ಪ್ರಿಯಕೃತ್ ಪ್ರೀತಿವರ್ಧನಃ



 


ಅನ್ಯರನ್ನು ಪ್ರೀತಿಸದೇ, ಪ್ರೀತಿಸು ದೇವರನ್ನು...

ಪ್ರೀತಿಸುವದು ಪ್ರೀತಿ ಎಂಬುದೇನಿದೆ ಜೀವನದ ಅತ್ಯಮೂಲ್ಯ ವಸ್ತು. ಪ್ರೀತಿಎಂಬುವ ಒಂದು ಪದಾರ್ಥವೇ ಇಲ್ಲ ಎಂದಾಗಿದ್ದರೆ‌ ಜೀವರ ಜೀವನವೇ ಇರುತ್ತಿದ್ದಿಲ್ಲ. ಬದಕನ್ನೇ ಪ್ರೀತಿಸುತ್ತಿದ್ದಿಲ್ಲ. "ಬದುಕಿಗೋಸ್ಕರ ಪ್ರೀತಿಯ ಆವಶ್ಯಕತೆ, ಪ್ರೀತಿಯಿಲ್ಲದ ಬದುಕು ಇಲ್ಲವೇ ಇಲ್ಲ" ಇದು ಶಾಶ್ವತ ಸತ್ಯ ಮಾತು.

ಪ್ರೀತಿ ಒಂದು ಕಡೆಯಿಂದ ಹರಿಯುವ ವಸ್ತುವಲ್ಲ. ಎರಡೂಕಡೆಯಿಂದ ಹರೆದಾಗ ಪ್ರೀತಿ ಪ್ರೀತಿ ಎನಿಸುತ್ತದೆ. ಬದುಕಿಗೋಸ್ಕರ ಪ್ರೀತಿ ಎಂದಾದಮೇಲೆ ಪ್ರೀತಿಸುವಿಕೆ ಪ್ರೀತಿಸುವದು ಅನಿವಾರ್ಯ.   ಪ್ರೀತಿಸುವದೇ ಆದರೆ ದೇವರನ್ನೇ ಪ್ರೀತಿಸುವ ಆಯ್ಕೆ ಮೊದಲಿರಲಿ. ಯಾಕೆಂದರೆ  ಆ ಪ್ರೀತಿಗೆ ಬರವಿಲ್ಲ. ಎರಡೂಕಡೆ ಇಂದ ಸಾಗುವ ಪ್ರೀತಿಯೇ ನಿಜವಾದ ಪ್ರೀತಿ. ದೇವರ ಕಡೆಯಿಂದ ಪ್ರೀತಿ ಇದ್ದೇ ಇದೆ. ಅಂತೆಯೆ ನಿನ್ನನ್ನು ಸಾಕುವ, ಪೋಷಿಸುವ, ಆಪತ್ತಿನಿಂದ ರಕ್ಷಿಸುವ, ನಿರಂತರ ನಿನ್ನೊಡೆಗೆ ಇರುವ, ಕ್ಷಣಕಾಲ‌ ನಿನ್ನ  ಬಿಟ್ಟು ತೊಲಗ. ನಿನ್ನ ಕಡೆಯಿಂದ ಪ್ರೀತಿ ಅವನಿಗೆ ದೊರೆಯಬೇಕು ಅಷ್ಟೆ. ಆಗ ಪರಿಪೂರ್ಣ ಯಶಸ್ವೀ. 


*ದೇವರನ್ನು ನಾವು ಪ್ರೀತಿಸುತ್ತೇವೆಯಾ.....???


ದೇವರು ತುಂಬ ವಿಚಿತ್ರ..... 

ನಾವು ಪೂಜಿಸುತ್ತೇವೆ, ದೇವ ಸುಮ್ಮನಿರುತ್ತಾನೆ.

ನೈವೇದ್ಯ ಇಡುತ್ತೇವೆ, ದೇವ ಸುಮ್ಮನೇ ಇರುತ್ತಾನೆ.

ಆರತಿ ಮಾಡುತ್ತೇವೆ, ಅಲಗುವದಿಲ್ಲ.

ಸ್ತುತಿ ಮಾಡುತ್ತೇವೆ, ತಲೆತೂಗುವದಿಲ್ಲ. 

ಮಾನಸಿಕ ಚಿಂತನೆ ಎಂದ್ಹೆಳುತ್ತೇವೆ, ಎಷ್ಟು ಒಪ್ಪಿಗೆ ಆಯಿತು ಗೊತ್ತಾಗಲ್ಲ. 

ಜಪ ಧ್ಯಾನ ಮಾಡ್ತೇವೆ, ಸ್ವೀಕರಿಸಿದನಾ ತಿಳಿಯಲ್ಲ.

