*ದೇವರಿಗೆ ನಾವು ಕೊಡಬಹುದಾದ ಉಡುಗೊರೆ, ಅಥವಾ ದೇವರೇ ನಮಗೆ ಕೊಟ್ಟ ಉಡುಗೊರೆ*
ವಿಶೇಷವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಪರಸ್ಪರವಾಗಿ ಉಡುಗೊರೆ ಕೊಡುವದು ಒಂದು ಸಂಪ್ರದಾಯ. ಅಂದಿನಿಂದಲೂ ನಡೆಯುತ್ತಾ ಬಂದಿದೆ. ಮುಂದೂ ನಡೆಯುತ್ತಿರುತ್ತದೆ.
ದೇವರನ್ನು ಕಾಣುವದಕ್ಜಾಗಿ ದೇವಸ್ಥಾನಗಳಿಗೆ (ಮನೆಗೆ) ನಾವು ಹೋಗಿದ್ದೇವೆ ಎಂದಾದರೆ ದೇವರಿಗೆ ಉಡುಗೊರೆ ಕೊಡಲೇಬೇಕು. ದೇವರೂ ಸಹ ನಮಗೆ ಉಡುಗೊರೆ ಕೊಟ್ಟೇ ಕಳುಹಿಸುತ್ತಾನೆ. ನಾವು ಎಂತಹ ಉಡುಗೊರೆ ಕೊಟ್ಟಿದ್ದೇವೆ ನೋಡಿಕೊಂಡು, ದೇವ ತಾ ಉಡುಗೊರೆ ಕೊಡುತ್ತಾನೆ ಅಷ್ಟೆ.
ಉಡುಗೊರೆ ಕೊಡುವಾಗ ಅವರ ಉಪಕಾರ ಯಾವ ಮಟ್ಟದಲ್ಲಿ ಇದೆ, ಎಷ್ಟು ಪ್ರೀತ್ಯಾಸ್ಪದಾರಾಗಿದ್ದಾರೆ, ನಮಗೆ ಎಷ್ಟರ ಮಟ್ಟಿಗೆ ಬೇಕಾದವರಾಗಿದ್ದಾರೆ, ಎಂದು ನೋಡಿ ತೂಗಿ ಅಳೆದು ಉಡುಗೊರೆಯನ್ನು ಕೊಟ್ಟಿರುತ್ತೇವೆ. ಇದು ಹೀಗೆಯೇ ನಡೆದು ಬಂದಿದೆ.
*ದೇವರಿಗೂ ಉಡುಗೋರೆಯನ್ನು ಕೊಡಬೇಕು.......*
ದೇವ ನಮಗೆ ಎಷ್ಟು ಉಪಕಾರ ಮಾಡಿದ್ದಾನೆ, ಎಷ್ಟು ಪ್ರಿಯನಾಗಿದ್ದಾನೆ ಎಂದು ವಿಚಾರ ಮಾಡಿದರೆ ಅಂತ ಕೊನೆ ಕಾಣುವದಿಲ್ಲ. ಗತಿತಪ್ಪಿ ಹೋಗುತ್ತದೆ ಮನಸ್ಸು. ಶಾಸ್ತ್ರ ನೂರು ತರಹದಲ್ಲಿ ವಿವರಿಸುತ್ತದೆ. ಅದರಿಂದ ದೇವರ ಉಪಕಾರ ಅನಂತ ವಿಧವಾಗಿದೆ ಎನ್ನುವದು ಮನವರಿಕೆ ಆಗುತ್ತದೆ.
೧) ಅದ್ಭುತವಾದ ದೇಹೇಂದ್ರಿಯಮನಸ್ಸುಗಳನ್ನು ಕೊಟ್ಟ.
೨) ಅದ್ಭುತ ಜಗತ್ತಿನ್ನು ಸೃಷ್ಟಿಸಿದ.
೩)ನಮ್ಮನ್ನು ಈ ಜಗತ್ತಿನಲ್ಲಿ ಹುಟ್ಟಿಸಿದ.
೪) ರೂಪ ಲಾವಣ್ಯ ಹಣ ಬುದ್ಧಿ ಶ್ರೀಮಂತಿಕೆ ಸುಖ ಸ್ನೇಹ ಪ್ರೀತಿ ಅಂತಃಕರಣ ಇವುಗಳನ್ನು ಕೊಟ್ಟ.
೫) ದುಃಖ ದ್ವೇಶ ಮಾತ್ಸರ್ಯ ಮಮತೆಗಳನ್ನೂ ಕೊಟ್ಟ.
೬) ಮತ ಮತಪ್ರವರ್ತಕರು ಗುರು ತಂದೆ ತಾಯಿ ಧರ್ಮದೀಕ್ಷೆ ಇತ್ಯಾದಿ ಇತ್ಯಾದಿ ಕೋಟಿ ಕೋಟಿ ದಯಪಾಲಿಸಿದ.
ಇಷ್ಟವಾದದದ್ದು ಹಿತವಾದದ್ದು ಸಾವಿರ ಸಾವಿರ ಕೊಟ್ಟ. ಅಹಿತವಾದದ್ದು ಕೋಟಿ ಕೋಟಿ ಕಳೆದು ಹಾಕಿದ.
ಇಷ್ಟೆಲ್ಲ ಕೊಟ್ಟಿದ್ದು, ಕೇವಲ ಕರುಣೆಯಿಂದ ಮಾತ್ರ. ಇದು ದೇವ ತಾ ಮಾಡಿದ ಮಹಾನ್ ಉಪಕಾರ. ಅಂತೆಯೇ *ಪರಮ ಪ್ರಿಯ.....!!!.*
ಅಷ್ಟೇ ಅಲ್ಲದೆ ನಾವು ಯಾವ ಯೋನಿಯಲ್ಲಿ ಹುಟ್ಟಿಬಂದರೂ, ಯಾವ ಸ್ಥಿತಿಯಲ್ಕಿ ಇದ್ದರೂ ಒಂದಿನ, ಒಂದು ಕ್ಷಣ ನಮ್ಮನ್ನು ಬಿಟ್ಟಿರಲಾರ ಆಕಾರಣದಿಂದಲೇ *ಅವಿಜ್ಙಾತಸಖ....*
ಇಂತಹ ದೇವರಿಗೆ ಏನು *ಉಡುಗೋರೆಯನ್ನು* ಕೊಡಬೇಕು??? ಏನನ್ನು ಕೊಟ್ಟರೆ ಸರಿಹೋದೀತು ?? ನಾವೇ ಸ್ವತಃ ಏಕಾಂತದಲ್ಲಿರುವಾಗ ಯೋಚಿಸೋಣ.
*ದೇವರು ಇಂದು ನಮಗೆ ಕೊಟ್ಟ ಉಡುಗೋರೆ....*
ವಿಘ್ನಗಳನ್ಬು ಕಳೆದ, ಆಪತ್ತು ದೂರ ಮಾಡಿದ, ಸೌಖ್ಯಸುರಿಸಿದ, ಇಷ್ಟಾರ್ಥಗಳನ್ನು ಈಡೇರಿಸಿದ, ಜ್ಙಾನ ದಯಪಾಲಿಸಿದ, ಪ್ರತಿಷ್ಠೆ ಕೀರ್ತಿಗಳನ್ನು ಕೊಟ್ಟ, ಇವೆಲ್ಲ ದೇವರು ಕೊಟ್ಟ ಉಡುಗೋರೆ. ಗುರುಭಕ್ತಿ, ಶಾಸ್ತ್ರನಿಷ್ಠೆ, ಧರ್ಮದಲ್ಲಿ ಆಸಕ್ತಿ, ಕನಿಷ್ಠ ಒಂದು ಹೊತ್ತಾದರೂ ಸಂಧ್ಯಾವಂದನ ಮಾಡುವ ಮನಸ್ಸು, ಪ್ರಥಮೈಕಾದಶಿ ಒಂದಿನವಾದರೂ ಉಪವಾಸ ಮಾಡುವ ಬುದ್ಧಿ, ಹಬ್ಬ ಹರಿದಿನಗಳಲ್ಲಾದರೂ ಪೂಜೆ ಮಾಡುವ ಸೌಭಾಗ್ಯ,
ಕೈ ತುಂಬ ಹಣ, ಮೈ ತುಂಬ (loan) ಸಾಲ, ಮನೆತುಂಬ ವಸ್ತುಗಳು, ಹೀಗೆ ಹೀಗೆ ಕೊಟ್ಟದ್ದು ಪಟ್ಟಿ ಮಾಡ್ತಾ ಹೋದರೆ ಈ ಜನ್ಮವಲ್ಲ ನೂರು ಜನ್ಮವಾದರೂ ಮುಗಿಯುವದಿಲ್ಲ.
ಇಂಥಿಂಥ ಉಡುಗೋರೆಯನ್ನು ಸ್ವೀಕರಿಸಿ ಆದಮೇಲೆ ತಕ್ಕದಾದದ್ದೆ ಕೊಡಬೇಕು. *ಸ್ವೀಕರಿಸಿರುವದು ರೇಶ್ಮೆ ಮಡಿ, ಕೊಟ್ಟಿದ್ದು ಪಾಲಿಸ್ಟರ ಧೋತ್ರ* ಎಂದಾದರೆ ಮುಂದಿನಬಾರಿ ಪಾಲಿಸ್ಟರ ಧೋತ್ರವಲ್ಲ ಶಲ್ಯವೂ ಸಿಗಲಾರದು.
ದೇವರುಕೊಟ್ಟ ಉಡುಗೊರೆಗೆ ತಕ್ಕ ಉಡುಗೊರೆ ದೇವರಿಗೆ ಕೊಡುವದು ನಮ್ಮ ಜವಬ್ದಾರಿ. ತಕ್ಕ ಉಡುಗೊರೆ ಕೊಡದಿದ್ದರೆ ಮುಂದಿನಬಾರಿ ಉಡುಗೊರೆ ಕೊಡುವಾಗ ನಾಯಿ ನರಿಗಳಾಗಿ ಹುಟ್ಟಿಸಿ ಮಾಂಸ ಎಲುಬು ತಿನ್ನುವಂತಹ ಉಡುಗೊರೆ ಕೊಟ್ಟರೂ ಕೊಡಬಹುದು. ಆದ್ದರಿಂದ ತಕ್ಕದಾದ ಉಡುಗೊರೆ ಕೊಟ್ಟೇ ಬಿಡೋಣ.
ಉದಾಹರಣೆಗೆ .ಅನ್ನವೆಂಬ ಉಡುಗೋರೆ ನಿತ್ಯಕೊಡುತ್ತಾನೆ. ಆ ಅನ್ನವನ್ನು ಅವನಿಗೆ ಸಮರ್ಪಿಸಿದರೆ ಆಯಿತು. ಅದುವೇ ಮಹಾನ್ ಉಡುಗೊರೆ ಕೊಟ್ಟ ಹಾಗೆಯೇ. ಈ ಮಾರ್ಗದಲ್ಲಿ ದೇವರು ಕೊಟ್ಟದ್ದನ್ನು ಅವನಿಗೆ ಸಮರ್ಪಿಸುವದು. ಏನು ಸಮರ್ಪಿಸಿದ್ದೇವೆ ಅದನ್ನೇ ಅನಂತಮಾಡಿ ಮಾಡಿ ಕೊಡುವ.
ದೆವರನ್ನು ಪ್ರೀತಿಗೊಳಿಸುವದು ಹಾಗೂ ನಾವು ದೇವರನ್ನು ಪ್ರೀತಿಸುವದು ದೇವರಿಗೆ ಕೊಡಬಹುದಾದ ಅತಿಶ್ರೇಷ್ಠ ಉಡುಗೊರೆ. ಈ ಉಡುಗೊರೆಯೇ ಅವನಿಗೆ ಪ್ರಿಯವಾದ ಉಡುಗೊರೆ. ಇದನ್ನೆ ನಾವೂ ಕೊಡೋಣ ಅಲ್ಲವೆ...
*✍🏻✍🏻ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ ಸಿರವಾರ
Comments