*ಹೃದಯಂಗತ - ಪಂ. ಜಯತೀರ್ಥಾಚಾರ್ಯ ಪುರಾಣಿಕ್*
*ಹೃದಯಂಗತ - ಪಂ. ಜಯತೀರ್ಥಾಚಾರ್ಯ ಪುರಾಣಿಕ್*
ಪಂ. ಪುರಾಣಿಕ ಜಯತೀರ್ಥಾಚಾರ್ಯರು ಪರಮಪೂಜ್ಯ ಮಾಹುಲೀ ಆಚಾರ್ಯರರಲ್ಲಿ ಅದ್ಯಯನಮಾಡಿದ ಶ್ರೇಷ್ಠ ಪಂಡಿತರು. ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಉತ್ತಮ ವಿದ್ವಾಂಸರುಗಳಲ್ಲಿ ಅವರಿಗೂ ಒಂದು ವಿಶಿಷ್ಟ ಸ್ಥಾನ. ಪೂಜ್ಯ ಮಾಹುಲೀ ಆಚಾರ್ಯರ ಆದರ್ಶಗಳ ಪಾಲಿಸುವವರು, ಅಡವಳಿಸಿಕೊಂಡವರು.
ಅವರ ವಿದ್ವತ್ತು, ಅಧ್ಯಯನ, ಪಾಠ ಪ್ರವಚನ, ಗುರುಭಕ್ತಿ, ದೇವರಲ್ಲಿ ವಿಶ್ವಾಸ, ನಿಸ್ಪೃಹತೆ, ಜಪ ಪೂಜೆ, ದಾನ, ಅನ್ನದಾನ, ಶಾಸ್ತ್ರ ನಿಷ್ಠೆ ಈ ಒಂದೊಂದು ಗುಣಗಳನ್ನು ನೋಡಿದಾಗಲೂ ತಮ್ಮ ಗುರುಗಳಾದ ಪೂಜ್ಯ ಮಾಹುಲೀ ಆಚಾರ್ಯರರನ್ನೇ ಅನುಸರಿಸುತ್ತಿದ್ದರು ಎಂದು ಸನಿಹ ಇದ್ದವರೆಲ್ಲರಿಗೂ ಅನಿಸುತ್ತಿತ್ತು.
*ನಿರಂತರ ಅಧ್ಯಯನ....*
ಎಂಟನೇಯ ವಯಸ್ಸಿಗೆ ವ್ಯಾಪಕ ಉದಾತ್ತ ಗುರಿಯೊಂದಿಗೆ ಮಾಹುಲೀ ಆಚಾರ್ಯರ ಉಡಿಸೇರಿದರು. "ಆಚಾರ್ಯರ ಉಡಿ ಸೇರಿದ ಪ್ರತೀ ಕಾಳೂ ಸಾರ್ಥಕತೆಯನ್ನು ಪಡೆಯಲೇ ಬೇಕು." ಸಾರ್ಥಕತೆಯ ಮಾರ್ಗದಲ್ಲಿಯೇ ಹದಿನಾರು ವರ್ಷಗಳ ಸುದೀರ್ಘ ಅಧ್ಯಯನ ಸಾಗಿತು.
ಸರ್ವಮೂಲ, ಸುಧಾ, ತತ್ವಪ್ರಕಾಶಿಕಾ, ನ್ಯಾಯಾಮೃತಾದಿ ವ್ಯಾಸತ್ರಯ, ತರ್ಕ ವ್ಯಾಕರಣ, ಮೀಮಾಂಸಾ, ಅದ್ವೈತ, ವಿಶಿಷ್ಟಾದ್ವೈತ, ಜ್ಯೋತಿಷ, ಸಾಹಿತ್ಯ, ಧರ್ಮಶಾಸ್ತ್ರ English ಇತ್ಯಾದಿ ಎಲ್ಲ ಶಾಸ್ತ್ರಗಳಲ್ಲಿಯೂ ಒಂದು ಅದ್ಭುತ ಪರಿಣತಿ ಪಡೆದ ಧೀರಯೋಗಿ ನಮ್ಮ ಜಯತೀರ್ಥಾಚಾರ್ಯರು.
