ಸಾಮಾನ್ಯರಾದ ನಮಗೆ ವರ ದೊರಕೀತು..... ಫಲ ದೊರೆಯುವದು ಸುಲಭವಲ್ಲ
ಫಲಕ್ಕಾಗಿ ವರ, ವರಕ್ಕಾಗಿ ತಪಸ್ಸು, ತಪಸ್ಸಿಗಾಗಿ ಕಾಡು ಮೇಡು ನಾವು ಬಯಸುವ ಹಾದಿ. ಈ ಹಾದಿಯಯಲ್ಲಿ ಕೊನೆ ಮುಟ್ಟುವವರು ಕೆಲವರು ಮಾತ್ರ. ಉಳಿದವರು ಅಲ್ಲಲ್ಲೇ ಜಾರಿದವರೇ.
*ಮಹಾ ಫಲಕ್ಕಾಗಿ ಮಂದಭಾಗ್ಯರಾದ ನಾವು ಏನು ಮಾಡುವದು ??*
ಅಲ್ಪಭಾಗ್ಯರಾದ ನಮಗೆ ತಪಸ್ಸೇ ಮಹಾ ಮಾರ್ಗ. *ಮಂದಭಾಗ್ಯೋಲ್ಪಭಾಗ್ಯಾನಾಂ ತಪ ಏಕಂ ಸಮಾಸ್ಥಿತಮ್* ಇದು ಮಹಾಭಾರತದ ನಾಣ್ಣುಡಿ. ಆದ್ದರಿಂದ ದೇವತೆಗಳು, ಋಷಿಗಳು ತಪಸ್ಸಿನಲ್ಲಿ ತೊಡಗುತ್ತಾರೆ. ಎಲ್ಲವನ್ನೂ ಪಡೆಯುತ್ತಾರೆ. ವರ ಕೊಡುವ ದಿವ್ಯ ಶಕ್ತಿಯನ್ಬೇ ಪಡೆಯುತ್ತಾರೆ. "ಏನೂ ಇಲ್ಲ, ಎಲ್ಲವೂ ಇದೆ" ಇದು ತಪಸ್ಸಿನ ಫಲ.
ಇದನ್ನು ಗಮನಿಸಿದ ಸಾಮಾನ್ಯರಾದ ನಾವು, ಅಥವಾ ದೈತ್ಯರೂ ತಪಸ್ಸಿನಿಂದ ಏನನ್ನಾದರೂ ಪಡೆಯಬಹುದು ಎಂದು ಭಾವಿಸಿ ತಪಸ್ಸಿನಲ್ಲಿ ತೊಡಗಿದರೆ, ಸಿಗುವದು *ವರ* ಮಾತ್ರ. ಫಲ ದೊರೆಯದು. "ಫಲಕ್ಕೆ ಯೋಗ್ಯತೆಯ ತೊಡಕು ಇದೆ. ವರಕ್ಕೆ ಯೋಗವಿದ್ದರೆ ಸಾಕು."
ಫಲ ಪಡೆಯುವದು ಏನಿದೆ ಅದು *ನನಗೆ ಯೋಗ್ಯವಾಗಿರಬೇಕು, ದೇವರ ಇಚ್ಛೆಗೆ ಬಂದಿರಬೇಕು* ಅಂದರೆ ಮಾತ್ರ ಫಲ. ನಮ್ಮ ವಿಚಾರ ಸಾಮಾನ್ಯವಾಗಿ *ನನಗೆ ಅಯೋಗ್ಯವೇ ಆಗಿರುತ್ತದೆ, ದೆವರ ಇಚ್ಛೆಗೆ ವಿರುದ್ಧವೇ ಆಗಿರುತ್ತದೆ* ಆದರೆ ತಪಸ್ಸು ಮಾತ್ರ ಬಿಡಲಾರೆ. ಅಂತಹ ತಪಸ್ಸಿಗೆ ದೆವರು ವರ ಕೊಡುವ ಅದರಲ್ಲಿ ಸಂಶಯವೇ ಇಲ್ಲ. ಫಲ ಕೊಡಲಾರ ಅದುವೂ ಅಷ್ಟೇ ನಿಜ.
ಏನೋ ಒಂದರ ಉದ್ಯೇಶ್ಯದಿಂದ ತಪಸ್ಸು ಮಾಡಿರುತ್ತಾನೆ ಕುನ್ನಿ ಮಾನವ. ತಪಸ್ಸು ಮುಗಿದ ಕ್ಷಣದಲ್ಲಿಯೇ ಶುಭ ಸೂಚಕವನ್ನು ತೋರಿಸಿಬಿಡುತ್ತಾನೆ. ಆ ಮಾನವನನ್ನು ಅತ್ಯಂತ ಸಂತುಷ್ಟನನ್ನಾಗಿ ಮಾಡಿ ಬಿಡುತ್ತಾನೆ. ಅವನು ಮಾಡಿದ ತಪಸ್ಸು ಆ ತೃಪ್ತಿಗೆ ಸಂತೋಷಕ್ಕೆ ಮಾತ್ರ ಕಾರಣವಾಗಿರುತ್ತದೆ. ಅವನು ಅಪೇಕ್ಷಿಸಿದ ಫಲದ ವರೆಗೆ ಆ ತಪಸ್ಸು ಸಾಗುವದೇ ಇಲ್ಲ. ಇದು ಸಾಮಾನ್ಯ ಮಾನವನ ಅವಸ್ಥೆಯಾದರೆ...
ಹಿರಿಣ್ಯಕಶಿಪುವಿನ ಅವಸ್ಥೇ ಹೇಳಲೇ ತೀರದು. ಹತ್ತು ಸಾವಿರ ವರ್ಷದ ತಪಸ್ಸು, ಅನ್ನವಿಲ್ಲ, ನೀರಿಲ್ಲ, ಹೆಬ್ಬಟ್ಟಿನಲ್ಲಿ ನಿಂತು, ಎಲಬು ಚರ್ಮ ಮಾತ್ರ ಉಳಿಯುವಂತಾಗಿ, ಅತ್ಯಂತ ಘೋರ ತಪಸ್ಸು ಮಾಡಿದ. ವರವನ್ನೂ ಪಡೆದ. ಇಂದಿಗೂ ಅಪಕೀರ್ತಿಗೆ ಭಾಜನನಾದ. ಕೊನೆಗೆ ಸತ್ತೇ ಹೋದ. ವರವಂತೂ ದಕ್ಕಲಿಲ್ಲ. ಫಲ ಪಡೆಯಲಿಲ್ಲ.
ಹಾಗದರೆ ನಮ್ಮಂತಹ ಸಾಮಾನ್ಯರು ತಪಸ್ಸು ಮಾಡಲೇ ಬಾರದಾ... ??? ಅವಷ್ಯವಾಗಿ ಮಾಡಲೇಬೇಕು.
ತಪಸ್ಸಿಲ್ಲದಿದ್ದರೆ ಏನೂ ಇಲ್ಲ. *ವಿಪರೀತ ಆಪತ್ತುಗಳು ಅಲೆ ಅಲೆಗಳಂತೆ ಅಪ್ಪಳಿಸುತ್ತಿರುವಾಗ ತಪಸ್ಸು ಒಂದೇ ಗತಿ* ಇದುವೂ ಅಷ್ಟೇ ನಿಶ್ಚಿತ. ನಾವು ಮಾಡುವ ತಪಸ್ಸಿನ ಉದ್ಯೇಶ್ಯ ಕೇವಲ ವಿಷ್ಣುಪ್ರೀತಿಗೆ ಕಾರಣವಾಗಿರಬೇಕು ಅಷ್ಟೆ. ಸಂಪ್ರೀತನಾದ ವಿಷ್ಣು ತನ್ನ ಇಚ್ಚೆಗೆ ಅನುಗುಣವಾಗಿ, ನನ್ನ ಯೋಗ್ಯತೆಯನ್ನು ಅರಿತು, ಸರಿಯಾದ ಕಾಲಕ್ಕೆ ಒದಗಿಸುತ್ತಾನೆ ಅಷ್ಟೆ. ನಮ್ಮ ಆ ತಪಸ್ಸಿನಿಂದ ಪರಮಪ್ರೀತನಾಗಿದ್ದರೆ ತನ್ನ ಇಚ್ಛೆಯನ್ನೋ ಅಥವಾ ನಮ್ಮ ಯೋಗ್ಯತೆಯನ್ನೋ ಬದಲಾಯಿಸಲೂ ಸಮರ್ಥ ನಮ್ಮ ಸ್ವಾಮಿ.
*ಮಂದಭಾಗ್ಯರಿಗೆ ದೊರಕಿದವರ ಸೇವಾ*
ರಾಯರ ಸೇವಾನೇ ಮಂದ ಭಾಗ್ಯರಿಗೆ ದೊರಕುವದಿಲ್ಲ ಎಂದು ದಾಸರು ಹೇಳುತ್ತಿರುವಾಗ, ದೇವರ ಸೇವಾರೂಪ ತಪಸ್ಸು ಸಿಗುವದು ತುಂಬ ಕಠಿಣ. ಸೇವೆಯ ನಂತರ ಫಲಪಡೆದುಕೊಳ್ಳುವದೂ ದೂರದ ಮಾತೇ. ಎಂದು ಹೇಳಿ ತಪಸ್ಸಿನಲ್ಲಿಯೇ ತೊಡಗದಿದ್ದರೆ ಎಲ್ಲವೂ ಶೂನ್ಯ. ಮಾಡುವ ತಪಸ್ಸಿನ ಉದ್ಯೆಶ್ಯ ಸರಿಯಾಗಿದ್ದರೆ ಎಲ್ಲ ಫಲವೂ ಅಂಗೈಯಲ್ಲಿಯೇ.
*ಮಂದ ಅಲ್ಪ ಭಾಗ್ಯನಾದ ಎನಗೆ ತಪಸ್ಸು ಮಾಡುವ ಬುದ್ಧಿ ಬರಲಿ. ಆ ತಪಸ್ಸು ವಿಷ್ಣುಪ್ರೀತಿಗೇ ಕಾರಣವಾಗಲಿ* ಎಂದು.
*✍🏻✍🏻✍🏻ನ್ಯಾಸ*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments