*ದಾನಂ ಧೃವಂ ಫಲತಿ ಪಾತ್ರಗುಣಾನುಕೂಲ್ಯಾತ್*
*ದಾನಂ ಧೃವಂ ಫಲತಿ ಪಾತ್ರಗುಣಾನುಕೂಲ್ಯಾತ್*
ಅಧಿಕಮಾಸ ಸಾಮಾನ್ಯವಾಗಿ ದಾನ ಧರ್ಮ ವ್ರತಗಳನ್ನು ಸ್ವಾಗತಿಸುವ ಮಾಸ. ಪ್ರತಿಶತಃ ೧೦೦ ರಷ್ಟು ಎಲ್ಲ ಆಸ್ತಿಕ ಆಸಕ್ತ ಜನರೆಲ್ಲ ವಿಷ್ಣು ಪ್ರೀತಿಗೋಸ್ಕರ ನೂರಾರು ತರಹದ, ತಮಗೆ ಅನುಕೂಲವಾದಷ್ಟು ದಾನಗಳನ್ನು ಮಾಡುತ್ತಾರೆ. ಅಂತಹ ಲಕ್ಷಲಕ್ಷ ದಾನಿಗಳು ಇಂದು ಇದ್ದಾರೆ. ಆ ಎಲ್ಲ ಭಗವದ್ಭಕ್ತರೂ ಕೇವಲ ಭಗವತ್ಪ್ರೀತಿಗೋಸ್ಕರವೇ ದಾನದಲ್ಲಿ ತೊಡುಗುತ್ತಾರೆ.
ನಮ್ಮ ನಮ್ಮ ಕುಲಗುರುಗಳಾದ ಅನೇಕ ಯತಿಗಳು, ಪೀಠಾಧಿಪತಿಗಳು, ತಮ್ಮ ಶಿಷ್ಯರಿಂದ ದಾನ ಧರ್ಮಗಳನ್ನು ಮಾಡಿಸಿದ್ದಾರೆ. ತಮ್ಮ ತಮ್ಮ ಶಿಷ್ಯವರ್ಗಕ್ಕೆ ಅನುಕೂಲವಾಗುವ ಎಲ್ಲತರಹದಿಂದಲೂ ಮಾಡಿಸಿದ್ದಾರೆ. *ನಮ್ಮ ಗುರುಗಳಂತೂ (ಮಾಹುಲೀ ಆಚಾರ್ಯರು) ನಿತ್ಯವೂ ಭಾಗವತ ಗೀತಾಭಾಷ್ಯ ಪಾಠಗಳನ್ನು ಹೇಳುವ ಮುಖಾಂತರ, ಕನಿಷ್ಠ ಐವತ್ತು ಗಂಟೆಗೂ ಹೆಚ್ಚಕಾಲ ದೇಶದ ಮೂಲೆ ಮೂಲೆಯಲ್ಲಿರುವ ಆಸಕ್ತರಿಗೆಲ್ಲ ಜ್ಙಾನದಾನವನ್ನೇ ಮಾಡಿದ್ದಾರೆ. ತಮ್ಮ ಶಿಷ್ಯರೆಲ್ಲರಿಗೂ ಕರುಣಾಪೂರ್ಣವಾದ ಮಹಾ ಅನುಗ್ರಹದ ಸಮುದ್ರವನ್ಬೇ ಹರಿಸಿದ್ದಾರೆ. ತಮ್ಮ ಎಲ್ಲ ಶಿಷ್ಯರಿಂದಲೂ ಮಾಡಿಸಿದ್ದಾರೆ.*
ದೇಶದ ಉದ್ದಗಲದಲ್ಲಿ ವ್ಯಾಪಿಸಿದ ಉತ್ತಮ ಕಾರ್ಯಕ್ಷಮತೆ ಇರುವ ಅನೇಕ ವಿದ್ವಾಂಸರುಗಳು ತಮ್ಮ ಅನೇಕ ಆತ್ಮೀಯ ಗ್ರಹಸ್ಥರ ಸಹಕಾರದೊಂದಿಗೆ ನೂರಾರು ವಿದ್ವಾಸುರುಗಳಿಗೆ ದ್ರವ್ಯದಾನ ಮಾಡಿಸಿದ್ದಾರೆ, ವಿದ್ವಾಂಸರುಗಳಿಂದ ಜ್ಙಾನದಾನ, ಪಾರಾಯಣ, ಹೋಮಹವನ, ಜಪ ತಪ ಗಳನ್ನೂ ಮಾಡಿಸಿದ್ದಾರೆ. *ಈ ವಿದ್ವಾಂಸರುಗಳಲ್ಲಿ ನನ್ನ ಆತ್ಮೀಯ ಮಿತ್ರರೂ ಅನೇಕರಿದ್ದಾರೆ, ಅದುವೇ ನನ್ನ ಖುಶಿ.*
ಊರಿನ ಸಮಾಜದ ಮುಖಂಡರುಗಳು, ನಾನಾ ಸಂಸ್ಥೆಯ ಸಂಸ್ಥಾಪಕರುಗಳೂ ತಮ್ಮ ಅನೇಕ ಪ್ರೀತಿಯ ಜನರನ್ನು ಆರಿಸಿ, ವಿಶ್ವಾಸಿಗಳನ್ನು ಹುಡುಕಿ ಅವರೆಲ್ಲರುಗಳಿಂದ ದಾನಗಳನ್ನೂ ಮಾಡಿಸಿದ್ದಾರೆ.
