*ಹೇ ದೇವ !!! ಅನ್ನ ಪಾನವನ್ನು ಬಿಟ್ಟವರನ್ನು ನನ್ನವರೆಂದು ಹೇಳಿಕೊಳ್ಳುವಿ, ಅನ್ಯ ವಿಷಯ ಹರಟುವವರನ್ನು ಕಡೆ ನೂಕುವಿ... ಏನಿದೋ ನಿನ್ನ ವ್ಯವಸ್ಥೆ*

*ಹೇ ದೇವ !!! ಅನ್ನ ಪಾನವನ್ನು ಬಿಟ್ಟವರನ್ನು ನನ್ನವರೆಂದು ಹೇಳಿಕೊಳ್ಳುವಿ, ಅನ್ಯ ವಿಷಯ ಹರಟುವವರನ್ನು ಕಡೆ ನೂಕುವಿ... ಏನಿದೋ ನಿನ್ನ ವ್ಯವಸ್ಥೆ*

ಅನ್ನ ಪಾನ ಬಿಟ್ಟು, ಅಥವಾ ಅನ್ನ ಪಾನಗಳಿಲ್ಲದೆ (ದಾರಿದ್ರ್ಯದಿಂದ) ನಿರಂತರ ತಪಸ್ಸು ಮಾಡಿದವರನ್ನು ನಿನ್ನವರೆಂದು ಸ್ವೀಕರಿಸುವ ನಿನ್ನ ಮಹಿಮೆ ಅದ್ಭುತವೇ ಸರಿ. ದಾರಿದ್ರ್ಯಾನುಭವ ಅದು ತಪಸ್ಸೇ ಆಗಿರತ್ತೆ. ಅಂತೆಯೇ "ಯಸ್ಯಾನುಗ್ರಹಮಿಚ್ಛಾಮಿ ತಸ್ಯ ವಿತ್ತಂ ಹರಾಮ್ಯಹಮ್" ಯಾರಿಗೆ ಅನುಗ್ರಹ ಮಾಡಲು ಬಯಸುವೆಯೋ ಅವರಿಗೆ ದಾರಿದ್ರ್ಯವನ್ನೇ ಕೊಡುವೆ" ಇದು ನಿನ್ನ ನೀತಿ. 

"ಹಸಿದವನಿಗೆ ಹಳಿಸಿದ ಅನ್ನವೂ ರುಚಿ. ಉಂಡವನಿಗೆ ಪರಮಾನ್ಮವೂ ವಿಷವೇ"  ಹಸಿದವ ದೇವರನ್ನು ನೆನೆಯುತ್ತಾನೆ. ಉಂಡವ ದೇವರನ್ನು ಮರೆತು ನಿದ್ರೆಗೆ ಜಾರುತ್ತಾನೆ. ಇಲ್ಲವೋ ಹಾಳು ಹರಟೆಯಲ್ಲಿ ತೊಡಗುತ್ತಾನೆ. ಆದ್ದರಿಂದಲೇ ಹಸಿದವ ದೇವರಿಗೆ ಬಲುಪ್ರೀತಿ. ಬಿಟ್ಟವನ ಮೇಲೆ ದೇವರಿಗೆ ಹೆಚ್ಚಿನಮಟ್ಟದ ಪ್ರೀತಿ. ಹಸಿದ ವ್ಯಕ್ತಿ ಅನ್ನ ದಾನ ಮೊದಲಾಗಿ ಏನು ಪಡೆದರೂ ಕೈ ಮುಗಿದು ಸ್ವೀಕರಿಸುತ್ತಾನೆ, ತಿಂದು ತೇಗಿದವ ಎಲ್ಲವನ್ನೂ ಅಲ್ಲಿಯೇ ಬಿಸಟು ಬರುತ್ತಾನೆ. 

