*ವಿಶ್ವೋಪಾಸಕನೇ ಸನ್ಮನದಿ ವಿಜ್ಙಾಪಿಸುವೆ - ಭಕ್ತಿ ಜ್ಙಾನವ ಕೊಟ್ಟು ಸಲಹುವದು*

*ವಿಶ್ವೋಪಾಸಕನೇ ಸನ್ಮನದಿ ವಿಜ್ಙಾಪಿಸುವೆ - ಭಕ್ತಿ ಜ್ಙಾನವ ಕೊಟ್ಟು ಸಲಹುವದು* 

ಇಂದು ಗಣೇಶ ಚತುರ್ಥಿ. ಸಂಪೂರ್ಣ ಭಾರತದಲ್ಲಿ ಸಂಭ್ರಮ. ಊರೂರುಗಳಲಿ, ಓಣಿಓಣಿಗಳಲ್ಲಿ, ಮನೆಮನೆಗಳಲ್ಲಿ, ಮನಮನಗಳಲ್ಲಿ ಒಂದು ಮಹಾಹಬ್ಬದ ಉತ್ಸವದ ವಾತಾವರಣ. 

*ಗಣಪತಿಗೆ "ಗಜಮುಖ" ಬಂತು ಏಕೆ...*

ಭಗವಂತನನ್ನು ಹೇಗೆ ಉಪಾಸನೆ ಮಾಡುವವರೋ ಹಾಗೆ ದೇವ ಫಲಕೊಡುತ್ತಾನೆ. ಆಕಾಶತತ್ವಕ್ಕೆ ಅಭಿಮಾನಿಯಾದ ಗಣಪತಿಯ ಆರಾಧ್ಯ ದೈವ "ವಿಶ್ವಂಭರರೂಪೀ" ಹರಿ. ಆ ವಿಶ್ವಂಭರನ ಧ್ಯಾನದಿಂದ *ಗಣಪತಿಯು ಗಜಮುಖನು ಆದನು.*

*ವಿಶ್ವಂಭರನು ಯಾರು..?? ಹೇಗಿದಾನೆ..??*

ವಿಶ್ವ ಜಗತ್ತನ್ನು ಭರಣೆ ಮಾಡುವ ಒಂದು ಅದ್ಭುತರೂಪ‌ ವಿಶ್ವಂಭರರೂಪ. ವಿಶ್ವದ ಆದಿಕಾಲದಲ್ಲಿ ಪ್ರಾದುರ್ಭಾವಗೊಂಡ ರೂಪಗಳು ಆದ "ವಿಶ್ವ, ತೈಜಸ, ಪ್ರಾಜ್ಙ, ತುರ್ಯ, ಆತ್ಮ, ಅಂತರಾತ್ಮ, ಜ್ಙಾನಾತ್ಮ, ಪರಮಾತ್ಮ" ಎಂಬ "ಸೃಷ್ಟಿ, ಸ್ಥಿತಿ, ನಿಯಮನ, ಜ್ಙಾನ, ಅಜ್ಙಾನ, ಬಂಧ, ಮೋಕ್ಷ" ಪ್ರದವಾದ ಎಂಟು ರೂಪಗಳು. ಈ ಎಂಟು ರೂಪಗಳೇ "ಪ್ರಣವ" ಮಂತ್ರದ ಅಷ್ಟಾಕ್ಷರಗಳ, ಹಾಗೂ "ನಾರಾಯಣ" ಮಂತ್ರದ ಅಷ್ಟಾಕ್ಷರಗಳ ಪ್ರತಿಪಾದ್ಯರೂಪ. 

"ವಿಶ್ಚಾದಿ ಎಂಟು ರೂಪಗಳಲ್ಲಿ" ಮೊದಲನೇಯದಾದ *ವಿಶ್ವರೂಪ* ವೇ ಇಂದಿನ *ವಿಶ್ವಂಭರ ರೂಪ.* ಈ ವಿಶ್ವಂಭರನ ಉಪಾಸನೆ ಧ್ಯಾನ ಇವುಗಳಿಂದಲೇ ಗಣಪತಿಯು *ಗಜಮುಖನು ಆದನು.*