ಸಮರ್ಪಿಸುತ್ತೇವೆ, ಎಷ್ಟು ಸಂತುಷ್ಟನಾದನೋ ಅಸಲು ತಿಳಿಯುವದೇ ಇಲ್ಲ.......


ಆದರೂ ಪೂಜೆ, ಅಭಿಷೇಕ, ನೈವೇದ್ಯ ಸಮರ್ಪಣೆ, ಆರತಿ, ಮಾನಸಿಕ ಚಿಂತನೆ, ಜಪ, ಸಮರ್ಪಣೆ ಯಾವದನ್ನೂ ಬಿಡುವದಿಲ್ಲ ಅಲ್ವಾ....  ಇದುವೇ ದೇವರಲ್ಲಿಯ ಪ್ರೀತಿಯ ದ್ಯೋತಕ.... ಪ್ರೀತಿಯಿದೆ ಎಂದಾಯ್ತು. 


ಆದರೆ..... 

ನಮ್ಮ ಮನಸ್ಸು ಕಲ್ಪಿಸಿಕೊಳ್ಳುವದರಲ್ಲಿ ತುಂಬ ಜಾಣ. ಕಲ್ಪನಾ ಲೋಕದಲ್ಲಿಯೇ ತಾನು ಮಾಡಿದ ಸಾರ್ಥಕತೆಯನ್ನು ಅರಿತುಕೊಳ್ಳುತ್ತಾ, ತಾನು ಏನು ಮಾಡುತ್ತೇನೆ ಅದೇ ಶ್ರೇಷ್ಠ ಎಂದೇ ಭಾವಿಸುತ್ತಾ ಕಲ್ಪನೆಯಯಲ್ಲಿ ಸಾಗುತ್ತೇನೆ..... ಇದು ಹುಟ್ಟು ಸ್ವಭಾವ. 


ದೇವರಿಗೆ ಇದೇ ಇಷ್ಟವಾಯಿತು. ದೇವರಿಗೆ ಈ ಹೂ ತುಂಬನೇ ಪ್ರೀತಿ.

ಹಳದಿಯ ರೇಷ್ಮೆ ಬಟ್ಟೆ ಬಹಳೇ ಇಷ್ಟ.

ತುಪ್ಪದ ದೀಪ ಬೆಳಕು ಅಂದರೆ ಪಂಚಪ್ರಾಣ.

ನನ್ನ ಸ್ತುತಿಗೆ ಒಲಿದು ಬರಲೇಬೇಕು.

ಆಚಾರ ವಿಚಾರ (ಮಡಿ ಮೈಲಿಗೆ) ಉತ್ತಮ, ಆದರೆ ಮನಸ್ಸು ಶುದ್ಧಿ ಬಹಳೇ ಉತ್ತಮ.

ಬಾಹ್ಯ ಡಾಂಭಿಕ ಆಚಾರ ಬೇಡ, ಭಕ್ತಿ ಭಾವ ಮುಖ್ಯ...  

ಹೀಗೆ ತನ್ನ ಮೂಗಿನ ನೇರವೇ ಕಲ್ಪನೆಗಳ ಸುರಿಮಳೆ ಸುರಿಸುತ್ತಾ ಸಾಗುವ. *ಈ ಕಲ್ಪನಾಲೋಕವೇನಿದೆ, ಇದು ಕಾಲ್ಪನಿಕವೇ ಹೊರತು ಪ್ರಾಮಾಣಿಕ ಎಂದಾಗಲಾರದು.* ಕಾಲ್ಪನಿಕತೆಯಲ್ಲಿ ನೈಜ ಪ್ರೀತಿ ದೊರಕದು. ಪ್ರಾಮಾಣಿಕತೆ ಎಂದರೆ ಪ್ರಮಾಣಸಿದ್ಧವಾದ ವಿಷಯದಲ್ಲಿಯೇ ನೈಜತೆ ಅಡಗಿದೆ. 

