*ನಾನು ಸಂತೋಷದಿಂದಿರಲು ಏನು ಮಾಡಬೇಕು...??*
*ನಾನು ಸಂತೋಷದಿಂದಿರಲು ಏನು ಮಾಡಬೇಕು...??*
ನಾನು ಸಂತುಷ್ಟನಾಗಿರಬೆಕು ಎಂಬ ದೃಢವಾದ ಬಯಕೆ ಇದ್ದರೆ ಮೊಟ್ಟ ಮೊದಲು, ಸಂತುಷ್ಟನಾಗಿ ಇರಬೇಕೆಂಬ ಆಸೆಯನ್ನು ತೊರೆಯಬೇಕು. ಆಸೆಯಿರುವ ವ್ಯಕ್ತಿ ಸಂತುಷ್ಟನಾಗಿ ಇರಲಾರ. ಅಂತೆಯೇ ದಾಸರಾಯರ ಒಂದು ನುಡಿ.... *ಇಷ್ಟು ದೊರಕಿದರೆ ಮತ್ತಷ್ಟುಬೇಕೆಂಬ ಆಸೆ, ಮತ್ತಷ್ಟು ದೊರಕಿದರೆ ಇನ್ನಷ್ಟರಾಸೆ.....* ಹೀಗೆ ಆಸೆ ಇರುವವ ಮತ್ತೊಂದರ ಆಸೆಗೆ ಬಾಯಿಬಿಡುವ. ಹಾಗಾಗಿ ಸಂತೋಷ ಅವನಿಗೆ ದೂರದ ಮಾತೇ.... ಆಸೆ ತೊರೆದವ ಬಂದದ್ದರಲ್ಲಿ ಇದ್ದರಲ್ಲಿ ಸಂತುಷ್ಟನಾಗಿಯೇ ಇರುತ್ತಾನೆ.
೨) ಇನ್ನೊಬ್ಬರ ಜೊತೆಗೆ ಹೋಲಿಸಿಕೊಳ್ಳವದನ್ನು ಬಿಡಬೇಕು......
ಸ್ವಗತವನ್ನು ಬಿಟ್ಟು ಅವರು ಹಾಗಿದ್ದಾರೆ... ಇವರು ಹೀಗಿದ್ದಾರೆ.... ಅಯ್ಯೋ ನಾ ಹೀಗಿದ್ದೇನೆ.... ಈ ರೀತಿಯಾಗಿ ಇನ್ನೊಬ್ಬರೊಟ್ಟಿಗೆ ಹೊಲಿಸಿಕೊಳ್ಳುವದು ಬಿಟ್ಟ ದಿನ ತಾನು ಸಂತುಷ್ಟನಾಗಿ ಇರುವ.
ಜಗತ್ತಿನ ಎಲ್ಲ ಜೀವರಾಶಿಗಳೂ ಒಬ್ಬರ ಹಾಗೆ ಇನ್ನೊಬ್ಬರಿಲ್ಲ. ಒಬ್ಬರ ಹವ್ಯಾಸ ಗುಣಗಳು ಮತ್ತೊಬ್ಬರಿಗೆ ಬಂದಿಲ್ಲ. ಆ ಎಲ್ಲರೊಟ್ಟಿಗ ತನ್ನನ್ನು ತಾನು ಹೋಲಿಸಿಕೊಳ್ಳುತ್ತಾ ಸಾಗಿದರೆ ದುಃಖವಲ್ಲದೇ ಇನ್ನೇನು. ಇನ್ನೊಬರೊಟ್ಟಿಗೆ ಹೊಲಿಸಿಕೊಳ್ಳುವದನ್ನು ಬಿಟ್ಟು ತನ್ನಲ್ಲಿಯೇ ಇರುವ ನಾನಾವಿಧಗುಣಗಳ, ವಿಚಿತ್ರವಾದ ಶಕ್ತಿ ಮೊದಲಾದವುಗಳನ್ನು ಅನುಭವಿಸುತ್ತಾ ಇದ್ದರೆ ಆನಂದವನ್ನು ಅನುಭವಿಸಲು ಸಾಧ್ಯ...
೩) ಸಂತುಷ್ಟರಾದ ವ್ಯಕ್ತಿಗಳ ಸಹವಸದಲ್ಲಿ ಇರಲು ಕಲಿಯಬೇಕು....
ಇದು ತುಂಬ ಮಹತ್ವದ್ದು. ಸಂತುಷ್ಟರಾದ ವ್ಯಕ್ತಿಗಳನ್ನು ಸೋಸಿ ಆರಿಸಿ ಅವರ ಸಹವಾಸ ಮಾಡುವದು ಅತ್ಯಂತ ಅನಿವಾರ್ಯ. ಅಂಸತುಷ್ಟ ಆತ್ಮಗಳು ಎಂದಿಗೂ ನಮ್ಮನ್ನು ಸಂತುಷ್ಟರಾಗಿ ಇರಲು ಬಿಡುವದೇ ಇಲ್ಲ. ನಿತ್ಯ ಒಂದಿಲ್ಲ ಒಂದು ಗೋಳು ಇರುವದೇ... ಸಂತುಷ್ಟ ವ್ಯಕ್ತಿಗಳ ಸಹವಾಸ ನಮ್ಮ ಸಂತೋಷಕ್ಕೆ ಕಾರಣ.
೪) ದುಃಖದ ಘಟನೆಗಳನ್ನು ಮರಿಯುವದು ಕಲಿಯಬೇಕು....
ತುಂಬ ವಿಚಿತ್ರ ಒಂದು ಹಾಸ್ಯವಿದೆ.. ಆ ಹಾಸ್ಯವನ್ನು ಮತ್ತೊಮ್ಮೆ ಕೇಳಿದಾಗ ನಗು ಬರುವದಿಲ್ಲ. ಆದರೆ ಕಳೆದು ಹೋದ ದುಃಖವನ್ನು ನೆನಿಪಿಸಿಕೊಂಡು ಯಾಕೆ ಮತ್ತೆ ಮತ್ತೆ ದುಃಖಪಡುತ್ತಾರೋ ಗೊತ್ತೇ ಆಗುವದಿಲ್ಲ. ಆದ್ದರಿಂದ ನಡೆದು ಹೋದ ದುಃಖದ ಘಟನೆಗಳಿಂದ ದೂರಾದಷ್ಟು ಸುಖವನ್ನು ಅನುಭವಿಸಬಹುದು ಸರಳವಾಗುತ್ತದೆ....
೫) ವೃದ್ಧಾಪ್ಯಕ್ಕೆ ಹೆದುರುವದು....
ದೇವರು ಕೊಟ್ಟ ಪ್ರಕೃತ್ಯಾತ್ಮಕ ಭೌತಿಕ ಶರೀರ. ನಮ್ಮ ಶರೀರ ನಮ್ಮ ಪ್ರಕೃತಿಗೆ ಅನುಗುಣ. ವಿನಾಕಾರಣ ಮುದಿಯನಾದೆ, ವಯಸ್ಸು ಆಯಿತು, ಧಪ್ಪ ಆದೆ, ಸೊರಗಿದೆ, ಹೀಗೆ ಹೆದರುತ್ತಾ ಕೂತರೆ ಯಾವ ಸುಖವನ್ನೂ ಅನುಭವಿಸಲಾಗದು. ಏನು ಬಂದಿದೆ ಅದರಲ್ಲಿಯೇ ಸುಖವಿದೆ. ಏನಿಲ್ಲ ಅದರಬಗ್ಗೆ ತಲೆಕೆಡಿಸಿಕೊಳ್ಳುವದು ಬೇಡವೇ ಬೇಡ.
೬) ಲೌಕಿಕ ಅನುಕೂಲತೆಗಳು ಸುಖಕ್ಕೆ ಕಾರಣವಾ... ??
ಲೌಕಿಕ ಅನುಕೂಲತೆಗಳು ಸುಖಕ್ಕೆ ಕಾರಣ ಎನ್ನುವದು ತಪ್ಪುತಿಳುವಳಿಕೆಯೇ ಸರಿ. ಎಲ್ಲರೀತಿಯ ಅನುಕೂಲತೆಗಳಿದ್ದರೂ ಅಸುಖಿಯಾದ ನೂರು ಸಾವಿರ ಜನರನ್ನು ಕಾಣುತ್ತೇವೆ.
ಹಾಗಾದರೆ ನಮ್ಮ ಸುಖಕ್ಕೆ ಸಾಧನೆ ಯಾವದು ಸೂಕ್ತ... ??
ನಮ್ಮ ಸುಖಕ್ಕೆ ಅಲೌಕಿಕ ಸಾಧನೆಗಳೇ ಮೂಲಕಾರಣ ಎಂದರೆ ತಪ್ಪಾಗಲಿಕ್ಕಿಲ್ಲೇನೋ.... ಅಲೌಕಿಕತೆ ನಮ್ಮಲ್ಲಿರುವ ಸುಖವನ್ಜು ಅಭಿವ್ಯಕ್ತಿಸುತ್ತದೆ. ಲೌಕಿಕತೆ ಹೊರಗೆ ಹುಡುಕುತ್ತದೆ, ಸಿಗುವದಿಲ್ಲ. ಹೊರೆಗೇ ಅಲೆದು ಅಲೆದು ಬೆಂಡಾಗಿ ಹೋಗುತ್ತದೆ. ಅಲೌಕಿಕತೆಗೆ ಮೊರೆ ಹೋಗುವಷ್ಟರಲ್ಲಿ ವಯಸ್ಸಾಗಿರುತ್ತದೆ. ಸುಖ ಸಂಪಾದಿಸುವನಿಗೆ ಅಲೌಕಿಕಮಾರ್ಗ ಅರೆಸಿ ನಡೆಯುವದು ಸೂಕ್ತ....
೭)ವೈವಿಧ್ಯಮಯ ಹವ್ಯಾಸಗಳು...
ಯಾವುದೋ ಒಂದು ಆಯಾಮಕ್ಕೆ ಅಂಟಿಕೊಳ್ಳಬೇಡಿ. ಸಂತುಷ್ಟನಾಗಿರಲು ದೇವರು, ದರ್ಮ, ದಾನ, ಅನ್ನದಾನ, ತೀರ್ಥಯಾತ್ರೆ, ಓದು, ಪೂಜೆ, ಲೌಕಿಕ ಅಧ್ಯಯನ, ಹಣಸಂಪಾದನೆ, ಕೀರ್ತಿ ಯಶಸ್ಸುಗಳ ಕಡೆ ಗಮನ, ಗುರಿಸಾಧಿಸುವ ಕಲೆ, ಯೋಗ್ಯ ಸೂಕ್ತ ಗುರಿಗಳು, ಆಟ, ಮನಸ್ಸುಬಿಚ್ಚಿ ನಗುವದು, ಹಿರಿಯರ ಸಹವಾಸ, ಗುರುಗಳ ಉಪದೇಶ, ಅಡಿಗೆ, ಹರಟಿ, ಹೀಗೆ ವೈವಿಧ್ಯಮಯವಾದ ಹವ್ಯಾಸಗಳು ಆತ್ಮ ಸಂತೋಷಕ್ಕೆ ಸೂಕ್ತ.
ಕೆಲವುಸಲ ಅಲೆಮಾರಿಗಳಂತೆ ಇರೋಣ. ಬದುಕಿನಲ್ಲಾಗುವ ಪರಿಣಾಮಗಳನ್ನು ಅಚ್ಚರಿಯಾಗಿ ಕಾಣೋಣ. ಯಾವುದೇ ಕಾರಣಕ್ಕೂ ಭಯಪಡುವದು ಬೇಡವೇ ಬೇಡ. ಪೀಡಿಸುವ ವ್ಯಕ್ತಿಗಳಿಗಿಂತಲೂ ಪ್ರೀತಿಸುವ ವ್ಯಕ್ತಿಯನ್ನು ನೆನೆಸೋಣ. ನಮ್ಮ ವಿವೇಕವನ್ನು ಎಷ್ಟು ಸಾಧ್ಯವೋ ಅಷ್ಟು ವಿಕಸಿತಗೊಳಿಸೋಣ.
ನಮ್ಮಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ನಮ್ಮ ನಿಯಾಮಕ ಭಗವಂತನಲ್ಲಿ ಸಂತೋಷವನ್ನು ಕೊಡುವ ಶಕ್ತಿ ಇದೆ. ನಿತ್ಯ ತೃಪ್ತ ಭಗವಂತನ ಇಚ್ಛೆ ಒಂದು ಮಹಾ ಪ್ರವಾಹ. ಅದಕ್ಕೆ ವಿರುದ್ಧ ಈಸಿದರೆ ದುಃಖವೇ ದುಃಖ. ಭಗವದಿಚ್ಛೆಯ ಪ್ರವಾಹಕ್ಕೆ ಅನುಗುಣವಾಗಿ ಕೊಚ್ಚಿಕೊಂಡು ಹೋದರೂ ಸುಖದ ಸಮೃದ್ಧಿಯೇ ಇದೆ.
*ನಾವು ಎಷ್ಟೇ ಲಗಾ ಹಾಕಿದರೂ ಕೊನೆಗೆ ಗೆಲ್ಲುವ ಶಕ್ತಿ ಭಗವದಿಚ್ಛೆಯೇ* ಹಾಗಾಗಿ ಭಗವದಿಚ್ಛೆಗೆ ಅನುಕೂಲತೆಯೇ ನಮ್ಮ ಮಹಾಸೌಖ್ಯಕ್ಕೆ ಅತಿಮುಖ್ಯ ಕಾರಣ.
ನಮ್ಮನ್ನು ನಿಯಮಿಸುವ ನಿತ್ಯಸಂತುಷ್ಟ ದೇವನಿಗೆ ಸಂತೋಷದ ಭಿಕ್ಷೆಯನ್ನು ಬೇಡುತ್ತಾ, ಅನಂತ ಪ್ರಣಾಮಗಳನ್ನು ಸಲ್ಲಿಸುತ್ತಾ ಆನಂದದಿಂದ ಇರೋಣ.....
*✍🏽✍🏽✍🏽✍ನ್ಯಾಸ......*
(ಗೋಪಾಲ ದಾಸ.
ವಿಜಯಾಶ್ರಮ. ಸಿರವಾರ)
Comments