*ವಿಜಯದಾಸರ ದೃಷ್ಟಿಯಲ್ಲಿ "ಶ್ರೀಮಟ್ಟೀಕಾಕೃತ್ಪಾದರು"*
*ವಿಜಯದಾಸರ ದೃಷ್ಟಿಯಲ್ಲಿ "ಶ್ರೀಮಟ್ಟೀಕಾಕೃತ್ಪಾದರು"*
ಜ್ಙಾನ ಹಾಗೂ ಭಕ್ತಿ ಮಾರ್ಗಗಳನ್ನು ತೋರಿದ, ಅನಾದಿ ಸತ್ಸಂಪ್ರದಾಯಪರಂಪರಾ ಪ್ರಾಪ್ತವಾದ ಭವ್ಯವಾದ ದ್ವೈತಸಿದ್ಧಾಂತವನ್ನು ಸ್ಥಾಪಿಸಿದ ಪ್ರತಿಷ್ಠಾಪಿಸಿದ ಮಹಾಮಹಿಮರು ನಮ್ಮ ಶ್ರೀಮದಾಚಾರ್ಯರು. ಶ್ರೀಮದಾಚಾರ್ಯರು ರಚಿಸಿದ ಮೂಲಗ್ರಂಥಗಳನ್ನು ವ್ಯಾಖ್ಯಾನಿಸಿ, ಟೀಕಾರಚಿಸಿ ಸಾಮಾನ್ಯ ಜನರಿಗೆ ತಿಳಿಸಿ, ಈ ಭವ್ಯ ಸಿದ್ಧಾಂತಕ್ಕೆ *ಶ್ರೀಮನ್ಯಾಯಸುಧಾ ತತ್ವಪ್ರಕಾಶಿಕಾ* ಮೊದಲಾದ ಉದ್ಗ್ರಂತಗಳನ್ನು ರಚಿಸಿ ಭವ್ಯವಾದ ಕೊಟೆಗೊಡೆಯನ್ನು ನಿರ್ಮಿಸಿ, ಕೊಟೆಗೋಡೆಯ ರಕ್ಷಣೆಗೆ ನಿಂತ ಸೇನಾಧಿಪತಿ ಎಂದೆನಿಸಿದವರು ಇಂದಿನ ಆರಾಧ್ಯ ಪುರುಷರಾದ, ಮಲಖೇಡ ನಿವಾಸಿಗಳಾದ *ಶ್ರೀಮಟ್ಟೀಕಾಕೃತ್ಪಾದರು.*
ಶ್ರೀ ವ್ಯಾಸತೀರ್ಥರು ಶ್ರೀಶ್ರೀಪಾದರಾಜರು ಶ್ರೀವ್ಯಾಸರಾಜರು ಶ್ರೀವಾದಿರಾಜರು, ಶ್ರೀವಿಜಯೀಂದ್ರರು, ಶ್ರೀರಘೂತ್ತಮರು ಶ್ರೀರಾಘವೆಂದ್ರ ಪ್ರಭುಗಳು, ಶ್ರೀವೇದೇಶತೀರ್ಥರು, ಶ್ರೀವಿಷ್ಣುತೀರ್ಥರು, ಶ್ರೀಯಾದವಾರ್ಯರಿಂದಾರಂಭಿಸಿ ಸಕಲ ಜ್ಙಾನಿಗಳೂ, ಪುರಂದರದಾಸ ವಿಜಯದಾಸಾದಿ ಸಕಲ ದಾಸ ವರೇಣ್ಯರೂ " ಜ್ಙಾನಿಗಳು" ಎಂದಾಗಿದ್ದು *ಶ್ರೀಮಟ್ಟೀಕಾಕೃತ್ಪಾದರ ಅನುಗ್ರಹ, ಟೀಕಾ ಗ್ರಂಥಗಳ ಆಮೂಲಾಗ್ರ ಅಧ್ಯಯನ* ಇವುಗಳಿಂದಲೇ. ಇದರಲ್ಲಿ ಕಿಂಚಿತ್ತೂ ಸಂಶಯ ಆ ಜ್ಙಾನಿಗಳಿಗೂ ಇಲ್ಲ. ನಮಗೂ ಇಲ್ಲ.
ಇದೆಲ್ಲವೆನ್ನು ಸೂಕ್ಷ್ಮವಾಗಿ ಗಮನಿಸಿಯೇ ವಿಜಯದಾಸರು *ಸೃಷ್ಟಿಯೊಳಗೆ ಇವರ ದರ್ಶನವಾಗದೇ ಸ್ಪಷ್ಟಜ್ಙಾನ ಪುಟ್ಟದಯ್ಯ* ಎಂದು ಉದ್ಗರಿಸಿದರು.
*ವಿಜಯದಾಸರು - ಸುಳಾದಿ*
ಸ್ತೋತ್ರಭಾಗದ ಯಾವುದೇ ಸುಳಾದಿಗಳನ್ನು ಗಮನಿಸಿದರೂ ವಿಜಯದಾಸರ ಒಂದು ವಿಶಿಷ್ಟಕ್ರಮ ಗೋಚರಿಸುತ್ತದೆ. ಆ ಕ್ರಮ ಇನ್ಯಾರ ಸುಳಾದಿಗಳಲ್ಲಿಯೂ ನಾವು ಕಾಣುವದಿಲ್ಲ. ಏಳು ಐದು ತಾಳಗಳಲ್ಲಿಯೂ ಒಂದೊಂದು ವಿಶಿಷ್ಟ ಕ್ರಮವನ್ನು ಕಥೆಯನ್ನು ಇತಿಹಾಸವನ್ನು ಮಹಿಮೆಯನ್ನು ಫಲವನ್ನು ವಿವರಿಸುವ ಕೌಶಲವೂ ಅತ್ಯಪರೂಪ.
*ಸುಳಾದಿಯಲ್ಲಿಯ ಇತಿಹಾಸ*
ಶ್ರೀಮಟ್ಟೀಕಾಕೃತ್ಪಾದರ ಸುಳಾದಿಯನ್ನು ರಚಿಸುವಾಗ ಅದ್ಭುತ ಇತಿಹಾಸವನ್ನೇ ತೆಗೆದು ಸುಂದರ ರೀತಿಯಿಂದ ತಿಳಿಸುತ್ತಾರೆ.
ಇಂದ್ರಾವತಾರಿ ಕುಶರಾಜ. ಆ ಕುಶರಾಜ ತಾನು ಈ ಸ್ಥಾನದಲ್ಲಿ ತಪಸ್ಸು ಮಾಡಿದ ಅತ್ಯುತ್ತಮ ಸ್ಥಾನ ಮಳಖೇಡ ಎಂದು ತಿಳೊಸುತ್ತಾ, ಇಂತಹ ಪುಣ್ಯಭೂಮಿಯಾದ ಕ್ಷೇತ್ರವನ್ನು ಶ್ರೀಶ್ರೀ ಅಕ್ಷೋಭ್ಯತೀರ್ಥರು ತಮ್ಮ ಆವಾಸಸ್ಥಾನವನ್ನಾಗಿ ಆರಿಸಿಕೊಂಡರು ಎಂದು ತಿಳಿಸುತ್ತಾರೆ. ಯಾಕೆ.. ?? ತಮ್ಮ ಶಿಷ್ಯ ಇಂದ್ರಾವತಾರಿಯೇ ಬರುತ್ತಾರೆ. ಅವರು ಇಲ್ಲಿಯೇ ವಾಸಮಾಡುತ್ತಾರೆ. ಗುರು ಶಿಷ್ಯರು ನಾವು ಇಲ್ಲಿಯೇ ಇರಬೇಕು ಎಂದು ಯೋಚಿಸಿಯೇ ಮಳಖೇಡದಲ್ಲಿ ವಾಸ ಮಾಡುತ್ತಾರೆ. ಈ ಕ್ಷೇತ್ರದಲ್ಲಿ ವಾಸ ಮಾಡಿದ ಶ್ರೀ ಶ್ರೀ ಅಕ್ಷೋಭ್ಯತೀರ್ಥರನ್ನು "ಋಷಿಕುಲೋತ್ತಮರಾದ ಜಯರಾಯರು ನಿತ್ಯ ಬೆಸಬೆಸನೆ ಬಂದು ಗುಪ್ತದಲಿ ಪೂಜಿಸುವರು ಪ್ರೀತಿಯಲಿ" ನಿತ್ಯವೂ ಬೆಳಗಿನಝಾವ ಶ್ರಿಮಟ್ಟೀಕಾಕೃತ್ಪಾದರು ಬಂದು ಪೂಜಿಸುತ್ತಾರೆ ಎಂದು ವಿಜಯದಾಸರು ಕೊಂಡಾಡುತ್ತಾರೆ.
