ಅಸಂಬದ್ಧ ಟೀಕೆಗಳು
ಟೀಕೆಗಳಿರಬೇಕು. *ಟೀಕೆಗಳು ಪ್ರಗತಿಗೆ ಉನ್ನತಿಗೆ ಮತ್ತು ಕೀರ್ತಿಗೆ ಕಾರಣವೇ.* ಆದರೆ ಆ ಟೀಕೆಗಳು ಸಂಬದ್ದವಾಗಿರಬೇಕು ಅಷ್ಟೆ.
ಯಾರು ತುಂಬ ಉನ್ನತ ಕೆಲಸದಲ್ಲಿ ವ್ಯಸ್ತಾರಾಗಿ ಇದ್ದಾರೆ ಅಂತಹವರಿಂದ ಬರುವ ಟೀಕೆ ಯೋಗ್ಯವಾಗಿರುವದೇ. ಆದರೆ ಯಾರಿಗೆ ಕೆಲಸವೇ ಇಲ್ಲ ಅಂತಹವರ ದೊಡ್ಡ ಕೆಲಸವೆಂದರೆ ಟೀಕೆ ಮಾಡುವದೇ. ಆ ಟೀಕೆಗಳು ಒಟ್ಟಾರೆಯಾಗಿ ಒಂದಕ್ಕೊಂದು ಸಂಬಂಧವೇ ಇರುವದಿಲ್ಲ. ಅವನೊಬ್ಬ *ಹವ್ಯಾಸಿ ಟೀಕಾಕಾರ* ಇದ್ದಾ ಹಾಗೆಯೇ.
ಟೀಕಾಕಾರರ ಟೀಕೆಗಳು ನನಗೆ ಹಾಗೂ ನನ್ನ ಉನ್ನತಿ ಪ್ರಗತಿಗೆ ಸಂಬಧಿಸಿದ್ದರೆ ಮಾತ್ರ ಟೀಕೆಗಳಿಗೆ ಸ್ಪಂದಿಸಬೇಕು. ನನ್ನ ಪ್ರಗತಿಗೆ ಸಂಬಂಧವಿಲ್ಲ ಎಂದಾದರೆ ಆ ಅಸಂಬದ್ಧ ಟೀಕೆಗೆ ತಲೆಕೆಡಿಸಿಕೊಳ್ಳಲೇ ಬಾರದು.
ಕರ್ಣನ ಬಾಣಳಿದ್ದಂತೆ ಟೀಕೆಗಳು, ಎದುರಿಸುವ ಶಕ್ತಿ ಮಾತ್ರ ಅರ್ಜುನನ ಶಕ್ತಿ ಆಗಿರಬೇಕು.
ಅಸಂಬದ್ಧ ಟೀಕೆಗಳ ಟೀಕಾಪ್ರಹಾರಗಳಿಗೆ ಒಮ್ಮೆ ಬಾಗಿದರೆ, ಟೀಕಾಕಾರರು ಅವನನ್ನು ಬಗ್ಗು ಬಡೆದುಬಿಡುತ್ತಾರೆ ಇದರಲ್ಲಿ ಯಾವ ಸಂಶಯವೂ ಇರದು. ಟೀಕೆಗಳನ್ನು ನೋಡಿ ಕೇಳಿಯೇ ತಾನು ತನ್ನ ಗಮ್ಯದ ಹಾದಿಯನ್ನೇ ಮರೆತು ಬಿಡುತ್ತಾನೆ.
ಒಂದು ಸುಂದರ ಆದರೆ ಪ್ರಸಿದ್ಧ ಕಥೆ..
ಪುಟ್ಟಗ್ರಾಮ, ರೈತಾಪಿ ಜನ, ಊರಿನಲ್ಲಿ ತುಂಬ ಕ್ಷಾಮ, ತಿನ್ನಲು ಅನ್ನಕ್ಕೆ ಕಡಿವಾಣ, ಇರುವದೊಂದು ಕತ್ತೆ, ಅದನ್ನು ಮಾರಿ ಬಂದ ಹಣದಲ್ಲಿ ಜೀವಿಸುವ ವಿಚಾರ.
ಕತ್ತೆಯನ್ನು ಮಾರಿ ಹಣ ತರಲು ಪಕ್ಕದ ದೊಡ್ಡ ಊರಿಗೆ ಪಯಣ. ಪ್ರಾರಂಭವಾದವು ಟೀಕಾಸ್ತ್ರಗಳು....
ದಾರಿ ಮಧ್ಯೆ ಕೆಲಸವಿಲ್ಲದ ಕಟ್ಟಿಯಮೇಲೆ ವಿರಾಜಮಾನರಾದ ಟೀಕಾಕಾರರ ಟೀಕಾಸ್ತ್ರಗಳ ಮೊದಲನೇ ಪ್ರಹಾರ ..... "ಏನು ಮಳ್ಳ ಜನ ನೋಡ್ರಿ ಮಾರಾಯಾ.. ಕತ್ತೆ ಕತ್ತೆಯಂತೆ ಘಟ್ಟಿಯಾಗಿದೆ ಕತ್ತೆ ಮೇಲೆ ಕೂತು ಹೋಗೋದು ಬಿಟ್ಟು ನಡ್ಕೊತ ಹೊಂಟಾರ. ಎಂದು ಬುದ್ಧೀ ಬಂದೀತೋ ಏನೋ ಈ ಮಂದಿಗೆ" ಎಂದು.
ಟಿಕಾ ಪ್ರಹಾರ ತಲೆಗೆರಿತು. ಅದು ಸರಿ ಎಂದೆನಿಸಿತು, ಅಪ್ಪ ತಾ ಕತ್ತೆ ಏರಿದ.
ಸವಾರಿ ಮುಂದೆ ಹೊರಟಿತು. ಕೆಲ ಹೊತ್ತಿಗೆ ಮತ್ತೆ ಎರಡನೆಯ ಟೀಕಾಸ್ತ್ರಪ್ರಯೋಗ ಆಯಿತು. *ಘಟ್ಟಮುಟ್ಟ ಇದ್ದ ಅಪ್ಪ ತಾ ಕತ್ತಿ ಮ್ಯಾಲ ಏರಿ ಪಾಪ ಈ ಹುಡ್ಗನ್ನ ನಡ್ಸಗೊತ ಹೊಂಟಾನ ಹೆಂಗರೆ ಮನ್ಸ ಬಂತೋ* ಎಂದು .
ಅಪ್ಪಗ ಅದೂ ಸರಿ ಅನಸ್ತು. ಮಗನ್ ಕತ್ತಿ ಮ್ಯಾಲ ಏರಿಸಿದ ತಾ ನಡ್ಕೋತ ಹೊರಟ. ಸ್ವಲ್ಪ ಹೊತ್ತಿಗೆ ಮೂರನೇಯ ಮತ್ತೊಂದು ಬಾಣ ಬಂತು. *ವಯಸ್ಸಾದ ಮುದಕ ನಡ್ಕೋತ ಹೊಂಟಾನ, ಕತ್ತಿ ಥರ ಘಟ್ಟ ಇದ್ದ ಮಗ ಕತ್ತಿ ಮ್ಯಾಲ ಕೂತಾನ ನೋಡ* ಅಂತ.
ಅಪ್ಪ ವಿಚಾರ ಮಾಡಿದ ಇಬ್ರೂ ಕೂತು ಹೊರಟ್ರಾಯತು ಎಂದು ಅಪ್ಪ ಮಗ ಕತ್ತಿ ಏರಿ ಹೊರಟರು. ಜನ ಬಿಡ್ತಾರೆಯಾ.... ಅಷ್ಟ್ರಲ್ಲೆ ಮತ್ತೊಬ್ಬ ಬಂದ ಕೇಳಿದ *ಏನೋ ಕತ್ತಿ ಮಾರಾಕ ಹೊಂಟೀ.?? ಹಿಂಗು ಕತ್ತಿಮ್ಯಾಗ ಇಬ್ರೂ ಕೂತ ಹೊಂಟ್ರ ಆ ಕತ್ತಿ ಸುಸ್ತಾಗಿ ಕೆಳಗ ಬಿದ್ದ ಸತ್ತ ಹೋದ್ರ ಎನ್ಲಾ ಮಾಡ್ತೀ ..* ಎಂದು.
ಹೀಗೆ ಏನು ಮಾಡಿದರೂ ಅವರಿಗೆ ಸರಿ ತೋಚುವದಿಲ್ಲ. ಯಾಕೆಂದರೆ ತಮ್ಮ ಜೀವನದಲ್ಲಿ ಸರಿ ಕೆಲಸ ಮಾಡಿರುವದೇ ಇಲ್ಲ. *ಕೆಲಸವೇ ಇಲ್ಲದ ನಾಲಿಗೆಗೆ ಆಡಿಕೊಳ್ಳುವದೊಂದೇ ಕೆಲಸ* ಹೀಗ ಅಸಂಬದ್ಧ ಟೀಕೆಗಳಿಗೆ ತಲಿಬಾಗ್ಸ್ತಾ ಹೋದರೆ ನನ್ನ ತಲಿನೇ ಕೊಡಬೇಕಾದ ಪ್ರಸಂಗ ಎದುರಾಗಬಹುದು. ಇದೊಂದು ದೊಡ್ಡ ಧಡ್ಡತನ.
ಬೊಗಳುವ ನಾಯಿಗೆ ಆನೆ ಸ್ಪಂದಿಸಿ ಘೇಂಕರಿಸಿದರೆ ತನ್ನ ಘೇಂಕಾರಕ್ಕೆ ತಾನೇ ಅಗೌರವ ಕೊಟ್ಟಂತೆಯೇ ಸರಿ. ಅಸಂಬದ್ಧ ಟೀಕಾಕಾರರ ಟೀಕಾಸ್ತ್ರಗಳಿಗೆ ಸ್ಪಂದಿಸದೇ ಎದುರಿಸುವಂತೆ ಸಮರ್ಥರಾಗಿ ನಡೆಯಬೇಕು...... ನಮ್ಮ ಸಾಧನೆಯನ್ನು ಸಾಧಿಸಿ ತನ್ನ ಗಮ್ಯವನ್ನು ತಲುಪಿಯೇ ತೀರಬೇಕು.
*ಟೀಕೆ ಯಶಸ್ವೀ ವ್ಯಕ್ತಿಯ ಹಿಂದೇಯೇ* ಟೀಕಾಕಾರ ಟೀಕಾಸ್ತ್ರಗಳಿಗೆ ತಲೆ ಬಾಗಿದರೆ ಇರುವ ಯಶಸ್ಸಿಗೆ, ಹೊರಟ ಯಶೋ ಮಾರ್ಗಕ್ಕೆ ಮಾಹಾನ್ ಹಿನ್ನಡೆಯೇ. *ಟೀಕೆಗಳು ಬರಲಿ, ಯಶೋ ಮಾರ್ಗದ ಕಡೆ ಗಮನವಿರಲಿ* ಇದು ಸುನೀತಿಯ ಸುವಿನ್ಯಾಸ.
*✍🏻✍🏻✍🏻ನ್ಯಾಸ*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments