*ಧನ್ವಂತರಿ ಜಯಂತಿ*
(ನಮ್ಮ ತಂದೆಯವರು ಗಂಡಿಕೀ ನದಿಯಿಂದ ತಂದ ಅಪರೂಪದ ಅನೇಕ ಸಾಲಿಗ್ರಾಮಗಳಲ್ಲಿ ಒಂದಾದ *ಧನ್ವಂತ್ರಿ ಸಾಲಿಗ್ರಾಮ....🙏🏽🙏🏽🙏🏽*)
*ಧನ್ವಂತರಿ ಜಯಂತಿ*
ಸಾಧನೆಗೆ ಅಡ್ಡಿಮಾಡುವ ನಮ್ಮ ಕರ್ಮಾನುಸಾರಿಯಾದ ಮಾನಸಿಕವಾದ, ಇಂದ್ರಿಯಸಂಬಧೀಯಾದ, ದೈಹಿಕವಾದ ರೋಗಗಳು ಅಜ್ಙಾನ, ಮಿಥ್ಯಾಜ್ಙಾನ, ಭ್ರಾಂತಿ, ಅಹಂಕಾರ, ಆಲಸ್ಯ, ಕಾಮ, ಕ್ರೋಧ, ದೇವರನ್ನು ನೋಡದ ಕೇಳದ ಮುಟ್ಟದ, ವಿಚಾರಿಸದ ಇಂದ್ರಿಯಗಳು, ದೈಹಿಕ ನಾನಾವಿಧವಾದ ನೋವುಗಳು, ಇದಾದಮೇಲೆ ನಮಗೆ ತಿಳಿಯದ ಆಧಿ ವ್ಯಾಧಿಗಳು, ಇವುಗಳನ್ನು ಮೆಟ್ಟಿನಿಂತು ಸಾಧನೆ ಮಾಡುವದು ತುಂಬ ಕಠಿಣ. ಇವುಗಳು ಸಾಧನೆ ವಿರೋಧಿಗಳೇ ಆಗಿವೆ.
ರೋಗಗಳೆಂಬ ವಿರೋಧಿಗಳನ್ನು ಮೆಟ್ಟಿನಿಂತು, ನಾವು ನಿರೋಗಿಗಳಾಗಬೇಕಾದರೆ ಅದಕ್ಕೆ ಉತ್ತಮನಾದ ಕಾಮಕ್ರೋಧಗಳಿಲ್ಲದ ಕರುಣಾಮಯಿಯಾದ ಮಾರ್ಗದರ್ಶಿ ವೈದ್ಯ ಅನಿವಾರ್ಯವಾಗಿ ಬೇಕು...
ಆ ವೈದ್ಯ ಭಕ್ತರಾದ ನಮಗಾಗಿಯೇ ನಮ್ಮ ನಾಡಿಗೆ, ನಮ್ಮೂರಿಗೆ, ನಮ್ಮ ಮನಸ್ಸಿಗೆ ಅವತರಿಸಿ ಬಂದ ಪರಮ ಮಂಗಳ ದಿನ ಇಂದಿನ ದಿನ. ಆ ವೈದ್ಯನಾರು... ??