*ಯಾವ ಸ್ಥಳ ?? ಊರು ಯಾವದು..??*
ವಿಜಯದಾಸರೇ ತಿಳಿಸುತ್ತಾರೆ *ಮೇಘನಾಥಪುರ ಕಕುರವೇಣಿವಾಸ ರಾಘವೇಶ ವಿಜಯವಿಠ್ಠಲನದಾಸ* ಮೇಘ - ಮಳೆ, ಮೇಘನಾಥ - ಮಳಗೆನಾಥನಾದ (ಇಂದ್ರನು ತಪಸ್ಸು ಮಾಡಿದ, ಇಂದ್ರಾವತಾರಿ ಇರುವ,) ಮಳಖೇಡ ಎಂಬ ಗ್ರಾಮದಲ್ಲಿ. ಕಕುರವೇಣಿವಾಸ - ಕಾಗಿಣೀತೀರವಾಸ. ವಿಜಯವಿಠ್ಠಲಾತ್ಮಕ ರಾಘವೇಶ - ಶ್ರೀಮನ್ಮೂಲರಾಮ ದಿಗ್ವಿಜಯರಾಮಾರಾಧಕರು. " ಎಂದು ಶ್ರೀಮಟ್ಟೀಕಾಕೃತ್ಪಾದರ ಆವಾಸಸ್ಥಾನವನ್ನೂ ವಿಜಯದಾಸರು ಸ್ಪಷ್ಟಪಡಿಸುತ್ತಾರೆ. "ಯೋಗಿಗಳರಸನೇ ಮಳಖೇಡ ನಿವಾಸ, ಕಾಗಿಣೀತಟವಾಸ" ಎಂದೂ ಸ್ಪಷ್ಟವಾಗಿ ತಿಳಿಸುತ್ತಾರೆ.
*ವಿಜಯದಾಸರ ಸೂಚಿಸಿದ ಲೋಕೋಕ್ತಿಗಳು*
೧) ಭಯವ ಪರಿಹರಿಸಿ, ಭವದೂರರ ಮಾಡಿ, ಹರಿಭಕ್ತಿಯಕೊಡು, ಜ್ಙಾನವೈರಾಗ್ದೊಡನೆ.
೨) ದಯಾದೃಷ್ಟಿಯಿಂದ ನೋಡು, ಕಾಪಾಡು, ಮಾತಾಡು.
೩) ಲಯವಿವರ್ಜಿತ ವೈಕುಂಠಕೆ ಸಯವಾಗಿ ಮಾರ್ಗತೋರು, ಸಜ್ಜನರೊಳಿಟ್ಟು ಜಯವ ಪಾಲಿಸು.
೪) ಯತಿಕುಲರನ್ನ ಆಯತಕ್ಕಾದರು ನಾನು ಐಹಿಕ ಸೌಖ್ಯವನೊಲ್ಲೆ.
೫) ಪಯಃಪಾನದಿಂಧಿಕ ನಿಮ್ಮ ದರುಶಮ ಎನಗೆ
೬) ಗಯಾ ಕಾಶಿ ತ್ರಿಸಂಗಮ ಮೊದಲಾದ ತೀರ್ಥ ಕ್ಷೇತ್ರ ನಯದಿಂದ ಮಾಡಿದ ಫಲಬಪ್ಪದು.
೭) ಆವ ಜನುಮದ ಪುಣ್ಯಫಲಿಸಿತು ಎನಗಿಂದು ರಾವುತರಾಗಿದ್ದ ಜಯತೀರ್ಥರ ಕಂಡೆ.
೮) ಎನ್ನ ಕುಲಕೋಟಿ ಅಹಿತ ಅರಿಷ್ಟ ಮಾರ್ಗಕೆ ಇನ್ನು ಪೋಗೆ ನಾನು
೯) ಸೃಷ್ಟಿಯೊಳಗೆ ಇವರ ದರ್ಶನವಾಗದಲೇ ಸ್ಪಷ್ಟ ಜ್ಙಾನ ಪುಟ್ಟದಯ್ಯ
೧೦) ವೈಷ್ಣವಾಚಾರ್ಯರ ಮತ ಉದ್ಧಾರಕ ಕರ್ತಾ.
೧೧) ವಸುಧೆಯೊಳಗೆ ನಮ್ಮ ವಿಜಯವಿಠ್ಠಲ ವಶಬಾಗುವದಕ್ಕೆ ಪ್ರಸಾದ ಮಾಡಿದರು.
೧೨) ಈ ಮುನಿ ಒಲಿದರೆ ಅವನೇ ಭಾಗ್ಯವಂತ.
೧೩) ಭೀಮ ಭವಾಂಭುಧಿ ಬತ್ತಿ ಪೋಗುವದು.
೧೪) ನಿಸ್ಸೀಮನಾಗುವ ಪಂಚಭೇದಾರ್ಥ ಪ್ರಮೇಯದಲ್ಲಿ.
೧೫) ತಾಮಸ ಜನರಿಗೆ ಭಕ್ತಿ ಪುಟ್ಟದು.
೧೬) ಉತ್ತಮಬುದ್ಧಿಕೊಟ್ಟು ಕೃತಾರ್ಥರನ್ನಾಗಿ ಮಾಡು.
ಹೀಗೆ ನೂರಾರು ಅತ್ಯುತ್ತಮ ಗುಣಗಳನ್ನು ಸೂಸುವ ಲೋಕೋಕ್ತಿಗಳನ್ನು ಮಾಡಿ ರಚಿಸಿ ವಿಜಯದಾಸರು ಅನುಗ್ರಹಿಸುತ್ತಾರೆ.
ಇಂತಹ ಶ್ರೀಮಟ್ಟೀಕಾಕೃತ್ಪಾದರ ಮಹಿಮೆ ಸ್ವರೂಪ ಗ್ರಂಥ ಯಾವ ವಿಷಯಕ್ಕೂ ಸಂಶಯ ಪಟ್ಟರೆ ಮಹಾ ಅನರ್ಥವೇ. ವಿಪರೀತ ತಿಳಿದುಕೊಂಡರೆ ಏನವಸ್ಥೆ ಎಂದು ಯೋಚಿಸಲೂ ಸಾಧ್ಯವಿಲ್ಲ. ಇವರ ಅನುಗ್ರಹವೇ ಮುಕ್ತಿಗೆ ಸೋಪಾನ ದೇವರ ಪ್ರೀತಿಗೆ ಕಾರಣ ಎಂದೂ ತಿಳಿಸುತ್ತಾರೆ.
ಶ್ರಿಕಮಟ್ಟೀಕಾಕೃತ್ಪಾದರ ಮಹಿಮೆ ಎಷ್ಟು ಹೇಳಬೇಕು ಎಂದರೆ *"ಯತ್ಪಾದಪದ್ಮಪರಿಕೀರ್ತನ ಜೀರ್ಣವಾಚಃ* ಶ್ರೀಮಟ್ಟೀಕಾಕೃತ್ಪಾದರ ಪಾದಾರವಿಂದಗಳನ್ನು, ಉಪಕಾರದ ಸ್ಮರಣೆಯನ್ನು ಕೊಂಡಾಡುವರಲ್ಲಿಯೇ ನಾಲಿಗೆ ಸವಿದು ಹೋಗಿರಬೇಕು" ಹಾಗೆ ಕೊಂಡಾಡಬೇಕು ಎಂದು ತಿಳಿಸುತ್ತಾರೆ.
ಇಷ್ಟು ಬರೆದು ತಿಳಿಯುವ ಪ್ರಯತ್ನವೇನು ವ್ಯರ್ಥವಾಗುವದಿಲ್ಲ. ಆದರೆ ಪೂರ್ಣವಂತೂ ಆಗುವದಿಲ್ಲ. ಪೂರ್ಣವಾಗಿ ತಿಳಿಯುವ, ಗ್ರಂಥ ಓದುವ, ಸೌಭಾಗ್ಯಕೊಟ್ಟು ಓದಿಸಿ, ತಮ್ಮ ದಾಸನನ್ನಾಗಿ ಮಾಡಿಕೊಳ್ಳಲಿ ಎಂದು ಅನಂತ ಕೋಟಿ ಪ್ರಣಾಮಗಳೊಂದಿಗೆ ಪ್ರಾರ್ಥಿಸುವೆ.... 🙏🏽🙏🏽
*✍🏽✍🏽ನ್ಯಾಸ*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments