*ಶ್ರೀಪದ್ಮನಾಭತೀರ್ಥರ ಆರಾಧನೆ*


 *ಶ್ರೀಪದ್ಮನಾಭತೀರ್ಥರ ಆರಾಧನೆ*


ದೇವಾಂಶ ಸಂಭೂತರು, ಶೇಷದೇವರ ಆವೇಷದಿಂದ ಭೂಷಿತರು, ಮಹಾ ಜ್ಭಾನಿಗಳು, ತಪಸ್ವಿಗಳು, ಸಿದ್ಧಪುರುಷರು, ಶ್ರೀಮದಾಚಾರ್ಯರ ಮೊಟ್ಟಮೊದಲ ಶಿಷ್ಯರು, *ಕರ್ನಾಟಕ ಪೂರ್ವ ಸಜ್ಜನಗುರುಃ* ಎಂದೇ ಪ್ರಸಿದ್ಧರಾದವರು  ಇಂದಿನ ಕಥಾನಾಯಕರಾದ ಪ್ರಾತಃಸ್ಮರಣೀಯರಾದ *ಶ್ರೀ ಶ್ರೀ ೧೦೮ ಶ್ರೀ ಪದ್ಮನಾಭತೀರ್ಥರು.*


ಅವರ ಹುಟ್ಟು ಶ್ರೇಷ್ಠ ಕುಲದಲ್ಲಿ. ಹೆಸರು ಶೋಭನಭಟ್ಟ.  ಹುಟ್ಟಿನಿಂದಲೇ ಚತುರ. ಮಹಾನ ವಿದ್ವಾನ್. ವಾಕ್ಯಾರ್ಥದಲ್ಲಿ ಕುಶಲಿ. ವಾದವಿವಾದಗಳಲ್ಲಿ ಎದುರೇ ಇಲ್ಲದ ಮತ್ತ ಮಾತಂಗ. ಚತುಃಶಾಸ್ತ್ರದಲ್ಲಿ ಪಾರಂಗತರಾದ ಅಂತೆಯೇ ಪ್ರಕಾಂಡ ವಿದ್ವಾನ್ ಆದ ಶೋಭನಭಟ್ಟರು ಶ್ರೀಮದಾಚಾರ್ಯರ ಜೊತೆ ಅನೇಕ ದಿನ ನಿರಂತರ ವಾಕ್ಯಾರ್ಥ ಮಾಡಿ. ಶ್ರೀಮದಾಚಾರ್ಯರಿಂದ ರಚಿತವಾದ *ಬ್ರಹ್ಮಸೂತ್ರಭಾಷ್ಯ* ವೆಂಬ ಸೂರ್ಯನ ಕಿರಣಗಳ ಶುದ್ಧ ಬೆಳಕಿನಡಿ ಬಂದು, ಶುದ್ಧ ಪರಿಶುದ್ಧ ಜ್ಙಾನವನ್ನು ಸಂಪಾದಿಸಿಕೊಂಡು, ಶ್ರೀಮದಾಚಾರ್ಯರ ಅಚ್ಚುಮೆಚ್ಚಿನ ಶಿಷ್ಯರು ಎಂದಾದರು. ಇದುವೇ ದೊಡ್ಡ ವೈಭವ. 


*ವೇದಪ್ರವಚನಾಚಾರ್ಯಶಿಷ್ಯ*


ಸೃಷ್ಟ್ಯಾದ್ಯಷ್ಟಕರ್ತೃ, ಅನಂತಗುಣಪೂರ್ಣ, ಸರ್ವಾತ್ಮನಾ ದೋಷರಹಿತ,  ಸರ್ವೋತ್ತಮ ಎಂದು ಪ್ರತಿಪಾದನೆಯನ್ನು ಮಾಡುವ ವೇದಗಳು. ವೇದಗಳನ್ನು ಅಂತರಾರ್ಥವನ್ನು ನಿರ್ಣಯಿಸುವ ಯುಕ್ತಬದ್ಧವಾದ ಬ್ರಹ್ಮಸೂತ್ರ. ಸೂತ್ರಗಳಿಗೆ ವ್ಯಾಖ್ಯಾನವನ್ನು ಮಾಡಿ ವೇದ ಅಪೌರುಷೇಯ. ವೇದಗಳು ಅನಂತ. ಅನಂತವೇದ ಪ್ರತಿಪಾದ್ಯ ನಾರಾಯಣ ಅನಂತಗುಣಪೂರ್ಣ, ಅಂತೆಯೇ ದೋಷರಹಿತ. ಆದ್ದರಿಂದಲೇ ಸರ್ವೋತ್ತಮ ಎಂದು ಸಾರಿದ ಶ್ರೀಮದಾಚಾರ್ಯರು *ವೇದಪ್ರವಚನಾಚಾರ್ಯರು.* ಅಂತಹ ಶ್ರೀಮದಾಚಾರ್ಯರ ಅಚ್ಚುಮೆಚ್ಚಿನ ಶಿಷ್ಯರು *ಶ್ರೀಪದ್ಮನಾಭತೀರ್ಥರು.*


*ಆದಿ ಟೀಕಾಕಾರರು*


ಶ್ರೀಮದಾಚಾರ್ಯರ ಭಾಷ್ಯಕ್ಕೆ ಮೊಟ್ಟ ಮೊದಲ ಅಧಿಕಾರಿಯೂ ಹೌದು. ನಂತರ ಮೊಟ್ಟ ಮೊದಲ ಟೀಕೆಯನ್ನು ಬರೆದವರೂ ಆದ ಕಾರಣ ಪದ್ಮನಾಭತೀರ್ಥರು ಆದಿ ಟೀಕಾಚಾರ್ಯರು.  ಭಾಷ್ಯಕ್ಕೆ "ಸತ್ತರ್ಕದೀಪಾವಳಿ" ಅನುವ್ಯಾಖ್ಯಾನಕ್ಕೆ "ಸನ್ಯಾಯರತ್ನಾವಳಿ" ಖಂಡನತ್ರಯಗಳಿಗೆ ಟೀಕಾ, ಆನಂದಮಾಲಾ ಇತ್ಯಾದಿ ಅನೇಕಗ್ರಂಥಗಳನ್ನು ರಚಿಸಿದ ಮಹಾಪುರುಷ.


*ಸಾಮ್ರಾಟ್ ಚಕ್ರವರ್ತಿ*


ಅನಾದಿ ಸತ್ಸಂಪ್ರದಾಯ ಪರಂಪರಾಪ್ರಾಪ್ತ  ವೈಷ್ಣವಸಿದ್ಧಾಂತವನ್ನು ಮರುಸ್ಥಾಪಿಸಿದ ಶ್ರೀಮದಾಚಾರ್ಯರು, ತಮ್ಮ ಆ ಮಹಾನ್ ಸಿಂಹಾಸನಕ್ಕೆ ಅಧೀಶ್ವರರನ್ನಾಗಿ ಆರಿಸಿರುವದು ನೂರಾರು ಶಿಷ್ಯರ ಮಧ್ಯದಲ್ಲಿ *ಶ್ರೀ ಪದ್ಮನಾಭತೀರ್ಥ*ರನ್ನು ಮಾತ್ರ.


೮೭ ವರುಷಗಳ ನಿರಂತರ ಪೂಜಿಸಿದ, ಅಂತೆಯೇ ಅಸಾಧಾರಣ ಸನ್ನಿಧಿಯಿಂದ ಕೂಡಿದ, ದಿವ್ಯ ಮೂರ್ತಿ *ದಿಗ್ವಿಜಯರಾಮ.*  ಮತ್ತು ಗಜಪತಿ ಸಂಸ್ಥಾನದಿಂದ ತರಿಸಿದ, ಬ್ರಹ್ಮದೇವರಿಂದ ಪೂಜಿತವಾದ *ಮೂಲಸೀತಾ ರಾಮರು.*  ಇದುವೇ ಮೂ ಸಂಸ್ಥಾನ. ಈ ಮಹಾನ್ ಸಂಸ್ಥಾನವನ್ನು ಶ್ರೀಮದಾಚಾರ್ಯರ ತರುವಾಯ, ಅವರ ಪೂರ್ಣ ಅನುಗ್ರಹದಿಂದ ಅತ್ಯಂತ ಸಮರ್ಥರೀತಿಯಲ್ಕಿ ಆಳಿದ ಮಹಾನ್ ಚಕ್ರವರ್ತಿ ಇಂದಿನ ಕಥಾನಾಯಕರಾದ *ಶ್ರೀಪದ್ಮನಾಭತೀರ್ಥರು.*