ಆ ವೈದ್ಯ ಮತ್ತಿನ್ನಾರೂ ಅಲ್ಲ "ಪರಮಕರುಣಾಳು, ಭಕ್ತಹಿತಕಾರಿ, ಭಕ್ತರ ಎಲ್ಲ ಪಾಪಗಳನ್ನು ಸುಟ್ಟುಹಾಕುವ, ದಯಾನಿಧಿಯಾದ, ನಾಮಸ್ಮರಣೆ ಮಾಡುವದರಿಂದಲೇ ಅನೇಕ ರೋಗಗಳನ್ನು ಪರಿಹಾರಮಾಡುವ, ಮುಕ್ತಿಯೋಗ್ಯ ಅನಂತ ಜೀವರಾಶಿಗಳ ಸಂಸಾರವೆಂಬ ರೋಗವನ್ನು ಬೀಜಸಹಿತ ಕಿತ್ತಿಬಿಸಾಡುವ, ಅಪಾರ ಸಾಮರ್ಥ್ಯವುಳ್ಳ, ಕ್ಷೀರಮಥನದ ಸಮಯದಲ್ಲಿ ಪ್ರಾದುರ್ಭಿಸಿದ, ಅಮೃತಧಾರಿಯಾದ
*"ಧನ್ವಂತರಿ ರೂಪಿ ಶ್ರೀನಾರಾಣ" ನೆಂಬ ವೈದ್ಯ.*
ಈ ವೈದ್ಯನಲ್ಲಿ ತುಂಬ ಉತ್ಕೃಷ್ಟ ಪ್ರಾರ್ಥನೆಯನ್ನು ತಾವು ಮಾಡುತ್ತಾರೆ ನಾವು ಹೇಗೆ ಮಾಡಬೇಕೆನ್ನುವದನ್ನೂ ತೋರಿಸಿಕೊಡುತ್ತಾರೆ ದಾಸರಾಯರು...
"ಆವರೋಗವು ಎನಗೆ ದೇವ ಧನ್ವಂತರಿ
ಸಾವಧಾನದಿ ಎನ್ನ ಕೈ ಪಿಡಿದು ನೋಡಯ್ಯಾ" ಎಂದು.
*ಧನ್ವಂತರಿರ್ಭಗವಾನ್ ಪಾತು ಅಪಥ್ಯಾತ್*
ಹೇ ಧನ್ವಂತರಿ ರೂಪಿ ನಾರಾಯಣ !! ಇಂದು ಎಮ್ಮನುದ್ಧರಿಸಲೇ ನೀನು ಅವತರಿಸಿದ ದಿನ. ಅಂತೆಯೇ ನಿನಗೆ ಕೋಟಿ ಕೋಟಿ ಅನಂತಾನಂತ ನಮನಗಳು. ಅಪಥ್ಯವಾದದ್ದು ಏನಿದೆ ಅದೆಲ್ಲದರಿಂದ ಪಾರು ಮಾಡು ಎಂದು ಭಾಗವತ ಹೇಳುತ್ತದೆ. ಅಪಥ್ಯವೇ ಬೇಕು ಎಂಬ ಹಠ ನಮ್ಮದು.
ಒಂದು ರೂಪದಿಂದ ಅಮೃತ ಮಥನಕಾಲದಲ್ಲಿ ಲಕ್ಷ್ಮಿ ಹಾಗೂ ಚಂದ್ರರ ತಮ್ಮನಾಗಿ ಅವತರಿಸಿದರೆ, ಮತ್ತೊಂದು ರೂಪದಿಂದ ಆ ಚಂದ್ರವಂಶದಲ್ಲಿಯೇ ಜನಿಸಿಬಂದಿ. ಎರಡೂ ರೂಪಗಳ ಹೆಸರಯ ಧನ್ವತರಿ ಎಂದೇ.
*ನಿನ್ನ ಮಹತ್ಕಾರ್ಯಗಳು*
ನಿನ್ನನ್ನೇ ನೆರೆನಂಬಿದ, ನಿನ್ನ ಭಕ್ತರಿಗೆ ಅಮೃತವುಣಿಸಿದಿ, ಆಯುರ್ವೇದವನ್ನು ರಚಿಸಿಕೊಟ್ಟಿ, ಜ್ಙಾನ ಗಂಗೆ ಹರಿಸಿದಿ, ಆರೋಗ್ಯ ದಯಪಾಲಿಸಿದಿ, ಇವೆಲ್ಲದರ ಮೇಲೆ ನಿನ್ನನ್ನು ಧೇನಿಸುವವರಿಗೆ ಏನೆಲ್ಲ ದುರಿಗಳು ಇವೆಯೋ ಆ ಎಲ್ಲ ದುರಿತಗಳನ್ನು ಪರಿಹರಿಸಿರುವಿ, ಮೋಕ್ಷ ಕೊಡುವಿ. ಇದು ಕೇವಲ ನಿನ್ನ ಕರುಣೆ ನಿನ್ನ ದಯೆ. ನಿನ್ನ ಮಹತ್ಕಾರ್ಯಗಳು.