ನೀನು ಕೊಟ್ಟ ಪೀತಾಂಬರದಿಂದಲೇ ದೇವರು ಬಟ್ಟೆ ಉಡುವ ಎಂದೇನಿಲ್ಲ. ನೀ ಕೊಟ್ಟ ಹೂವೇ ಅವನಿಗೆ ಸಂತೃಪ್ತಿ ಎಂದೂ ಇಲ್ಲ. ನೀ ಮಾಡಿದ ಮಡಿಯೇ ಸರ್ವಶ್ರೇಷ್ಠ ಎಂದೂ ಇಲ್ಲ. ನೀ ಮಾಡಿದ ಧ್ಯಾನ ಚಿಂತನೆ ಭಕ್ತಿ ಭಾವ ಇವುಗಳೇ ಸರ್ವಶ್ರೇಷ್ಠ ಎಂದು ಸರ್ವಥಾ ಇಲ್ಲ. ನಾವು ಕೊಟ್ಟ ಎಲ್ಲವೂ ದೇವರಿಗೆ ಒಂದರ್ಥದಲ್ಲಿ ಅತೀಕ್ಷುದ್ರವಾದ ವಸ್ತುಗಳೇ. ಲಕ್ಷ್ಮೀ ವಾಯುದೇವರುಗಳು ಪೂಜಿಸುವ ಪೂಜೆಗೆ ಕೊಟ್ಯಂಶಕ್ಕೆ ಸಮವಲ್ಲ. ನಮಗೆ ತುಳಸಿ ಎನಿಸಿರಬಹುದು. ದೇವರ ವಿಷಯದಲ್ಲಿ ಅದೊಂದು ತೊಪ್ಪಲ. ಯಾಕೆಂದರೆ ಲಕ್ಷ್ಮೀದೇವಿಯೇ ಒಂದುರೂಪದಿಂದ ತುಲಸಿಯಾಗಿ‌ಸಮರ್ಪಿತಳಾಗುತ್ತಾಳೆ. ಆ ತುಳಸಿ ನಮ್ಮಿಂದ ಲಗ ಹೊಡೆದರೂ ಸಮರ್ಪಿಸಲಾಗುವದಿಲ್ಲ. ಹೀಗೆಯೇ ಪ್ರತಿಯೊಂದೂ ತಿಳಿಯಬೇಕು. 


ದಾಸರಾಯರು ಹೇಳುತ್ತಾರೆ.... 

"ಹೇಗೆ ಅರ್ಚಿಸಲಿ ನಿನ್ನ... ಹೇಗೆ ಮೆಚ್ಚಿಸಲಿ ನಿನ್ನ...!!" ಎಂಬ ಹಾಡಿನಲ್ಲಿ.


ದೀಪ ಹಚ್ಚಿ ಸಂತೋಷಿಸುವೆ ಎಂದರೆ  ನಿನ್ನದೇ ಆದ ಅನಂತ ಸೂರ್ಯರ ಪ್ರಕಾಶ ನಿನಗಿದೆ. 

ಮಂತ್ರ ಹೇಳಿ ಸ್ತುಸುವೆ ಅಂದರೆ, ಸ್ವಯಂ ನೀನು ವಾಯುದೇವರಿಂದಲೇ ಅನಂತ ವೇದಗಳಿಂದ ನಿರಂತರ ಸ್ತೋತ್ರ ಮಾಡಿಸಿಕೊಳ್ಳುತ್ತಿ. ಶೇಷ ಸಾವಿರ ಹೆಡಗಳಿಂದ ನಿರಂತರ ಸ್ತುತಿಸುವ.

ಗಾಳೆ ಬೀಸುವೇ ಎಂದರೆ ಛಂದೋಮಯನಾದ ಗರುಡ ತನ್ನಪಕ್ಕದಿಂದಿಂ ಗಾಳಿಬೀಸಯವ.... 

ಭಂಗಾರ ಒಡೆವೆಗಳನ್ನು ಅರ್ಪಿಸಿ‌ ಮೆಚ್ಚಿಸೋಣ ಎಂದರೆ, ಸ್ವಯಂ ನೀನು ಲಕ್ಷ್ಮೀಪತಿಯಾಗಿರುವಿ. "ಹೇಗೋ ನಿನ್ನನ್ನು ಅರ್ಚಿಸಲಿ.... ??? ಹೇಗೆ ಮೆಚ್ಚಿಸಲಿ....??" 

ನಿನ್ನನ್ನು ಮೆಚ್ಚಿಸಲು ಅರ್ಚಿಸಲು ಪ್ರೀತಿಸಲು ಎನ್ನಿಂದ ಸುತರಾಂ ಸಾಧ್ಯವಿಲ್ಲ ಎಂದು ದೀನನಾಗಿ, ಶಾಸ್ತ್ರ ಏನೆಲ್ಲ ಹೇಳಿದೆ ಅಷ್ಟನ್ನು ಅಚ್ಚುಕಟ್ಟಾಗಿ ಮಾಡುವದೇ ಎನ್ನ ಕರ್ತವ್ಯ ಎಂದು ಭಾವಿಸಿ, *ನಿಷ್ಕಾಮಂ ಜ್ಙಾನಪೂರ್ವಂ ತು ನಿವೃತ್ತಮಿತಿ ಚೋಚ್ಯತೆ* ಎಂದು ಶಾಸ್ತ್ರ ಹೇಳಿದಂತೆ (ತಂತ್ರಸಾರಾದಿ ಶಾಸ್ತ್ರ ಹೇಳಿದಂತೆ ಜ್ಙಾಪೂರ್ವಕವಾಗಿ, ಮತ್ತು ಭಗವಂತನ ಸರ್ವೋತ್ತಮತ್ವವನ್ನು ಅರಿತು. ಜ್ಙಾನ, ಭಕ್ತಿ, ವಿಷ್ಣುಪ್ರೀತಿಗಳನ್ನುಳಿದು ಯಾವ ಕಾಮನೆಗಳಿಲ್ಲದೇ ಮಾಡಿದ ಪೂಜೆ ನಿವೃತ್ತ ಪೂಜೆ. ಈ ಪೂಜೆಯನ್ನು ಮಾಡಿದವನಿಗೆ ದೇವರೇ ಫಲ.)  ಪೂಜಿಸಿದರೆ ದೇವರಲ್ಲಿಯ ಪ್ರೀತಿ ಇಮ್ಮಡಿ ಮುಮ್ಮಡಿಯಾಗಿ ಅಭಿವೃದ್ಧಿಸುತ್ತದೆ. ಇದುವೇ ನಿಜವಾದ ಪ್ರೀತಿ. 


ದೇವರನ್ನು ಪ್ರೀತಿಸುವ ಭರದಲ್ಲಿ ನಿನ್ನನ್ನು ನೀನು ನಾಶಮಾಡಿಕೊಳ್ಳಬೇಡ. ಅದುವೇ ಮೂಢನಂಬಿಕೆ ಎಂದಾಗತ್ತೆ. ವೇದಹಾಭಾರತ ಮೊದಲಾದ ಶಾಸ್ತ್ರಗಳು ಪ್ರಾಣ ಕಳೆದುಕೊ ಆತ್ಮಹತ್ಯೆ ಮಾಡಿಕೊ ಎಂದು ಎಲ್ಲಿಯೂ ಹೇಳಿಲ್ಲ. ಆತ್ಮಹತ್ಯೆ ಮಹಾಪಾಪ ಎಂದೇ ಸಾರಿದೆ. "ಸಾಧನ ಶರೀರವಿದು" ಹಾಗಾಗಿ ನಿನ್ನನ್ನು ನೀನು ಮೊದಲು ಪ್ರೀತಿಸು. ದೇವರನ್ನು ಪ್ರೀತಿಸುವ ಭರದಲ್ಲಿ ನಿನ್ನನ್ನು  ಹಾಗೂ ನಿನ್ನವರನ್ನು ನೀ ಪ್ರೀತಿಸದೇ ಇರಬೇಡ. ದೇವರೊಬ್ಬನನ್ನು ಪ್ರೀತಿಸಿದಾಗ ಈ ಎಲ್ಲರಲ್ಲೂ ಪ್ರೀತಿ ಹುಟ್ಟತ್ತೆ ಅದುವೂ ಅಷ್ಟೇ ನಿಜ. 


"ದೇವರೊಬ್ನನನ್ನೇ ಪ್ರೀತಿಸಿದರೆ ಸಾಕು, ಎಲ್ಲವೂ ಪ್ರಿಯವಾಗಿಯೇ ಬಂದೊದಗುತ್ತವೆ, ನಿನಗೆ ನೀನು ಪ್ರಿಯನಾಗುವದೂ, ನಿನ್ನ ಹೆಂಡತಿ ಮಕ್ಕಳು ಧನ ಕನಕ ಮನೆ ಮಠ ಗೆಳಯ ಸ್ನೇಹಿತ ಮೊದಲಾದವರು ಪ್ರಿಯರಾಗುವದೂ ದೇವರು ಪ್ರಿಯನಾಗುವದರಿಂದ." ಎಂಬ ಉಪನಿಷದ್ವಾಣಿಯೂ ಇರುವದರಿಂದ  ಪ್ರೀತಿಸುವದು ಎಂದಾದರೆ ದೇವರನ್ನೇ ಪ್ರೀತಿಸೋಣ...... ದೇವರನ್ನು ಪ್ರೀತಿಸು ದೇವರು ಪ್ರೀತಿಯನ್ನು ಬೆಳೆಸುವ


*✍🏽✍🏽✍ನ್ಯಾಸ...*

ಗೋಪಾಲ ದಾಸ.

ವಿಜಯಾಶ್ರಮ, ಸಿರವಾರ.

Comments

Anonymous said…
ಅತ್ಯಂತ ಸುಂದರವಾಗಿದೆ ಆಚಾರ್ಯರೆ...

ನಿಮಗಿದೋ ನಮನಗಳು
Anonymous said…
Hatsofff gurujuuu
Unknown said…
ತುಂಬಾ santosh vaayu. ಕೆಲವು shabdagalantu aanandadinda
ನಗಿಸಿದವು.
Hare sreenivasa

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*