*ನಮ್ಮ ಭಾಗ್ಯದ ದೇವರಿಗೆ - ಅನಂತ ನಮನಗಳು*

*ನಮ್ಮ ಭಾಗ್ಯದ ದೇವರಿಗೆ - ಅನಂತ ನಮನಗಳು*

"ಅಸಾಧ್ಯವಾದದ್ದನ್ನು ಕೊಡುವ ದಿವ್ಯ ಸಾಮರ್ಥ್ಯ ಇರುವದು ಗುರುಗಳಿಗೆ ಮಾತ್ರ. ಅಪರಿಹಾರ್ಯವಾದದ್ದನ್ನು ಪರಿಹರಿಸುವ ಶಕ್ತಿ ಇರುವದೂ ಗುರುಗಳಿಗೆ ಮಾತ್ರ." ಅಂತಹ ಗುರುಗಳನ್ನು ಕ್ಷಣ ಬಿಡದೆ ಸ್ಮರಿಸುವ ಕರ್ತವ್ಯ ಎಮ್ಮದು. 

*ಗುರುಗಳಿಂದಧಿಕ ಇನ್ನಾರು ಆಪ್ತರು ನಿನಗೆ*

ಈ ಜಗದಲ್ಲಿ ಎಲ್ಲರೂ ಆಪ್ತರೆ ನಿಜ. ಆ ಎಲ್ಲ ಆಪ್ತತೆಯ ಹಿಂದೆ ಒಂದಿಲ್ಲ ಒಂದು ಸ್ವಾರ್ಥ ಅಡಗಿರತ್ತೆ. ಅತ್ಯಾಪ್ತರಾದ ಈ ಗುರುಗಳಲ್ಲಿ *ನನ್ನ ಹಿತ* ಮಾತ್ರ ಅಡಗಿರುತ್ತದೆ. ಅಂತೆಯೇ ಶಿಷ್ಯಹಿತದ ಉದ್ಯೆಶ್ಯದಿಂದಲೇ ಇಂದಿಗೂ ಕರೆದು ನಿತ್ಯವೂ ಪಾಠ ಹೇಳುವದು, ಗೂಢ ಪ್ರಮೇಯಗಳ  ಉಪದೇಶ, ಮಂತ್ರಗಳ ಜಪದ ಅಧ್ಯಾದೇಶ, ಧರ್ಮಕರ್ಮಗಳಿಗೆ ದೀಕ್ಷೆಯ ಬದ್ಧತೆ, ಗುರು ದೇವತೆಗಳಲ್ಲಿಯ ವಿಶ್ಚಾಸವೃದ್ಧಿಯ ಭದ್ರಬುನಾದಿ ಇತ್ಯಾದಿ ಇತ್ಯಾದಿ ನೂರಾರು ಸಾವಿರಾರು ಲಕ್ಷಲಕ್ಷ ಮಾರ್ಗಗಳನ್ನು ದಾರಿಗಳನ್ನು ಸ್ವಯಂ ತಾವು ಮಾಡಿ, ಆ  ಮಾರ್ಗದಲ್ಲಿ ನಮ್ಮನ್ನು ಇರಿಸುತ್ತಾರೆಲಾ ಅಂತಹ ನಮ್ಮ ಪೂಜ್ಯ ಆಚಾರ್ಯರೇ ಅತ್ಯಾಪ್ತರು ನಮಗೆ. "ನಾ ಕಟ್ಟಿದ ಮನೆಯಲ್ಲಿ ನಮ್ಮವರನ್ನುಳಿದು ಇನ್ಯಾರನ್ನೂ ಇರಿಸಲು ಬಿಡುವದಿಲ್ಲ. ನನ್ನ ಮೋಬೈಲನ್ನು ನನ್ನವರಿಗೂ ತೋರಿಸುವದಿಲ್ಲ ಅಂತಹ ಪ್ರಪಂಚ ಎದುರಿರುವಾಗ, ತಾವು ಮಾಡಿದ ಮಾರ್ಗದಲ್ಲಿ, ತಮ್ಮನ್ನು ನಂಬಿದ ಎಲ್ಲ ಶಿಷ್ಯರನ್ನು ಇರಿಸಿವದು, ಸ್ವಯಂ ತಾವು ಹಿಂದೆ ಇದ್ದು,  ನಮ್ಮನ್ನು ಮುಂದೆ ನಡೆಸುವದು" ಅತ್ಯಾಶ್ಚರ್ಯವಲ್ಲದೇ ಇನ್ನೇನು... 