*"ವಿಶ್ವಂಭರನ" ಕಾರ್ಯವೇನು ?? ಹೇಗಿದ್ದಾನೆ ?? ಇರುವ ಸ್ಥಾನ ಯಾವದು ??*

ಕಾರ್ಯ ಅನತ ಜೀವರಾಶಿಗಳ ಜಾಗ್ರತ್ತನ್ನು ನಿಯಮಿಸಿ, ಲಕ್ಷಲಕ್ಷ ತರಹದ ಭೋಗಗಳನ್ನು ಒದಗಿಸುತ್ತಾನೆ. ಜೀವರ ಬಲಗಣ್ಣಿನಲ್ಲಿ ವಾಸ ಮುಡುತ್ತಾನೆ. ಅಂದರೆ ನಮ್ಮ ಬಲಗಣ್ಣಿನಲ್ಲಿ ವಿಶ್ವಂಭರ ರೂಪದ ವಾಸಸ್ಥಾನ. 

ವಿಶ್ವನಾಮಕ "ವಿಶ್ವಂಭರ"ನಿಗೆ ಹತ್ತೊಂಭತ್ತು ಮುಖಗಳಿಂದ ಯುಕ್ತನು. ಆ ಹತ್ತೊಭತ್ತು ಮುಖಗಳಲ್ಲಿ ಮಧ್ಯಮುಖ *ಗಜಮುಖ* ಅಂದರೆ ಆನೆಯಮುಖ. ಆ ಮುಖದ ವಿಶೇಷ ಚಿಂತನೆಯ ಫಲವೇ " ನಮ್ಮ ಗಣಪತಿಯು ಗಜಮುಖನು ಆದನು. ಈ ಅಪರೂಪದ ವಿಷಯವನ್ನು ಸ್ವಯಂ  ಶ್ರೀಮದಾಚಾರ್ಯರು ತಿಳುಹಿಸಿಕೊಡುತ್ತಾರೆ. ಆ ಮಾತನ್ನೇ ಜಗನ್ನಾಥದಾಸರು ಗಣಪತಿ ಸಂಧಿಯಲ್ಲಿ ತಿಳಿಸುತ್ತಾರೆ. *ಮೇಲಿನ ಅತ್ಯಂತ ಸುಂದರವಾದ ಚಿತ್ರದಲ್ಲಿ, "ಗಣಪತ್ಯಂತರ್ಗತ ವಿಶ್ವಂಭರ* ಹೇಗಿದ್ದಾನೆ ಎನ್ನುವದರ ಸಾಮಾನ್ಯ ಕಲ್ಪನೆ ಕೊಡಲಾಗಿದೆ. 

*ಪೂಜೆಯಾದ ನಂತರ ಬೇಡುವದೇನು...???*

"ಹೇ ವಿಶ್ವೋಪಾಸಕನೇ !!! ವಿಶ್ವನಾಮಕ ಹರಿಯ ಗಜಮುಖದ ಉಪಾಸನೆ ಮಾಡುವ ಗಣಪತಿಯೇ !!  ಸನ್ಮನದಿ ವಿಜ್ಙಾಪಿಸುವೆ - ಅತ್ಯುತ್ತಮ ಶುದ್ಧವಾದ ನಿರ್ವ್ಯಾಜವಾದ  ಮನಸ್ಸಿನಿಂದ ಪ್ರಾರ್ಥಿಸುವೆ. ಲಕ್ಷ್ಮೀ ವನಿತೆಯರಸನ - ಲಕ್ಷ್ಮೀಪತಿಯಾದ ಶ್ರೀಮನ್ನಾರಾಯಣನ. ಭಕ್ತಿ ಜ್ಙಾನವಕೊಟ್ಟು ಸಲಹುವದು - ಅತ್ಯುತ್ತಮ ಜ್ಙಾನ ಹಾಗೂ ಸುದೃಢಭಕ್ತಿ ಕೊಟ್ಟು ಎನ್ನನು ಸಲಹಲೇಬೇಕು" ಎಂಬ ಸುಂದರ ಪ್ರಾರ್ಥನೆ ದಾಸರಾಯರು ಮಾಡಿದ್ದಾರೆ. ನಾವೂ ಆ ಪ್ರಾರ್ಥನೆಯನ್ನೇ ಮಾಡೋಣ. 