*ವಾದಿಸಿಂಹ*


ದುರ್ವಾದಿಗಳ ಖಂಡನೆ, ಸ್ವಮತಸ್ಥಾಪನೆ, ಸ್ವಮತಪ್ರಚಾರ, ಸಿಂಹದಂತೆಯೇ ಸೋಲಿಲ್ಲದ ಸರದಾರನಾಗಿ ಮೆರೆದ *ವಾದಿಸಿಂಹ ಶ್ರೀಪದ್ಮನಾಭತೀರ್ಥರು.* 


ಶ್ರೀಮದಾಚಾರ್ಯರ ಶಿಷ್ಯರಾದ ಸಮಸ್ತ ಪೀಠಾಧಿಪತಿಗಳಿಗೆ,  ಯಾವ ತೊಂದರೆ ಆಗದ ಹಾಗೆ, ತಮ್ಮ ತಮ್ಮಂದಿರಂತೆಯೆ ಕಂಡು   ಎಲ್ಲರನ್ನೂ ಸಾಕಿ ಸಲುಹಿದ ಧೀರ ಪುರುಷ *ಶ್ರೀಪದ್ಮನಾಭತೀರ್ಥರು.*


ಈ ಗುರುಗಳು ಕೊನೆಗೆ ಏನೂ ಅನುಕೂಲಗಳು ಇಲ್ಲದ, ಆನೆಗುಂದಿಯ ನಡುಗಡ್ಡೆ( ನವವೃಂದಾವನ) ಯಲ್ಲಿ ಇಂದಿಗೂ ವೃಂದಾವನಂತರ್ಗರಾಗಿ ವಾಸವಾಗಿದ್ದಾರೆ. ಬಂದ ಭಕ್ತರಿಗೆ ಬೇಡಿದ ಎಲ್ಲವನ್ನೂ ಕೊಟ್ಟು, ಬೇಡದ ಪರಿಶುದ್ಧ ಜ್ಙಾನವನ್ನೂ ದಯಪಾಲಿಸುವ ಗುರುಗಳ  ಮಹಿಮೆ ಅಪಾರ. ಕೆಲವೊಂದನ್ನು ತಿಳಿಯುವ ಪ್ರಯತ್ನ. ಇಂದು  ಆರಾಧನೆ ಇದೆ. ವಿಶೇಷ ಸೇವೆಯನ್ನು ಮಾಡೋಣ. ಮಹಾನ್ ಅನುಗ್ರಹಕ್ಕೆ ಪಾತ್ರರಾಗೋಣ.


"ಪೂರ್ಣಪ್ರಜ್ಙಕೃತಂ ಭಾಷ್ಯಂ

ಆದೌ ತದ್ಭಾವ ಪೂರ್ವಕಂ.

ಯೋ ವ್ಯಾಕರೋನ್ನಮಸ್ತಸ್ಮೈ

ಪದ್ಮನಾಭಾಖ್ಯ ಯೋಗಿನೇ" ಎಂಬ ಶ್ಲೋಕವನ್ನು ಕನಿಷ್ಠ ೧೦೦೮ ಸಲವಾದರೂ ಪಠಿಸಿ ಸಮರ್ಪಿಸೋಣ.


*✍🏼✍🏼✍🏼ನ್ಯಾಸ*

ಗೋಪಾಲದಾಸ.

ವಿಜಯಾಶ್ರಮ. ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*