ಯೋಗ್ಯರಾದ, ನಿರಂತರ ಪಾಠಪ್ರವಚನಾಸಕ್ತರಾದ, ವಿಷ್ಣು ವೈಷ್ಣವ ಭಕ್ತರಾದ, ಧರ್ಮಾಚರಣೆಯಲ್ಲಿ ಆಸಕ್ತರಾದ, ವಿದ್ವಾಂಸರುಗಳಿಗೆ ಆಚಾರ್ಯರುಗಳಿಗೆ ಕೊಡುವ ದಾನ ವಿಷ್ಣುಪ್ರೀತಿಗೆ ನೇರ ಕಾರಣ ಎಂದೇ ನಂಬಿದ ಈ ಎಲ್ಲ ಆಸಕ್ತರು ಸ್ವಯಂ ದಾನ ಕೊಟ್ಟಿದ್ದಾರೆ, ತಮ್ಮವರಿಂದ ದಾನ ಕೊಡಿಸಿದ್ದಾರೆ. ಈ ಹಬ್ಬ ಪ್ರತೀ ಅಧಿಕಮಾಸದಲ್ಲೂ ಇರುವದೇ.
*ಇಂದಿನ ಈ ಕಷ್ಟದ ಅಧಿಕಮಾಸ*
ಈ ಹಬ್ಬ ಪ್ರತೀ ವರ್ಷ ಊರೂರುಗಳಲ್ಲಿ, ಮಠ ಮಠಗಳಲ್ಲಿ ವೈಭವದಿಂದ ನಡೆಯುತ್ತಿರುತ್ತದೆ. ಆದರೆ ಈ ಬಾರಿ ಕರೋನಾ ಕಾರಣದಿಂದ ಜಗತ್ತಿಗೆ ಕಷ್ಟವಾಗಿದೆ. ಸರದಕಾರಕ್ಕೆ ಕಷ್ಟವಾಗಿದೆ. ದೊಡ್ಡ ದೊಡ್ಡ ಉದ್ಯೋಗಪತಿಗಳಿಂದಾರಂಭಿಸಿ ಸಾಮನ್ಯವರ್ಗದವರೆಗೂ ತಮ್ಮ ಮನೆ ಮಠ ನಡೆಸುವದೂ ಕಷ್ಟವಾಗಿದೆ. ಇದು ದಾನಿಗಳ ಸ್ಥಿತಿ.
ದಾನ ಸ್ವೀಕರಿಸುವ ವೈದಿಕ, ಆಸ್ತಿಕ, ವಿದ್ವಾಂಸರುಗಳಂತೂ ಕಷ್ಟದ ಸ್ಥಿತಿಯಲ್ಲೇ ಇದ್ದಾರೆ. ಇಂದಿನ ಈ ಸ್ಥಿತಿಯಲ್ಲಂತೂ ಅವರೆಲ್ಲರ, ಅನೇಕರ ಕಷ್ಟ ಊಹಾತೀತ.
*ಮಧ್ಯೆ ಜೀವನದ ಹೆದರಿಕೆ....*
ಆರ್ಥಿಕವಾಗಿ ಕಷ್ಟ ಒಂದೆಡೆ ಆದರೆ, ಆರೋಗ್ಯದ ಹೆದುರಿಕೆ ಮತ್ತೊಂದು ಕಡೆ.