*ಆವ ರೋಗಗಳು ಎನಗೆ ದೇವ ಧನ್ವಂತ್ರಿ - ಸಾವಧಾನದಿ ಎನ್ನ ಕೈ ಪಿಡಿದು ನೋಡಯ್ಯ*
೧) ಜನನ ಮರಣಗಳಲ್ಲಿ ನೊಂದಿದೇನೆ.
೨) ನನ್ನ ದೇಹ ಇಂದ್ರಿಯ ಮನಸ್ಸು ಅನೇಕಾನೇಕ ರೋಗಗಳಿಗೆ ಆಶ್ರಯವಾಗಿದೆ.
೩) ಅಜ್ಙಾನಾಂಧಕಾರ ಆವರಿಸಿದೆ.
೪) ಅಂತೆಯೇ ನಿತ್ಯ ಸಾವು ಬದುಕು ಎಂಬ ಸ್ಥಿತಿ ಎದುರಾಗಿದೆ.
೫) ನಿತ್ಯ ಮನಸ್ಸ ಹದೆಗೆಡುತ್ತಾ ಸಾಗಿದೆ. ಹೀಗಾಗಿ ಎನ್ನಯ ಸ್ಥಿತಿ ಅಯೋಮಯವಾಗಿದೆ. *ಹೇ ದಯಾಲೋ !! ಪಥ್ಯ ವಾದದ್ದು ಯಾವುದೋ ಅದನ್ನು ದಯೆ ಮಾಡಿ ದಯಪಾಲಿಸು. ಅಪಥ್ಯದಿಂದ ರಕ್ಷಿಸು.*
೧) ಹರಿ ಮೂರ್ತಿ ಎನ್ನ ಕಂಗಳಿಗೆ ಕಾಣಿಸುತ್ತಿಲ್ಲ.
೨) ಹರಿ ಕೀರ್ತನೆಗಳುನ್ನು ಕೇಳಿಸವು ಎನ್ನ ಕಿವಿಗಳಿಗೆ.
೩) ಹರಿ ಮಂತ್ರ ಸ್ತೋತ್ರಗಳು ಎನ್ನ ನಾಲಿಗೆಗೆ ಬರುವದೇ ಇಲ್ಲ.
೪) ಹರಿ ನೈವೇದ್ಯ ಎನ್ನ ಜಿಹ್ವೆಗೆ ರುಚಿ ಎಂದೆನಿಸುವದೇ ಇಲ್ಲ.
೫) ಭಗವತ್ಪಾದ ಸೇವೆಗೆ ಹಸ್ತುಗಳು ಒಲ್ಲೆ ಅನ್ನುತ್ತವೆ.
೬) ಗುರು ಹಿರಿಯರಿಗೆ ಶಿರಬಾಗದು ಎನ್ನ ಶಿರ.
೭) ಹರಿಯ ನಿರ್ಮಾಲ್ಯವನ್ನು ಎಂದಿಗೂ ಮೂಸಿ ನೋಡುವದಿಲ್ಲ ಎನ್ನ ಮೂಗು.
೮) ತೀರ್ಥ ಯಾತ್ರೆಗೆ ಎನ್ನ ಕಾಲೇಳದು.
೧) ಧರ್ಮದಲ್ಲಿ ಮನಸದಸು ಬರುವದಿಲ್ಲ.
೨) ಜ್ಙಾನದಲ್ಲಿ ಅಭಿರುಚಿಯೇ ಇಲ್ಲ.
೩) ಶಾಸ್ತ್ರದ ವಿರುದ್ಧವೇ ನಡೆಯಬೇಕು ಎಂಬ ಹಠ ಬಹಳ.....
