*ಹೇ ಕೂರ್ಮನೇ ನಿನಗೆ ಎನ್ನ ಅನಂತ ವಂದನೆಗಳು
*ಹೇ ಕೂರ್ಮನೇ ನಿನಗೆ ಎನ್ನ ಅನಂತ ವಂದನೆಗಳು*
ಶ್ರೀಹರಿಯ ಅನಂತ ಅವತಾರಗಳು. ಆ ಎಲ್ಲ ಅವತಾರಗಳಲ್ಲಿ ಅಜಾದಿ ಬಹು, ೧೦೦೮ ವಿಶ್ವಾದಿಗಳು. ನಾರಾಯಣ ನರ ಮೊದಲಾದ ೧೦೦ ಅವತಾರಗಳು. ಅಜಾದಿ ೫೪ ಅವತಾರಗಳು. ಕೇಶವಾದಿ ೨೪. ಮತ್ಸ್ಯಾದಿ ೧೦. ವಿಶ್ವಾದಿ ೮. ಕೃದ್ಧೋಲ್ಕಾದಿ, ಅನಿರುದ್ಧಾದಿ ೫ ಹೀಗೆ ಅನೇಕ ವ್ಯೂಹಗಳನ್ನು ಪೊತ್ತು ಭುವಿಗಿಳಿದು ಬರುತ್ತಾನೆ ಶ್ರೀಹರಿ.
*ಕೂರ್ಮಾವತಾರ....*
ಇಂದು ದಶಾವತಾರ ಗಳಲ್ಲಿ ಎರಡನೇಯದಾದ ಕೂರ್ಮರೂಪಿ ಭಗವಂತ ಅವತಾರ ಮಾಡಿದ ದೊಡ್ಡದಿನ. ಈಗಾಗಲೇ ನರಸಿಂಹ ಜಯಂತಿ ಹಾಗೂ ವೇದವ್ಯಾಸ ಜಯಂತಿಗಳು ನಿನ್ನೆ ಆಗಿವೆ. ಇಂದು *ಕೂರ್ಮಜಯಂತಿ.*
ನಾನಾತರಹದ ವಿಘ್ನಗಳ ಪರಿಹಾರಕ್ಕೆ ನರಸಿಂಹದೇವರು, ಜ್ಙಾನಕೊಟ್ಟು ಮೊಕ್ಷಕೊಡಲು ಶ್ರೀವೇದವ್ಯಾಸರು ಇರುವವರು. ಹೀಗೆ ಮಹಾನ್ ಉಪಕಾರಗಳು ಈ ಎರಡು ರೂಪಗಳದ್ದು ಒಂದುಕಡೆಯಾದರೆ ಕೂರ್ಮರೂಪಿಯದು ವಿಭಿನ್ನವೇ.
*ಕೂರ್ಮೋ ಹರಿಃ ಮಾಂ ನಿರಯಾದಶೇಷಾತ್ ಪಾತು*
ನಿತ್ಯ ಕ್ಷಣಕ್ಷಣಕೂ ಮಾಡಿದ, ಮಾಡುವ ಕರ್ಮ ತುಂಬ. ಮಾಡಿದ ಕರ್ಮಗಳಲ್ಲಿ ಕೆಲವೇ ಪುಣ್ಯಪ್ರದವಾದರೆ, ಉಳಿದ ಎಲ್ಲಕರ್ಮಗಳೂ ಪಾಪಕರ್ಮಗಳೆ. ಆ ಎಲ್ಲ ಪಾಪಕರ್ಮಗಳಿಂದ ಸಿಗುವ ಫಲ ನರಕ...
ಸಂಧ್ಯಾವಂದನೆ ಬಿಟ್ಟರೆ ಪಾಪವಿದೆ, ಸರಿಯಾದ ಸಮಯಕ್ಕೆ ಸಂಧ್ಯಾವಂದನೆ ಮಾಡದಿದ್ದರೆ ಬೇರೆಯದಾದ ಪಾಪವಿದೆ, ಮಂತ್ರೋಚಾರಣೆ ಬಿಟ್ಟರೆ ಪಾಪ. ಸರಿಯಾಗಿ ಮಂತ್ರಗಳನ್ನು ಉಚ್ಚರಿಸಿದಿದ್ದರೆ ಬೇರೆ ಪಾಪ. ಹೀಗೆ ಪ್ರತಿಯೊಂದು ಪುಣ್ಯಕೊಡುವ ಕರ್ಮದಹಿಂದಲೂ ಪಾಪಕರ್ಮಗಳೂ ಘಟಿಸುತ್ತವೆ.
ಪುಣ್ಯಕರ್ಮ ಮೆಲೆಮೇಲೆ ತೋರುವದಕ್ಕೆ ಮಾಡಿ ಬಡಾಯಿಕೊಚ್ಚುಕೊಳ್ಳುವದಾದರೆ, ಪಾಪಕರ್ಮ ಸ್ವಲ್ಪ ವಿಭಿನ್ನ. ಪಾಪಾಕರ್ಮಗಳು (ನಾನಾವಿಧ) ಹಾಗೂ Quality ಮತ್ತು Quantity ಎರಡರಲ್ಲು ನಾ ಮುಂದ ಎಂದು ಮುಂದೆ ಮುಂದೇ ಸಾಗಿರುತ್ತವೆ. ಅದರಿಂದ ಸಿಗುವ ನರಕವೂ ನಾನಾವಿಧ, ಅತ್ಯಂತ ಘೋರ.
*ಕರ್ಮಗಳನ್ನು ಮಾಡುವದೇ ಬಿಟ್ಟು ಬಿಟ್ಟರೆ....??*
ಸತ್ಕರ್ಮ ಬಿಟ್ಟರೆ ಪಾಪವಿದೆ. ದುಷ್ಕರ್ಮ ಮಾಡಿದರೂ ಇದ್ದೇ ಇದೆ. ಕರ್ಮ ಮಾಡದೇ ಇರಲು ಸಾಧ್ಯವಿಲ್ಲ. ಮಾಡಿದ ಕರ್ಮದ ದುಃಖವನ್ನು ಅನುಭವಿಸಲೂ ಸಾಧ್ಯವಿಲ್ಲ. ಅಷ್ಟು ಕರ್ಮ ಹೊತ್ತಿದ್ದೇವೆ. ಹಾಗದರೆ ಮಾಡುವದಾದರೂ ಏನು.... ?? ಈ ಎಲ್ಲ ನರಕಗಳಿಂದ ಪಾರಾಗಲು ಏನು ಮಾಡಬೇಕು... ??
ಎಲ್ಲ ತರಹದ ನರಕಗಳಿಂದ ಪಾರಾಗಲು ಸುಲಭ ಉಪಾಯ. *ಕೂರ್ಮ* ರೂಪಿಯ ಹರಿಯ ಚಿಂತನೆಯನ್ನು ನಿರಂತರ ಮಾಡುವದೇ ಸೂಕ್ತ ಉಪಾಯ ಎಂದು ಶ್ರೀಮದ್ಭಾಗವತ ತಿಳುಹಿಸಿ ಕೊಡುತ್ತದೆ. *ಕೂರ್ಮೋ ಹರಿರ್ಮಾಂ ನಿರಯಾದಶೇಷಾತ್* ಎಂದು.
ಆಪತ್ತುಗಳು ಎದುರಾದಾಗ, ದುಷ್ಕರ್ಮಗಳನ್ನು ಮಾಡುವ ಪ್ರಸಂಗ ಎದುರಾದಾಗ ಹೇಗೆ ನನ್ನನ್ನು ನಾನು ರಕ್ಷಿಸಿಕೊಳ್ಳಬೇಕು ಎನ್ನುವದನ್ನು ಕೂರ್ಮ ದಿಂದ ನಾವು ತಿಳಿಯಬಹುದು.
ಅತೀ ಸಣ್ಣ ಆಪತ್ತು ಎದುರಾದರೂ ತನ್ನ ಎಲ್ಲ ಇಂದ್ರಿಯಗಳನ್ನೂ, ಮುಖ ಕಾಲು ಬಾಲ ಇವುಗಳನ್ನೂ ತನ್ನೊಳಗೆ ತಾ ನಿಗ್ರಹಿಸಿಕೊಂಡು ಬಿಡುತ್ತದೆ. ಯಾವುದರಿಂದ ಆಪತ್ತಿನ ಮುನ್ಸೂಚನೆ ದೊರೆಯುತ್ತದೆಯೋ ಆ ಕ್ಷಣಕ್ಕೆ ನಾನು ಜಾಗರೂಕನಾಗಿ, ನನ್ನನ್ನು ನಾನು ನಿಗ್ರಹಿಸಿಕೊಳ್ಳಬೇಕು. ಅದುವೇ ಕೂರ್ಮರೂಪಿ ಹರಿಯು ನಮಗೆ ತಿಳಿಸಿಕೊಡುವ ಸುಂದರ ಪಾಠ. ಹೀಗೆ ನರಕದಿಂದ ಪಾರಾಗಲು ಉಪಾಯವನ್ನು ತಿಳಿಸಿಕೊಟ್ಟರೆ....