*ಬೇಡಿಕೆಗಳು ನೂರಾರು ಇವೆ, ದೇವರ ಜ್ಙಾನವನ್ನೇ ಬೇಡುವದೇನಿದೆ ಅತ್ಯುತ್ತಮ ಬೇಡಿಕೆ* ಬೇಡುವದೇ ನಿಜ ಎಂದಾದಮೇಲೆ ಅತ್ಯುತ್ತಮವಾದದ್ದನ್ನೇ ಬೇಡೋಣ. ಜ್ಙಾನ ಭಕ್ತಿಗಳನ್ನೇ ಬೇಡೋಣ. 

*ಈ ಬಾರಿ ಗಣೇಶೋತ್ಸವದ ಒಂದು ವಿಶೇಷತೆ*

ಕರೋನಾ ಕಾರಣದಿಂದ ನೈಜವಾದ ಮೃತ್ ಮಣ್ಣಿನಿಂದಲೇ ನನಗೆ ಪರಿಚಯದ ಸಾವಿರ ಸಾವಿರ ಜನರು,  ತಮ್ಮ ಮನೆಯಲ್ಲಿಯೇ‌ ಗಣಪತಿಯನ್ನು ಮಾಡಿ ಕೊಂಡಿದ್ದಾರೆ. ಇದು ನಿಜವಾದ ಪದ್ಧತಿ. ಪ್ರಾಚೀನ ಪದ್ಧತಿ. "ಮೃಣ್ಮಯ ಗಣಪತಿಯಪೂಜೆ" ಪೂರ್ಣ ಸಾರ್ಥಕಪೂಜೆ.

ಈ ಬಾರಿಯ ವಿಶೇಷವೇನೆಂದರೆ *ಗಣಪತ್ಯಂತರ್ಗತ ವಿಶ್ವಂಭರ* ರೂಪಿ ಹರಿಯ ಪರಮ ಸುಂದರ, ಪರಮಶ್ರೇಷ್ಠವಾದ, ನಮ್ಮ ಪರಿಕಲ್ಪನೆಗೆ ಬರುವ *ಅತ್ಯಂತ ಸುಂದರವಾದ ಚಿತ್ರ drawing* ನಮ್ಮ‌ ಮನೆಯಿಂದಲೇ ಬಂದದ್ದು ತುಂಬ ಖುಶಿಯ ವಿಚಾರ. ಇನ್ನೂ ಹೆಚ್ಚಿನ ಚಿತ್ರಗಳನ್ನು drawing ಮಾಡುವ ಮುಖಾಂತರ ದೇವತೆಗಳ ದೇವರ ಸೇವೆ ಇನ್ನೂ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸುವೆ. 

ಗಣಪತಿಯ ಆರಾಧನೆ, ಉತ್ಸವ, ಪೂಜೆ, ಗಣಹೋಮ, ರುಚಿರುಚಿಯಾದ  ಅಡಿಗೆ ನೈವೇದ್ಯ, ಚಿತ್ರಪಟ ನಿರ್ಮಾಣ, ಭಜನೆ, ಪಾರಾಯಣ, ಉಟಾಬಸಿ, ಪ್ರದಕ್ಷಿಣೆ ನಮಸ್ಕಾರ ಮೊದಲು ಮಾಡಿ ನಾನಾತರಹದ ಸೇವೆಯನ್ನು ಮಾಡಿದ ನನ್ನ ಆತ್ಮೀಯರಾದ ಎಲ್ಲರಿಗೂ 
*ವಿಘ್ನಹರ್ತೃ ಗಣಪತ್ಯಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ವಿಶ್ವಂಭರನು* ಸಕಲಸನ್ಮಂಗಳಗಳನ್ನೂ ದಯಪಾಲಿಸಲಿ, ಜ್ಙಾನ ಭಕ್ತಿಗಳನ್ನೂ ಅಭಿವೃದ್ಧಿಸಲಿ ಎಂದು ನಾವೆಲ್ಕರೂ ಸೇರಿ ಪರಸ್ಪರ ಪ್ರಾರ್ಥಿಸೋಣ.

*ಗಣಪತಿಬಪ್ಪ ಮೋರಯ !!! ಮಹಾ ಗಣಪತಿಗೇ ಜಯವಾಗಲಿ*

✍🏽✍🏽ನ್ಯಾಸ*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*