*ಶ್ರೀ ಸುಶಮೀಂದ್ರತೀರ್ಥರು*
ನಡೆದಾಡುವ ರಾಯರೇ ಎಂದು ಪ್ರಸಿದ್ಧರಾದ, ತಪಸ್ವಿಗಳಾದ, ಸಿದ್ಧಪುರುಷರಾದ, ನಗುಮೊಗದ, ಸದಾ ಅನುಗ್ರಹೋನ್ಮುಖರಾದ, ವೈಯಕ್ತಿಕವಾಗಿ ನನಗೆ ಮಹಾ ಅನುಗ್ರಹ ಮಾಡಿದ, ಮಹಾಸ್ವಾಮಿಗಳು ಎಂದರೆ ಪ್ರಾತಃಸ್ಮರಣೀಯ ಶ್ರೀಶ್ರೀಸುಶಮೀಂದ್ರತೀರ್ಥರು. ಆ ಮಹಾಗುರುಗಳ ಆರಾಧನಾ ಮಹೋತ್ಸವ ಇಂದು. ಅವರ ಸ್ಮರಣೆ ಪ್ರತಿದಿನದಂದು.
*ಆಶ್ರಮ ಹಾಗೂ ವೃಂದಾವನ*
ಬಿಚ್ಚಾಲೆಯ ಸುಕ್ಷೇತ್ರದಲ್ಲಿ, ರಾಯರ ಮೊದಲ ಮೃತ್ತಿಕಾ ವೃಂದಾವನ ಸನ್ನಿಧಿಯಲ್ಲಿ ಶ್ರೀಸುಜಯೀಂದ್ರರಿಂದ ಆಶ್ರಮಪಡೆದ ಧೀರರು. ಇಪ್ಪತ್ತುನಾಲ್ಕುವರ್ಷ ವೈಭವದಜೀವನ ಸಾಗಿಸಿದ ಮಹಾನ್ ಪುರುಷರುವರು. ಇಂದಿಗೂ ರಾಯರ ದಿವ್ಯಸನ್ನಿಧಿಯಿಂದ ಕೂಡಿದ ಮಂತ್ರಾಲಯಕ್ಷೇತ್ರದಲ್ಲಿ ಬಂದಭಕ್ತರೆಲ್ಲರಿಗೂ ಅನುಗ್ರಹಿಸುತ್ತಾ ನೆಲಿಸಿದ ಪುಣ್ಯಾತ್ಮರಿವರು.
ನಾನು ಚಿಕ್ಕವನಿದ್ದಾಗ ತಿಳಿದಿದ್ದು ಎಂದರೆ *ಸ್ವಾಮಿಗಳು ಎಂದರೆ ಶ್ರೀಸುಶಮೀಂದ್ರತೀರ್ಥರೊಬ್ಬರೇ* ಎಂದು. 1990 ಆದಮೇಲೆ ತಿಳಿತು ಬೇರೆ ಸ್ವಾಮಿಗಳೂ ಇದ್ದಾರೆ ಎಂದು.
*ಮಹಾತಪಸ್ವಿಗಳು*
ನಿರಂತರ ರಾಮದೇವರ ರಾಯರ ಆರಾಧಕರು. ಕ್ಷಮಾ ಸಹನೆ ವಿಷ್ಣುಭಕ್ತಿ ತತ್ವಜ್ಙಾನ ದಯಾ ಕಾರುಣ್ಯ ಕಾಳಜಿ ಇವೆ ಮೊದಲಾದ ನೂರಾರು ಸದ್ಗುಣ ವಿಭೂಷಿತರು. ಒಳಗೆ ಎಷ್ಟು ಕಷ್ಟಗಳಿದ್ದರೂ ನಗುಮುಖ ಕುಂದಿದ್ದು ಎಂದೂ ನೋಡಿಯೇ ಇಲ್ಲ ಎಂದು ಹತ್ತಿರದ ಜನರ ಮಾತಾಗಿತ್ತು. ಅಂದದ್ದು ಆಗಬೇಕು. ನುಡಿದಂತೆ ನಡೆಯಲೇ ಬೇಕು. ಮನಸ್ಸಿಗೆ ಬಂದದ್ದು ಸಾಗಲೇಬೇಕು. ಅನುಗ್ರಹವೋ ಶಾಪವೋ ಫಲಕಾರಿ ಆಗಲೇಬೇಕು.