*ಕೂರ್ಮರೂಪಿಯ ಮತ್ತೊಂದು ಮಹಿಮೆ....*
ಕೂರ್ಮ ತಾ ತನ್ನ ಮಕ್ಕಳು ಎಲ್ಲಿಯೇ ಇದ್ದರೂ, ತಾಯಿ ತಾನು ಆಹಾರ ತಿಂದು ನನ್ನ ಮಗು ದಷ್ಟಪುಷ್ಟನಾಗಲಿ ಎಂದು ಮನಃಪೂರ್ವಕ ಚಿಂತಿಸುತ್ತದೆ. ಈ ಚಿಂತನೆಯ ಪ್ರಭಾವದಿಂದಲೇ, ಎಲ್ಲೋ ಇರುವ ಆ ಕೂಸುಗಳು ದಷ್ಟಪುಷ್ಟವಾಗಿ ಬೆಳೆಯುತ್ತವೆ. ಹಾಗೆ ಈ ಕೂರ್ಮರೂಪಿ ಭಗವಂತ, ತಾನು ವೈಕುಂಠದಲ್ಲಿದ್ದರೂ ನಾವು ಭೂ ಲೋಕದಲ್ಲಿ ಇದ್ದರೂ ನನ್ನ ಭಕ್ತ ಪಾಪ ಮಾಡದೇ ನರಕಕ್ಕೆ ಭಾಗಿಯಾಗದೇ ಸತ್ಕರ್ಮ, ಸದಾಚಾರ, ಸದ್ವಿಚಾರ ಇವುಗಳಲ್ಲೇ ಭಾಗಿಯಾಗಿ ಇರಲಿ ಎಂದು ಪ್ರೀತಿಯಿಂದ ಹಾರೈಸಿ ನಮ್ಮನ್ನು ಬೆಳೆಸುತ್ತಾನೆ, ರಕ್ಷಿಸುತ್ತಾನೆ... ಅದು ಅವನ ದೊಡ್ಡ ಉಪಕಾರ.
ಇದರಿಂದ ತಿಳಿಯುವ ಪಾಠವಿಷ್ಟೆ...
*ನಿನ್ನವರು ನಿನ್ನಿಂದ ಯಾವುದೋ ಕಾರಣಕ್ಕೆ ಎಷ್ಟೇ ದೂರಾದರೂ ನೀನು ಮಾತ್ರ ನಿನ್ನವರ ಹಿತವನ್ನು ಅಂತಃಕರಣಪೂರ್ವಕ ಇದ್ದಲ್ಲಿಯೇ ಬಯಸು. ಅದು ಅವರಿಗೆ ಮುಟ್ಟಿ ಹಿತವಾಗುತ್ತದೆ. ಮನಸ್ಸು ಸಂಪದ್ಭರಿತವಾಗಿ ಶಾಂತಿ ಸೌಹಾರ್ದಗಳಿಂದ ದಷ್ಟಪುಷ್ಟವಾಗಿರುತ್ತದೆ.*
*ಕೂರ್ಮರೂಪಿಯ ಇನ್ನೊಂದು ಮಹಿಮೆ....*
ಸಪ್ತ ಸಾಗರ, ಸಪ್ತದ್ವೀಪ, ಅನೇಕ ಬೆಟ್ಟ ಗಿರಿ ಮೊದಲಾದವುಗಳಿಂದ ಕೂಡಿದ ಪಾತಾಳಾದಿ ಸಪ್ತಲೋಕಗಳನ್ನು ಸಾಸಿವೆಕಾಳಿನಂತೆ ಧಾರಣ ಮಾಡಿದವರು ಸಾವಿರ ಹೆಡೆಗಳಿಂದ ಯುಕ್ತರಾದ ಶೇಷದೇವರು. ಆ ಶೇಷದೇವರನ್ನು ಪುಟ್ಟದಾದ ಪುಚ್ಛದಮೇಲೆ ಕೂರ್ಮರೂಪದಿಂದ ಧಾರಣ ಮಾಡಿವರು ವಾಯುದೇವರು. ಆ ಕೂರ್ಮ ರೂಪಿ ವಾಯುದೇವರನ್ನೂ *ಕೂರ್ಮರೂಪ* ದಿಂದಲೇ, ತನ್ನ ಪುಚ್ಛದ ಮೇಲೆಯೇ ಧರಿಸಿದವರು ಶ್ರಿ ವಿಷ್ಣು ಕೂರ್ಮ.
ಈ ಕೂರ್ಮದ ಶಕ್ತಿ ಅಮೋಘ ದಿವ್ಯ. ಈ ಚಿಂತನೆ ಯಿಂದ ದೊರೆಯುವದುಯ ಎಲ್ಲಿ ಇರಬೇಕೆಂದು ಇಚ್ಛೆಪಡುತ್ತೇವೆ ಆ ಸ್ಥಾನ ದೊರೆಯುತ್ತದೆ. ಈ ಸ್ಥಾನದಲ್ಲಿ ಇರುವದು ಬೇಡವಾಗಿದ್ದರೂ ಆ ಫಲ ಸಿಗತ್ತೆ. ಹೀಗೆ ಭೃಹದ್ಭಾಷ್ಯ ತಿಳಿಸುತ್ತದೆ.
ಸಾಧನೆಯಲ್ಲಿ ಕೂರ್ಮದ ಹಾಗೆ ದೃಢ ಹಾಗೂ ಸಾವಕಾಶ ನಡೆ ಇರಬೇಕು. ಕೊನೆಗೆ ನರಕಾದಿ ಅನರ್ಥ ಕಳೆದು, ಜ್ಙಾನ ಭಕ್ತ್ಯಾದಿಗಳನ್ನು ಸುರಿಸಿ, ವೈರಾಗ್ಯಕೊಟ್ಟು, ಮತ್ತೆ ಭಕ್ತಿ ದೃಢಪಡಿಸಿ ಮೋಕ್ಷಾದಿ ಪುರುಷಾರ್ಥವನ್ನೇ ದಯಪಾಲಿಸುವ ಮಹಾ ಹೆದ್ದೈವ ಕೂರ್ಮರೂಪಿ ಶ್ರೀಹರಿ.
*ಕೂರ್ಮ ಜಯಂತೀ*
ನರಕಾದಿಗಳಿಗೆ ಅಟ್ಟುವ ಮಕ್ಕಳ ಹುಟ್ಟು ಹಬ್ಬವನ್ನು ಜೋರಾಗಿ ಮಾಡುವ ನಾವು, ಕನಿಷ್ಠ ಲಕ್ಷ ಸುರಿಯುವ ನಾವು, ನರಕ ಕಳೆಯುವ, ಧರ್ಮ ಬೆಳಿಸುವ, ಇಷ್ಟಪಟ್ಟ ಸ್ಥಳದಲ್ಲಿ ಇರಿಸುವ, ಮಂದರದಂತಹ ಸಂಸಾರದ ಭಾರವನ್ನು ಹೊತ್ತ ನಮಗೆ ಹೊರುವ ಶಕ್ತಿಕೊಟ್ಟ, ಕೊನೆಗರ ಮೋಕ್ಷಾದಿಗಳನ್ನೇ ದಯಪಾಲಿಸುವ *ಕೂರ್ಮರೂಪಿ ಶ್ರೀಹರಿಯ ಹುಟ್ಟು ಹಬ್ಬವನ್ನು ಸ್ವಲ್ಪವಾದರೂ ವೈಭವದಿಂದಾಡೋಣ...* ಅಲ್ಲವೇ....
ಓ ಕೂರ್ಮನೇ ನಿನಗೆ ಕೋಟಿ ಕೋಟಿ ಪ್ರಣಾಮಗಳು. ಅನಂತಾನಂತ ವಂದನೆಗಳು.
*✍🏽✍🏽✍🏽🌹ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.
Comments