*ಮಹಾ ಗುರುಭಕ್ತ...*
ಪರಮಪೂಜ್ಯ ಮಾಹುಲೀ ಆಚಾರ್ಯರ ಏಕನಿಷ್ಠ ಭಕ್ತರು. ಆಚಾರ್ಯರು ಹೇಳಿದ ಆಜ್ಙಾಪಿಸಿದ ಒಂದು ಮಾತು ಮೀರಿದ್ದು ನೋಡಿಲ್ಲ. ಅವರು ಹಾಕಿದ ಗೆರೆ ಲಕ್ಷ್ಮಣ ರೇಖೆ ಇದ್ದ ಹಾಗೆಯೇ. ನಮಗೆ ಹೇಳುವಾಗಲೂ "ಆಚಾರ್ಯರಲ್ಲಿಯ ಭಕ್ತಿಯೇ ತಾರಕ" ಎಂದು ನೂರಾರು ಬಾರಿ ಹೇಳಿದ್ದು ಇದೆ. "ಆಚಾರ್ಯರ ಭಕ್ತಿ ಅವರ ಉಸಿರು ಆಗಿತ್ತು. ಇಂದಿಗೂ ಆಗಿದೆ. ಮುಂದೂ ಆಗಿರುತ್ತದೆ." ಎನ್ನುವದು ಅವರ ಪ್ರತೀ ಮಾತಿನಿಂದಲೂ ನಮಗೆ ತಿಳಿಯುತ್ತಿತ್ತು.
ಶ್ರೀಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರ ಭವ್ಯ ನೇತೃತ್ವದಲ್ಲಿ ನಡೆದ ೪೦ ದಿನಗಳ ಭವ್ಯ ಕಾರ್ಯಕ್ರಮವಾದ satyatma convention 2002 , ಪೂಜ್ಯ ಆಚಾರ್ಯರು ನೆರವೇರಿಸಿದ ಭವ್ಯ ಕಾರ್ಯಕ್ರಮದಲ್ಲಿ ಶ್ರೀಮನ್ಯಾಸುಧಾ ಮಂಗಳವಾಯಿತು. ಮುಂದೆ ಕೆಲ ವರ್ಷಗಳಲ್ಲಿ ವಿವಾಹವೂ ಆಯಿತು. ಸಾಧ್ವಿಶಿರೋಮಣಿ, ಮಹಾನ್ ಪತಿವ್ರತೆ, ದೊರಕಿಬಂದಳು. ಕೃಷ್ಣ ಬಲರಾಮರಂತೆ ಉತ್ಕೃಷ್ಟರಾದ ಎರಡು ಮಕ್ಕಳೂ ಆದರು. ಈ ಈರ್ವರನ್ನೂ ಶಾಸ್ತ್ರಾಧ್ಯಯನಕ್ಕಾಗಿಯೇ ಮೀಸಲಾಗಿಸಿದರು.
*ಗುರು ದಕ್ಷಿಣೆ...*
ವಿದ್ಯಾಧ್ಯಯನ ಮುಗಿದ ಮೇಲೆ ಪೂಜ್ಯ ಗುರುಗಳಿಗೆ *ಗುರುದಕ್ಷಿಣೆ* ಸಮರ್ಪಿಸಬೇಕು. ಏನು ಸಮರ್ಪಿಸಬೇಕು... ??? ಎಂದು ವಿಚಾರಿಸುತ್ತಿರುವಾಗ ಗುರುಗಳೇ ಒಂದಿನ *ಪಂ ಜಯತೀರ್ಥಾಚಾರ್ಯರಿಗೆ ಹಾಗೂ ಪಂ ಶ್ರೀನಿವಾಸತೀರ್ಥಾಚಾರ್ಯರಿಗೆ* ಆಜ್ಙಾಪಿಸಿದರು. *ಸಮಗ್ರ ಟಿಪ್ಪಣೀ ಸಹಿತ "ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ" ಪುಸ್ತಕವನ್ನು ಸಂಶೋಧಿಸಿ ಕೊಡಬೇಕು. ಇದುವೇ ನನ್ನ ಗುರುದಕ್ಷಿಣೆ - ಇದು ಶ್ರೀಮಠದ ಸೇವೆ* ಎಂದು. ಆ ಆದೆಶವನ್ನು ಶಿರಸಾ ವಹಿಸಿ ಇಂದಿಗೆ ೨೧ ನೇಯ ಅಧ್ಯಾಯಗಳ ವರೆಗೆ ಎಲ್ಲ ಟಿಪ್ಪಣಿಗಳ ಹಸ್ತಪ್ರತಿಗಳನ್ನು ಶೋಧಿಸಿ, ಸಂಶೋಧಿಸಿ, ಅನೇಕ ಪ್ರತಿಗಳಲ್ಲಿ ಶುದ್ಧಾಶುದ್ಧತೆ ಗಮನಿಸಿ, ಸಾವಿರಾರು ಅಪರೂಪದ ಪ್ರಮಾಣಗಳೊಟ್ಟಿಗೆ, ಹೊಸ ವಿಷಯಗಳನ್ನು ವಿಮರ್ಶಿಸಿ, ಹದಿನೈದು ಟಿಪ್ಪಣೀ ಸಹಿತ ಶ್ರೀಮನ್ಮಹಾಭಾರತ ತಾತ್ಪರ್ಯನಿರ್ಣಯ ಪುಸ್ತಕ ಜಗತ್ತಿಗೆ ಒದಗಿಸಿದರು. (೩೨ ಅಧ್ಯಾಯಗಳ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ಪ್ರಿಂಟ್ ಆಗುವದು ಮಾತ್ರ ಉಳಿದಿದೆ.) ಈ ಗುರುದಕ್ಷಿಣಾ ರೂಪ ಸೇವೆಗೋಸ್ಕರ ಎಲ್ಲವನ್ನೂ ತ್ಯಾಗ ಮಾಡಿ ಇದುವೇ ನನ್ನ ಕಾಯಕ ಎಂದು ದೃಢವಾಗಿ ನಂಬಿ ಈ ದೊಡ್ಡ ಕೆಲಸದಲ್ಲಿ ತಮ್ಮನ್ನು ತಾವು ಅಳವಡಿಸಿಕೊಂಡದ್ದಕ್ಕೇ *ಪರಮಪೂಜ್ಯ ಶ್ರೀ ಶ್ರೀ ಶ್ರೀಗಳವರಿಗೆ - ಪೂಜ್ಯ ಆಚಾರ್ಯರಿಗೆ - ಸಮಸ್ತ ಪಂಡಿತ ವೃಂದಕ್ಕೆ - ಮಿಗಿಲಾಗಿ ದೇವತಾ ದೇವರುಗಳಿಗೆ ಅತ್ಯಂತಪ್ರಿಯರಾದವರು ಎಂದು ಆದರು* ನಮ್ಮ ಜಯತೀರ್ಥಾಚಾರ್ಯರು. ಇದುವೇ ದೊಡ್ಡ ಸಾಧನೆ ತಪಸ್ಸು ಎಂದೇ ಭಾವಿಸಿದರು.
*ನಿರಂತರ ಅಧ್ಯಯನ ಶೀಲತಾ.....*
ಸರ್ವಮೂಲ ಸುಧಾ ಮಹಾಭಾರತ ಪುರಾಣಗಳು ಉಳಿದ ಸಿದ್ಧಾಂತಗಳನ್ನು ಓದುವ ಹುಚ್ಚು ಜ್ಙಾನಬೆಳಿಸಿಕೊಳ್ಳುವ ಹಪಹಪಿ ಕೊನೇಯ ಕ್ಷಣದ ವರೆಗೂಇಂಗಲೇ ಇಲ್ಲ. ಅದರ ಸೂಚನೇಯಂತೆಯೇ *ಸುಧಾ ಪ್ರಸಾದವಾದ* ಅನುವಾದ ಕೇಳುತ್ತಾನೆ ಈ ಲೋಕದ ಯಾತ್ರೆ ಮುಗಿಸಿದರು.
ಸಮಗ್ರ ಮಹಾಭಾರತ ಸರ್ವಮೂಲ ಪುರಾಣಗಳ ಅದ್ಯಯನ ಮಾಡಿ ತಾತ್ಪರ್ಯನಿರ್ಣಯದಲ್ಲಿಯ, ಶ್ರೀಮದಾಚಾರ್ಯರ ನೂರಾರು ಮಾತುಗಳಿಗೂ ಒಂದೊಂದು ಆಧಾರ ಹುಡುಕಿ ಪ್ರಮಾಣಗಳನ್ನು ಸಂಗ್ರಹಿಸಬೇಕು ಎಂದರೆ ಅಧ್ಯಯನದ ಹುಚ್ಚು ಎಷ್ಟಿರಬೇಕು ಎಂದು ಯೋಚಿಸಲೂ ಆಗದು. ಅವರಸುತ್ತಮುತ್ತು ಪುಸ್ತಕಗಳ ರಾಶಿಯೇ ಇತ್ತು. ಸಂಗ್ರಹಿಸಿದ ಪ್ರತೀ ವಿಷಯಗಳನ್ನು ಕಂಪ್ಯೂಟರ್ ಅಲ್ಲಿ ಸೇರಿಸಿ ತೃಪ್ತಿಪಟ್ಟರು.
*Research ಹುಳ*
ಜೇನುಹುಳ ಹೇಗೆ ನೂರಾರು ಮೈಲು ತಿರುಗಿ, ಸಾವಿರಾರು ಹೂಗಳನ್ನು ಹೊಕ್ಕಿ ಮಕರಂದವನ್ನು ಸಂಗ್ರಹಿಸಿ ಜೇನುರಸವನ್ನು ಸಿದ್ಧಪಡಿಸಿ ಜನರಿಗೆ ಕೊಡಬೇಕೋ ಹಾಗೆ ನೂರಾರು ಸಿದ್ಧಾಂತಗಳನ್ನು ಹುಡುಕಿ, ಆ ಎಲ್ಲ ಗ್ರಂಥಗಳಲ್ಲಿ ಹೊಕ್ಕು, ಅಲ್ಲಿಯ ಮಕರಂದವನ್ನು ಸೂಕ್ಷ್ಮ ವಿಷಯಗಳನ್ನು ಹುಡುಕಿ, ಹತ್ತಾರು ಗ್ರಂಥಗಳನ್ನು ವಿಮರ್ಷಿಸಿ, ಪರಾಮರ್ಷಿಸಿ, ಸಿದ್ಧಪಡಿಸಿದ ವಿಷಯಗಳು ಅವರ laptop ಅಲ್ಲಿ ಮೂವತ್ತಕ್ಕೂ ಹೆಚ್ಚು ಸಂಶೋಧಿತ ಪುಸ್ತಕಗಳು ಸಿಗುತ್ತವೆ. ಜಗತ್ತಿಗೆ ಸಿಗಬೇಕು ಅಷ್ಟೆ.
*ಶ್ರೀಮಠದ ಸೇವೆ..*
ಪೂಜ್ಯ ಆಚಾರ್ಯರ ಹಾಗೂ ಪರಮಪೂಜ್ಯ ಶ್ರೀಪಾದಂಗಳವರ ಆದೇಶ ಹಾಗೂ ಆಜ್ಙೆಯಂತೆ ಶ್ರೀಮಠದ ಅಧ್ಯಯನ ಕೇಂದ್ರವಾದ *ವಿಶ್ವ ಮಧ್ವ ಮಹಾಪರಿಷತ್* ಎಂಬ research ವಿಭಾಗದಲ್ಲಿ ಸೇರಿ, ಪರಮಪೂಜ್ಯ ಹಿರಿಯ ಶ್ರೀಪಾದಂಗಳವರ ಕನಸಾದ *ಶ್ರೀಮನ್ಮಹಾಭಾರತ ತಾತ್ಪರ್ಯನಿರ್ಣಯ* ದ ಪುಸ್ತಕದ ಸಂಶೋಧನೆಯಲ್ಲಿ ತೊಡಗಿ, ಕೊನೆಯುಸಿರುವವರೆಗೂ ಸೇವೆ ಸಲ್ಲಿಸಿದರು. *ತಾತ್ಪರ್ಯನಿರ್ಣಯ ಪುಸ್ತಕ* ಮುಗಿಯಬೇಕು, ಆದಷ್ಟು ಬೇಗ ಮುಗಿಯಬೇಕು ಎನ್ನವ ಹಪಹಪಿ ಆಗ್ರಹ ಎಷ್ಟು ಇತ್ತು ಎನ್ನುವದು ಹತ್ತಿರ ಇದ್ದ ಎಲ್ಲ ಮಿತ್ರ ವಿದ್ವಾಂಸರಿಗೂ ವಿದಿತವಾಗಿತ್ತು. ಎಲ್ಲರಿಗೂ ಬೆನ್ನುಹತ್ತಿ ಎಷ್ಟು ಸಾಧ್ಯವೋ ಅಷ್ಟು ಪೂರ್ಣ ಮುಗಿಸುವ ಕೆಲಸವನ್ನೂ ಕೊನೆಯ ಕ್ಷಣದವರೆಗೂ ಮಾಡಿದರು ನಮ್ಮ ಜಯತೀರ್ಥಾಚಾರ್ಯರು.
*ಬ್ರಹ್ಮಸೂತ್ರಭಾಷ್ಯ - ತತ್ಪ್ರಕಾಶಿಕಾ*
ವಿದ್ಯಾರ್ಥಿಗಳ ಅಧ್ಯಯನಕ್ಕೆ ಸುಲಭವಾಗಲಿ ಎಂಬ ಉದ್ಯೇಶ್ಯದೊಂದಿಗೆ, *ಪರಮಪೂಜ್ಯ ಪ್ರಾತಃಸ್ಮರಣೀಯ ಶ್ರೀ ಶ್ರೀ ಸತ್ಯಪ್ರಮೋದತೀರ್ಥ ಜನ್ಮಶತಮಾನೋತ್ಸವ* ನಿಮಿತ್ತ ಮಹಾಗುರುಗಳ ಉತ್ಕೃಷ್ಟ ಸೇವೆ ಎಂದೇ ಯೋಚಿಸಿ *ಬ್ರಹ್ಮಸೂತ್ರ - ಸೂತ್ರಭಾಷ್ಯ- ನ್ಯಾಯ ವಿವರಣ- ತತ್ವಪ್ರಕಾಶಿಕಾ - ಭಾವಭೋಧ - ಭಾವದೀಪ - ತಂತ್ರದೀಪಿಕಾ - ನ್ಯಾಯಮುಕ್ತಾವಲಿ - ಶ್ರುತ್ಯರ್ಥ* ಇತ್ಯಾಗಳಿಂದ ಒಳಗೊಂಡ ಬೃಹತ್ತಾದ ಪುಸ್ತಕವನ್ನು ಸಂಶೋಧಿಸಿ ಮಹಾ ಸೇವೆಯನ್ನು ಗೈದ ಪುಣ್ಯಾತ್ಮ ಜಯತೀರ್ಥಾಚಾರ್ಯ. (ಈಗಾಗಲೇ ಮೊದಲ ಭಾಗ ಪ್ರಿಂಟ್ ಆಗಿದೆ. ಎರಡನೇಯ ಭಾಗ ಸಿದ್ಧವಾಗಿದೆ. ಮೂರನೆಯ ಹಾಗೂ ಕೊನೆಯ ಭಾಗಗಳ ಎಲ್ಲ ಕೆಲಸ ಮುಗಿಸಿಕೊಟ್ಟಿದ್ದಾರೆ.) ಇದು ಅತ್ಯುತ್ಕೃಷ್ಟ ಸೇವೆ. ಈ ಸೇವೆಗಳಿಂದ ಶ್ರೀಶ್ರೀಗಳವರಿಗೂ ಬಹಳೇ ಸಂತೃಪ್ತಿ ಆಗಿದೆ.
*ಪೂಜೆ - ಜಪ*
ನಿತ್ಯದಲ್ಲಿಯೂ ಅಷ್ಟಮಹಾಮಂತ್ರಗಳ ವೇದವ್ಯಾಸ ನರಸಿಂಹ ಮಂತ್ರಗಳ ಜಪವಾಗಲೇಬೇಕು. ರಾತ್ರಿ ಎಷ್ಟು ಹೊತ್ತೂ ಆಗಲಿ ಜಪವಾಗದೆ ಮಲಗುವ ಹಾಗಿಲ್ಲ. ಪೂಜೆಯ ವೈಭವ ನೋಡಲೇಬೇಕು.
ಸ್ವಾಮಿಗಳು ಹಾಗೂ ಆಚಾರ್ಯರು ಕೊಟ್ಟ ಪ್ರತಿಮೆಗಳು. ಮನೆತನದ ಪ್ರತಿಮೆಗಳು, ಒಂದು ಕ್ಷೇತ್ರ ಸಾಲಿಗ್ರಾಮ. ಇಷ್ಟೆಲ್ಲದರ ಪೂಜೆ ನಿತ್ಯವೂ ಆಗಲೇಬೇಕು. ನಿತ್ಯವೂ ನಾರಿನಿಂದ ಪೋಣಿಸಿದ ಹೂ ಮಾಲೆ ಇರಲೇ ಬೇಕು. ಅರಾಮಿಲ್ಲದಿದ್ದಾಗಲೂ ಇಲ್ಲಿಯ ವಿದ್ವಾಂಸರುಗಳನ್ನು ಕರಿಸಿ ಪೂಜೆ ಮಾಡಿಸಬೇಕು. ಅಥವಾ ತಿರುಪೂರಿನ ವಿದ್ಯಾರ್ಥಿಗಳನ್ನೋ ಕರಿಸಿ ಪಾಠ ಚಿಂತನೆ ಹೇಳಿ ಅವರಿಗೆ ಪಾಠ ತಯಾರು ಮಾಡಿಸಿ ಪೂಜೆಯನ್ನೂ ಮಾಡಿಸಬೇಕು. ಆದರೆ ಮನೆಯಲ್ಲಿ ಪೂಜೆ ನಿಂತಿತು ಎಂದಾಗಬಾರದು ಎಂದು ಆಗ್ರಹ ತುಂಬ ಇತ್ತು. ತಂತ್ರಸಾರದಲ್ಲಿ ತಿಳಿಸಿದ ಕಲಶಪೂಜಾ ಆವರಣ ಪೂಜಾ ಅಲ್ಲಿಯ ಆವಾಹನ ಮಾಡಬೇಕಾದ ರೂಪಗಳು ಗೊಂದಲವಾಗಬಾರು ಎಂದು ಯೋಚಿಸಿ ಅನೇಕ ಚಾರ್ಟ್ ಗಳನ್ನು ಮಾಡಿ ದೇವರ ಮನೆಯಲ್ಲಿಯೇ ಗೋಡೆಗೆ ಹಾಕಿ, ಚಾರ್ಟ್ ಗಳನ್ನು ನೋಡಿ ಆವಾಹನ ಧ್ಯಾನ ಪೂಜೆ ಆಗಬೇಕು. ಅಷ್ಟು ನಿಷ್ಠೆ ಪೂಜೆಯ ವಿಷಯದಲ್ಲಿ ಇತ್ತು.
*ಅನ್ನದಾನ*
ಪುರಾಣಿಕ ವಂಶದ ತಲತಲಾಂರದ ಪದ್ಧತಿ ಎಂದರೆ ಬ್ರಾಹ್ಮಣರಿಗೆ ಅತಿಥಿಗಳಿಗೆ ಅಭ್ಯಾಗತರಿಗೆ ಅನ್ನದಾನವಾಗಲೇಬೇಕು. ಈ ನಿಯಮವನ್ನು ಉಸುರಿನ ಕೊನೆಯ ಕ್ಷಣದವರೆಗೂ ಮನೆಯಲ್ಲಿ ಪಾಲಿಸಿಕೊಂಡು ಬಂದರು. ಇಂದಿಗೆ ಹತ್ತು ದಿನವಾಯಿತು ಹತ್ತಾರು ಬ್ರಾಹ್ಮಣರಿಗೆ ಅನ್ನದಾನ ಇಂದೂ ನಡೆಯುತ್ತಾ ಇದೆ.
ಬೆಂಗಳೂರಿಗೆ ಬಂದಾಗ ಕೆಲದಿನ ಊಟಕ್ಕೆ ನಾ ಹೋಗದಿದ್ದರೆ ಯಾಕೆ ಬಂದಿಲ್ಲ ಎಂದು ಬಯ್ದಾದ್ರೂ ಪರವಾಗಿಲ್ಲ ಊಟಕ್ಕೆ ಹಾಕಿಯೇ ಕಳಿಸೋದು. ಪರ ಊರಿನ ವಿದ್ವಾಂಸರುಗಳು ಬಂದರೆ ಅವರ ಮನಿಗೇ ಹೋಗಬೇಕು. ಇವರೂ ಕರೆದು ಊಟಕ್ಕೆ ಹಾಕಬೇಕು. ಅವರು ಉಂಡದ್ದು ನೋಡಿ ಸಂತೃಪ್ತರಾಗಬೇಕು.
*ನಿಸ್ಪೃಹತೆ*
ಶ್ರೀಮಂತರೇನಲ್ಲ. ಆದರೆ ಎಂದಿಗೂ ಬೇಡಿದವರಲ್ಲ. ಕಷ್ಟಗಳು ಮೈ ತುಂಬ. ಕೈ ಎಂದಿಗೂ ಚಾಚಲಿಲ್ಲ. "ದೇವರಿಗೆ ಬೇಡುವದರ ಜೊತೆಗೆ, ದೇವರನ್ನೇ ಬೇಡುವೆ" ಎಂಬುವದು ದೃಢವಾಗಿತ್ತು ಅಂತ ಅನಸ್ತದ. ಅಂತೆಯೇ ದೇವರು ತನ್ನ ಬಳಿಯೇ ಕರೆದುಕೊಂಡನೋ ಏನೋ ಪಂ ಜಯತೀರ್ಥಾಚಾರ್ಯರನ್ನು.....
*ಗುರು - ದೇವತೆಗಳಿಗೆ ಸಂತೃಪ್ತಿ...*
ಪಂ. ಜಯತೀರ್ಥಾಚಾರ್ಯರ ಇಷ್ಟೆಲ್ಲ ಸೇವೆಯನ್ನು ಗಮನಿಸಿಯೇ ಶ್ರೀಶ್ರೀಗಳವರು *ಸರ್ವಮೂಲ ವಿಚಕ್ಷಣ* ಎಂಬ ಬಿರಿದು ಕೊಟ್ಟು ಅನುಗ್ರಹಿಸಿದರು. ಈ ಅದ್ಭುತ ಸೇವೆಗೆ promotion ಕೊಟ್ಟ ಹಾಗೆ *ತನ್ನ ಲೋಕಕ್ಕೇ ಕರೆಸಿಕೊಂಡ ದೇವ* ತನ್ನ ಸೇವೆ ಅಲ್ಲಿಯೇ ಮಾಡಿಸಿಕೊಳ್ಳುವೆನೆಂದು.