*ಗುರು - ದೇವರ ಒಂದು ಅನ್ಯೋನ್ಯತೆ*

"ದೀನಂ ದೂನಂ ಅನಾಥಂ ಶರಣಾಗತಂ ಏನಂ ಉದ್ಧರ" ಎಂದು  ಗುರುಗಳಪ್ರಾರ್ಥನೆಗೆ ದೇವ ಓಗೊಡುತ್ತಾನೆ. ಇದು ಒಂದು ಕಡೆಯದು ಆದರೆ, ಅದೇ ದೇವ "ಅಪ್ಯಚ್ಯುತೋ ಗುರುದ್ವಾರಾ ಪ್ರಸಾದಕೃದಹಂ" ಸರ್ವ ಸಮರ್ಥನಾದ ದೇವರು ಗುರುದ್ಚಾರಾನೇ ನಾನು ಅನುಗ್ರಹ ಮಾಡುವೆ ಎಂಬುವದು ದೇವರ ನೀತಿ. "ಗುರುಗಳು ನಮಗೇನಾದರೂ ಕೊಡಿಸಬೇಕಾದರೆ ದೇವರಿಗೇ ಬೇಡುತ್ತಾರೆ, ದೇವರು ಏನನ್ನಾದರೂ ನಮಗೆ ಕೊಡಬೇಕಾದರೆ ಗುರು ಮುಖಾಂತರವೇ ದಯಪಾಲಿಸುತ್ತಾನೆ" ಇದು ಇವರೀರ್ವರ ಸಂಬಂಧ. ಈ ಸಂಬಂಧದಲ್ಲಿ ನಾವಿಲ್ಲದಿರೆ ನಮ್ಮ ಕೈಯಲ್ಲಿ ಚಿಪ್ಪು ಇದು ನಿಶ್ಚಿತ. ಈವರೀವರ ಸಂಬಂಧದಲ್ಲಿ ನಾವೂ ಒಳಗೊಂಡರೆ ಮುಕ್ತಿಪಡೆಯುವದೂ ಅಸಾಧ್ಯವೇನಲ್ಲ.

*ಎಲ್ಲ ವಿಧದ ಆಪತ್ತುಗಳೂ ಗುರುಗಳಿಂದಲೇ ಪರಿಹಾರ*

ಉರಗ - ಸರ್ಪದೋಷ, ವೃಶ್ಚಿಕ ವ್ಯಾಘ್ರ  ರಾಶಿದೋಷ, ಅರಸು - ಗ್ರಹದೋಷ, ಚೋರ - ದುಷ್ಟಗ್ರಹ ದೋಷ, ಅಗ್ನಿ - ಆಧಿದೈವಿಕ ಹಾಗೂ  ಆಧಿಭೌತಿಕ ದೋಷಗಳು, ಕರಿ - ನಾನಾವಿಧ ದುಷ್ಟ ಪ್ರಾಣಿಗಳಿಂದೊದಗುವ ಆಪತ್ತು, ಗರಳ - ವಿಷ ಮೊದಲಾದ ಆಹಾರದ ಎಲ್ಲ ವಿಧದ ದೋಷಗಳು. ಜ್ವರ - ಕರೋನಾ ಮೊದಲಾದ ಎಲ್ಲ ವಿಧದ ಜ್ವರಗಳು ಇವೆಲ್ಲವೂ ಗುರು ಸ್ಮರಣೆಯಿಂದ ಪರಿಹಾರವಾಗುತ್ತವೆ. ಅತ್ಯಂತ ಶೀಘ್ರದಲ್ಲಿ ಮಂಗಳವೂ ಆಗುತ್ತದೆ. ಇದು ಶಾಸ್ತ್ರ ಸಮ್ಮತ ಮಾತು. 

