*ದತ್ತಸ್ತ್ವಯೋಗಾದಥ ಯೋಗನಾಥಃ* (ದತ್ತ ಜಯಂತೀ)
(ದತ್ತ ಜಯಂತೀ)
ಇಂದು ದತ್ತಾತ್ರೇಯರೂಪಿ ಭಗವಂತನ ಅವತಾರದ ದಿನ. ಅಂತೆಯೇ ವೈಭವದ ಜಯಂತೀ ಉತ್ಸವ ನಡೆದು ಬಂದಿದೆ. *ಯೋಗನಾಥ - ಯೋಗ ಉಪಾಯಗಳಿಗೆ ಸ್ವಾಮಿಯಾದ ದತ್ತರೂಪಿಯು, ಅನುಪಯುಕ್ತ, ನಮ್ಮನ್ನು ಹಾಳುಗೆಡಗುವ ಅಯೋಗಗಳಿಂದ ರಕ್ಷಿಸಲಿ. ಅಷ್ಟಾಂಗ ಯೋಗಗಳಿಗೆ ಸ್ಚಾಮಿಯಾದ ದತ್ತನು, ಯೋಗಗಳಲ್ಲಿದ ಆರೋಗ್ಯ ಹಾನಿ ಮಾಡಿಕೊಳ್ಳುವ ದುರವಸ್ಥೆಯಿಂದ ಕಾಪಾಡಲಿ. ಯೋಗ ಆತ್ಮ ಸ್ವರೂಪ ಸುಖವನ್ನು ಹೊಂದಿಸಿಕೊಡುವ ದತ್ತನು, ಅಯೋಗ ಆತ್ಮಸುಖದ ಸಂಬಂಧವೇ ಇಲ್ಲದ ವೈಷಯಿಕ ಸಾಂಸಾರಿಕ ಸುಖದುಃಖಗಳ ಸಂಬಂಧವೇ ಬರದಿರಯವಂತೆ ಮಾಡಿ ರಕ್ಷಿಸಲಿ* ಹೀಗೆ ಅನೇಕ ಅರ್ಥಗಳನ್ನು ಒಳಗೊಂಡು ಶ್ರೀಮದ್ಭಾಗವತ ಪ್ರಾರ್ಥಿಸುತ್ತದೆ ತಿಳಿಸಿಕೊಡುತ್ತದೆ.
*ದತ್ತನ ಅವತಾರ ಹೇಗೇ....??*
ಅನುಸೂಯಾ ದೇವಿ ಹಾಗೂ ಅತ್ರಿ ಋಷಿಗಳಲ್ಲಿ ದತ್ತರೂಪಿ ಅವತಾರ ಮಾಡಿದ. ಅತ್ರಿ ಋಷಿಗಳು ತಪಸ್ಸಿಗೆ ಕುಳಿತು "ಸೃಷ್ಟಿ ಸ್ಥಿತಿ ಲಯ" ಕತೃವಾದ ದೇವರನ್ಬು ಚಿಂತಿಸುತ್ತಿರುವಾಗ "ಸೃಷ್ಟಿ ಕತೃವಾದ ಬ್ರಹ್ಮ, ಬ್ರಹ್ಮದೇವರಿಂದ ಅಧಿಷ್ಠಿತನಾದ ಚಂದ್ರ. ಸ್ಥಿತಿ ಕತೃವಾದ ನಾರಾಯಣ, ಸಂಹಾರ ಕತೃವಾದ ಶಿವನ ಅವತಾರಿಯಾದ ದೂರ್ವಾಸ" ಹೀಗೆ ಮೂರು ಜನ ಅವತರಿಸುತ್ತಾರೆ.
ಸ್ಥಿತಿ ಕರ್ತೃವಾದ ದೇವರು ತಮ್ಮನ್ನು ತಾನೇ ಮಗನ್ನಾಗಿ ದತ್ತ ಕೊಟ್ಟಿದ್ದಕ್ಕೆ *ದತ್ತ* ಎಂದು ಹೆಸರು. ಅತ್ರಿಋಷಿಗಳ ಮಗನಾದದ್ದಕ್ಕೆ *ಆತ್ರೆಯ* ಎಂದು ಹೆಸರು. ಪ್ರಸಿದ್ಧ *ದತ್ತಾತ್ರೇಯ* ಎಂದು.
*ಪರಮ ಸುಂದರ ಸುಲಕ್ಷಣ "ದತ್ತಾತ್ರೇಯ"*
ಮೂವತ್ತೆರಡು ಲಕ್ಷಣಗಳಿಂದ ಯುಕ್ತನಾದ, *ಜ್ಙಾನ ದೇವತೆಯಾಗಿ ಜ್ಙಾನವನ್ನೇ ಸುರಿಸುವ, ಜ್ಙಾನಮುದ್ರೆಯನ್ನೇ ಧರಿಸಿರುವ ಭಗವಾನ್ ದತ್ತಾತ್ರೇಯ.* ಮತ್ತು *ಸಂಸಾರದ ಭಯವನ್ನೆಲ್ಲ ನೀಗಿಸಿ, ಮೋಕ್ಷದಯಪಾಲಿಸಿ ಅಭಯವನ್ನೇ ದಯಪಾಲಿಸುವ " ಅಭಯ ಹಸ್ತವನ್ನೇ ಧರಿಸಿದ ಮತ್ತೊಂದು ಕೈ.* ಹೀಗೆ ಜ್ನಾನ ಅಭಯ ಮುದ್ರೆಗಳನ್ನೊಳಗೊಂಡ ಮೂವತ್ತೆರಡು ಲಕ್ಷಣದ ಸ್ವಾಮಿ *ದತ್ತಾತ್ರೇಯ* ರೂಪಿ ಶ್ರೀಹರಿ.
*ಅನೇಕ ಭ್ರಾಂತಿಗಳು....*
ಒಂದೇ ರೂಪಕ್ಕೆ ಮೂರು ತಲೆಗಳುಳ್ಳ ರೂಪವೇ ದತ್ತಾತ್ರೇಯ ರೂಪ ಎಂದು ಅನೇಕ ಕಡೆ ನೋಡಿದ್ದು ಇದೆ. ಆ ರೂಪದ ಸುತ್ತ ಅನೇಕ ಪ್ರಾಣಿಗಳು ಇರತ್ತೆ, ಆಕಳು ಇರತ್ತೆ ಹೀಗೆ ಒಂದು ವಿಶಿಷ್ಟವಾದ ರೂಪ *ಭಾಗವತ ಹಾಗೂ ಮಹಾಭಾರತ* ಇವುಗಳಲ್ಲಿ ಹೇಳಿದ ರೂಪವಲ್ಲ. ಇಲ್ಲಿ ನಾವು ಹೇಳಿದ ರೂಪ *ಭಾಗವತ ಹಾಗೂ ಮಹಾಭಾರತ* ಇವುಗಳಲ್ಲಿ ಬಂದ ರೂಪ. ಭಾಗವತ ತಂತ್ರಸಾರ ಮಹಾಭಾರತ ಇತ್ಯಾದಿಗಳನ್ನು ಅನುಸರಿಸುವ ನಾವು ಮೇಲೆ ತಿಳಿದಂತೆಯೇ "ಜ್ಙಾನ ಅಭಯಗಳುಳ್ಳ, ಮಂದಸ್ಮಿತವಾದ, ಮೂವತ್ತೆರಡು ಲಕ್ಷಣ ಸಂಪನ್ನವಾದ, ಸಚ್ಚಿದಾನಂಮೂರ್ತಿಯಾದ, ಪರಮಸುಂದರವಾದ, ಮೂರ್ತಿಯನ್ನೇ" ಚಿಂತಿಸಬೇಕು. ಧ್ಯಾನಿಸಬೇಕು.
*ಅನಂತ ವಂದನೆಗಳು .......*
ಅನೇಕ ಭ್ರಾಂತಿಗಳಿಂದ ದೂರೋಡಿಸಿ, ಶುದ್ಧ ಜ್ಙಾನ ಒದಗಿಸಿ, ಭಯಪರಿಹರಿಸಿ, ಅಭಯದಯಪಾಲಿಸಿ, ಆತ್ಮಸುಖದ ಯೋಗ ಒದಗಿಸುವ, ಅಷ್ಟಾಂಗ ಯೋಗವನ್ನೂ ಕೊಡುವ, ಸಾಧನೆಗೆ ಬೇಕಾದ ಅನೇಕ ಉಪಾಯಗಳನ್ನು ಒದಗಿಸುವ, ಅನುಸೂಯಾ ಅತ್ರಿಋಷಿಗಳಲ್ಲಿ ಅವತರಿಸಿದ *ದತ್ತಾತ್ರೇಯ* ರೂಪಿ ಶ್ರೀಹರಿಗೆ ಅನಂತ ವಂದನೆಗಳು.
*✍🏽✍🏽ನ್ಯಾಸ*
ಗೋಪಾಲದಾಸ
ವಿಜಯಾಶ್ರಮ, ಸಿರವಾರ.
Comments
ನಾವು ಇಲ್ಲಿಯ ವರೆಗೆ ತಿಳಿದಿದ್ದ ೩ ತಲಿ, ಸುತ್ತ ನಾಯಿಗಳು. ಈ ರೂಪವೇ ದತ್ತಾತ್ರೇಯ ಎಂದು. ಅದು ಶುದ್ಧ ತಪ್ಪು ಎನ್ನುವದು ಸ್ಪಷ್ಟಪಡಿಸಿದ ನಿಮಗೆ ಮತ್ತೊಮ್ಮೆ ನಮಃ
ಜ್ಞಾನಾಭಯಾಂಕಿತಕರಂ ಕಪಿಲಂ ಚ ದತ್ತಮ್
ಧ್ಯಾಯೇದಜಾದಿಸಮಿತಿಂ ಪ್ರತಿಬೋಧಯಂತಮ್ ||
ಉದಿಸುವಸೂರ್ಯನಂತೆ ಹೊಂಬಣ್ಣದ ಮೈಯುಳ್ಳ, ಸಾವಿರಾರು ಸೂರ್ಯರಿಗಿಂತಲೂ ಮಿಗಿಲಾದ ಪ್ರಕಾಶದಿಂದ ಎಲ್ಲಾ ಲೋಕವನ್ನು ತುಂಬಿರುವ, ಬಲಗೈಯಲ್ಲಿ ಜ್ಞಾನಮುದ್ರೆಯನ್ನು ಎಡಗೈಯಲ್ಲಿ ಅಭಯಮುದ್ರೆಯನ್ನು ಧರಿಸಿರುವ, ಬ್ರಹ್ಮನಿಂದ ಹಿಡಿದು ಸಮಸ್ತ ದೇವತಾಸಮೂಹಕ್ಕೆ ತತ್ವವನ್ನು ಬೋಧಿಸುವ ದತ್ತಾತ್ರೇಯನನ್ನು ಧ್ಯಾನಿಸಬೇಕು.......