ಅನ್ಯವಿಷಯದಲ್ಲಿ ಇಳಿದ ವ್ಯಕ್ತಿ ದೇವರಿಂದ ಬಲುದೂರ. ದೇವರ ಹಾಗೂ ದೇವತಾ ಸ್ವಭಾವದವರ ಗುಣ ಮೆಚ್ಚಿದರೆ ಹೊಟ್ಟೆ ಉರಿದುಕೊಳ್ಳುವ.  ದೇವರನ್ನೇ ಕಡೆ ಮಾಡಿಬಿಡುತ್ತಾನೆ. ಅನ್ಯವಿಷಯ ಎಂದರೆ ದೇವರು, ದೇವರವರು, ಶಾಸ್ತ್ರ , ಇವುಗಳನ್ನು ಬಿಟ್ಟು ಯಾವುದೇ ಆಗಿರಬಹುದು. ಆ  ವ್ಯಕ್ತಿ ಯಾರೇ ಇರಬಹುದು. ಎಷ್ಟೇ ಉತ್ತಮನಾಗಿರಬಹುದು.  ದೇವರು ಅವನನ್ನು ಕಡೆ ಮಾಡುವದು ನಿಶ್ಚಿತ.

ಅನ್ನ ಪಾನವನ್ನು ಬಿಟ್ಟ ಅಂಬರೀಷನ ರಕ್ಷಣೆಗೆ  ಕಟಿಬದ್ಧನಾದ, ಅನ್ಯವಿಷಯವ ಬೆಂಬತ್ತಿದ ದೂರ್ವಾಸ ಮುನಿಯನ್ನು ಪೀಡಿಸಿದ. ಇದು ನಿನ್ನ ಭಕ್ತರ ಮೇಲೆ ಮಾಡುವ ಅಪಾರ ಕರುಣೆಯಲ್ಲದೇ ಇನ್ನೇನು... ದೂರ್ವಾಸರು ಅಂಬರೀಷನಗಿಂತಲೂ ಮಹಾ ಭಕ್ತರು ನಿಜ ಆದರೆ ಅಂದು ಅನ್ನ ಪಾನ ಬಿಟ್ಟ ಅಂಬರೀಷನ ಮಹಿಮೆ ತೋರಿಸುವದು ನಿನ್ನ ಮನಸ್ಸಿಗೆ ಬಂದಿತ್ತು. 

ಅನ್ನ ಪಾನವನ್ನ ಬಿಟ್ಟ ಸುದಾಮನಿಗೆ ನೀನೊಲಿದಿ, ಅನ್ಯವಿಷಯಕ್ಕೆ ಜೋತುಬಿದ್ದ ಶತಧನ್ವನನ್ನು ಸಂಹಾರ ಮಾಡಿ ಹಾಕಿದಿ.

ಅನ್ನ ಪಾನ ಬಿಟ್ಟ ಪಾಂಡವರಿಗೆ ಆಪದ್ಬಾಂಧವನಾದಿ, ಅನ್ಯವಿಷಯಕೆ ಜೋತುಬಿದ್ದ ಕೌರವರನ್ನು ಸೆದೆಬಡದಿ.

ಅನ್ನಪಾನ ಬಿಟ್ಟ ವಿಭೀಷಣನಿಗೆ ಒಲಿದು ರಾಜ್ಯವನ್ನಿತ್ತ ಹೇ ಹೆದ್ದೊರೆ, ಅನ್ಯವಿಷಯಕೆ ಜೋತುಬಿದ್ದ ರಾವಣ ಕುಂಭಕರ್ಣರನ್ನು ಹೇಳಹೆಸರೂ ಉಳಿಯದೆ ಹಾಗೆ ಸಂಹಾರಮಾಡಿ ಹಾಕಿದಿ.

ಅನ್ನ ಪಾನಬಿಟ್ಟ ಧೃವ ಪ್ರಲ್ಹಾದರಿಗೆ ಒಲಿದುಬಂದೆ, ಅನ್ಯವಿಷಯವನ್ನೇ ಪ್ರಧಾನವಾಗಿಟ್ಟುಕೊಂಡು ಹಿರಣ್ಯಕಶಿಪುವಿಗೆ ಮಹಾದುಷ್ಟ ಎಂಬ ಶಾಶ್ವತ ಬಿರಿದುಕೊಟ್ಟಿ.

ಹೀಗೆ ನೂರಾರು ದೃಷ್ಟಾಂತಗಳಿಂದ ಒಂದು ಸಿದ್ಧವಾಗುತ್ತದೆ ದೇವರು ಅನ್ನಪಾನಗಳನ್ನು ಬಿಟ್ಟವರನ್ನು ಮಾತ್ರ ಎಡಬಿಡದೆ ಸಂರಕ್ಷಿಸುವ, ತಮ್ಮವನೆಂದು ಸ್ವೀಕರಿಸುವವನೆಂದು. ಅನ್ಯವಿಷಯಾಸಕ್ತರನ್ನು ಸಂಹರಿಪನೆಂದು. 

ನಾವು ಅನ್ನ ಪಾನಗಳನ್ನು ಬಿಟ್ಟು ವಿರಕ್ತರಾಗಿ ಮಹಾತಪಸ್ವಿಗಳಾಗಿ ದೇವರವರಾಗದಿದ್ದರೂ ಕನಿಷ್ಠ ಅನ್ಯವಿಷಯಾಸಕ್ತರಾಗದೇ ದೇವರ ವಿರೋಧಿಗಳ ಗುಂಪಿನಲ್ಲಿ ನಾವಿರದಿದ್ದರೆ ಸಾಕು. ರಕ್ಷಿಸದಿದ್ದರೂ ಕಡೆಮಾಡುದಿಲ್ಲ. ಸುಖಕೊಡದಿದ್ದರೂ ದುಃಖವನ್ನಂತೂ ಕೊಡಲಾರ.

ಅನ್ಯವಿಷಯಗಳ ಹರಟೆಯನ್ನು ಬಿಟ್ಟು  ದೇವರನ್ನು ನೆನೆಯೋಣ. ದೇವರಿಂದ ದೊರಕಿದ್ದನ್ನು ಮೆಲಕು ಹಾಕೋಣ.  ದೇವರವರಾಗುವ ಪ್ರಯತ್ನವನ್ನಂತೂ ಮಾಡೋಣ. ಅವನು ಮಾಡಿದ ಉಪಕಾರ ಊಹೆಗೂ ನಿಲಕದ್ದು. 

*ಸುಲಭರೊಳಗೆ ಅತಿ ಸುಲಭ ದೇವ*

ಅನ್ನ ಬಿಡುವವರು ನಾವಲ್ಲ. ನಮ್ಮಿಂದ ಸಾಧ್ಯವೂ ಇಲ್ಲ. "ಕಣ್ಣಿನಿಂದ ಕಂಡದ್ದೆಲ್ಲ ದೇವರ ಮೂರ್ತಿ ಎಂದು ತಿಳಿ. ಉಂಡು ಉಡ್ಡದ್ದೆಲ್ಲ ದೇವರ ನೈವೇದ್ಯವೆಂದಾಗಲಿ. ತಂಡ ತಂಡದ ವಾರ್ತೆ ವಾರಿಜಾಕ್ಷನ ಕೀರುತಿ, ಗಾಢವಾದ ನಿದ್ರೆ ದೇವರಿಗೆ ನಮಸ್ಕಾರ. ತಿರುಗಾಟವೆಲ್ಲ ಅನೇಕ ಭಗವನ್ಮೂರ್ತಿಗಳ ಪ್ರದಕ್ಷಿಣೆ" ಹೀಗೆ ದಾಸರು ತಿಳಿಸಿದ ಮಾರ್ಗದಲ್ಲಿ   ತಿಳಿದು ಸಾಗಿದರೂ ಸಾಕು ದೊಡ್ಡ ಸಾಧನೆ ಎಮ್ಮಿಂದಾಗುತ್ತದೆ. 

ಅನ್ನ ಮೊದಲಾದದ್ದು ಕೊಟ್ಟಿಲ್ಲ ಎಂದರೆ ಅದು ದೇವರ ಶಾಪವಲ್ಲ. ಅದು ವರವೇ. ಮುಂದೊಂದು ದಿನ ಅನುಗ್ರಹಿಸುವವನು ಇದ್ದೇ ಇದ್ದಾನೇ ಎಂದರ್ಥ. ಬೇಡುವದಿಷ್ಟೇ "ಏನೋ ಒಂದು ಕೊಟ್ಟಿಲ್ಲ ನಿಜ, ಅದಕ್ಕಾಗಿ ಇನ್ನೇನನ್ನೋ ಮಾಡಿಸಬೇಡ" ಕೊಟ್ಟದ್ದು ಅನಂತ, ಕೊಡದಿರುವದು ನಾಲ್ಕು. ಈ ಎಚ್ಚರ ಸದಾ ಇರಿಸು. ಅದುವೇ ಎನ್ನ ಸಾಧನೆಗೆ ಸೋಪಾನ. 

*✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*