*ಸ್ಮರಿಸು ಗುರುಗಳ ಮನವೇ ಸ್ಮರಿಸೂ ಗುರುಗಳ*

ಗುರುಗಳನ್ನು ಪಡೆಯದ, ಗುರು ಭಕ್ತ *ಶ್ರೀಗುರುಭ್ಯೋ ನಮಃ* ಎಂದು ಸ್ಮರಿಸಿದರೇ ಎಲ್ಲವನ್ನೂ ಪಡೆಯುತ್ತಾನೆ ಎಂದಾದಮೇಲೆ, *ಉದ್ಧಾರಕ, ಮಹಾ ಅನುಗ್ರಹಕಾರಕ, ಅತ್ಯಂತ ಕರುಣಾಳು, ಕೃಪೆಯನ್ನೇ ಮೈ ಮನದಲ್ಲಿ ಹೋತ್ತ, ನಿರಂತರ ಜ್ಙಾನಾಮೃತವನ್ನು ಸುರಿಸುವ, ಬಂದ ಶಿಷ್ಯರ ಎಲ್ಲ ತರಹದ ಭಯಗಳನ್ನೂ ದೋರೋಡಿಸುವ, ಎಲ್ಲ ವಿಧದ ಉನ್ನತಿಯನ್ನೂ ಅಪೇಕ್ಷಿಸುವ, ನಮ್ಮ ಕೋಟಿ ಕೋಟಿ ತಪ್ಪುಗಳನ್ನು ಮನ್ನಿಸುವ, ಜನ್ಮ ಜನ್ಮಾಂತರದ ಎಲ್ಲ ಪಾಪಗಳನ್ನೂ ಕತ್ತರಿಸಿ ಹಾಕುವ, ಮುಕ್ತಿಸೋಪಾನ ತತ್ವಗಳನ್ನು ಉಪದೇಶಿಸುವ  ಮಹಾ (ಪರಮಪೂಜ್ಯ ಮಾಹುಲೀ ಆಚಾರ್ಯರು) ಗುರುಗಳು  ದೊರೆತಾಗ*  "ಅಂತಹ ಗುರುಗಳನ್ನು  ಸ್ಮರಿಸದ ಮೂಢ ನಾನು" ಎಂದಾಗುವದು ಸರ್ವಥಾ ಬೇಡ.

*ಸುಖವಾಗಲಿ ಬಹು ದುಃಖವಾಗಲಿ ಸಖ ನೀನಾಗಿರು*

ನಿಮ್ಮ ಅನುಗ್ರಹದಿಂದಲೇ ಸುಖ. ಆ ಸುಖಗಳು ದೊರೆತಾಗಲೂ ಅವಿಜ್ಙಾತ ಸಖರು ನೀವಾಗಿರಬೇಕು. ನಿಮ್ಮ ನಿಗ್ರಹದಿಂದಲೇ ಎನಗೆ ದುಃಖಗಳು. ಆ ಎಲ್ಲ ದುಃಖಗಳು ಅಲೆಅಲೆಗಳಂತೆ ಅಪ್ಪಳಿಸುತ್ತಿರುವಾಗಲೂ ಅವಿಜ್ಙಾತ ಸಖರಾಗಿ ಎಮ್ಮನು ದಡ ಸೇರಿಸುವವರೂ ನೀವೆ. ನಿಮ್ಮನ್ನು ಬಿಟ್ಟು ಎನಗೆ ನೆಲೆ ಇಲ್ಲ. ಬೆಳೆ ಇಲ್ಲ.

ಎನ್ನ ಉದ್ಧಾರಕ ಗುರುಗಳಾದ *ಪರಮಪೂಜ್ಯ ಮಾಹುಲೀ ಆಚಾರ್ಯರ ಚರಣಾರವಿಂದಗಳಲ್ಲಿ ಅನಂತಾನಂತ ನಮಸ್ಕಾರಗಳು* ಅಷ್ಟು ಮಾತ್ರ ನನ್ನ ಕೈಯಲಿ ಇಂದಿಗೆ ಇದೆ. ಮುಂದೇ ನಾನಾವಿಧದ ಸೇವೆ ಎನ್ನದಾಗಲಿ. ಎಂದು ಬೇಡುತ್ತಾ ಅನಂತ ಪ್ರಣಾಮಗಳನ್ನು ಸಲ್ಲಿಸುವ...👏🏽👏🏽🙏🏽🙏🏽

*✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*