*ನನಗೆ ಮಾರ್ಗದರ್ಶೀ ಗುರುಗಳು*
ನನಗೆ ತಂದೆ ತಾಯಿಗಳಲ್ಲಿ - ಗುರಗುಗಳಲ್ಲಿ - ಶಾಸ್ತ್ರದಲ್ಲಿ - ನಿತ್ಯ ಪಾಠ ಪ್ರವಾಚನಗಳಲ್ಕಿ - ಜಪ ಪೂಜೆಗಳಲ್ಲಿ ನಿಷ್ಠೆಕೊಟ್ಟವರು ಜಯತೀರ್ಥಾಚಾರ್ಯರು. ಆರಂಭಿಕ ಪಾಠಗಳನ್ನು ಹೇಳುವ ಮುಖಾಂತರ ಸದಾಚಾರವನ್ನು ಗುರುಭಕ್ತಿಯನ್ನು ವಿದ್ಯಾಪೀಠದ ಸೇವೆಯವರುಚಿಯನ್ನು ಬೆಳಿಸಿದವರು ಇವರು. ಇಂದಿಗೂ ಆಪತ್ತಿಗೆ ಒದಗುತ್ತಿದ್ದರು. ಉತ್ತಮ ಮಾರ್ಗದರ್ಶಿಯಾಗಿದ್ದರು. ತಪ್ಪನ್ನು ತಪ್ಪು ಎಂದು ಹೇಳಿ ಶಿಕ್ಷೆಕೊಡಲೂ ಹಿಂದುಮುಂದು ನೋಡದ ಹಿತೈಶಿಯಾಗಿದ್ದರು. ಶ್ರೀಮಠದ ಸೇವೆಗೆ ಪ್ರೋತ್ಸಾಹಿಸಿ, ತಮ್ಮ ಜೊತೆಗೇ ಸೇರಿಸಿ ಮಠದ ಸೇವೆಯನ್ನೂ ಮಾಡಿಸಿದರು. "ಪೂಜ್ಯ ಆಚಾರ್ಯರನ್ನು ದೃಢವಾಗಿ ನಂಬುವದೇ ನಮ್ಮ ಧ್ಯೇಯ" ಎಂದು ತಿಳಿಸಿದರು. ಹಿರಿಯರ ದೇವತೆಗಳ ದೇವರ ಮೇಲಿನ ಭಕ್ತಿ ವಿಶ್ವಾಸವೇ ದೊಡ್ಡ ತಳಹದಿ. ಎಲ್ಲವೂ ಅದರಿಂದಲೇ ದೊರೆಯುತ್ತದೆ. ಎಂಬ ಭರವಸೆಯನ್ನು ಮೂಡಿಸಿದವರೇ ನನ್ನ ಗುರುಗಳು ಪಂ. ಜಯತೀರ್ಥಾಚಾರ್ಯರು.
ಇಂದು ಹೃದಯ ನಾಮಕ ಭಗವಂತನ ಅಡೆದಾವರಗಳಲ್ಲಿ ಇದ್ದಾರೆ. ನಮ್ಮೆಲ್ಲರ ಮನಸದಸಿನಲ್ಲಿಯೂ ಇದ್ದಾರೆ. ಅಂತೆಯೇ *ಹೃದಯಂಗತರು - ಜಯತೀರ್ಥಾಚಾರ್ಯರು.* ಅವರು ಕಣ್ಣೆದುರಿಗಿಲ್ಲದಿದ್ದರೂ ಪುಸ್ತಕ ರೂಪದಲ್ಲಿ, ನಮ್ಮ ಮನಸ್ಸಿನಲ್ಲಿ ಸದಾಕಾಲ ಇದ್ದಾರೆ. ಇವರ ಸ್ಥಾನ ತುಂಬುವವರು ಮತ್ತೊಬ್ಬರು ಸಿಗಲಾರರು. ಮುಂದೆಯೂ ಅವರ ಮಾರ್ಗದರ್ಶನದಲ್ಲೇ ನಡೆಯುವಂತಾಗಬೇಕು...
ಚಿ.ಮಹಿದಾಸ ಚಿ.ಶುಚೀಂದ್ರ ಹಾಗೂ ಅವರ ಕುಟುಂಬಕ್ಕೆ ಈ ಆಘಾತ ತಡೆದುಕೊಳ್ಳುವ ಶಕ್ತಿ ಆ ದೇವರೇ ದಯಪಾಲಿಸಲಿ.
*✍🏽✍🏽ನ್ಯಾಸ..*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments
ನಾನೂ ಅವರ ಅತ್ಯಂತ ಸನಿಹದಿಂದ ಅನುಭವಿಸಿದ್ದೇನೆ....