ದಾನ ಕೊಟುವ ವ್ಯಕ್ತಿ ಧೈರ್ಯ ಮಾಡಿ ಕೊಡಲು ಉದ್ಯುಕ್ತನಾದರೆ, ಸ್ವೀಕರಿಸುವ ವ್ಯಕ್ತಿಗೆ ಭಾಗವಹಿಸಲು ಹೆದುರಿಕೆ. ಸ್ವೀಕರಿಸುವ ವ್ಯಕ್ತಿ ಸಿದ್ಧನಾದರೆ, ಕೊಡುವ ವ್ಯಕ್ತಿಗೆ ಹೆದುರಿಕೆ. ಈ ತರಹದ ಕಷ್ಟದ ಪ್ರಸಂಗದಲ್ಲೂ *ನಮ್ಮ ಸಮಾಜ ಸ್ವಲ್ಪವೂ ಹಿಂದು ಮುಂದು ವಿಚಾರಿಸದೇ "ನಮ್ಮ ಧರ್ಮ ನಮಗೆ ಮುಖ್ಯ, ನಮ್ಮನ್ನು ಕಾಪಾಡುವದು ನಮ್ಮ ಧರ್ಮವೇ"* ಎಂದು ದೃಢವಾಗಿ ನಂಬಿ, ವಿದ್ವಾಂಸರುಗಳನ್ನು ಹುಡುಕಿ, ಅರಿಸಿ, ಅವರ ವಿಳಾಸ ಪತ್ತೆ ಮಾಡಿ, ಅವರೆಲ್ಲರಿಂದಲೂ ಪಾರಾಯಣ, ಜಪ, ಹೋಮ, ಹವನ, ಇತ್ಯಾದಿಗಳನ್ನು ಮಾಡಿಸಿ ಅವರಿರುವಲ್ಲೇ, ತಾವು ಇದ್ದಲ್ಲಿಂದಲೇ ದಾನ ಮುಟ್ಟಿಸುವ ಕಾರ್ಯಗಳು ನಡೆದಿವೆ ಎಂದರೆ ನಿಜವಾಗಿಯೂ ನನಗಂತೂ ಆಶ್ಚರ್ಯವೇ ಆಗಿದೆ.
*ಸರ್ವೇ ಜನಾಃ ಸುಖಿನೋ ಭವಂತು*
ಸಮಗ್ರ ದೇಶದಲ್ಲಿ ಆದ ಎಲ್ಲ ತರದ ದಾನ ಧರ್ಮ ಜಪ ತಪ ಹೋಮ ಹವನ ಇವುಗಳಿಂದ ಸಂಪಾದಿತವಾದ ಅಪಾರ ಪುಣ್ಯರಾಶಿಯಿಂದ ವೈಯಕ್ತಿಕವಾಗಿ, ನಾವು, ನಮ್ಮ ಕುಟುಂಬ, ನಮ್ಮ ಬಳಗ, ನಮ್ಮ ಸಮಾಜ, ನಮ್ಮ ರಾಜ್ಯ, ನಮ್ಮ ದೇಶ, ಸಮಗ್ರ ವಿಶ್ವ ಎಲ್ಲವೂ ಅರೋಗ್ಯವಂತರಾಗಲಿ, ಗುಣವಂತರಾಗಲಿ, ಜ್ಙಾನ ಭಕ್ತಿಯುಕ್ತರಾಗಲಿ, ವಿಷ್ಣುಪ್ರಿಯರೂ ಆಗಲಿ, ಎಲ್ಲರಿಗೂ ಒಳ್ಳೆಯದಾಗಲಿ ಹರಿಸೋಣ.
ತಮ್ಮ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ "ದಾನ ಮಾಡಿದ ನೂರಾರು ಸಾವಿರಾರು ಲಕ್ಷ ಲಕ್ಷ ಜನರೆಲ್ಲರಿಗೂ ಪುರುಷೋತ್ತಮನ ಅನುಗ್ರಹ ಸದಾ ಇರಲಿ" ಎಂದು ಲೆಖನ ಓದಿದ ನಾವೆಲ್ಲರೂ ಕುಳಿತಲ್ಲಿಯೇ ಹಾರೈಸೋಣ.....
*✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments