾಮೂರ್ತಿ "ಎನ್ನ ಗುರುಗಳು" ಅಂತೆಯೇ ಗುರುಗಳ ಕರುಣೆ ಸುಸ್ಥಿರವಾಗಿದ್ದವಗೆ ಹರಿ ನಿನ್ನ ಅನುಗ್ರಹವೋ" ಎಂದರು ದಾಸರು. ಗುಣವಂತ ಭಗವಂತನಿಗೆ ತುಂಬ ಪ್ರಿಯ. ಗುಣವಂತನನ್ನಾಗಿ ಮಾಡುವವರೇ ಗುರುಗಳು.

ಮಹಾನ್ ದೊಡ್ಡದಾದ ಬಂಡೆಗಲ್ಲಂತಿರು ಶಿಷ್ಯನನ್ನು ರುಚಿಯಾದ ಸಿಹಿ ನೀರು ಆಗಿ, ಜ್ಙಾನ ಗಂಗೆಯಾಗಿ  ಹರಿಸುತ್ತಾರೆ. ಆ ನೀರೂ ನಿಂತನೀರನ್ನಾಗಿ ಅಲ್ಲ ನಿರಂತರ ಹರಿಯುವ ನೀರನ್ನಾಗಿ ಮಾಡುತ್ತಾರೆ. ನಿಂತ ನೀರು ನಿಂತ ಜ್ಙಾನ ಎರಡೂ ಅನುಪಯುಕ್ತ.  ಹರಿಯುವ ನೀರೂ ಅರ್ವಾಕ್ ಸ್ರೋತಸ್ ಆಗಿ ಕೆಳಮುಖವಾಗಿ ಹರಿಯುತ್ತದೆ. ಆದರೆ ಜ್ಙಾನಗಂಗೆ  ಊರ್ಧ್ವಸ್ರೋತಸ್ಸಾಗಿ ಮೇಲ್ಮುಖವಾಗಿ ಹರಿಸುತ್ತಾರೆ. ಇದು "ಎನ್ನ ಗುರುಗಳ ಒಂದು ಮಹಾ ವೈಭವ" 

ಅಂತಹ ಗುರುಗಳಾದ ಪರಮಪೂಜ್ಯ ಆಚಾರ್ಯರ ಪಾದಾರವಿಂದಗಳಿಗೆ ಕೊಟಿ ಕೋಟಿ ವಂದನೆಗಳು. ಅನಂತಾನಂತ ನಮಸ್ಕಾರಗಳು. 

ಎನ್ನ ಪಾಲಿಗೆ ಎನ್ನಂಥ ಪಾಪಿಷ್ಠರು ಮತ್ತೊಬ್ಬರು ಇಲ್ಲ ನಿಜ, ಆದರೆ ಎನ್ನ ಪಾಲಿಗೆ *ಎನ್ನ ಗುರುಗಳಂಥ ದಯಾಶೀಲರು ಮತ್ತೊಬ್ಬರು ಜಗತ್ತಿನಲ್ಲಿಯೇ ಇಲ್ಲ* ಇದುವೂ ಅಷ್ಟೇ ನಿಜ. ಅಂತೆಯೇ "ಗುರುರಗುರುರ್ಗುರುರಿತಿ ಜಪತೋ ನಾಸ್ತಿ ಪಾತಕಮ್" ಎಂದಿತು ಶಾಸ್ತ್ರ. 


ಹೇ ಗುರೋ! ನಿಮ್ಮ ಅಡೆದಾವರೆಗಳಿಂದ ವಿಮುಖನಾದರೆ ಒಳ್ಳಯದು ಎಂಬುವದು ಕನಸ್ಸಿನಲ್ಲಿಯೂ ಇಲ್ಲ. "ಗುರುಗಳೆಂಬ ತಾವರೆಗೆ ದುಂಬೆಯಂತಾಗಲಿ ಎನ್ನ ಮನ" ಹಾಗಾದಾಗ ಮಾತ್ರ ಜ್ಙಾನವೆಂಬ ಸಿಹಿ ಪಡೆಯಲು ಸಾಧ್ಯ. ಅಂತೆಯೇ ತಮ್ಮ ಅಡೆದಾವರೆಗಳಿಗೆ "ಕೋಟಿ ಕೋಟಿ ಪ್ರಣಾಮಗಳು. ಅನಂತಾನಂತ ವಂದನೆಗಳು" 


*ನಮ್ಮ ಸರ್ವಸ್ವವೂ ಗುರುಗಳ ಅಡೆದಾವರೆಗೆ.....*


ಹನಿ ಹನಿ ಸೇರಿದರೆ ಅದು ಕಡಲು. ಹನಿ ಕಡಲಿನಲ್ಲಿ ಎಷ್ಟು ಸುರಕ್ಷಿತವೋ ಅಷ್ಟೇ ಅಸುರಕ್ಷಿತ ತಾನು ಕಡಲು ಸೇರದೆ ತಾನಾಗಿ ಇದ್ದರೆ. ಹಾಗೆಯೇ "ನಮ್ಮ ಹನಿ ಹನಿಯಂತೆ ಇರುವ ಪುಣ್ಯ ಗುರುಗಳು ಎಂಬ ಕಡಲು ಸೇರಿದರೆ ಆ ಪುಣ್ಯ ಸುರಕ್ಷಿತ, ಮಹಾಫಲಕಾರಿ" ಇಲ್ಲವಾದಲ್ಲಿ ಕ್ಷಯಿಸುವದು ನಿಶ್ಚಿತ. 

ಗುರು ಎಂಬ ಕಡಲು ಸೇರದೆ ನಮ್ಮ ಸನಿಹ ಇಟ್ಟುಕೊಂಡರೆ ಫಲ ಸಿಗುವದೂ ಇಲ್ಲ, ಅನರ್ಥಕಾರಿಯೂ ಅಗುತ್ತದೆ. ಆದ್ದರಿಂದ ನಮ್ಮ ಪುಣ್ಯವನ್ನು ಅನಂತಾನಂತ ಸಾಷ್ಟಾಂಗ ನಮಸ್ಕಾರಪೂರ್ವಕ ನಮ್ಮ ಗುರುಗಳ ಪಾದಾರವಿದಗಳಲ್ಲಿ  ಸಮರ್ಪಿಸೋಣ. "ಅನೇನ ಭಾವಿ ಯತ್ಪುಣ್ಯಂ ಅವಾಪ್ನೋತು ಗುರುರ್ಮಮ" ಎಂದು. 


*✍🏼✍🏼✍🏼ನ್ಯಾಸ...*

(ಗೋಪಾಲ ದಾಸ.

ವಿಜಯಾಶ್ರಮ, ಸಿರವಾರ)

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*