ಹೀಗೆ ಇಂದ್ರಿಯ, ಇಂದ್ರಿಯಗಳನ್ನೊಳಗೊಂಡ ದೇಹ. ಇವೆರಡಕ್ಕೂ ಸೂತ್ರಧಾರಿಯಾದ ಮನಸ್ಸು ಎಲ್ಲದರಲ್ಲಿಯೂ ರೋಗಗಳು ತುಂಬಿ ಹೋಗಿವೆ. ಕರುಣೆ ಮಾಡು, ದಯೆತೋರು ಗುಣ ಪಡಿಸು.
ಇವು ಇಂದಿನ ರೋಗಗಳಾದರೆ ಅನಾದಿಯಿಂದ ಇರುವ ಸಂಸಾರ ರೋಗ. ಅದು ಅಂತೂ ತುಂಬಾ ಭಯಾನಕ. ಅದನ್ನೂ ಬೇಗ ಪರಿಹರಿಸು.
ಮನಶ್ಶಾಂತಿ ದಯಪಾಲಿಸು. ಸಾಧನೆಗೆ ಅನುವಾದ ಉತ್ತಮ ಆಯುಷ್ಯ - ಆರೋಗ್ಯ ಕೃಪೆಮಾಡು. ಸಾಧನೆಗೆ ದೇಹ ಸೌಷ್ಠವ ಕೊಡು. ಅಮೃತವುಣಿಸು. ಅಜ್ಙಾನ ಪರಿಹರಿಸು, ಜ್ಙಾನ ಉಣಿಸು. ಭಕ್ತಿ ಬೆಳಿಸು. ಅನಂತಕಾಲದ ವರೆಗೆ ಮುಕ್ತಿಯಲ್ಲಿ ಇರಿಸು ಎಂದು ಅತ್ಯಂತ ದೀನನಾಗಿ ಪ್ರಾರ್ಥಿಸುವೆ. ನೀನು ದಯಾಮಯನಾಗಿ ದಯಪಾಲಿಸು.
ಹೇ ಧನ್ವಂತ್ರಿ ನಾರಾಯಣ !! ನಿನಗೆ ಕೋಟಿ ಕೋಟಿ ವಂದನೆಗಳು. ಅನಂತಾನಂತ ಪ್ರಣಾಮಗಳು.
*ನಾ ಎಂದಿಗೂ ಮರೆಯೆ ನೀ ಮಾಡಿದುಪಕಾರ*
ಮೊದಲು ಅತ್ಯುತ್ತಮ ಗುಣಪಟ್ಟದಲ್ಲೊ ಆರಾಧಿಸೋಣ. "ಧನ್ವಂತ್ರಿ ದೇವ ನಮ್ಮ ವ್ಯಾರಕ್ಕೆ ಇಲ್ಲ. ಅವನ ಸೇವೆಗೆ ನಾನಿದ್ದೀನಿ", ಎಂಬ ಭಾವನೆಯಲ್ಲಿಯೇ ಪ್ರಾರ್ಥಿಸೋಣ.
ಧನ್ವಂತರಿಯ ಅನುಗ್ರಹದಿಂದ ನಿರೋಗಿಗಳಾಗಿ, ಉತ್ಕೃಷ್ಟಸಾಧನೆಯನ್ನು ಮಾಡಿಕೊಳ್ಳುವಂತೆ ಆ ಗುರುಗಳು ದೇವತೆಗಳು ಅನಂತ ರೂಪಿಯಾದ ಧನ್ವಂತರಿರೂಪಿ ಭಗವಂತ ಅನುಗ್ರಹಿಸಲಿ ಕರುಣಿಸಲಿ ಮುಕ್ತಿಮಾರ್ಗ ತೋರಿಸಲಿ ಎಂದು ಅನಂತ ಅನಂತ ಅನಂತ ನಮಸ್ಕಾರಪೂರ್ವಕ ಪ್ರಾರ್ಥಿಸೋಣ.....
*✍🏼✍🏼ನ್ಯಾಸ*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ
Comments