*ಶ್ರೀಕೃಷ್ಣಃ ಶರಣಂ ಮಮ*
*ಶ್ರೀಕೃಷ್ಣಃ ಶರಣಂ ಮಮ*
ಹೇ ಭಗವನ್ ಕೃಷ್ಣರೂಪಿನ್ !! ನೀನೆ ಎನಗೆ ಶರಣು. ಭಾರವಾದ ಹೃದಯ, ಕಠೋರವಾದ ಮನಸ್ಸುಗಳಿಂದ ಭಾರ ಹೊತ್ತು ಮುಂದಡಿ ಇಡಲಾಗದ ಎನಗೆ ನೀನೇ ಶರಣು. ಭಾರವಿಳುಹಿಸು. ಮುಂದಡಿ ಇಡಿಸು.
*ಓ ಭಾರ ಇಳುಹುವ ದೇವ*
ಭೂಮಿಯ, ನಿನ್ನ ಭಕ್ತರ ಭಾರವಿಳುಹಲು ಭೂಮಿಗೆ ಅವತರಿಸಿದ ನಿನ್ನ ಕರುಣೆ ಅದ್ಭುತ. ನೀನು ಪರಮಾದ್ಭುತ. *ಜೀವರಾಶಿಗಳೆಲ್ಲರು ತಮಗಾಗಿ ಸ್ವಾರ್ಥಕ್ಕಾಗಿ ಭುವಿಗಿಳಿದು ಬಂದರೆ, ನೀನು ಮಾತ್ರ ಜೀವರಾಶಿಗಳಿಗಾಗಿ ಜೀವರಾಶಿಗಳ ದುಃಖಕಳಚಿ ಅವರ ಭಾರವೆಲ್ಲ ಕಳಚಲು ಭುವಿಗಿಳಿದು ಬಂದ ಹೆದ್ದೊರೆ.*
*ಭುವಿಯಲ್ಲಿ ಬಂದು ಮಾಡುವ ಎಲ್ಲ ಕರ್ಮಗಳು ತಮಗೋಸ್ಕರ ಮಾಡಿಕೊಂಡರೆ, ನೀನು ಮಾಡುವ ಎಲ್ಲ ಕರ್ಮಗಳು ನಮಗೋಸ್ಕರ.* ಇದರಿಂದೇ ತಿಳಿದು ಬರುತ್ತದೆ ನಾ ಎಂತಹ *ಸ್ವಾರ್ಥಿ* ಎನ್ನುವದು. ನಿನೆಂತಹ *ಕರುಣಾಳು* ಎಂದು.
ನನಗೋಸ್ಕರ ನಾನು ಎಂದಾದರೆ ನಾನು ಎಂದಿಗೂ ಮುಂದಡಿ ಇಡಲಾರೆ. ಏಕೆಂದರೆ ನನಗೋಸ್ಕರ *ನನ್ನದು ಎಂಬ ಅನೇಕ ಪದಾರ್ಥಗಳು ಹಾಗೂ ನನ್ನವರು ಎಂಬ ಅನೇಕರು* ಅವಶ್ಯವಾಗಿ ಬೇಕು. ಅವರೆಲ್ಲರಲ್ಲಿಯ ಅಭಿಮಾನವೇ ಎನಗೆ ಭಾರ. ಆಗ ನಾನು ಗುರು ಭಾರನಾದೆ.
ನನ್ನದು ನನ್ನವರು ಎಂಬವುಗಳು ಇಲ್ಲದೇ ನಾನು ಇಲ್ಲ. *ನನಗಾಗಿ ನಾನು* ಆಗಬೇಕಾದರೆ ನನ್ನದು ನಮ್ಮವರುಗಳು ಬೇಕು. ಯಾರು ನನ್ನವರು, ಯಾವದು ನನ್ನದು ಎಂದು ಗೊತ್ತಾಗದೆ *ಎಲ್ಲವನ್ನೂ ನನ್ನದು, ಎಲ್ಲರೂ ನಮ್ಮವರು* ಎಂದು ಎಲ್ಲವನ್ನೂ ಜೊತೆ ಹೊತ್ತರೆ, ಅದೆಲ್ಲದರ ಭಾರ ನನ್ನ ಹೆಗಲಿಗೆ. ಆಗ ನಾನು ಮುನ್ನಡಿ ಇಡಲಾರೆ.
ಹೇ ಭೂಮಿಯ ಭಾರ ಹರಿಸಲೇ ಅವತರಿಸಿದ ಶ್ರೀಕೃಷ್ಣ !!! ಎನ್ನ ಮನದಲ್ಲಿ ತುಂಬಿದ, ನಾನು ಹೊತ್ತ ಅನವಶ್ಯಕವಾದ, ಅನುಪಯುಕ್ತವೂ ಆದ *ನನ್ನದು - ನಮ್ಮವರು* ಎಂಬ ಭಾರ ಪರಿಹರಿಸು. ಈ ಭಾರ ಕಳಚಿ ಹೋದರೆ *ನಾನು ನನಗಾಗಿ ಆಗದೆ, ನಾನು ನಿನಗಾಗಿ ಮೀಸಲು ಆಗುತ್ತೆನೆ.*
ಎಂದು ನಾನು ನಿನಗಾಗಿ ಮೀಸಲು ಆದೆನೋ ಅಂದೇ ನಾನು ತುಂಬ ಹಗುರು. ಹಗುರು ಆದ ನನಗೆ ಮುನ್ನುಗ್ಗಲು ಸರಳ. ಆಗ ಮಾತ್ರ ನಿನ್ನಡಿಗೆ ನಾನು ಬರಬಹುದು.
*ಹಾ ಕೃಷ್ಣ ದ್ವಾರಕಾ ವಾಸಿನ್ !!* ನಿನಗೆ ನಾನು ಶರಣು. ಈ ಮನಸ್ಸಿನಲ್ಲಿ ಅಥವಾ ದೇಹದಿಂದ ಹೊತ್ತ ಭಾರ ಹರಿಸುವವ ನೀನೇ. ನಿನ್ನ ಬಿಟ್ಟು ಎನಗೆ ಬೇರೆ ಗತಿಯಿಲ್ಲ. *ಎಂದಿಗೂ ಯಾವ ಕ್ಷಣಕ್ಕೂ ನೀನು ಎನ್ನನು ಉಪೇಕ್ಷಿಸದೆ ರಕ್ಷಿಸು ಕರುಣಿಸು* ಎಂದು ನಿನ್ನ ಅಡೆದಾವರೆಗಳಿಗೆ ಇಂದು ಶರಣು ಬರುತ್ತೇನೆ. ಕಾಯುವದು, ಭಾರ ಪರಿಹರಿಸುವದು ನಿನ್ನದು. ಏಂದಿಗಾದರೊಂದು ದಿನ ಕಾಯುವಿ, ಭಾರಹರಿಸುವಿ ಎಂಬ ಭರವಸೆ ನನ್ನದು.
*✍🏼✍🏼✍🏼ನ್ಯಾಸ*
ಗೋಪಾಲದಾಸ.
(ವಿಜಯಾಶ್ರಮ, ಸಿರವಾರ)
Comments