*ಪಂಡಿತರ ಜ್ಙಾನಿಗಳ ಪ್ರೇಮಿ*
ಪಂಡಿತರು ಜ್ಙಾನಿಗಳು ವಿದ್ಯಾರ್ಥಿಗಳು ಕಾಣಿಸಿದರೆ ಸಾಕು ಪ್ರೇಮ ಉಕ್ಕಿ ಹರಿತಿತ್ತು. ಮನಃಪೂರ್ವಕ ಹರಿಸುತ್ತಿದ್ದರು. *ಮಂತ್ರಾಕ್ಷತೆಯ ಬುಟ್ಟಿಯಲ್ಲಿ ಎಷ್ಟಿದೆಯೋ ಅಷ್ಟೆಲ್ಲ ಹಣವನ್ನು ಕೊಟ್ಟು ಕಳುಹಿಸಬೇಕು.* ಇವರಿಗಿಷ್ಟು ಅವರಿಗಿಷ್ಟು ಅನ್ನುವದೇ ಇರಲಿಲ್ಲ. ಕೈಗೆಷ್ಟು ಸಿಕ್ಕಿತೋ ಅಷ್ಟು ಅವರಪಾಲು. ಈ ಕ್ರಮದ ಅನುಗ್ರಹ ನನ್ನಮೇಲೆ ಹತ್ತಾರುಬಾರಿಯಾದರೂ ಮಾಡಿರಬೇಕು. ಅನೇಕ ವಿದ್ವಾಂಸರ ವಿದ್ಯಾರ್ಥಿಗಳ ಅನುಭವವೂ ಹೀಗೇ ಇದೆ.
*ರಾಮದೇವರ ಪೂಜೆ*
ಮಹಾಸ್ವಾಮಿಗಳು ರಾಮದೇವರ ಪೂಜೆಗೆ ಕುಳಿತಿದ್ದಾರೆ ಎಂದರೆ ಆ ಗಾಂಭೀರ್ಯವೇ ವೈಭವದಿಂದ ಇರುತ್ತಿತ್ತು. ಆಚೆ ಈಚೆ ಲಕ್ಷ್ಯವೇ ಇರದಷ್ಟು ಮೈಮರೆತು ಕೂಡುತ್ತಿದ್ದರು. ಆ ದೃಶ್ಯವೇ ಮನಮೋಹಕ. ಮಧ್ಯೇ ಮಧ್ಯೆ ರಾಮದೇವರನ್ನು ನೋಡಿ ಮಾತಾಡಿ ಸಂತೃಪ್ತರಾದಂತೆ ಧನ್ಯತೆಯ ನಗು ಇರ್ತಿತ್ತು ಅದಂತೂ ಅತ್ಯದ್ಭುತ. ಆ ನಗು ನೋಡಲಿಕ್ಕೆ ಮುಗಿಬೀಳುವ ಜನರಿದ್ದರು.
*ರಾಯರ ಪರಮಭಕ್ತರು*
ರಾಯರ ತರುವಾಯ ಬಂದ ಎಲ್ಲರೂ ರಾಯರ ಭಕ್ತರೇ. ಒಂದಿಲ್ಲ ಒಂದುದ್ದೇಶ್ಯ ಇಟ್ಟುಕೊಂಡೇ ಭಕ್ತಿ ಮಾಡಿದವರು ಎಲ್ಲರೂ. ಜ್ಙಾನಕ್ಕಾಗಿ ಹಲವರು, ಮಠ ನಡೆಯುವದಕ್ಕಾಗಿ ಹಲವರು, ಹಣಕ್ಕಾಗಿ ಹಲವರು, ಕುಟುಂಬಕ್ಕಾಗಿ ಮತ್ತೆ ಹಲವರು. ಒಂದಿಲ್ಲ ಒಂದು ಕಾರಣಕ್ಕೆ ರಾಯರು ಬೇಕೇಬೇಕು. ಆದರೆ *ಈ ಮಹಾ ಸ್ವಾಮಿಗಳು ಮಾತ್ರ "ರಾಯರಿಗಾಗಿ ರಾಯರು ಬೇಕು" ಎಂದು ತಿಳಿದು ಭಕ್ತಿ ಮಾಡುವ ಆರಾಧಿಸುವ ನಿರ್ವ್ಯಾಜ ಭಕ್ತರು....* ಅಂತೆಯೇ ರಾಯರ ದಿವ್ಯ ಸಾನ್ನಿಧ್ಯಪಡೆದ ವಿಭೂತಿಗಳು. ಅಂತೆಯೇ ನಡೆದಾಡುವ ರಾಯರೇ ಎಂದು ಪ್ರಸಿದ್ಧರೂ ಆದರು.
*ಮಹಾ ಅನುಗ್ರಹ*
93ನೇಯ ಇಸ್ವಿಪ್ರಸಂಗದಲ್ಲಿ ಗುರುಕುಲವಾಸಕ್ಕೆ ತೆರಳಲು ಸಿದ್ಧನಾದೆ. ಸತ್ಯಧ್ಯಾನವಿದ್ಯಾಪೀಠಕ್ಕೆ ಕಳಿಸುವದು ನಿಶ್ಚಿತವಾಗಿತ್ತು.
ಅನಾದಿ ಸತಗಸಂಪ್ರದಾಯಪರಂಪರಾ ಪ್ರಾಪ್ತ ಶ್ರೀಮನ್ ಮಧ್ವವಾಚಾರ್ಯರ ಸಿದ್ಧಾಂತ ತಿಳಿಯಲು ಅತ್ಯವಶ್ಯಕ *ಶ್ರೀರಾಘವೇಂದ್ರಗುರುಸಾರ್ವಭೌಮರ ಅನುಗ್ರಹ* ಎಂದೆ ಭಾವಿಸಿದ ನನ್ನ ಹಿರಿಯರು ಮಂತ್ರಾಲಯಕ್ಕೆ ಕರೆದುಕೊಂಡು ಹೋದರು. ಅಲ್ಲಿಂದಲೇ ಮುಂಬಯಿಗೆ ತೆರಳಿದೆ. ಆ ಪ್ರಸಂಗದಲ್ಲಿ ನಮ್ಮ ಮಹಾಸ್ವಾಮಿಗಳು ಶ್ರೀ ಸುಶಮೀಂದ್ರತೀರ್ಥರು ಕೈ ತುಂಬಿ ಮಂತ್ರಾಕ್ಷತೆ ಹಾಗೂ ಎರಡೂ ಕೈ ತುಂಬಿ ದಕ್ಷಿಣಾ ಕೊಟ್ಟು, ಸಂಪೂರ್ಣ ಅಧ್ಯಯನ ಯಶಸ್ವಿಯಾಗಿ ಮುಗಿಸಬೇಕು ಎಂದು ಹಾರೈಸಿ, ರಾಮದೇವರಿಗೆ ರಾಯರಿಗೆ ಪ್ರಾರ್ಥಿಸಿ ಪುನಃ ಮಂತ್ರಾಕ್ಷತೆ ಕೊಟ್ಟು ಮಹತ್ ಅನುಗ್ರಹ ಮಾಡಿ ಕೊಟ್ಟು ಕಳುಹಿಸಿದರು.
ಇಂದಿಗೂ ಒಂದಿನ ಸ್ಮರಿಸದೆ ಇರುವದಿಲ್ಲ. ಸ್ಮರಿಸದ ದಿನವೇ ಬರಬಾರದು.
ಇಂತಹ ಮಹನೀಯರಿಗೆ ಅನಂತವಂದನೆಗಳು ಮಾತ್ರ ನನ್ನದು. ಅವರ ಅಪಾರ ಕರುಣೆಗೆ ನಮಸ್ಕಾರ ಬಿಟ್ಟರೆ ಇನ್ನೇನೂ ಕೊಡಲು ನನ್ನಿಂದಾಗದು..... 🙏🏽🙏🏽🙏🏽🙏🏽🙏🏽
ನ್ಯಾಸ
ಗೋಪಾಲದಾಸ
ವಿಜಯಾಶ್ರಮ, ಸಿರಿವಾರ.
Comments
ಯಾವಾಗ ಉಪನ್ಯಾಸ ರೆಕಾರ್ಡ ಮಾಡ್ತೀರೋ, ಬ್ಲಾಗ್ ಯಾವಾಗ ಬರೀತೀರೋ, ಪಾಠ ಯಾವಾಗ ಹೇಳ್ತೀರೋ....
ಇದೆಲ್ಲದರಿಂದ ಎಷ್ಟೂ ಲಾಭವಂತೂ ಇಲ್ಲ ಎಂದೇ ನನ್ನ ಅನಿಸಿಕೆ. ಗ್ರೇಟ್ ಗ್ರೇಟ್